Monday, January 31, 2022

ಸಪ್ತ ಪ್ರಾಣಗಳೆಂಬ ಸಪ್ತ ವೃಷಭಗಳು (Sapta Pranagalemba Sapta Vrushabhagalu)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)



ಶ್ರೀಕೃಷ್ಣನ ಅಷ್ಟ ಮಹಿಷಿಯರಲ್ಲೊಬ್ಬಳಾದ ಕೋಸಲದೇಶದ ಸತ್ಯಾ ದೇವಿಯನ್ನು ಶ್ರೀಕೃಷ್ಣನು ವರಿಸುವ ಸಂದರ್ಭ. ಸತ್ಯಾದೇವಿ ಶ್ರೀ ಕೃಷ್ಣನನ್ನು ನೋಡಿದೊಡನೆಯೇ ಅವನನ್ನೇ ತನ್ನ ಪತಿಯೆಂದು ಮನಸ್ಸಿನಲ್ಲಿಯೇ ವರಿಸಿರುತ್ತಾಳೆ. ಶ್ರೀಕೃಷ್ಣನು  ಸತ್ಯೆಯ ತಂದೆ ನಗ್ನಜಿತನ ಹತ್ತಿರ ಕನ್ಯೆಯಾದ ಸತ್ಯೆಯನ್ನು ಯಾಚಿಸುತ್ತಾನೆ. ನಗ್ನಜಿತನಿಗೆ  ತನ್ನ ಮಗಳನ್ನು ಶ್ರೀಕೃಷ್ಣನಿಗೆ ಕೊಟ್ಟು ವಿವಾಹಮಾಡಲು ಇಷ್ಟವಿದ್ದರೂ, ಅದಕ್ಕೆ ಪೂರ್ವಭಾವಿಯಾಗಿ ಒಂದು ಸ್ಪರ್ಧೆಯನ್ನು ಘೋಷಿಸಿರುತ್ತಾನೆ. ಅತಿ ಬಲಿಷ್ಠವಾದ, ದಮನ ಮಾಡಲು ಅತ್ಯಂತ ಕಷ್ಟಸಾಧ್ಯವಾದ ಸಪ್ತ ವೃಷಭಗಳನ್ನು ಪಳಗಿಸಿ ಕಟ್ಟಿಹಾಕಬಲ್ಲವನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡುತ್ತೇನೆ ಎಂಬುದೇ ಆ ಸ್ಪರ್ಧೆ. ಅದನ್ನೇ ಶ್ರೀ ಕೃಷ್ಣನಲ್ಲಿ ಅರಿಕೆ ಮಾಡುತ್ತಾನೆ. ಆ ವೃಷಭಗಳಾದರೋ ಒಂದೊಂದೂ ಅತಿ ಭಯಂಕರ,ಬಲಿಷ್ಠ, ಮದೋನ್ಮತ್ತವಾದವುಗಳು. ಅಂತಹ ಏಳು ವೃಷಭಗಳನ್ನು ಮಣಿಸುವುದು ದುಸ್ಸಾಧ್ಯವಾಗಿ ವೀರಾಧಿವೀರರಾದ ಕ್ಷತ್ರಿಯರೆಲ್ಲ ಈ ಸ್ಪರ್ಧೆಯಲ್ಲಿ ಸೋಲುತ್ತಾರೆ.  ಶ್ರೀಕೃಷ್ಣನು ತನ್ನನ್ನೇ ಏಳು ವಿಭಾಗ ಮಾಡಿಕೊಂಡು ಒಂದೊಂದನ್ನೂ ಎದುರಿಸುತ್ತಾನೆ. ಅವನ ಪರಾಕ್ರಮದ ಮುಂದೆ ಆ ವೃಷಭಗಳೆಲ್ಲವೂ ವಶದಲ್ಲಿರುವ ಎತ್ತುಗಳಂತಾಗುತ್ತವೆ. ಅವನು ಅವುಗಳನ್ನು  ಲೀಲಾಜಾಲವಾಗಿ ಕಟ್ಟಿಹಾಕುತ್ತಾನೆ. ಬಾಲಕನು ಮರದ ಬೊಂಬೆಗಳನ್ನು ಎಳೆಯುವಂತೆ ಎಳೆದು ಕಟ್ಟಿಹಾಕುತ್ತಾನೆ ಎಂದು ಶ್ರೀಮದ್ಭಾಗವತವು ವರ್ಣಿಸುತ್ತದೆ. ನಂತರ,  ಪಂದ್ಯದ ನಿಯಮದಂತೆ ಸಂತೋಷವಾಗಿ ಶ್ರೀಕೃಷ್ಣನ ವಿವಾಹ ನೆರವೇರುತ್ತದೆ. ಇದು ಹೊರಗಿನ ಸಮಾಚಾರ.

ಇಲ್ಲಿ ಸಪ್ತ ವೃಷಭಗಳೇ ಸಪ್ತ ಪ್ರಾಣಗಳು. ಪ್ರಾಣಶಕ್ತಿಗಳು ಅತ್ಯಂತ ಬಲಿಷ್ಠ. ಅವುಗಳನ್ನು ಜಯಿಸುವುದು ಸುಲಭದ ಕೆಲಸವಲ್ಲ. ಅದಕ್ಕೆ ತಪಸ್ಸು, ಇಂದ್ರಿಯ ಸಂಯಮ ಎಲ್ಲವೂ ಅತ್ಯಧಿಕ ಪ್ರಮಾಣದಲ್ಲಿ ಬೇಕಾಗುತ್ತವೆ. ಯಾರು ಪ್ರಾಣಶಕ್ತಿಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳಬಲ್ಲನೋ ಅವನೇ ಸಪ್ತ ವೃಷಭಗಳನ್ನು ಸುಲಭವಾಗಿ ಜಯಿಸಬಲ್ಲನು. ನರ ವೃಷಭನಾದ ಶ್ರೀ ಕೃಷ್ಣನು ಮಾತ್ರವೇ "ಸಪ್ತ ಪ್ರಾಣಾ: ಪ್ರಭವಂತಿ" ಎಂದಂತೆ ಪ್ರಾಣಕ್ಕೂ ಪ್ರಾಣನಾದ ಸ್ವಾಮಿಯಾದುದರಿಂದ ಪ್ರಾಣಗಳನ್ನು ಕಟ್ಟಿಹಾಕಬಲ್ಲ! ಹುಚ್ಚೆದ್ದು ಕುಣಿಯುವ ಪ್ರಾಣಗಳನ್ನು ಒಂದೊಂದಾಗಿ ಎಳೆದು ಕಟ್ಟಬಲ್ಲ ಮಹಾಪ್ರಾಣ ಅವನು. ಹಾಗೆ ಪ್ರಾಣಗಳನ್ನು ಕಟ್ಟಿಹಾಕಿ ಪ್ರಕೃತಿಯನ್ನು ತನ್ನ ವಶದಲ್ಲಿ ಇರಿಸಿಕೊಳ್ಳುವ ಪರಮಪುರುಷ ಶ್ರೀಕೃಷ್ಣ ಎಂಬ ಧ್ವನಿ ಈ ಕಥೆಯ ಹಿಂಬದಿಯಲ್ಲಿದೆ. ಪ್ರಾಣ ಶಕ್ತಿಗಳನ್ನು ವಶದಲ್ಲಿಟ್ಟುಕೊಂಡು ಅವನ್ನು ಊರ್ಧ್ವಮುಖವಾಗಿ ಸಂಚರಿಸುವಂತೆ ಮಾಡಿ ನಮ್ಮೊಳಗೇ ಬೆಳಗುತ್ತಿರುವ ಪರಮಾತ್ಮನನ್ನು ನೋಡಿ  ಶಾಶ್ವತವಾದ ನೆಮ್ಮದಿಯನ್ನು ಅನುಭವಿಸುವುದಕ್ಕಾಗಿಯೇ  ಪ್ರಾಣಾಯಾಮ ವಿದ್ಯೆಯನ್ನು ನಮ್ಮ ದೇಶದ ಮಹರ್ಷಿಗಳು ಪ್ರಕಾಶಗೊಳಿಸಿದ್ದಾರೆ. ಋಷಿಸಂಸ್ಕೃತಿಯಲ್ಲಿ ಬಂದಿರುವ  ಆಚಾರ ವಿಚಾರಗಳು,ಜೀವನ ವಿಧಾನಗಳು ಎಲ್ಲವೂ  ಐಹಿಕ ಪಾರಮಾರ್ಥಿಕ ಜೀವನಗಳ ಸೌಖ್ಯವನ್ನು ಉದ್ದೇಶವಾಗಿಟ್ಟುಕೊಂಡು ಅದಕ್ಕೆ ಅನುಗುಣವಾಗಿ ಪ್ರಾಣಗಳ ಗತಿಯನ್ನು ನಿಯಮನ ಮಾಡುವ ಉಪಾಯದಿಂದ ಕೂಡಿದೆ. ಎಲ್ಲಾ ಪ್ರಾಣಗಳನ್ನು ಮೇಲಕ್ಕೊಯ್ಯುವ ಪ್ರಣವನಾದದಿಂದಲೇ ಇಲ್ಲಿನ ಎಲ್ಲಾ ಕಲಾಪಗಳೂ ಆರಂಭವಾಗುವುದು. ಶ್ರೀರಂಗ ಮಹಾಗುರುಗಳ ಮಾತು ಇಲ್ಲಿ ಸ್ಮರಣೀಯ-"ಪ್ರಣವವು ಎಲ್ಲಾ ಪ್ರಾಣಗಳನ್ನೂ ಮೇಲೊಯ್ದು ಪರಂಜ್ಯೋತಿಯಲ್ಲಿ ಸೇರಿಸುವುದು. ಪರಾ-ಅಪರಾ ವಿದ್ಯೆಗಳು ಹೊರಟದ್ದು ಅದರಿಂದಲೇ. ಪ್ರಣವರೂಪವಾದ ನಾದದಿಂದಲೇ ಭಾರತೀಯ ವಿದ್ಯಾ ಸ್ಥಾನಗಳು ಹೊರಬಂದಿವೆ".  ಪ್ರಾಣಗಳಿಗೆಲ್ಲ ಪ್ರಾಣನಾಗಿ ಬೆಳಗುವ ಶ್ರೀ ಕೃಷ್ಣ ಪರಂಜ್ಯೋತಿಯು ನಮ್ಮ ಮನಸ್ಸುಗಳನ್ನು ಅಂತಹ ಸಾಧನೆಗೆ ಪ್ರೇರೇಪಿಸಲಿ ಎಂದು ಪ್ರಾರ್ಥಿಸೋಣ.

ಸೂಚನೆ:  31/1/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.  


Sunday, January 30, 2022

ಶ್ರೀರಾಮನ ಗುಣಗಳು - 42 ವಿರಕ್ತ ಶ್ರೀರಾಮ (Sriramana Gunagalu - 42 Dusta Virakta Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಕೈಕೇಯಿಯ ವರದ ಕಾರಣದಿಂದ ರಾಜಾ ದಶರಥನು ಶ್ರೀರಾಮನನ್ನು ಅರಣ್ಯಕ್ಕೆ ಕಳುಹಿಸಲು ಸಕಲವಿಧವಾದ ಸಿದ್ಧತೆಯನ್ನೂ ಮಾಡುತ್ತಾನೆ. ನಾಲ್ಕು ಬಗೆಯ ಸೇನೆಯನ್ನು ಸಜ್ಜುಗೊಳಿಸಿದ. ಮಹಾಧನಿಕರನ್ನು, ವ್ಯಾಪಾರಿಗಳನ್ನು ರೂಪವಿನ್ಯಾಸಕಾರರನ್ನು ಹೀಗೆ ಅನೇಕರನ್ನು ಕಳಿಸಲು ವ್ಯವಸ್ಥೆ ಮಾಡಿದ. ವೀರ್ಯ ಪರಾಕ್ರಮಶಾಲಿಗಳಾದ ಜನರನ್ನು ರಾಮನ ಬೆಂಗಾವಲಿಗಾಗಿ ನಿಯೋಜಿಸಿದ. ಎತ್ತಿನ ಗಾಡಿಯಲ್ಲಿ ಹಿಡಿಯುವಷ್ಟು ಶಸ್ತ್ರಾಸ್ತ್ರಗಳನ್ನು ಸೇರಿಸಿದ. ಅರಣ್ಯಮಾರ್ಗದಲ್ಲಿ ಸಂಚರಿಸುವಾಗ ವನ್ಯಮೃಗಗಳಿಂದ ಪೀಡೆ ಉಂಟಾಗದಂತೆ ವ್ಯವಸ್ಥೆ ಮಾಡಿದ. ಮುಂದಿನ ಹದಿನಾಲ್ಕು ವರ್ಷದ ವನವಾಸದಲ್ಲಿ ಆಹಾರದ ಕೊರತೆ ಉಂಟಾಗಬಾರದೆಂದು ಧಾನ್ಯಕೋಶವನ್ನು, ಮತ್ತು ವ್ಯವಹಾರಕ್ಕೆ ಎಲ್ಲೂ ತೊಡಕುಂಟಾಗಬಾರದು ಎಂದು ಧನಕೋಶವನ್ನೂ ಕಳಿಸಲು ಹೇಳಿದ. ಶ್ರೀರಾಮನ ಅಂತಃಸ್ಥೈರ್ಯಕ್ಕೆ ಪೋಷಕವಾಗಲೆಂದು ಋಷಿಗಳನ್ನು ಜೊತೆಗೆ ಕಳಿಸಲು ಅರುಹಿದ. ಅರಣ್ಯದಲ್ಲಿ ಆರೋಗ್ಯದ ತೊಂದರೆ ಆಗದಿರಲೆಂದು ವೈದ್ಯರನ್ನು ನೇಮಿಸಿದ. ಹೀಗೆ ಇನ್ನೂ ಅನೇಕ ಬಗೆಯಲ್ಲಿ ಶ್ರೀರಾಮನಿಗೆ ಕಾಡಿನಲ್ಲಿ ಯಾವುದೇ ತೊಂದರೆ ಆಗಬಾರದು ಎಂದು ಸಕಲ ಸಿದ್ಧತೆಯನ್ನು ಮಾಡಿದ ದಶರಥಮಹಾರಾಜ.


ಆದರೆ ಶ್ರೀರಾಮನು ಇವು ಯಾವುದನ್ನೂ ಬಯಸಲೇ ಇಲ್ಲ. ಆತನೊಬ್ಬ ಮಹಾವಿರಕ್ತ. ಯಾವುದೇ ಬಗೆಯ ಅನುರಕ್ತಿ-ಆಸೆ ಇಲ್ಲದವನು. ಸಮಚಿತ್ತ, ಸ್ಥಿತಪ್ರಜ್ಞ. ಯಾವ ಕಾಲದಲ್ಲಿ ಹೇಗಿರಬೇಕು? ಯಾವುದನ್ನು ಬಯಸಬೇಕು? ಎಷ್ಟನ್ನು ಬಯಸಬೇಕು? ಎಂಬ ಬಗ್ಗೆ ಸ್ಪಷ್ಟವಾದ ಅರಿವು ಇತ್ತು ಶ್ರೀರಾಮನಿಗೆ. ಈ ಕಾರಣದಿಂದ ತಂದೆಯ ವೈಭವೋಪೇತವಾದ ರಾಜಮರ್ಯಾದೆಯನ್ನು ಸ್ವೀಕರಿಸದೇ ವಿನಮ್ರನಾಗಿ ತಿರಸ್ಕರಿಸಿದ. ವಾಸ್ತವಿಕವಾಗಿ ತಂದೆಯಾದ ರಾಜನಿಂದಲೇ, ರಾಜ್ಯದ ಬೊಕ್ಕಸದಿಂದಲೇ ವ್ಯವಸ್ಥೆಯನ್ನು ಮಾಡಲಾಗಿತ್ತು. ಕೈಕೇಯಿಯ ವರ ಯಾಚನೆಯಲ್ಲಿ ವೈಭೋಗದ ನಿರಾಕರಣೆ ಇರಲಿಲ್ಲ. ಅವಳಿಗೆ ಶ್ರೀರಾಮನು ವನವಾಸವನ್ನು ಮಾಡಬೇಕು ಎಂಬಿಷ್ಟೇ ತುಡಿತವಾಗಿತ್ತು. ಅರಣ್ಯದಲ್ಲಿ ಯಾವ ಬಗೆಯ ವ್ಯವಸ್ಥೆಯನ್ನು ನಿಷೇಧಿಸಿ ವರವನ್ನು ಕೇಳಿರಲಿಲ್ಲ. ಶ್ರೀರಾಮನು ಇವೆಲ್ಲವನ್ನೂ ಬಳಸಿಕೊಂಡಿದ್ದರೆ ಅಪರಾಧವೇನೂ ಇರಲಿಲ್ಲ. ಶ್ರೀರಾಮನಾದರೋ ಆದರ್ಶಪುರುಷ. ಅವನು ಹೊರಟಿದ್ದು ಅರಣ್ಯಕ್ಕೆ. ಅಲ್ಲಿ ಋಷಿಜನರು ವಾಸವಾಗಿರುತ್ತಾರೆ. ಅಲ್ಲಿ ಯಾವ ಬಗೆಯ ರಾಜವೈಭೋಗದ ಅವಶ್ಯಕತೆ ಇರಲಿಲ್ಲ. ಅರಣ್ಯವಾಸವು ಋಷಿಜೀವನಕ್ಕೆ ಯೋಗ್ಯವಾದುದು. ಅದಕ್ಕಾಗಿ ವನವಾಸ ಯೋಗ್ಯವಲ್ಲದ ಎಲ್ಲ ರೀತಿಯಾದ ವೈಭೊಗ ಸಾಮಗ್ರಿಗಳನ್ನು ನಿರಾಕರಿಸಿದ. ಅರಮನೆಯಲ್ಲಿ ರಾಜೋಚಿತವಾಗಿ ತೊಟ್ಟಿದ್ದ ವಸ್ತ್ರ-ಆಭರಣಾದಿಗಳನ್ನು ಬಿಚ್ಚಿಟ್ಟ. 'ಋಷಿಜೀವನಕ್ಕೆ ಪೋಷಕವಾದ ಹದಿನಾಲ್ಕು ವರ್ಷ ವನವಾಸವನ್ನು ಮಾಡಲು ತೆರಳುವ ನನಗೆ ಚೀರವಲ್ಕಲವನ್ನೇ ಕೊಡಿ' ಎಂದು ಕೇಳಿಕೊಂಡ. ಶ್ರೀರಾಮನ ಸಹಧರ್ಮಿಣಿಯಾದ ಸೀತಾಮಾತೆಯೂ ಪತಿಯನ್ನೇ ಅನುಸರಿದಳು. ತಾನುಟ್ಟ ಕೌಶೇಯ ವಸ್ತ್ರದ ಹೊರಗಡೆ ನಾರುಬಟ್ಟೆಯನ್ನು ಸುತ್ತಿಕೊಂಡಳು. ಅನುಜ ಲಕ್ಷ್ಮಣನು ಸಹ ಅಣ್ಣನ ಋಷಿಭಾವವನ್ನೇ ಅಂಗೀಕರಿಸಿದ. ಭರತನೇ 'ರಾಜ್ಯಕ್ಕೆ ಮರಳು' ಎಂದು ಪರಿಪರಿಯಾಗಿ ಕೇಳಿಕೊಂಡರೂ ಭರತನಲ್ಲೇ ರಾಜ್ಯದ ಸಮಸ್ತಭಾರವನ್ನೂ ಸನ್ಯಸ್ತ ಮಾಡಿದ. ಕೊನೆಯಲ್ಲಿ ರಾವಣನಿಂದ ಜಿತವಾದ ಸ್ವರ್ಣಮಯೀ ಲಂಕೆಯ ರಾಜನಾಗಲಿಲ್ಲ. ಅದನ್ನು ವಿಭೀಷಣನಿಗೆ ಅನುಗ್ರಹಿಸಿದ. ಅಯಾಚಿತವಾಗಿ ಉಚಿತವಾಗಿ ಬಂದರೂ ಕಾಲಕಾಲಕ್ಕೆ ಸೀಮಿತವಾದ ಋಷಿತುಲ್ಯಜೀವನವನ್ನೇ ಮಾಡಿ ಎಲ್ಲರಿಗೂ ವೈರಾಗ್ಯದ ಆದರ್ಶವನ್ನು ಎತ್ತಿಹಿಡಿದ ಶ್ರೀರಾಮ.


ಸೂಚನೆ : 30/1/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

Saturday, January 29, 2022

ವಸ್ತ್ರಾಭರಣ - 7 ಉತ್ತರೀಯ ಮತ್ತು ಪ್ರಾಣಸಂಚಾರ (Vastra Bharana - 7 UttarIya Mattu Pranasanncara)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)


ಮೇಲ್ವಸ್ತ್ರ ಅಥವಾ ಉತ್ತರೀಯ ಭಾರತೀಯ ವಸ್ತ್ರಯೋಜನೆಯಲ್ಲಿ ಮುಖ್ಯವಾದ ಸ್ಥಾನವನ್ನು ಪಡೆಯುತ್ತದೆ. ಬಲಕಂಕಳು, ಸೊಂಟವನ್ನು ಹಾದುಹೋಗಿ ಎಡ ಹೆಗಲಿನ ಮೇಲೆ ವಿಶ್ರಮಿಸಿ ಅಲಂಕರಿಸುವ ವಸ್ತ್ರವಿದು. ಪುರುಷರು ಬಿಳಿಯ ಒಂದು ಪ್ರತ್ಯೇಕವಾದ ಮೇಲ್ವಸ್ತ್ರವನ್ನು ಧರಿಸಿದರೆ, ಸ್ತ್ರೀಯರ ಸೀರೆಯ ಮೇಲ್ಭಾಗವಾಗಿ ಇದನ್ನು ಧರಿಸುತ್ತಾರೆ. ಎಡ ತೋಳು - ಬಲ ಸೊಂಟದ ನಡುವೆ ಹಾದು ಹೋಗುವ ಕ್ರಮವನ್ನು ನಾವು ಜನ್ನದಾರದಲ್ಲೂ ಕಾಣುತ್ತೇವೆ. ಇದು ಆಕಸ್ಮಿಕವಲ್ಲ. ಉತ್ತರೀಯ ಮತ್ತು ಜನಿವಾರ ಎರಡೂ ಮೌಲಿಕವಾಗಿ ಒಂದೇನೇ. ಅದರ ಹೆಸರೇ ಹೇಳುವಂತೆ, ಜನ್ನದಾರ ಅಥವಾ ಯಜ್ಞ-ದಾರ ಯಜ್ಞಕ್ಕೆ ಸಂಬಂಧವನ್ನು ಹೊಂದಿದೆ. ಉತ್ತರೀಯವನ್ನು ವೇದಗಳು ಅಧಿವಸ್ತ್ರವೆಂದೂ ಯಜ್ಞದ ಆಚರಣೆಯಲ್ಲಿ ಧರಿಸಲ್ಪಡುವ ವಸ್ತ್ರವೆಂದೂ ಕರೆಯುತ್ತದೆ. ಉತ್ತರೀಯವನ್ನು ತೃತೀಯ ಯಜ್ಞೊಪವೀತ ಎಂದೂ ಕರೆಯುವುದುಂಟು. ಇಂತಹ ಒಂದು ವಸ್ತ್ರವಿನ್ಯಾಸಕ್ಕೂ ಯಜ್ಞಕ್ಕೂ ಏನು ಸಂಬಂಧವೆಂದು ನೋಡೋಣ. 


ಯಜ್ಞ ಮತ್ತು ದೇವತೆಗಳು 


ನಮ್ಮ ಶರೀರವೇ ಸಮಸ್ತ ದೇವತಾ ಶಕ್ತಿಗಳ ನೆಲೆಮನೆಯಾಗಿದೆ. ನಮ್ಮ  ಇಂದ್ರಿಯ, ಮನಸ್ಸು ಬುದ್ಧಿಗಳ ಹಿಂದೆ ಆಡುವ ಶಕ್ತಿಗಳನ್ನು ದೇವತಾ ಶಕ್ತಿಗಳ ರೂಪದಲ್ಲಿ ಋಷಿಗಳು ತಮ್ಮ ಒಳಗಣ್ಣಿನಿಂದ ದರ್ಶನ ಮಾಡಿದರು. ಆ ದೇವತಾ ಶಕ್ತಿಗಳು ಪ್ರಸನ್ನವಾಗಿದ್ದು ಚೆನ್ನಾಗಿ ನಮ್ಮ ಮೈ-ಮನಗಳಲ್ಲಿ ಸಂಚರಿಸುವಂತೆ ಆದರೆ, ಇಂದ್ರಿಯ-ಮನಸ್ಸು-ಬುದ್ಧಿ-ಆತ್ಮ ಎಲ್ಲವೂ ಸುಸ್ಥಿತಿಯಲ್ಲಿದ್ದು ಭೋಗ-ಯೋಗಗಳ ಸಾಧನೆಗೆ ಯೋಗ್ಯವಾದ ಜೀವನ ಸಿದ್ಧಿಸುತ್ತದೆ. ದೇವತಾ ಶಕ್ತಿಗಳನ್ನು ಪ್ರಸನ್ನಗೊಳಿಸಿ ನಮ್ಮಲ್ಲಿ ಅಬಾಧಿತವಾಗಿ ಹರಿಯುವಂತೆ ಮಾಡುವ ಕ್ರಿಯೆಯನ್ನೇ ಯಜ್ಞ ಎಂದು ಕರೆಯುತ್ತಾರೆ. 


ಶಕ್ತಿರೂಪರಾದ ದೇವತೆಗಳನ್ನು ಬರಮಾಡಿ ತೃಪ್ತಿಗೊಳಿಸುವುದು ಹೇಗೆ ?             

                         

ಒಂದು ವೃಕ್ಷದ ಫಲ ಸಿಗುವುದು ಹೇಗೆ ? ಬೀಜದಿಂದ ಹಿಡಿದು, ವೃಕ್ಷವಾಗಿ ಬೆಳೆದು ಫಲವನ್ನು ಕೊಡುವ 'ಪ್ಲಾನ್' ಬೀಜದಲ್ಲೇ ಅಡಕವಾಗಿದೆ. ಇದು ಸೃಷ್ಟಿಮಾತೆಯ 'ಪ್ಲಾನ್' ಎಂದೂ ಹೇಳ ಬಹುದು. ಆದರೆ ಸೃಷ್ಟಿಮಾತೆಯು ಯೋಜಿಸಿ ಇಟ್ಟಿರುವ ಶಕ್ತಿಗಳ, ಪೂರ್ಣಫಲವನ್ನು ಪಡೆಯಬೇಕಾದರೆ ಬೀಜವನ್ನು ನೆಟ್ಟು, ನೀರೆರೆಯ ಬೇಕು. ಕೃಷಿ ಮಾಡ ಬೇಕು. ಅಂತೆಯೇ ನಮ್ಮ ಶರೀರದಲ್ಲಿ ಯೋಗ-ಭೋಗ ವೆಂಬ ಇಬ್ಬಗೆಯ ಫಲಗಳನ್ನು ತಂದುಕೊಡುವ ಶಕ್ತಿ ಅಡಕವಾಗಿದೆ. ಯಜ್ಞವೆಂಬ ಕರ್ಮವು ನೀರೆರೆದು ಕೃಷಿ ಮಾಡಿ, ಆ ಗುಪ್ತ ಶಕ್ತಿಗಳ ಪೂರ್ಣ ವಿಕಾಸ ಮಾಡುವ ಕೆಲಸ ಮಾಡುತ್ತದೆ.


ದೇವತಾ ಯಜ್ಞಕ್ಕೆ ಪ್ರಾಣಸಂಚಾರ  


ನಾವು ಹಿಂದೆಯೇ ಗಮನಿಸಿದಂತೆ ಎಲ್ಲ ಕರ್ಮಗಳಲ್ಲೂ ಪ್ರಾಣಗಳ ಪಾತ್ರ ಅನಿವಾರ್ಯ. ಅಂತೆಯೇ ಈ ದೇವತೆಗಳನ್ನು ಬರಮಾಡಿಕೊಳ್ಳ ಬೇಕಾದರೆ ನಮ್ಮಲ್ಲಿರುವ ಪ್ರಾಣಶಕ್ತಿಗಳನ್ನು ನಿರ್ದಿಷ್ಟಕ್ರಮದಲ್ಲಿ ಇಟ್ಟುಕೊಳ್ಳಬೇಕು. ದೇವತಾ ಕರ್ಮಗಳಿಗೆ ಪ್ರಾಣಗಳು 'ವಾಮ ಬಾಹು ದಕ್ಷಿಣ ಕಟಿ', ನಡುವೆ ಹರಿಯ ಬೇಕು. ಅಂತಹ, ದೇವತಾ ಯಜ್ಞಕ್ಕೆ ಪೋಷಕವಾದ ಪ್ರಾಣ ಸ್ಥಿತಿಯನ್ನು ತಂದುಕೊಡಲು ಈ ಮೇಲ್ವಸ್ತ್ರದ ವಿನ್ಯಾಸ ಅತ್ಯಂತ ಸಹಾಯಕ. ಈ ವಿನ್ಯಾಸವನ್ನು ಉಪವೀತಿ ಎಂದು ಕರೆಯುತ್ತಾರೆ. ತದ್ವಿಪರೀತವಾದ ಒಂದು ವಿನ್ಯಾಸವೂ ಉಂಟು. ಬಲತೋಳು ಎಡ ಸೊಂಟವನ್ನು ಹಾದುಹೋಗುವ ಪ್ರಾಚೀನಾವೀತಿ ಎಂಬ ಒಂದು ವಿನ್ಯಾಸ ಪಿತೃ-ದೇವತೆಗಳ ಪ್ರೀತಿಗೆ ಅನುಕೂಲಕರ. 


ಈ ಮರ್ಮವನ್ನು ಸೂಚಿಸಲೆಂದೇ ದೇವತಾ ಶಿಲ್ಪಗಳಲ್ಲಿ  ಕೆಲವೊಮ್ಮೆ ಪ್ರಾಣರೂಪವಾದ ಸರ್ಪವನ್ನೇ ಯಜ್ಞೋಪವೀತವಾಗಿ ಧರಿಸಿರುವುದನ್ನು ಕಾಣುತ್ತೇವೆ.  ಇಂತಹ ಮಾರ್ಮಿಕವಾದ ಸತ್ಯಗಳು ವೇದ-ಶಾಸ್ತ್ರಗಳಲ್ಲಿ ಅಡಕವಾಗಿದ್ದರೂ ಅವನ್ನು ಬಿಚ್ಚಿ ಪ್ರಾಯೋಗಿಕವಾಗಿ ತೋರಿಸಿದ ಯೋಗಿವರೇಣ್ಯರು ಶ್ರೀರಂಗಮಹಾಗುರುಗಳು. ಋಷಿಸದೃಶರಾದ ಆ ಮಹನೀಯರಿಗೆ ನಮೋನಮ: ! 


ಸೂಚನೆ : 29/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ 
ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ನವವಿಧ ಭಕ್ತಿ - 13 ರಾಮ-ಕೃಷ್ಣರ ನೆಚ್ಚಿನ ಸಖರು (Rama-Krishnara Nechchina Sakharu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)


ಕುಚೇಲ(ಸುದಾಮ)-ಕೃಷ್ಣ

ಸುದಾಮನು ಶ್ರೀಕೃಷ್ಣನ ಸಹಪಾಠೀ-ಜೊತೆಗಾರ. ಒಮ್ಮೆ ಗುರುಕುಲದಲ್ಲಿದ್ದಾಗ ಇವರಿಬ್ಬರೂ ಸೌದೆಗಾಗಿ ಅರಣ್ಯಕ್ಕೆ ಹೊರಟಿದ್ದರು. ಗುರುಮಾತೆ ಅವಲಕ್ಕಿಯನ್ನು ಕಟ್ಟಿಕೊಟ್ಟಳು. ಜೋರುಮಳೆಯ ಕಾರಣದಿಂದ ರಾತ್ರಿಯೆಲ್ಲಾ ಮರದ ಮೇಲೆ ವಾಸ. ಹಸಿವು ತಡೆಯಲಾಗದೇ ಕೃಷ್ಣನ ಪಾಲಿನ ಅವಲಕ್ಕಿಯನ್ನೂ ಸುದಾಮನೇ ಮುಗಿಸಿ, ನಂತರ ಕೃಷ್ಣನಬಳಿ ಕ್ಷಮಾಪಣೆ ಕೇಳಿಕೊಳ್ಳುತ್ತಾನೆ. ಆಗ ಕೃಷ್ಣನು ವಿನೋದವಾಗಿ "ನನಗೆ ಸೇರಬೇಕಾದ ಪದಾರ್ಥವನ್ನು ನಾನು ಬಿಡುವುದಿಲ್ಲ, ಸಮಯ ಬಂದಾಗ ತೆಗೆದುಕೊಳ್ಳುತ್ತೇನೆ" ಎನ್ನುತ್ತಾನೆ. ಮುಂದೆ ಸುದಾಮನು ಗೃಹಸ್ಥಾಶ್ರಮದಲ್ಲಿ ದಟ್ಟದರಿದ್ರನಾಗಿರುತ್ತಾನೆ. ಒಮ್ಮೆ ಪತಿವ್ರತಾಶಿರೋಮಣಿಯಾದ ಪತ್ನಿಯ ಸಲಹೆಯಂತೆ ಗೆಳೆಯ ದ್ವಾರಕಾಧೀಶ ಮೋಕ್ಷಪ್ರದ ಮುಕುಂದನಲ್ಲಿ ಲೌಕಿಕಸಂಪತ್ತನ್ನು ಬೇಡುವುದು ಇಷ್ಟವಿಲ್ಲದಿದ್ದರೂ ಕಡುಬಡತನ ಬೇಡುವಂತೆ ಪ್ರೇರೇಪಿಸುತ್ತದೆ. ಪ್ರಿಯಸ್ನೇಹಿತನೂ ರಾಜನೂ ಆದ ಕೃಷ್ಣನ ಬಳಿ ರಿಕ್ತಹಸ್ತನಾಗಿ ಹೋಗುವ ಮನಸ್ಸಿಲ್ಲದೇ ಮೂರು ಹಿಡಿ ಅವಲಕ್ಕಿಯನ್ನು ಭಿಕ್ಷೆಬೇಡಿ ತೆಗೆದುಕೊಂಡು ಹೊರಡುತ್ತಾನೆ. ಕೃಷ್ಣನು ಓಡಿಬಂದು ಅವನನ್ನು ಆಲಿಂಗಿಸಿ ಪಾದಪೂಜೆಗೈದು ತಲೆಗೆ ಪ್ರೋಕ್ಷಣೆ ಮಾಡಿಕೊಳ್ಳುತ್ತಾನೆ. ಸಕಲೋಪಚಾರಗಳನ್ನೂ ಮಾಡಿಸಿ ಏಕಾಂತದಲ್ಲಿ ಕರೆದೊಯ್ದು ಬಾಲ್ಯದ ಘಟನೆಗಳನ್ನೆಲ್ಲಾ ನೆನೆಪಿಸಿಕೊಂಡು ಸಂತೋಷಪಡುತ್ತಾನೆ. ಅವನು ತಂದ ಅವಲಕ್ಕಿಯಲ್ಲಿ ಒಂದು ಹಿಡಿಯನ್ನು ತೆಗೆದು ಕೃಷ್ಣನು ತನ್ನ ಬಾಯಿಗೆ ಹಾಕಿಕೊಳ್ಳುತ್ತಾ ಬಾಲ್ಯದ ಸಂಕಲ್ಪವನ್ನು ಪೂರೈಸಿಕೊಳ್ಳುತ್ತಾನೆ. ಮಧುರವಾದ ಮಾತುಗಳನ್ನಾಡುತ್ತಲೇ ರಾತ್ರಿಯು ಕಳೆಯಿತು. ಬಂದ ಕಾರಣವನ್ನು ಕೃಷ್ಣನು ಕೇಳಲಿಲ್ಲ; ಸುದಾಮನೂ ಹೇಳಲಿಲ್ಲ! ತನ್ನ ಕಷ್ಟಗಳನ್ನು ತೋಡಿಕೊಳ್ಳುವ ವಿಷಯ ಮರತೇಹೋಯಿತು; ಹಾಗೆಯೇ ಹೊರಟುಬಂದ! ಆದರೆ ಮನೆಯ ಕಡೆ ಹೋಗುತ್ತಿರುವಂತೆಯೇ ಪರಮಾಶ್ಚರ್ಯ! ಇವನ ಮನೆ-ಊರು ಎಲ್ಲವೂ ಪರಿವರ್ತನೆಯಾಗಿ ಸೇವಕರೊಂದಿಗೆ ಐಶ್ವರ್ಯವಂತನಾಗುತ್ತಾನೆ. ಸಾಧ್ವಿನಿಯಾದ ಪತ್ನಿಯೂ ಸುಂದರ ಉಡಿಗೆ-ತೊಡಿಗೆಗಳಿಂದ ಅಲಂಕೃತಳಾಗಿರುತ್ತಾಳೆ. ಎಲ್ಲವೂ ಅವನ ನಿರೀಕ್ಷೆಗಿಂತ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ನಡೆದುಹೋಗುತ್ತದೆ. ಆದರೂ ವಿವೇಕ-ವೈರಾಗ್ಯಗಳಿಂದ ಕೂಡಿದ ದಂಪತಿಗಳು ಎಲ್ಲವನ್ನೂ ಭಗವಂತನ ಪ್ರಸಾದ-ಅನುಗ್ರಹವೆಂದು ಸ್ವೀಕರಿಸಿ ಶುದ್ಧಜೀವನವನ್ನು ನಡೆಸುತ್ತಾರೆ. ಸಖ್ಯಭಕ್ತಿಭಾವವನ್ನು ಎತ್ತಿ ತೋರಿಸುವಂತಹ ಕೃಷ್ಣ-ಕುಚೇಲನ ಒಂದು  ಸಮ್ಮಿಲನದ ವೃತ್ತಾಂತವಿದಾಗಿದೆ.

   

ಬಾಲ್ಯದಲ್ಲಿ ಕೃಷ್ಣನು ಸಮಾನವಯಸ್ಕರ ಜೊತೆಯಲ್ಲಿಯೇ ಆಟವಾಡುತ್ತಿರುತ್ತಾನೆ. "ಮಾಕನ್ ಕಾ ಚೋರ್"ಆಗಿ   ಬೆಣ್ಣೆ ಕದಿಯುವಾಗ ಇವನು ಅವರುಗಳ ಬೆನ್ನು-ಹೆಗಲಮೇಲೆ ಹತ್ತುವುದರ ಮೂಲಕ ತನ್ನ ಪಾದಸ್ಪರ್ಶದಿಂದ ಅವರನ್ನು ಪಾವನರನ್ನಾಗಿಸುತ್ತಾನೆ. ಅವರ ಸಖನಾಗಿಯೂ ಬಾಲಸೇನಾನಾಯಕನಾಗಿಯೂ ಅಘಾಸುರ, ಬಕಾಸುರನಂತಹ ರಾಕ್ಷಸರುಗಳ ದೆಸೆಯಿಂದ ಇವರನ್ನು ರಕ್ಷಿಸುತ್ತಾನೆ.  


ಶ್ರೀರಾಮನ ಸಖ-ಗುಹ  

ಶ್ರೀರಾಮನು ಗಂಭೀರವ್ಯಕ್ತಿಯಾದರೂ ಮಿತ್ರನಂತೆ ಸುಲಭನಾಗಿ ವರ್ತಿಸಿದ ಕೆಲವು ಘಟನೆಗಳು: ಗುಹನು ಒಬ್ಬ ನಿಷಾದ. ವನವಾಸಕ್ಕೆ ರಾಮನ ಆಗಮನವನ್ನರಿತು ಓಡಿಬಂದು ಪೂಜಿಸಿ ಕೆಳಗೆ ಕೂರುತ್ತಾನೆ. ಆದರೆ ರಾಮನು "ನೀನು ನನ್ನ ಮಿತ್ರ" ಎಂದು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡು ಹೆಗಲಮೇಲೆ ಕೈಹಾಕಿ ಪ್ರೀತಿಯಿಂದ ಮಿತ್ರಭಾವವನ್ನು ವ್ಯಕ್ತಪಡಿಸಿಕೊಳ್ಳುತ್ತಾನೆ. ಮಿತ್ರಭಾವದಲ್ಲಿ ವಿಶೇಷವೆಂದರೆ ಪರಸ್ಪರ ಮಾತುಗಳಲ್ಲಿ ಹೆಚ್ಚುಕಮ್ಮಿಯಾದರೂ ಸಂತೋಷವಾಗಿ ಸ್ವೀಕರಿಸುತ್ತಾರೆ. 


ರಾಮಚರಿತಮಾನಸದಲ್ಲಿ ಒಂದು ಸ್ವಾರಸ್ಯ ಪ್ರಸಂಗ. ರಾಮ-ಲಕ್ಷ್ಮಣ-ಸೀತೆಯರನ್ನು ದೋಣಿಯಲ್ಲಿ ಕೂರಿಸಿ ಸರಯೂ ನದಿಯನ್ನು ದಾಟಿಸಬೇಕಿತ್ತು. ಕೂರಿಸುವ ಮುನ್ನ ವಿನೋದವಾಗಿ ಒಂದು ಮಾತುಕೊಡಬೇಕೆನ್ನುತ್ತಾನೆ ಗುಹ - "ನನಗೊಂದು ಭಯವಿದೆ. ನಿನ್ನ ಪಾದದಲ್ಲಿ ಅದೇನೋ ಒಂದು ಮೂಲಿಕೆ ಇದೆಯಂತೆ. ಅದರ ಪ್ರಭಾವದಿಂದ ನಿನ್ನ ಪಾದಸ್ಪರ್ಶವಾದ ಕಲ್ಲು ಸ್ತ್ರೀಯಾಗಿಬಿಟ್ಟಿತಂತೆ. ಅಂತೆಯೇ ನನ್ನ ದೋಣಿಯೂ ಸ್ತ್ರೀಯಾಗಿಬಿಟ್ಟರೆ ನನ್ನ ಜೀವನೋಪಾಯವೇನಾಗುವುದು? ಸ್ತ್ರೀರಕ್ಷಣೆಯ ಹೊರೆಯೂ ಸೇರಿಕೊಳ್ಳುವುದಲ್ಲ! ಪರಿಹಾರವಾಗಿ ಮೊದಲು ನಿನ್ನ ಪಾದವನ್ನು ಚೆನ್ನಾಗಿ ತೊಳೆದು ಆ ಮೂಲಿಕೆಯನ್ನು ತೆಗೆದುಹಾಕಿಬಿಡುತ್ತೇನೆ" ಎಂದು ಪ್ರಾರ್ಥಿಸಿದ ಗುಹಸಖನ ಭಕ್ತಿಭಾವವನ್ನೂ ಚತುರತೆಯನ್ನೂ ಮೆಚ್ಚಿದ ಶ್ರೀರಾಮನು ಪಾದಗಳನ್ನು ನೀಡುತ್ತಾನೆ. 


ಸುಗ್ರೀವ

ಸುಗ್ರೀವ-ಸಖ್ಯದಲ್ಲಿ ಕೈಹಿಡಿದು ಅಗ್ನಿಪ್ರದಕ್ಷಿಣೆ ಮಾಡುವುದರ ಮೂಲಕ ಮಿತ್ರತ್ವವನ್ನು ಸಾಬೀತುಪಡಿಸುತ್ತಾನೆ. ಕಿಷ್ಕಿಂಧೆಯಲ್ಲಿ ಆಂಜನೇಯನು ರಾಮ-ಲಕ್ಷ್ಮಣರನ್ನು ಪರಿಚಯಿಸಿದ ಕೂಡಲೇ ಹತ್ತಿರವಿದ್ದ ಒಂದು ವೃಕ್ಷವನ್ನು ಮುರಿದುಹಾಕಿ ರಾಮನನ್ನು ಕೂರಿಸಿ ತಾನೂ ಪಕ್ಕದಲ್ಲೇ ಕುಳಿತುಕೊಳ್ಳುತ್ತಾನೆ. ಇದು ಸುಗ್ರೀವನ ಉಪಚಾರ-ಮಿತ್ರಭಾವ. 


ಇವನಿಗೆ ಭಕ್ತಿಯಿಲ್ಲವೆಂದಲ್ಲ. ರಾಮನಿಗೆ ಸಖ್ಯಭಾವದಲ್ಲೇ ಪರೀಕ್ಷೆ ಕೊಡುತ್ತಾನೆ. ಕಾರಣ ಅವನ ಮೇಲೆ ಅಪನಂಬಿಕೆಯಿಂದಲ್ಲ. ವಾಲಿಯನ್ನು ಸಂಹಾರ ಮಾಡಬೇಕಾದರೆ ರಾಮನ ಶಕ್ತಿಪರೀಕ್ಷೆ ಆಗಲೇಬೇಕೆಂದು ಒಂದು ಸಾಲವೃಕ್ಷವನ್ನು ಭೇದಿಸಲು ಯೋಜಿಸಿದ. ಪರೀಕ್ಷೆಯಲ್ಲಿ ಏಳು ಸಾಲವೃಕ್ಷಗಳನ್ನು ಒಂದೇ ಬಾಣದಿಂದ ಭೇದಿಸಿದ ಶೂರ ಶ್ರೀರಾಮ. ಮತ್ತೊಂದು, ಮಹಾಪರಾಕ್ರಮಿ ಅಸುರನಾದ ದುಂದುಭಿಯ ಅಸ್ಥಿಪಂಜರವನ್ನು ತನ್ನ ಪಾದಾಂಗುಷ್ಠದಿಂದ ಎಷ್ಟೋ ಯೋಜನ ದೂರ ಎಸೆದ ಧೀರ-ರಾಮನನ್ನು ಪೂರ್ಣವಾಗಿ ಒಪ್ಪಿಕೊಳ್ಳುತ್ತಾನೆ ಸುಗ್ರೀವ. ಶ್ರೀರಾಮನು ಮಿತ್ರಭಾವದಿಂದಲೇ ತನ್ನನ್ನು ಪರೀಕ್ಷೆಗೊಳಪಡಿಸಿಕೊಂಡನಲ್ಲವೇ?  

 
ವಿಭೀಷಣ
'ದೇಶ-ಹೆಂಡತಿ-ಮಕ್ಕಳು-ಐಶ್ವರ್ಯವೆಲ್ಲವನ್ನೂ ತ್ಯಾಗಮಾಡಿ ಶರಣಾಗತನಾಗಿ ಬಂದಿದ್ದೇನೆ ಸ್ವೀಕರಿಸುವುದು-ಬಿಡುವುದು ನಿನಗೆ ಸೇರಿದ್ದು' ಎಂದು ಘೋಷಣೆಮಾಡಿ ಬಂದವನು ಭಕ್ತವಿಭೀಷಣ. ರಾಜ್ಯದಾಸೆ ಇಲ್ಲ ಇವನಿಗೆ. ನನ್ನ ಮಿತ್ರನಂತೆ ನೋಡಿಕೊಳ್ಳುತ್ತೇನೆ ಎಂದು ಅಭಯ ನೀಡುತ್ತಾನೆ ಶ್ರೀರಾಮ.  ಇಂದ್ರಜಿತನು ಯುದ್ಧದಲ್ಲಿ ವಿಭೀಷಣನನ್ನು ನೋಡಿ ಕೋಪದಿಂದ ನಿಂದಿಸಿ ಅವನ ಸಂಹಾರಕ್ಕಾಗಿ ದಿವ್ಯಾಸ್ತ್ರ ಒಂದನ್ನು ಅವನಮೇಲೆ ಪ್ರಯೋಗಿಸುತ್ತಾನೆ.  ಆಗ ತಕ್ಷಣವೇ ಪಕ್ಕದಲ್ಲಿದ್ದ ಶ್ರೀರಾಮ ಅವನನ್ನು ಪಕ್ಕಕ್ಕೆ ಸರಿಸಿ ಆ ಅಸ್ತ್ರವನ್ನು ತಾನು ಸ್ವೀಕರಿಸಿಬಿಡುತ್ತಾನೆ. ಅಮೋಘವಾದ ಅಸ್ತ್ರದಿಂದ ಒಂದು ಕ್ಷಣ ರಾಮನೇ ಮೂರ್ಛೆಬೀಳುವಂತಾದರೂ ನಂತರ ಚೇತರಿಸಿಕೊಂಡು ಹೇಳುತ್ತಾನೆ: "ಮಿತ್ರನಾದ ನಿನ್ನನ್ನು ಕಾಪಾಡುವ ಜವಾಬ್ದಾರಿ ನನಗಿದೆ; ನನ್ನ ಪ್ರಾಣ ಹೋದರೂ ಚಿಂತೆಯಿಲ್ಲ, ನಿನ್ನನ್ನು ಕಾಪಾಡುವುದು ನನ್ನ ಧರ್ಮ." ಇದೇ ಮಿತ್ರತ್ವದ ಆದರ್ಶ. 


ಮಿತ್ರತ್ವವನ್ನು ವ್ಯಕ್ತಪಡಿಸುವುದರಲ್ಲಿ ರಾಮ-ಕೃಷ್ಣರು ನಿಸ್ಸೀಮರು. ಇಬ್ಬರನ್ನೂ ಮಿತ್ರರನ್ನಾಗಿ ಆರಿಸಿಕೊಂಡವರೆಲ್ಲರೂ ನಿಜಕ್ಕೂ ಧನ್ಯರು. ಸಖ್ಯದಲ್ಲಿರುವ ಸ್ನೇಹವೇ(ಅಂಟೇ) ಭಕ್ತಿಗೆ ಕಾರಣ. ಇದು ಒಂದು ತರಹದ ದಾಸ್ಯಭಕ್ತಿಯೇ. ಇವರೆಲ್ಲರೂ ಶರಣಾಗತರಾಗಿರುವುದನ್ನೂ ಗಮನಿಸಬಹುದು. ಈ ಹಂತದಲ್ಲಿ ದಾಸ್ಯಭಕ್ತಿಗೂ, ಸಖ್ಯಭಕ್ತಿಗೂ, ಶರಣಾಗತಭಕ್ತಿಗೂ ಹೆಚ್ಚು ಅಂತರವಿರುವುದಿಲ್ಲ.   


ಸೂ
ಚನೆ : 29/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ಯಶಸ್ಸಿಗಾಗಿ ನಿರಂತರ ಪ್ರಯತ್ನ - ಆಧುನಿಕ ಕ್ಷೇತ್ರಗಳಲ್ಲಿ ಯೋಗಸೂತ್ರದ ಪಾಲನೆ (Yashassigaagi Nirantara Prayatna -Aadhunika Kshetragalalli Yogasutrada Paalane)

ಲೇಖಕರು: ಶ್ರೀ ಜಿ ನಾಗರಾಜ
(ಪ್ರತಿಕ್ರಿಯಿಸಿರಿ lekhana@ayvm.in)


 

ಇಂದು ಉದ್ಯಮಶೀಲತೆ ಎನ್ನುವ ಪದವು ಅನೇಕ ಆಧುನಿಕ ಕ್ಷೇತ್ರಗಳಲ್ಲಿ ಕಂಡು ಕೇಳಿ ಬರುತ್ತಿರುವ ಒಂದು ಅಲೆಯಾಗಿದೆ. ಈ ಅಲೆಯಲ್ಲಿ ಹೆಚ್ಚು ಹೆಚ್ಚು ಜನ ಉದ್ಯಮಗಳನ್ನು ಪ್ರಾರಂಭಿಸುತ್ತಿದ್ದರೂ ಸಹ, ನೂತನ ಉದ್ಯಮದಲ್ಲಿ ಯಶಸ್ಸು ಕಾಣುವವರು ಬಹಳ ಸೀಮಿತ ಸಂಖ್ಯೆಯಲ್ಲಿದ್ದಾರೆ ಎಂದೇ ಹೇಳಬಹುದು. ಒಂದು ಸಂಶೋಧನಾ ಅಂಕಿ-ಸಂಖ್ಯೆಗಳ ಪ್ರಕಾರ ಹೆಚ್ಚೆಂದರೆ ಶೇಕಡ 20 ನೂತನ ಉದ್ಯಮಗಳು (Start up ventures) ಯಶಸ್ವಿಯಾಗುತ್ತವೆ ಹೊರತು ಎಲ್ಲ ಉದ್ಯಮಗಳೂ ಅಲ್ಲ. ಈ ಯಶಸ್ವಿ ಉದ್ಯಮಿಗಳ ಯಶಸ್ಸಿನ ಗುಟ್ಟೇನು? ಇವರು ತಿಳಿದೋ ತಿಳಿಯದೆಯೋ ಪತಂಜಲಿಗಳ ಒಂದು ಯೋಗ ಸೂತ್ರವನ್ನು ಪಾಲಿಸುತ್ತಾರೆ. ಈ ಸೂತ್ರ ಹೀಗಿದೆ: ಸ ತು ದೀರ್ಘಕಾಲ ನೈರಂತರ್ಯ ಸತ್ಕಾರಾಸೇವಿತೋ ದೃಢಭೂಮಿಃ ಅಂದರೆ, ಯಾವ ಯೋಗ ಸಾಧಕನು ದೀರ್ಘ ಕಾಲ, ನಿರಂತರವಾಗಿ, ಶ್ರದ್ಧಾಪೂರ್ವಕವಾಗಿ ಯೋಗ ಸಾಧನೆ ಮಾಡುತ್ತಾನೆಯೋ ಅಂತಹವನು ಯೋಗ ಸಾಧನೆಯಲ್ಲಿ ನೆಲೆ ನಿಲ್ಲುತ್ತಾನೆ ಎನ್ನುವುದು ಈ ಸೂತ್ರದ ತಾತ್ಪರ್ಯ. ಅಂದರೆ ಸ್ವಲ್ಪ ಕಾಲ ಪ್ರಯತ್ನ ಪಟ್ಟು ವೆತ್ಯಾಸ ಗೊತ್ತಾಗದೇ ಸಾಧನೆ ಬಿಡುವುದು, ಅಥವಾ ಬಿಟ್ಟು ಬಿಟ್ಟೂ ಸಾಧನೆ ಮಾಡುವುದು ಅಥವಾ ಉತ್ಸಾಹ ಶ್ರದ್ದೆ ಮುಂತಾದ ಸಾಧನೆಗೆ ಬೇಕಾದ ಸತ್ಕಾರ ಇಲ್ಲದೇ ನಿಸ್ತೇಜವಾಗಿ ಸಾಧನೆ ಮಾಡಿದರೆ ಆ ಸಾಧನೆಯಲ್ಲಿ ನೆಲೆ ನಿಲ್ಲಲು ಆಗುವುದಿಲ್ಲ. ಯೋಗ ಸೂತ್ರವು ಹೇಳುವ ಈ ಸತ್ಯವು ಯೋಗ ಸಾಧನೆಗೆ ಸೀಮಿತವಾಗಿರದೇ ಯಾವುದೇ ಲೌಕಿಕ ಸಾಧನೆಗೂ ಅನ್ವಯವಾಗುತ್ತದೆ.


ಪ್ರಸಿದ್ಧ ವಿಜ್ಞಾನಿಗಳು, ಕ್ರೀಡಾಪಟುಗಳು ಹೀಗೆ ಪರಿಶ್ರಮ ಪಟ್ಟು ಯಶಸ್ಸನ್ನು ಕಂಡಿರುವುದನ್ನು ನಾವು ಸಾಕಷ್ಟು ಕೇಳಿರುತ್ತೇವೆ. ಇದೇ ನೀತಿಯೇ ನೂತನ ಉದ್ಯಮಗಳಿಗೂ ಅನ್ವಯವಾಗುತ್ತದೆ. ಉದ್ಯಮಿಗಳು ಧ್ಯೇಯಬದ್ಧರಾಗಿ, ನಿರಂತರವಾಗಿ ಪರಿಶ್ರಮ ಪಟ್ಟಾಗ ಯಶಸ್ವಿಯಾಗುತ್ತಾರೆ. ಆದರೆ ಹಲವಾರು ಉದ್ಯಮಿಗಳು, ಉದ್ಯಮವನ್ನು ಒಂದು ಹವ್ಯಾಸದ ರೀತಿಯಲ್ಲಿ ಪರಿಗಣಿಸಿ, ಅದಕ್ಕೆ ಎಷ್ಟು ಸಮಯವನ್ನು, ಪರಿಶ್ರಮವನ್ನು ಕೊಡಬೇಕೋ ಹಾಗೆ ಕೊಡದೇ ವಿಫಲರಾಗುತ್ತಾರೆ. ಹೀಗಾಗಿಯೇ ಉದ್ಯಮಗಳಲ್ಲಿ ಬಂಡವಾಳ ಹೂಡುವವರು, ಆ ಉದ್ಯಮದ ಹಿಂದಿನ ಪರಿಕಲ್ಪನೆ, ಯೋಜನೆ ಏನಿದೆಯೋ ಅದಕ್ಕಿಂತ ಬಹು ದೊಡ್ಡ ಮಟ್ಟದಲ್ಲಿ ಆ ಉದ್ಯಮಿಗಳು ದಕ್ಷರಾಗಿದ್ದಾರೆಯೇ? ಅವರಲ್ಲಿ ದೀರ್ಘಕಾಲ ಪರಿಶ್ರಮ ಪಡುವಷ್ಟು ಹುರುಪು, ತ್ರಾಣ ಇದೆಯೇ ಎಂದು ನೋಡುತ್ತಾರೆ. ಈ ಆಧುನಿಕ ಬಂಡವಾಳಕಾರರು ಹೇಳುವಂತೆ, ಬಹಳ ಉದ್ಯಮಗಳು ವಿಫಲವಾಗುವುದು ಅದಕ್ಷ ಕಾರ್ಯ ನಿರ್ವಹಣೆಯಿಂದ. ಹೀಗಾಗಿ ಕಾರ್ಯನಿರ್ವಹಣಾ ದಕ್ಷತೆಯೇ ಬಂಡವಾಳಕಾರರು ಉದ್ಯಮಿಗಳನ್ನು ಆಯ್ಕೆ ಮಾಡುವಲ್ಲಿ ನೋಡುವ ಮೊದಲ ಗುಣ.


ಈ ಕಾರ್ಯನಿರ್ವಹಣಾ ದಕ್ಷತೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ರಾಮಾಯಣ, ಮಹಾಭಾರತದ ಕಾಲದಿಂದಲೂ ರೂಢಮೂಲವಾಗಿದೆ. ರಾಮಾಯಣದಲ್ಲಿ, ದಶರಥನ ಆಳ್ವಿಕೆ ಎನ್ನುವ ಅಧ್ಯಾಯದಲ್ಲಿ, ಆ ರಾಜ್ಯದ ಜ್ಞಾನಿಗಳು, ತಪಸ್ವಿಗಳು, ವಿದ್ವಾಂಸರ ವಿವರಣೆಯಿಂದ ಹಿಡಿದು, ಅಲ್ಲಿನ ಮಂತ್ರಿಗಳ, ಸೇನಾಪತಿಗಳ ದಕ್ಷತೆ, ಸುರಕ್ಷಾ ವ್ಯವಸ್ಥೆ, ಖನಿಜ, ಧಾನ್ಯ, ಪಶು ಸಂಪತ್ತುಗಳ ನಿರ್ವಹಣೆಯಿಂದ ಹಿಡಿದು ಅಂಗಡಿಗಳಲ್ಲಿ ಸಾಮಾನುಗಳು ಹೇಗೆ ಅಂದವಾಗಿ ಜೋಡಿಸಲ್ಪಟ್ಟಿರುತ್ತಿತ್ತು, ರಸ್ತೆಗಳಿಗೆ ಧೂಳು ಏಳದಂತೆ ನೀರು ಚಿಮುಕಿಸುವ ವ್ಯವಸ್ಥೆ ಇತ್ತು ಎನ್ನುವಂತಹ ಚಿಕ್ಕ ಚಿಕ್ಕ ವಿವರಗಳೂ ಇವೆ. ಇನ್ನು ಮಹಾಭಾರತದಲ್ಲಿ, ಬರಡು ಬಂಜರು ಭೂಮಿಯನ್ನು ಪಾಂಡವರು ಕೆಲವೇ ತಿಂಗಳುಗಳಲ್ಲಿ ಸುಂದರವಾದ ಇಂದ್ರಪ್ರಸ್ಥ ರಾಜ್ಯವನ್ನಾಗಿ ಪರಿವರ್ತಿಸಿದರು ಎನ್ನುವುದು ಪ್ರಸಿದ್ಧವಾದ ವಿಷಯವೇ ಆಗಿದೆ. ಇನ್ನು ನಮಗೆ ಕಾಲ, ದೇಶ ಎರಡರಲ್ಲೂ ಹತ್ತಿರವಾಗಿರುವ ಉದಾಹರಣೆಗಳನ್ನು ತೆಗೆದುಕೊಳ್ಳುವುದಾದರೆ, ಹಂಪಿಯ ಕಲ್ಲಿನ ಕೋಟೆ ಕೊತ್ತಲುಗಳು, ಚಿತ್ರದುರ್ಗದ ಕಲ್ಲಿನ ಕೋಟೆ, ಬೇಲೂರು, ಹಳೇ ಬೀಡಿನ ದೇವಾಲಯಗಳು ಹೀಗೆ ಹತ್ತು ಹಲವಾರು ರೀತಿಯಲ್ಲಿ ನಮ್ಮ ಪೂರ್ವಜರ ಕಾರ್ಯದಕ್ಷತೆಯ ನಿದರ್ಶನಗಳಿವೆ.


ಹೀಗೆಲ್ಲಾ ನಮ್ಮ ರಕ್ತದಲ್ಲೇ ಕಾರ್ಯದಕ್ಷತೆಯು ಇದ್ದರೂ ಸಹ ಏಕೆ ಶೇಕಡಾ 80 ರಷ್ಟು ನೂತನ ಉದ್ಯಮಿಗಳಲ್ಲಿ ಕಾರ್ಯನಿರ್ವಹಣಾ ದಕ್ಷತೆಯಲ್ಲಿ ಕೊರತೆ ಕಂಡು ಬರುತ್ತದೆ? ಇದಕ್ಕೆ ಹಲವಾರು ಕಾರಣಗಳಿರಬಹುದಾದರೂ ಎದ್ದು ತೋರುವ ಒಂದು ಕಾರಣವೆಂದರೆ, ನಾವು ಭಾರತೀಯ ಸಂಸ್ಕೃತಿಯ ಶಿಸ್ತು, ಸಂಯಮದ ಜೀವನದಿಂದ ದೂರ ಸರಿಯುತ್ತಿರುವುದೇ ಆಗಿದೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು ಯೋಗ, ಧಾರ್ಮಿಕ ನಿತ್ಯಕರ್ಮಗಳು, ನಿಯತವಾದ ದೈಹಿಕ ಪರಿಶ್ರಮ, ಮನೆಗೆಲಸ ಮುಂತಾದವುಗಳಲ್ಲಿ ತೊಡಗಿಸಿಕೊಳ್ಳದೇ ಮೋಜು ಮಸ್ತಿಯಲ್ಲಿಯನ್ನು ಮೈಗೂಡಿಸಿಕೊಳ್ಳುತ್ತಾರೆ. ಒಮ್ಮೆ ಪರಿಶ್ರಮ ಪಡದೇ ಇರುವುದು ಅಭ್ಯಾಸವಾಗಿಬಿಟ್ಟರೆ, ನಂತರ ಸಮಯ ಬಂದಾಗ ಇದು ಮೈಗೂಡುವುದು ಕಷ್ಟ. ಸಮಯ ಇದ್ದಾಗ ಮೊಬೈಲ್ ಆಟಗಳು, ಅಂತರ್ಜಾಲದ ಧಾರಾವಾಹಿಗಳು, ಚಲನ ಚಿತ್ರಗಳು, ವಾರಾಂತ್ಯದಲ್ಲಿ ಮೋಜಿನ ಪ್ರಯಾಣ ಇವುಗಳಿಗೆ ಮೈಗೊಟ್ಟಾಗ, ಅದು ನಮ್ಮ ಕಾರ್ಯನಿರ್ವಹಣ ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಶ್ರದ್ಧೆಯನ್ನು ಕಡಿಮೆ ಮಾಡುತ್ತದೆ.


ಇದಕ್ಕೆ ವ್ಯತಿರಿಕ್ತವಾಗಿ ನಮ್ಮ ಪೂರ್ವಜರ ದಿನಚರಿಯನ್ನು ಗಮನಿಸಿದರೆ, ರಾಮಾಯಣದಲ್ಲಿ, ಚಿತ್ರಕೂಟದಲ್ಲಿ ಶ್ರೀರಾಮಚಂದ್ರನು ಭರತನ ಯೋಗಕ್ಷೇಮವನ್ನು ವಿಚಾರಿಸಿ ನೀನು ಹೀಗೆಲ್ಲಾ ಮಾಡುತ್ತಿದ್ದೀಯಾ ತಾನೇ ಎಂದು ಒಂದು ಪಟ್ಟಿಯನ್ನು ಕೊಡುತ್ತಾನೆ. ಅದರಲ್ಲಿ ಬೆಳಿಗ್ಗೆ 3:30 ಗೆ ಎದ್ದು ಧ್ಯಾನ, ಪೂಜೆ ಇತ್ಯಾದಿ ನಿತ್ಯಕರ್ಮಗಳಿಂದ ಪ್ರಾರಂಭಿಸಿ, ಗುರುಹಿರಿಯರ ವಂದನೆ, ನಂತರ ಮಂತ್ರಿ, ಸೇನಾಪತಿಗಳ ಜೊತೆ ಸಭೆ, ನಂತರ ಪ್ರಜೆಗಳ ಅಹವಾಲುಗಳ ವಿಮರ್ಶೆ ಇತ್ಯಾದಿ ಬಹಳ ದಕ್ಷವಾದ ದಿನಚರಿ ಕಂಡು ಬರುತ್ತದೆ. ಅಂದರೆ ಯೋಗ ಸಾಧನೆಯಿಂದ ದಿನಚರಿ ಪ್ರಾರಂಭಿಸಿ, ನಂತರ ಪ್ರಾಪಂಚಿಕ ವ್ಯವಹಾರದಲ್ಲಿಯೂ ದಕ್ಷತೆಯನ್ನು ಮೆರೆಯುತ್ತಿದ್ದರು ಎನ್ನುವುದು ಕಂಡು ಬರುತ್ತದೆ.


ಯೋಗ ಸಾಧನೆಯು ನಮ್ಮ ಮೈಮನಗಳನ್ನು ಸುಟಿಗೊಳಿಸಿ ಪ್ರಾಪಂಚಿಕ ವ್ಯವಹಾರಗಳಲ್ಲಿ ದಕ್ಷರಾಗಿರುವುದಕ್ಕೆ ಅನುವು ಮಾಡಿಕೊಡುತ್ತದೆ. ಇದೇ ಇಂದಿನ ಪೀಳಿಗೆಯವರಾದ ನಾವು ನಮ್ಮ ಪೂರ್ವಜರಿಂದ ಕಲಿಯಬೇಕಾದ ಪಾಠ. ಇಂದಿನ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಯಿಂದ ಪ್ರಭಾವಿತರಾಗಿ ನಮ್ಮ ಸಂಸ್ಕೃತಿಯ ಅಭ್ಯಾಸಗಳನ್ನು ಕೈ ಬಿಡುತ್ತಿದ್ದಾರೆ. ಆದರೆ ಯಾವ ಅಭ್ಯಾಸಗಳನ್ನು ಕೈಬಿಡುತ್ತಿದ್ದಾರೆಯೋ ಅವೇ ಪಶ್ಚಿಮ ಜಗತ್ತಿನ ಉದ್ಯಮಿಗಳ ಯಶಸ್ಸಿಗೂ ಕೀಲಿ ಕೈ ಎನ್ನುವುದು ಯುವ ಪೀಳಿಗೆಗೆ ತಿಳಿಯುತ್ತಿಲ್ಲ. ಪಾಶ್ಚಾತ್ಯ ಜಗತ್ತಿನ ಉದ್ಯಮಿಗಳು ಅವರ ಅರ್ಥ ಸಂಪಾದನೆಗಾಗಿ ನಮ್ಮ ಮುಂದೆ ಇಂದ್ರಿಯ ಆಕರ್ಷಣೆಗಳನ್ನು ಒಡ್ಡುತ್ತಾರೆ. ಆದರೆ ಆ ಯಶಸ್ವೀ ಉದ್ಯಮಿಗಳು ತಾವು ಮಾತ್ರ ವ್ಯಸನಿಗಳಾಗದೇ ತಮ್ಮ ಕಾರ್ಯ ನಿರ್ವಹಣಾ ದಕ್ಷತೆಯನ್ನು ಕಾಪಾಡಿಕೊಂಡಿರುತ್ತಾರೆ.

ಆದುದರಿಂದ ನಾವು ಇಂದಿನ ಪಾಶ್ಚಾತ್ಯ ಸಂಸ್ಕೃತಿಯು ಒಡ್ಡುವ ಆಕರ್ಷಣೆಗಳಿಗೆ ದಾಸರಾಗದೇ, ಅವರ ಔದ್ಯಮಿಕ ಯಶಸ್ಸಿಗೂ ಕಾರಣವಾಗಿರುವ ಪರಿಶ್ರಮವನ್ನು ಆದರ್ಶವಾಗಿಟ್ಟುಕೊಳ್ಳುವುದು ಉಚಿತ. ಯೋಗ ಸೂತ್ರವು ಹೇಳುವ ದೀರ್ಘಕಾಲಿಕ, ನಿರಂತರ, ಸತ್ಕಾರದೊಡಗೂಡಿದ ಪರಿಶ್ರಮವನ್ನು ಯೋಗಸಾಧನೆಯಲ್ಲಿ ತೊಡಗಿಸಿ, ನಂತರ ವ್ಯಾವಹಾರಿಕ ಪ್ರಪಂಚದಲ್ಲಿಯೂ ತೊಡಗಿಸಿದರೆ, ಯೋಗ ಹಾಗೂ ಪ್ರಾಪಂಚಿಕ ವ್ಯವಹಾರಗಳೆರಡರಲ್ಲೂ ಯಶಸ್ಸು ಕಟ್ಟಿಟ್ಟ ಬುತ್ತಿ.


ಸೂಚನೆ : 29/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Thursday, January 27, 2022

அரி, அரன், அயன்- உயர்ந்தவர் யார்? (2) (Ari - Aran - Ayan - Uyarndavar Yaar? 2)

மூலம் : ஸ்ரீ ரங்கபிரிய ஸ்ரீ ஸ்ரீ:

தமிழாக்கம்:  ஶ்ரீமதி ஜானகி, வனஜா

மின்னஞ்சல் : (lekhana@ayvm.in)



குரு சிஷ்யரின்  உரையாடல் 

பரம பூஜ்ய ஸ்ரீஸ்ரீரங்கப்ரிய ஸ்வாமிகளின்  நேரடி பதிவு 

தமிழாக்கம்  - திருமதி மைதிலி ராகவன் 


பாகம் - 2

சீடர்: தங்கள் உதாரணமும் விளக்கமும் நன்றாகப் புரிந்தது. மும்மூர்திகளுக்கும் வெவ்வேறு கட்டங்களில் முக்கியத்துவம் உண்டு என்பது சாஸ்த்திரங்களில் தெளிவாக உள்ளதா?

குரு: சாஸ்த்திரங்களில் கூறினாலும் இல்லாவிடினும்  உண்மை இதுதான். {என்று கூறியதுடன் சாஸ்த்திர வாக்யத்தையும் கூறுகிறார்.}



சீடர் : சிவபுராணம், விஷ்ணுபுராணம் இரண்டையும் வ்யாஸர் எழுதி, ஒவ்வொரு இடத்தில் ஒவ்வொருவரை உயர்ந்தவர் என்று கூறினால் அது முரண்பாடாகத் தெரிகிறதே?

குரு: ஒருவரே இங்கு சிவன், அங்கு விஷ்ணு உயர்ந்தவன் என்றதால் அவரை அரசியலில் போன்று நடப்பவர் என்னலாகாது. இங்கும், அங்கும், எங்கும் இருப்பவை அனைத்தும் மறைந்தால் மிகும் 'அப்பனே' பரமாத்மா. அவனொருவனைத்தான் வியாசர் துதிப்பது.


சீடர்: பரமாத்மா ஒருவனே ஆனால் அவனுக்கு வெவ்வேறு பெயர்களெதற்கு?

குரு: ஒரு மாணவனுக்கு பள்ளியில் பரிசு கிடைக்கிறது என்று வைத்துக்கொள்வோம். பரிசு யாருக்குக்கிடைத்தது என்றால் 'என் மகனுக்கு' என்கிறார் அவனது தந்தை, 'என் தம்பிக்கு' என்கிறான் அண்ணன், 'என் நண்பனுக்கு' என்கிறான் அவனது நண்பன். பரிசு அடைந்தவன் ஒருவனே ஆயினும் மகன், தம்பி, நண்பன் முதலான 'நாமத்ரய மந்திர ஜபம்' (மூன்று வெவ்வேறு பெயர்கள்) எதற்கு? வெவ்வேறு உறவுமுறைகள் இருப்பதால். அதுபோலவே இறைவனுக்கு வெவ்வேறு தொழில்களிருப்பதால்  அநேகமாயிரம் பெயர்கள். 

(சற்று பொறுத்து)


ஒருவனே நாடகத்தில் மூன்று வேடங்களில் நடிக்கிறான். ஒவ்வொறு வேடத்திலும் வெவ்வேறு நிறங்கள். வெவ்வேறு ஆடை ஆபரணங்கள். தொழிலும் வெவ்வேறு. ப்ரம்மனின் வேடத்தில் சிவப்பு ஆடை-அலங்காரம், அது ரஜோகுணத்தின் போர்வை(கவசம்). விஷ்ணுவின் வேடத்தில் வெண்ணிற ஆடை அலங்காரங்கள். அது சத்துவ குணத்தின் கவசம். ருத்திரனின் வேடத்தில் கரிய நிற ஆடை அலங்காரங்கள். அது தமோகுணத்தின் கவசம். 

அந்த கவசங்களைக் களைந்தால் பரிசுத்தனான பரமாத்மா. அவனை வைணவர்கள் நாராயணன், பரமபுருஷன் என்கிறார்கள், சைவர்கள் சதாசிவனென்கிறார்கள், உபனிடதம் பரப்ரம்ம்ம் என்கிறது.


ப்ரம்மன், விஷ்ணு, ருத்திரன் வேடங்களில் இருக்கும்பொழுது ஆக்கல், காத்தல், அழித்தல் என்று வெவ்வேறு தொழில்கள். மூன்று வேடங்களிலிருப்பவனும், மூன்று தொழில்களை புரிபவனும் ஒருவனே இறைவனப்பா!

சீடர்:  அப்படியென்றால் இது ஏன் எல்லா பக்தர்களுக்கும்

தெரிவதில்லை?


குரு: நாடகத்தில் நடிப்பவன் சிறப்பாக நடித்தால் வேடமணிந்தவன் யார் என்பதே தெரிவதில்லை!

சீடர்: ஆம். தெரிவதில்லை.


குரு: ஆனால் நடிப்பவனுடன் நன்றாகப்பழகியிருக்கும் உறவினன் ஒருவன் உன்னிப்பாக கவனித்தால் உண்மை விளங்கிவிடும். பகுத்தறிவுள்ளவர்களுக்கு தெரியும். ஒரு நாய் தன் எசமானன்  எந்த வேடத்தில் இருந்தாலும் முகர்ந்து பார்த்து அடையாளம் கண்டு மகிழ்வுடன் வாலை ஆட்டுகிறது. 

அவ்வாறே விவேகமுள்ள பக்தன் தன் ஸ்வாமி எந்த உருவத்தில் இருந்தாலும் தன் நாசாக்ர த்ருஷ்டியினால் அடையாளம் கண்டு களிக்கிறான். அவ்வாறு தன் வேடம் மாறியதால் தன் ப்ரபுவை அடையாளம் காணாத முட்டாளான பக்தன் ஒரு நாயைவிட கேவலமாவான்.


ஞானாசார்யர் வழங்கிய உதாரணம் அதி சுலபமாக இருந்தாலும் ஆழ்ந்த கருத்துள்ளதாக இருப்பதை அறிந்த சீடர்களின் மனம் ஆச்சரியத்தாலும் ஆனந்தத்தாலும் மலர்ந்தது. மேல்நோட்டத்திற்கு முரணாக காணும் மஹர்ஷிகளின் வாக்யங்களிலிருக்கும் ஒருமைப்பாட்டை சுலபமாக மனத்தில் பதியவைத்த இந்த விளக்கத்தை புத்தி, மனம், ஆன்மா அனைத்தும் ஒருங்கே அனுபவித்ததனாலுண்டான நன்றிப்பெருக்கோடு சீடர்கள் குருவை 


வணங்கினர்.


Tuesday, January 25, 2022

ஒப்பற்றமஹாபுருஷர் ஶ்ரீரங்கமஹாகுரு - பாகம் - 5 (Oppatra Mahaapurushar Srirangamahaa Guru - Part - 5)

தமிழாக்கம்:  ஶ்ரீமதி ஜானகி

மின்னஞ்சல் : (lekhana@ayvm.in)


யோகமஹிமை:-


      விஸ்வாமித்திரர் போன்ற பல மஹரிஷிகள் பல ஆயிரம் ஆண்டுகள் கடுந்தவம் செய்து ஆத்ம ஞானத்தை அடைந்தார்கள் என கேள்விப் பட்டிருக்கிறோம். ஆனால் மஹா குருவானவர் சில மாதங்களிலேயே ஆத்ம ஸாக்ஷாத்காரத்தை அடைந்தார் என அறிகிறோம்.


ஒரு சந்தர்ப்பத்தில் தன் நெருங்கிய உறவினரான ஶ்ரீ தாதாசார் என்பவரிடம் பேசும் பொழுது ஸ்ரீகுரு "இறைவனுக்கு உருவம் உண்டா இல்லையா" என்று வினவினார். அவர் "இறைவனுக்கு உருவம் உண்டென்று" கூறினார். மஹாகுரு தானே இறைவனை கண்டிருப்பதாகவும், அவன் அருவமானவன் என்றும் கூறி அவரை ஸ்தம்பிக்க வைத்தார். மேலும் ஶ்ரீ தாதாசார் "இறைவன் கோடி சூர்யப்ரகாசமுள்ளவன் என்று சொல்லப்படுவது உண்மையா" என்று வினவியபோது "கோடி அல்ல; அவன் பல கோடி கோடி சூரிய ஒளியுடையவன், ஒளிக்கடலாகவே திகழ்பவன். ஆயினும் பூர்ண சந்திரனை ஒத்த குளிர்ச்சியுள்ளவன்!" என்றும் "அந்த அம்ருதத்தில் மூழ்கி ஆநந்தத்தில் திளைக்கிறோம்" என்றும்  மஹாகுரு விளக்கமளித்தார்.


           ஆத்ம ஸாதனை என்பது பல வருடங்கள் முயன்றாலும் கிடைப்பது அரிது என்பதால் பலராலும் கைவிடப் பட்ட ஒன்று. ஆனால் யோகத்தின் அனுபவங்கள் அனைத்தும் இவரை வலிய தேடி வந்தடைந்தன. இவை அனைத்தும் அவருடைய வருங்காலத்தில் ஒரு பெரும் வெள்ளமாகவே பெருகியது.


(தொடரும்)



Sunday, January 23, 2022

ಶ್ರೀರಾಮನ ಗುಣಗಳು -41 ದುಷ್ಟ ಶಿಕ್ಷಕ- ಶ್ರೀರಾಮ (Sriramana Gunagalu -41 Dusta Sikshaka Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)


  

ಶ್ರೀರಾಮನ ದುಷ್ಟರನ್ನು ಶಿಕ್ಷಿಸುವ ಗುಣವು ಸಾಮಾನ್ಯರಿಗಿಂತಲೂ ವಿಶಿಷ್ಟವಾದುದುಶ್ರೀರಾಮನ ಅವತಾರದ ಉದ್ದೇಶವೇ ದುಷ್ಟರ ಶಿಕ್ಷಣವಾಗಿತ್ತು. ಎಲ್ಲಾ ಅವತಾರಗಳ ಉದ್ದೇಶವೂಅಧರ್ಮವನ್ನು ನಾಶಮಾಡಿ ಧರ್ಮವನ್ನು ಸಂಸ್ಥಾಪನೆ ಮಾಡುವುದೇ ಆಗಿದೆಅಧರ್ಮವು ದುಷ್ಟರಿಂದ ಉಂಟಾಗುತ್ತದೆಯಾವಾಗ ದುಷ್ಟರ ಅಂತ್ಯವು ಸಂಭವಿಸುವುದೋ ಅಂದೇ ಧರ್ಮಕ್ಕೆ ಜಯವೆಂದರ್ಥದುಷ್ಟರು ಶಿಷ್ಟರನ್ನು ಪೀಡಿಸುತ್ತಾ ಧರ್ಮಕಂಟಕರಾಗಿ ಇರುತ್ತಾರೆಒಂದು ದೃಷ್ಟಿಯಿಂದ ಇದು ಸೃಷ್ಟಿ ಸಹಜವಾಗಿ ನಡೆಯುವ ಪ್ರಕ್ರಿಯೆಈ ಸೃಷ್ಟಿಯಲ್ಲಿ ರಜಸ್ಸು ಮತ್ತು ತಮಸ್ಸೆಂಬ ಎರಡು ಅವಗುಣಗಳು ಸತ್ತ್ವವನ್ನು ಆವರಿಸಿಕೊಂಡೇ ಇರುತ್ತವೆಸತ್ತ್ವವು ಇವೆರಡರಿಂದ ಪೃಥಕ್ಕಾಗಲು ಸದಾ ಹವಣಿಸುತ್ತಿರುತ್ತದೆಇದನ್ನೇ ಯುದ್ಧ ಎಂಬುದಾಗಿ ಹೇಳಲಾಗುತ್ತದೆಸತ್ತ್ವಗುಣಾಧಿಪನಾದ ಭಗವಂತನ ಅಂಶಕ್ಕೂರಜಸ್ಸು ಮತ್ತು ತಮಸ್ಸಿಗೆ ವಶರಾಗಿ ಸತ್ತ್ವವನ್ನು ಮೆಟ್ಟಬಯಸುವ ರಾಕ್ಷಸರಿಗೂ ಸದಾ ಕಾಲ ಯುದ್ಧವು  ಸಂಭವಿಸುತ್ತಲೇ ಇರುತ್ತದೆಆದರೆ ಕೊನೆಗೆ ಜಯವಾಗುವುದು ಸತ್ತ್ವಕ್ಕೆಉಳಿದ ಗುಣಗಳು ಅದಕ್ಕೆ ಬಾಗಲೇಬೇಕುಇದನ್ನು ಶ್ರೀರಾಮನ ಜೀವನದಿಂದ ದುಷ್ಟರ ಶಿಕ್ಷಣದ ವಿಧಾನವನ್ನು ನೋಡಿದರೆ ಅರ್ಥವಾಗುತ್ತದೆಮತ್ತೊಂದು ವಿಷಯವನ್ನು ನಾವಿಲ್ಲಿ ಗಮನಿಸಬೇಕುಸತ್ತ್ವಕ್ಕೆ ಅವಿರೋಧವಾದಾಗ ರಜಸ್ಸು – ತಮಸ್ಸುಗಳು ಗುಣವೇ ಆಗುತ್ತವೆವಿರೋಧವಾದಾಗ ಇವೇ ದೋಷವಾಗುತ್ತವೆ ಎಂದು.

ಗುಣಗಳು ಯಾವಾಗಲೂ ಒಬ್ಬ ವ್ಯಕ್ತಿಯನ್ನು ಆಶ್ರಯಿಸಿ ತನ್ನ ಅಸ್ತಿತ್ವವನ್ನು ತೋರಿಸುವುದುಆ ವ್ಯಕ್ತಿಯು ಇರುವ ತನಕ ಅವನಲ್ಲಿ ಆ ಗುಣವು ತೋರುತ್ತದೆವ್ಯಕ್ತಿಯ ಅವಸಾನದ ಬಳಿಕ ಅಲ್ಲಿ ಆ ಗುಣಕ್ಕೆ ಅಸ್ತಿತ್ವವಿರುವುದಿಲ್ಲಈ ಕಾರಣಕ್ಕೆ ಶ್ರೀರಾಮನು ವ್ಯಕ್ತಿಯನ್ನು ದ್ವೇಷಿಸಲಿಲ್ಲಬದಲಾಗಿ ಅವರಲ್ಲಿರುವ ಆ ದುಷ್ಟ ಸ್ವಭಾವವನ್ನು ಅಥವಾ ಗುಣವನ್ನು ಮಾತ್ರ ಅಲ್ಲಗಳೆದಮತ್ತು ಶಿಕ್ಷಣವೇ ಅವನ ಗುರಿಯಾಗಿತ್ತೇ ಹೊರತು ಆ ವ್ಯಕ್ತಿಯ ನಾಶವು ಆಗಿರಲಿಲ್ಲಶಿಕ್ಷಣವೆಂಬುದು ಶ್ರೀರಂಗಮಹಾಗುರುಗಳು ಹೇಳುವಂತೆ 'ಶಿಕ್ಷ-ವಿದ್ಯೋಪಾದಾನೇ' ಶಿಕ್ಷೆಗೆ ಒಳಪಡಿಸುವ ಉದ್ದೇಶ ಒಬ್ಬನನ್ನು ವಿದ್ಯಾವಂತನನ್ನಾಗಿ ಮಾಡುವುದೇ ಆಗಿದೆ. ತಾನು ಮೊದಲು ಮಾಡಿದ ತಪ್ಪನ್ನು ಅರಿತುಕೊಂಡುಪುನಃ ಅದೇ ತಪ್ಪನ್ನು ಮತ್ತೆ ಮಾಡದಿರುವಿಕೆಯಾಗಿದೆಯಾರಾದರೂ ತಪ್ಪನ್ನು ಒಪ್ಪಿಬಂದಾಗ ಅವರ ತಪ್ಪನ್ನು ಮನ್ನಿಸಿ ಕ್ಷಮಿಸುವುದೂ ದುಷ್ಟಶಿಕ್ಷಣದ ಇನ್ನೊಂದು ಮುಖವೇ ಆಗಿದೆಇದಕ್ಕೆ ಒಂದು ಉದಾಹರಣೆಯನ್ನು ರಾಮಾಯಣದಲ್ಲಿ ನೋಡಬಹುದುಸುಗ್ರೀವನು ಶ್ರೀರಾಮನ ಸಖ್ಯವನ್ನು ಮಾಡಿಕೊಂಡು ಹೋಗಿ ಅದನ್ನು ಮರೆತುಕಾಮಲಂಪಟನಾಗಿ ಕೊಟ್ಟ ಮಾತನ್ನೇ ಮರೆತಿದ್ದಕೊನೆಯಲ್ಲಿ ತನ್ನ ತಪ್ಪಿನ ಅರಿವಾಗಿ ಶ್ರೀರಾಮನಲ್ಲಿ ಶರಣು ಬಂದಅವನನ್ನು ಪೂರ್ವಾಗ್ರಹವಿಲ್ಲದೆ ಅಂಗೀಕಸಿದ ಶ್ರೀರಾಮಇದು ಶ್ರೀರಾಮನು ಮಾಡಿದ ದುಷ್ಟಪ್ರವೃತ್ತಿಯ ನಿಗ್ರಹವಾಲಿಯನ್ನು ಕೊಂದ ಅನಂತರ ಮತ್ತು ಯಾವನ ಸಂಹಾರಕ್ಕೆಂದೇ ಅವತರಿಸಿದನೋ ಅಂತಹ ಲಂಕಾಧಿಪನಾದ ರಾವಣನ ಸಂಹಾರದ ಕೊನೆಯಲ್ಲಿ ಶ್ರೀರಾಮನ ನಡೆಯು ಎಂಥಹದ್ದು ಎಂಬುದು ತಿಳಿಯುತ್ತದೆ

ಅಂದರೆ 'ಮರಣಾಂತಾನಿ ವೈರಾಣಿಎಂಬ ಮಾತು ಸಾಕು. ದುಷ್ಟನ ಮರಣದಿಂದಲೇ ಅವನಲ್ಲಿನ ವೈರವೂ ಅಂತ್ಯವಾಗುತ್ತದೆ. ಶ್ರೀರಾಮನು ದುಷ್ಟಪ್ರವೃತ್ತಿಯ ವೈರಿಯಾಗಿದ್ದನೇ ಹೊರತುವ್ಯಕ್ತಿಯ ವೈರಿಯಾಗಿರಲಿಲ್ಲ ಎಂಬುದುಇದಕ್ಕೆ ಹಿನ್ನೆಲೆ ಇಷ್ಟೆಗುಣದೋಷವನ್ನೆ ವಿಶೇಷವಾಗಿ ಪರಿಗಣಿಸಬೇಕೆ ವಿನಾ ಗುಣ ಅಥವಾ ದೋಷವಿಶಿಷ್ಟನಾದ ವ್ಯಕ್ತಿಯನ್ನಲ್ಲ ಎಂದುಈ ಪ್ರಕಾರವಾಗಿ ಶ್ರೀರಾಮನು ಸತ್ತ್ವವಿರೋಧಿಯಾದ ರಾಜಸ-ತಾಮಸಗಳನ್ನು ನಿಗ್ರಹಿಸಿ ಸತ್ತ್ವವನ್ನು ಜಾಗರಗೊಳಿಸಿ ಲೋಕದಲ್ಲಿ ಸಾಮರಸ್ಯವನ್ನು ಮೂಡಿಸಿದ.

ಸೂಚನೆ : 23/1/2022 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.

ಅಷ್ಟಾಕ್ಷರ ದರ್ಶನ -4 ಮನೋ ಮೋಕ್ಷೇ ನಿವೇಶಯೇತ್ (Astakshara Darshana -4 Mano Mokse Niveshayet)

ಲೇಖಕರು : ಡಾ|| ಕೆ. ಎಸ್. ಕಣ್ಣನ್

(ಪ್ರತಿಕ್ರಿಯಿಸಿರಿ lekhana@ayvm.in)


ಧರ್ಮ-ಅರ್ಥ-ಕಾಮಗಳನ್ನು ಕುರಿತಾಗಿ ಮನುವಿನ ಮೂರು ಉಕ್ತಿಗಳನ್ನು ನೋಡಿದೆವು. ಕೊನೆಯ ಪುರುಷಾರ್ಥವಾದ ಮೋಕ್ಷವನ್ನು ಕುರಿತಾಗಿಯೂ ಅಲ್ಲಿಯದೇ ಸೂಕ್ತಿ- ಎಂಟೇ ಅಕ್ಷರಗಳಲ್ಲೇ: "ಮನಸ್ಸನ್ನು ಮೋಕ್ಷದಲ್ಲಿ ನೆಲೆಗೊಳಿಸಬೇಕು"- ಮನೋ ಮೋಕ್ಷೇ ನಿವೇಶಯೇತ್ – ಎಂದು.

ನಾನಾಕಾರ್ಯಗಳಿಗಾಗಿ ಹಗಲೆಲ್ಲ ಹೊರಗೆಲ್ಲ ಸುತ್ತಾಡಿ, ಅದೆಲ್ಲ ಮುಗಿಯುತ್ತಿದ್ದಂತೆ ಕೊನೆಗೆ ಮನೆ ಸೇರಿಕೊಳ್ಳುತ್ತೇವೆ. ಹೊಟ್ಟೆಪಾಡಿಗಾಗಿಯೋ ಆಟಕ್ಕಾಗಿಯೋ ಆಗಸದಲ್ಲೆಲ್ಲಾ ಹೋರಾಡಿ ಹಾರಾಡಿ ಕೊನೆಗೆ ವಿಶ್ರಾಂತಿ ಪಡೆಯಲು ಪಕ್ಷಿಗಳು ಗೂಡು ಸೇರಿಕೊಳ್ಳುವುವಲ್ಲವೆ? ಕೂಡುವ ಜಾಗವೇ ಗೂಡು: ಕುಳಿತುಕೊಳ್ಳುವೆಡೆ. ಕುಳಿತುಕೊಳ್ಳುವುದು ಎಂದರೆ ಭ್ರಮಣವೆಲ್ಲ ಮುಗಿದು ನೆಮ್ಮದಿಯಾದೆಡೆಯನ್ನು ಸೇರಿಕೊಳ್ಳುವುದು. ಹೊರಗೆ ಕಾಣಿಸಿಕೊಳ್ಳುವುದನ್ನು ಬಿಟ್ಟು ಮರೆಯಾಗುವ/ಅಡಗಿಕೊಳ್ಳುವ ಸ್ಥಾನವೇ ನಿಲಯ ಅಥವಾ ಆಲಯ. ಲಯವೆಂದರೆ ಮರೆಯಾಗುವುದೇ. ಹೀಗೆ ಮೋಕ್ಷವೆಂದರೆ 'ಮನೆ ಸೇರಿಕೊಳ್ಳುವುದೇ'. "ಮೋಕ್ಷ"ಕ್ಕೆ ಬಿಡುಗಡೆಯೆಂದರ್ಥವಲ್ಲವೇ? ಪ್ರಾಪಂಚಿಕ ಜಂಜಾಟಗಳನ್ನೆಲ್ಲ ಕಳೆದುಕೊಂಡು ನಮ್ಮದೇ ನೆಮ್ಮದಿಯ ನೆಲೆಯನ್ನೇ ಸೇರಿಕೊಳ್ಳುವುದೇ ಮೋಕ್ಷ.

ಹುಟ್ಟಿ ಬಂದ ಮೇಲೆ, "ನನಗೇನೂ ಬೇಡ" ಎಂದು ಯಾರು ಇರಲಾದೀತು?  ಜೀವನ-ನಿರ್ವಾಹಕ್ಕಾಗಿ ಮಾಡಬೇಕಾದ ಹತ್ತುಹಲವು ಕೆಲಸಗಳಿದ್ದೇ ಇರುತ್ತವೆ: ತನಗಾಗಿ, ತನ್ನ ಕುಟುಂಬಕ್ಕಾಗಿ, ತನ್ನ ಸುತ್ತಲಿನ ಸಮಾಜಕ್ಕಾಗಿ, ದೇಶಕ್ಕಾಗಿ. ಕರ್ತವ್ಯವಿಮುಖತೆಯು ಬಿಡುಗಡೆಗೆ ಹಾದಿಯಲ್ಲ.

ಮನು ಮುಂತಾದ ಶಾಸ್ತ್ರಕಾರರು ಈ ಕರ್ತವ್ಯದೃಷ್ಟಿಯನ್ನು ವಾಚ್ಯವಾಗಿಯೋ ಸೂಚ್ಯವಾಗಿಯೋ ಹೆಜ್ಜೆಹೆಜ್ಜೆಗೂ ತಿಳಿಸಿರುವವರೇ. ಮಿತಿಮೀರಿದ ಸಾಲವನ್ನು ಮಾಡಿಬಿಟ್ಟು ಅದನ್ನು ತೀರಿಸಲಾಗದೆ ಮನೆ ಬಿಟ್ಟು ಓಡಿಹೋಗಿ "ಸಂನ್ಯಾಸ"ವನ್ನು ತೆಗೆದುಕೊಳ್ಳುವುದುಂಟೇ? ಸಂನ್ಯಾಸವೆಂಬುದು ಅತ್ಯಂತ ಜವಾಬ್ದಾರಿಯ ಕೆಲಸ: ಮಿಕ್ಕೆಲ್ಲ ಜವಾಬ್ದಾರಿಗಳನ್ನೂ ಕಳೆದುಕೊಂಡ ಮೇಲೆ ಮಾಡಬೇಕಾದದ್ದು! ಮೋಕ್ಷಕ್ಕಾಗಿನ ಆಶ್ರಮವೆಂದರೆ ಅದೆಂದೇ! ಅಲ್ಲಿ ಸಹ ಅದರದೇ ಜವಾಬ್ದಾರಿಗಳಿಲ್ಲದಿಲ್ಲ.

ಸಾಲಮಾಡಿಟ್ಟು ಓಡಿಹೋಗಲು ಯತ್ನಿಸಿದರೇ ಸಾಕು, ಸಾಲಕೊಟ್ಟವರು ತಡೆಗಟ್ಟಲು ಬರುತ್ತಾರೆ. ಸಾಲ ಮಾಡಿ ಜಾರಿಕೊಳ್ಳುವವನಿಗೆ ಜೈಲೆಂಬುದು ಕಟ್ಟಿಟ್ಟದ್ದೇ. ನಿರೃಣಿಯಾದವನೇ ನಿರಾಳವಾಗಿರುವುದು: ಎಲ್ಲಿಗೆಂದರಲ್ಲಿಗೆ ಆತ ಹೋಗಬಹುದು. ಋಣವು ಮುಗಿಯುವ ತನಕವೂ ಕಟ್ಟುಪಾಡೇ; ಮಹಾಪಾಡೇ. ಋಣಿಯು ಬದ್ಧ; ಋಣಮುಕ್ತನೇ ಮುಕ್ತ. ಸಂಸಾರದ ಬಂಧ-ಮೋಕ್ಷಗಳೆನ್ನುವಾಗಲೂ ಹೀಗೆಯೇ.

ಸಾಲ ತೀರಿಸದೆ ಓಡಿಹೋದವವನ್ನು ಹಿಡಿದು ಹಾಕುವುದು ಜೈಲಿಗೇ. ಕೆಲವರು "ಅತಿಜಾಣ"ರು: ಮತ್ತೆ ಅಲ್ಲಿಂದಲೂ ತಪ್ಪಿಸಿಕೊಂಡುಹೋಗಿಬಿಡುವ ಆಸೆಯ ಭೂಪರು! ಹಾಗೆ ಪ್ರಯತ್ನಿಸಿದರೆ ಸಹ ಅವರಿಗಿನ್ನೂ ಹೆಚ್ಚಿನ ಶಿಕ್ಷೆಯೆಂಬುದು ಕಟ್ಟಿಟ್ಟ ಬುತ್ತಿ! ಬಂಧದ ದೆಸೆಯಿಂದ ಬೇಗನೆ ಬಿಡಿಸಿಕೊಂಡುಬಿಡಬೇಕೆಂದು ದುರ್ಮಾರ್ಗದತ್ತ ಧಾವಿಸಿದರೆ, ಮತ್ತೂ ತೀವ್ರವೆನಿಸುವ ನಿರ್ಬಂಧಗಳ ಸಂಕೋಲೆಯು ಸಿದ್ಧವಾದದ್ದೇ.

ಆತ್ಮಹತ್ಯೆಯು ಮಹಾಪಾಪವೆಂಬುದನ್ನು ತಿಳಿಸಲು ಶ್ರೀರಂಗಮಹಾಗುರುಗಳು ಮೇಲಿನ ಉಪಮಾನವನ್ನು ಕೊಡುತ್ತಿದ್ದರು: ಭವಬಂಧನವನ್ನು ಅದು ಮತ್ತೂ ಉಗ್ರಗೊಳಿಸುವುದೇ ಸರಿ! ಉಂಟಾಗಿಬಿಟ್ಟಿರುವ ಗಂಟುಗಳನ್ನು ಸರಿಯಾದ ಅರಿವು, ಸೂಕ್ಷ್ಮದೃಷ್ಟಿ, ತಾಳ್ಮೆಗಳಿಂದ ಬಿಡಿಸಿಕೊಳ್ಳಬೇಕು. ಬದಲಾಗಿ, ಧೃತಿಗೆಟ್ಟು ಹೇಗೆಹೇಗೋ ಎಳೆದಾಡಿದಲ್ಲಿ ಗಂಟನ್ನು ಕಗ್ಗಂಟಾಗಿಸಿಕೊಳ್ಳುವಂತಾಗುತ್ತದೆ: ತಂತುವು ಇನ್ನೂ ತೊಂತೇ ಆದಂತಾದೀತು!

ಋಣವೆಂದರೆ ಹಣದ ಸಾಲವೆಂದಷ್ಟೇ ಅಲ್ಲ. ಬೇರೆ ಋಣಗಳೂ ಉಂಟು - ಕಣ್ಣಿಗೆ ಕಾಣದವೂ, ಎಂದೇ ಮುಖ್ಯತರವಾದವೂ ಅವಾಗಿವೆ: ಅವಿಂದಲೂ ಬಿಡುಗಡೆ ಬೇಕಾದದ್ದೇ. ಅವನ್ನು ತೀರಿಸಿಕೊಂಡರೆ, ಎಂದರೆ ಕಾಲಕಾಲಕ್ಕೆ ತೀರಿಸಿಕೊಳ್ಳುತ್ತಾ ಬಂದರೆ, ಮನಸ್ಸನ್ನು ಮೋಕ್ಷದತ್ತ ಹರಿಸುತ್ತಿರಲು ಸಾಧ್ಯವಾಗುವುದು.

ಯಾವುವು ಆ ಋಣಗಳು? ಮೂರು ಋಣಗಳೆಂದು ಪ್ರಧಾನವಾಗಿ ತಿಳಿಸಿದೆ: ದೇವಋಣ-ಪಿತೃಋಣ-ಋಷಿಋಣ - ಎಂಬುದಾಗಿ. ನಮಗೆ ಜೀವನದಲ್ಲಿ ದಕ್ಕುವ ಭಾಗ್ಯವೆಲ್ಲ ದೇವಕಾರುಣ್ಯದಿಂದ; ಶರೀರವು ದಕ್ಕಿರುವುದು ತಂದೆ-ತಾಯಿಗಳಿಂದ; ಹೆಗ್ಗುರಿಯರಿವು ದೊರೆಯುವುದು ಋಷಿಕೃಪೆಯಿಂದ: ಎಂದೇ, ಯಜ್ಞ ಅಥವಾ ದೇವಪೂಜೆಯಿಂದ ದೇವಋಣವನ್ನೂ, ಸತ್-ಸಂತಾನಪ್ರಾಪ್ತಿಯಿಂದ ಪಿತೃಋಣವನ್ನೂ, ಋಷಿಗಳು ಬೋಧಿಸಿರುವ ಜ್ಞಾನದ ಸಂಪಾದನೆಯಿಂದ ಋಷಿಋಣವನ್ನೂ ಹೋಗಲಾಡಿಸಿಕೊಳ್ಳುತ್ತಲೇ ಮೋಕ್ಷದತ್ತ ಮನಸ್ಸನ್ನು ಕೊಡಬೇಕಾದದ್ದೂ.

ಈ ಸಾಲಗಳನ್ನು ತೀರಿಸದೆಯೇ "ಮೋಕ್ಷ-ಮೋಕ್ಷ"ವೆಂದು ಜಪಿಸಿ ಜಾರಿಕೊಳ್ಳುವ ಬೇಜವಾಬ್ದಾರಿಯವನಿಗೆ ಅಧೋಗತಿಯು ಸಿದ್ಧವೆಂದು ಮನುವು ಎಚ್ಚರಿಸುತ್ತಾನೆ! ಧರ್ಮ-ಅರ್ಥ-ಕಾಮ-ಮೋಕ್ಷಗಳನ್ನು ಕ್ರಮಬದ್ಧವಾಗಿ ಸಾಧಿಸತಕ್ಕದ್ದಿದೆ. ಸಮಾಜದ ಋಣ, ದೇಶದ ಋಣಗಳನ್ನೂ ಮರೆಯುವಂತೆಯೇ ಇಲ್ಲ.

ಹೀಗೆ ಈ ಎಲ್ಲ ಅರ್ಥಗಳ ಋಣಗಳನ್ನೂ ಹಿಂದಿರುಗಿಸಬೇಕು; ಜೊತೆಜೊತೆಗೇ ಪಾಶಕಾರಕಭ್ರಮದಿಂದಾಗಿರುವ ಸಂಸಾರಭ್ರಮಣದಿಂದಲೂ ಮನಸ್ಸನ್ನು ಹಿಂದಿರುಗಿಸಿ - ಅರ್ಥಾತ್ ಮನಸ್ಸನ್ನು ಮೋಕ್ಷದತ್ತ ಕೊಟ್ಟುಕೊಂಡು - ಅಲ್ಲಿಯೇ ಅದನ್ನು ನೆಲೆಗಾಣಿಸಬೇಕು. ಮನುವು ಮೂಡಿಸಿರುವ ಮಾನನೀಯವಾದ ಮಹಾಮಾರ್ಗವಿದು.

ಪರಮಪುರುಷಾರ್ಥವೆಂಬ ಜೀವನದ ಚರಮಲಕ್ಷ್ಯದತ್ತ ಪ್ರತಿದಿನವೂ ಕೊಂಚಕೊಂಚವಾಗಿ ಸಾಗುತ್ತಾ; ಈ ದೇಹವನ್ನು ತಳೆಯುವುದಕ್ಕೆ ಮುಂಚಿತವಾಗಿಯೂ, ಆಮೇಲೂ, ಕೂಡಿ(ಟ್ಟು)ಕೊಂಡಿರುವ ಋಣಗಳನ್ನೆಲ್ಲ ಕಳೆಯುತ್ತಾ; ಬಿಡುಗಡೆಯತ್ತ ಸಾಗಬೇಕಾದ ಜವಾಬ್ದಾರಿಯುತವಾದ ಜೀವನಕ್ರಮವನ್ನು ಋಷಿಗಳು ಬೋಧಿಸಿದ್ದಾರಲ್ಲವೆ? ದೇಶದ ಶ್ರೇಯಸ್ಸಿನೊಂದಿಗೆ ಸ್ವಶ್ರೇಯಸ್ಸನ್ನೂ, ಅವುಗಳೊಂದಿಗೆ ನಿಶ್ಶ್ರೇಯಸವನ್ನೂ (ಎಂದರೆ ಮೋಕ್ಷವನ್ನೂ), ಪ್ರತಿದಿನವೂ ಸ್ವಲ್ಪಸ್ವಲ್ಪವಾಗಿ ಸಾಧಿಸಿಕೊಳ್ಳುವುದೇ ನಮ್ಮೆಲ್ಲರ ನಿತ್ಯಕೃತ್ಯವಾಗಬೇಕಲ್ಲವೇ? ಕರ್ತವ್ಯಗಳ ಅರಿವು-ಆಚರಣೆಗಳನ್ನು ಉಪೇಕ್ಷಿಸಿದರೆ ಇಹವೂ ಇಲ್ಲ, ಪರವೂ ಇಲ್ಲವಾದಾವು!

ಸೂಚನೆ: 23/1/2022 ರಂದು ಈ ಲೇಖನ ವಿಜಯವಾಣಿಯ ಸುದಿನ ದಲ್ಲಿ ಪ್ರಕಟವಾಗಿದೆ. 

Saturday, January 22, 2022

ನವವಿಧ ಭಕ್ತಿ - 12 ಸಖನಾಗಿದ್ದೂ ಭಕ್ತಿಯನ್ನು ತೋರಬಹುದು (Sakhanaagiddu Bhaktiyannu Torabahudu)

ಲೇಖಕರು:  ಡಾ ಸಿ.ಆರ್. ರಾಮಸ್ವಾಮಿ

(ಪ್ರತಿಕ್ರಿಯಿಸಿರಿ lekhana@ayvm.in)
ಸಖ್ಯಭಕ್ತಿ - 1
ಸಖ್ಯಭಕ್ತಿ - 1

ಭಕ್ತಿಯಲ್ಲಿ ಮತ್ತೊಂದು ಪ್ರಸಿದ್ಧವಾದ ಪ್ರಕಾರ 'ಸಖ್ಯಭಕ್ತಿ'.  ಸಖಾ ಎಂದರೆ ಸ್ನೇಹಿತ-ಮಿತ್ರ-ಸ್ನೇಹದಿಂದ ಕೂಡಿರುವವನು. ಇದಲ್ಲದೇ, 'ಸ್ನೇಹ'ವೆಂದರೆ ಎಣ್ಣೆ-ಜಿಡ್ಡು ಎಂಬುದೂ ಒಂದರ್ಥ. ಎಣ್ಣೆಯ ವಿಶೇಷಧರ್ಮ ಅಂಟಿಕೊಳ್ಳುವುದು. ಅಂಟಿನಿಂದ ಕೂಡಿರುವುದರಿಂದ ಇದು ಸ್ನೇಹ. 'ಅಂಟು' ಎನ್ನುವುದೇ 'ರಾಗ'. ರಾಗ-ಅನುರಾಗ ಎಂದರೆ ಪ್ರೀತಿ. ಪ್ರೀತಿಯನ್ನು ಭಗವಂತನಲ್ಲಿ ತೋರಿಸುವುದೇ ಭಕ್ತಿಯಾದ್ದರಿಂದ ಭಕ್ತಿಗೆ ವಿಶೇಷವಾಗಿ ಅಪೇಕ್ಷಿತವಾಗಿರುವುದು ರಾಗ. ಆದುದರಿಂದ ರಾಗ-ಸ್ನೇಹಭಾವದಿಂದ ಕೂಡಿ ಭಗವಂತನನ್ನು ಆರಾಧಿಸುವುದೇ 'ಸಖ್ಯ-ಭಕ್ತಿ' - ಭಗವಂತನಲ್ಲಿ ಮಿತ್ರನಲ್ಲಿರುವಂತಹ ಅಂಟಿನಿಂದ ಕೂಡಿರುವುದು.

ಸಖ್ಯದ ವೈಶಿಷ್ಟ್ಯ

ಮೈತ್ರಿಯಲ್ಲಿ ಪರಸ್ಪರ ಅಂಟು-ಸುಖ-ದುಃಖಗಳ ಹಂಚಿಕೆಯಿರುತ್ತವೆ. ಕಷ್ಟಗಳು ಒದಗಿಬಂದಾಗ ಗೆಳೆಯನಿಗೆ ಸಮಾಧಾನವನ್ನು ಹೇಳುತ್ತಾನೆ. A friend in need is a friend indeed (ಅವಶ್ಯಕತೆ ಇದ್ದಾಗ ಒದಗಿಬರುವವನೇ ನಿಜಕ್ಕೂ ಸ್ನೇಹಿತ) ಎಂಬ ಗಾದೆಯೂ ಇದನ್ನು ಪೋಷಿಸುತ್ತದೆ. ಸಖ್ಯಭಕ್ತಿಯಲ್ಲಿ ವಿಶೇಷವೆಂದರೆ ಭಗವಂತನಿಗೆ ಅತಿಸಮೀಪದಲ್ಲಿರಬಹುದು ಮತ್ತು ಭಕ್ತನು ಭಗವಂತನನ್ನು ಸಖನಾಗಿ ನೋಡುವಂತೆಯೇ ಭಗವಂತನೂ ಈತನನ್ನು ಸಖನಾಗಿ ನೋಡುತ್ತಾನೆ. ಅತ್ಯಂತ ನಿಕಟವರ್ತಿಯಾಗಿ ಭಕ್ತನಿಗೆ (ತನ್ನ ಹೆಗಲಮೇಲೆ ಕೈ ಹಾಕಿಕೊಳ್ಳುವುದು, ಪಕ್ಕದಲ್ಲೇ ಕೂರುವುದು ಮುಂತಾದ) ವಿಶೇಷ ಅಧಿಕಾರಗಳನ್ನೂ ಕೊಡುತ್ತಾನೆ.

 

ಕೃಷ್ಣ - ಅರ್ಜುನ 

 ಇತಿಹಾಸ-ಪುರಾಣಗಳಲ್ಲಿ ಕಥೆಗಳ ಮೂಲಕ ಸಖ್ಯಭಕ್ತಿಯ ಬಗೆಗೆ ತೋರಿಸಿಕೊಡುತ್ತಾರೆ. ಸಖ್ಯಭಕ್ತಿಗೆ ಪ್ರಸಿದ್ಧ ಉದಾಹರಣೆ ಅರ್ಜುನ. ಅವನು ಕೃಷ್ಣನ ಜೊತೆಜೊತೆಯಾಗಿಯೇ ಇದ್ದವನು. ಕೃಷ್ಣನೇ ಅರ್ಜುನನನ್ನು ತನ್ನ ಸ್ನೇಹಿತನೆಂದು ಪ್ರೀತಿಪೂರ್ವಕವಾಗಿ ಪ್ರಕಟಿಸಿಕೊಂಡಂತಹ ಪ್ರಸಂಗಗಳನೇಕ. ಮಿತ್ರನ ವಿಶೇಷ ಜವಾಬ್ದಾರಿಯೆಂದರೆ ಅವನು ಯಾವ ಸಂಕಟಕ್ಕೂ-ತೊಂದರೆಗೂ ಒಳಗಾಗದಂತೆ ನೋಡಿಕೊಳ್ಳುವುದು. ಅರ್ಜುನನ ವಿಷಯದಲ್ಲಿ ಅಂತಹ ಜವಾಬ್ದಾರಿಯನ್ನು ಪರಿಪೂರ್ಣವಾಗಿ ಹೊತ್ತುಕೊಂಡಿದ್ದವನು  ಕೃಷ್ಣನೇ. ಪಾಂಡವರೆಲ್ಲರ ವಿಷಯದಲ್ಲೂ ಕೃಷ್ಣನಿಗೆ ಅತ್ಯಂತ ಪ್ರೀತಿಯಿತ್ತು, ಕಾರಣ ಅವರು ಧರ್ಮಿಷ್ಠರಾಗಿದ್ದರು. ಅದರಲ್ಲೂ ಅರ್ಜುನನಲ್ಲಿ ವಿಶೇಷಪ್ರೀತಿ ಇತ್ತು ಎನ್ನುವುದಕ್ಕೆ ಕೆಲವು ಘಟನೆಗಳನ್ನು ಸ್ಮರಿಸಬಹುದು. 


1. ಯುದ್ಧವಾಗಲೇಬೇಕೆಂದು ತೀರ್ಮಾನವಾದಾಗ ಶಕುನಿಯ ಪ್ರೇರಣೆಯಂತೆ ದುರ್ಯೋಧನನು ಕೃಷ್ಣನ ಬಳಿ ಬರುತ್ತಾನೆ. ನಿದ್ರಿಸುತ್ತಿದ್ದ ಕೃಷ್ಣನ ತಲೆಯ ಬಳಿ ಕುಳಿತುಕೊಳ್ಳುತ್ತಾನೆ. ನಂತರ ಬಂದ ಅರ್ಜುನ, ಕೃಷ್ಣನ ಪದತಲದಲ್ಲಿ ಕುಳಿತುಕೊಳ್ಳುತ್ತಾನೆ. ಕೃಷ್ಣ ಎಚ್ಚರವಾದೊಡನೆ ಅರ್ಜುನನನ್ನು ಮೊದಲು ಕಂಡು, ಅವನ ಆಗಮನಕ್ಕೆ ಕಾರಣವನ್ನು ಕೇಳುತ್ತಾನೆ; ನಂತರ ಹೇಳುತ್ತಾನೆ: ನನ್ನ ಹತ್ತಿರ ಮಹಾಬಲಿಷ್ಠರಿಂದ ಕೂಡಿದ 'ನಾರಾಯಣಸೈನ್ಯ'ವಿದೆ ಈ ಸೈನ್ಯವನ್ನು ಬೇಕಾದರೆ ನಿನ್ನ ಸಹಾಯಕ್ಕೆಂದು ಕೊಡಬಲ್ಲೆ; ಅಥವಾ ಏಕಾಂಗಿಯಾಗಿ ನಿನ್ನ ಸಹಾಯಕ್ಕೆ ನಿಲ್ಲಬಲ್ಲೆ; ಆದರೆ ಯುದ್ಧದಲ್ಲಿ ನಾನೊಬ್ಬನೇ ಯಾವ ಆಯುಧವನ್ನೂ  ಉಪಯೋಗಿಸದೇ ಇರುತ್ತೇನೆ. ಇದರಲ್ಲಿ ನಿನಗೆ ಯಾವುದು ಬೇಕೋ ಆರಿಸಿಕೊಳ್ಳಪ್ಪಾ". ಶ್ರೇಷ್ಠವಾದ ಸೇನಾಬಲವನ್ನು ಅರ್ಜುನನೇ ಆರಿಸಿಕೊಂಡುಬಿಡುತ್ತಾನೆಂದು ಹೆದರಿದ ದುರ್ಯೋಧನನು "ನಾನೇ ಮೊದಲು ಬಂದವನು" ಎನ್ನುತ್ತಾನೆ. ಆದರೆ ಕೃಷ್ಣನು "ಆದರೆ ನಾನು ಮೊದಲು ನೋಡಿದ್ದು ಅರ್ಜುನನನ್ನೇ" ಎಂದು ನುಡಿಯುತ್ತಾನೆ. ಅರ್ಜುನನೋ "ನೀನೊಬ್ಬನೇ ಬೇಕು ನನಗೆ" ಎಂದು ಉತ್ತರಿಸುತ್ತಾನೆ. ಮಹಾಸಂಗ್ರಾಮದಲ್ಲಿ ಬಲಿಷ್ಠರ ಸೈನ್ಯವು ಎಷ್ಟು ಆವಶ್ಯಕ  ಎಂಬುದನ್ನರಿತಿದ್ದರೂ "ಭಗವಂತ ನೀನೊಬ್ಬ ಸಾಕಪ್ಪ, ಇನ್ಯಾರೂ ಬೇಡ" ಎನ್ನಬೇಕಾದರೆ ಅದೆಷ್ಟು ಭಕ್ತಿ ಅವನಿಗೆ! ಕೃಷ್ಣನನ್ನು ಎಷ್ಟು ಚೆನ್ನಾಗಿ ಅರಿತಿದ್ದನೆಂಬುದು ಸ್ಪಷ್ಟವಾಗುತ್ತದೆ. ಕೃಷ್ಣನೂ ಒಪ್ಪಿಕೊಳ್ಳುತ್ತಾನೆ. 


ಅರ್ಜುನ, ಭಕ್ತನಾಗಿಯೂ ಮಿತ್ರನಾಗಿದ್ದಾನೆ. ಇದೇ ಸಖ್ಯಭಕ್ತಿ. 'ನೀನೊಬ್ಬ ಇದ್ದರೆ ಸಾಕು, ನನಗೆ ಇನ್ನೇನು ಬೇಕು?' ಎಂದಾಗ ಅಲ್ಲಿ ಭಕ್ತಿಭಾವದ ಜೊತೆಯಲ್ಲಿ ಶರಣಾಗತಿ ಭಾವವೂ  ತುಂಬಿದೆ. ಆದರೆ ಮಿತ್ರನಂತೆ ಸಲುಗೆಯ ಮಾತೂ ಇದೆ. 


2. ಕರ್ಣನ ವಿರುದ್ಧ ಯುದ್ಧ ಮಾಡುವಾಗ ಕರ್ಣನು ಇಂದ್ರನಿಂದ ಪಡೆದಂತಹ ಶಕ್ತ್ಯಾಯುಧವನ್ನು ಅರ್ಜುನನಮೇಲೆ ಪ್ರಯೋಗಿಸಿ ಆತನ ಕಥೆಯನ್ನು ಮುಗಿಸಲು ನಿಶ್ಚಯಿಸಿದ್ದ. ಆದರೆ ಕೃಷ್ಣನಿಗೆ ಸದಾ ಅರ್ಜುನನನ್ನು ಕಾಪಾಡುವುದರ ಚಿಂತೆಯೇ. ಆದ್ದರಿಂದ ಆ ಸಮಯಕ್ಕೆ ಸರಿಯಾಗಿ  ಘಟೋತ್ಕಚನನ್ನು ಯುದ್ಧಕ್ಕೆ ಬರಮಾಡಿಸಿ ಕೌರವಸೇನೆಯನ್ನು ಸಂಕಷ್ಟಕ್ಕೆ ಒಳಪಡಿಸಿದ. ಇದನ್ನು ಸಹಿಸಲಾರದೇ, ವಿಧಿಯಿಲ್ಲದೇ ಕರ್ಣ ಅರ್ಜುನನಿಗಾಗಿ ಕಾಯ್ದಿರಿಸಿದ ಶಕ್ತ್ಯಾಯುಧವನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿಬಿಡುತ್ತಾನೆ. ಅರ್ಜುನ ಬದುಕಿದ ಎಂದು ಕೃಷ್ಣನು ನಿಟ್ಟುಸಿರು ಬಿಡುತ್ತಾನಂತೆ!


3. ಕರ್ಣ ನಾಗಾಸ್ತ್ರವನ್ನು ಪ್ರಯೋಗಿಸಿದಾಗ ಕೃಷ್ಣ ಇಡೀ ರಥವನ್ನೇ ಅದುಮಿ ಅರ್ಜುನನ ಕಿರೀಟವನ್ನು ಮಾತ್ರವೇ ಹಾರಿಸಿಕೊಂಡು ಹೋಗುವಂತೆ ಉಪಾಯಮಾಡಿ ಇವನನ್ನು ಬದುಕಿಸುತ್ತಾನೆ!  


4. 'ಅಭಿಮನ್ಯುವನ್ನು ಸಂಹರಿಸಲು ಕಾರಣನಾಗಿದ್ದ ಸೈಂಧವನನ್ನು ಮಾರನೆಯದಿನದ ಸಂಜೆಯೊಳಗೆ  ಸಂಹಾರ ಮಾಡಿಯೇ ಮಾಡುತ್ತೇನೆ; ಇಲ್ಲದಿದ್ದಲ್ಲಿ ಅಗ್ನಿಪ್ರವೇಶ ಮಾಡುತ್ತೇನೆಂದು' ಅರ್ಜುನನು ಶಪಥ ಮಾಡಿಬಿಡುತ್ತಾನೆ. ಆದರೆ ಅದನ್ನು ನೆರೆವೇರಿಸುವುದು ಅತ್ಯಂತ ಕಷ್ಟಸಾಧ್ಯವೆಂಬ ಪರಿಸ್ಥಿತಿ ಒದಗಿದಾಗ ಶ್ರೀಕೃಷ್ಣನು ತನ್ನ ಯೋಗಮಾಯೆಯಿಂದ ಸೂರ್ಯಾಸ್ತವಾದಂತೆ ತೋರಿಸುತ್ತಾನೆ. ಆಗ ಸೈಂಧವ ತನಗಿದ್ದ ವಿಶೇಷರಕ್ಷಣೆಯನ್ನು ಬಿಟ್ಟು ಹೊರಬರುತ್ತಾನೆ. ಅರ್ಜುನ ಆಗ ತನ್ನ ಪ್ರತಿಜ್ಞೆಯನ್ನು ಪೂರ್ಣಗೊಳಿಸಿಕೊಳ್ಳುತ್ತಾನೆ. ಅವನಿಗಾಗಿ ಕೃಷ್ಣ ತನ್ನ ಯೋಗಮಾಯೆಯನ್ನು ತೋರಿಸುವುದಕ್ಕೂ ಹಿಂಜರಿಯಲಿಲ್ಲ. 'ನನ್ನ ಸಖ ನೀನು, ನಿನ್ನ ಯೋಗಕ್ಷೇಮವನ್ನು ನೋಡಿಕೊಳ್ಳುತ್ತೇನೆ' ಎಂಬುದಾಗಿ ಕೃಷ್ಣನು ಬಾಯಿಬಿಟ್ಟು ಹೇಳಿಕೊಳ್ಳುವ ಪ್ರಸಂಗಗಳುಂಟು. 


5. ಮತ್ತೊಂದು ಪ್ರಸಂಗ. ಯುದ್ಧವು ಮುಗಿದ ಮೇಲೆ ಕೊನೆಯಲ್ಲಿ "ಅರ್ಜುನ! ರಥದಿಂದ ಇಳಿ ಕೆಳಗೆ" ಎಂದು ಕೃಷ್ಣ ಆಜ್ಞೆಮಾಡುತ್ತಾನೆ. ಆಗ ಅರ್ಜುನನು  "ಸಾರಥಿ ಮೊದಲು ಇಳಿಯಬೇಕು. ನಂತರ ರಥಿಯಾದ ನಾನು ಇಳಿಯಬೇಕು, ಅದೇ ನಿಯಮ" ಎಂಬುದಾಗಿ ಕೃಷ್ಣನಿಗೇ ಉಪದೇಶ ಮಾಡುತ್ತಾನೆ. "ನಾನು ಹೇಳಿದಂತೆ ಕೇಳು" ಎಂದು  ಮಿತ್ರನೇ ಆದರೂ  ಪ್ರಭುವಿನಂತೆ ಆಜ್ಞೆ  ಮಾಡುತ್ತಾನೆ ಕೃಷ್ಣ. ಅರ್ಜುನನು ರಥದಿಂದ ಇಳಿದ ಬಳಿಕ ಕೃಷ್ಣನು ಇಳಿದ ಮರುಕ್ಷಣವೇ ರಥವು ಉರಿದುಭಸ್ಮವಾಗುತ್ತದೆ. "ನಾನು ಮೊದಲು ಇಳಿದುಬಿಟ್ಟಿದ್ದರೆ ನಿನ್ನ ಕಥೆ ಏನಾಗುತ್ತಿತ್ತು ನೋಡಿದೆಯಾ?" ಎನ್ನುತ್ತಾನೆ ಕೃಷ್ಣ. ಅಂದರೆ ಎಲ್ಲಾ ಸಂದರ್ಭಗಳಲ್ಲೂ ಕೃಷ್ಣ ಅವನಿಗೆ ರಕ್ಷಕನಾಗಿಯೂ, ಅಂಗರಕ್ಷಕನಾಗಿಯೂ ಇದ್ದು ಸಖ್ಯತ್ವವನ್ನು ಪರಿಪಾಲಿಸಿದ.   

(ಸಶೇಷ)

ಸೂಚನೆ : 22/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

ವಸ್ತ್ರಾಭರಣ- 6 ಅಂತರೀಯ ಮತ್ತು ಬಂಧಗಳು (Vastra bharana - 6 Antariya Mattu Bandhagalu)

ಲೇಖಕರು: ಮೋಹನ ರಾಘವನ್.

(ಪ್ರತಿಕ್ರಿಯಿಸಿರಿ lekhana@ayvm.in)



ಅಂತರೀಯ ಅಥವಾ ಕೆಳವಸ್ತ್ರ ಶರೀರದ ಕೆಳಭಾಗವನ್ನು ಮುಚ್ಚುವ ಒಂದು ಅವಿಚ್ಛಿನ್ನವಾದ ವಸ್ತ್ರ. ಇದು ಕೆಳಮೈಯನ್ನು ಸುತ್ತುವರೆದು, ಗಂಟುಹಾಕಿ ಸೊಂಟಕ್ಕೆ ಬಿಗಿದಿರುತ್ತದೆ. ಗಂಡಸರು ಉಡುವ ಪಂಚೆ, ಸ್ತ್ರೀಯರ ಸೀರೆಯ ಕೆಳಭಾಗ ಇವು ಅಂತರೀಯದ ನಿದರ್ಶನಗಳು. ಪಂಚೆ ಉಡುವ ಬಗೆಗಳು ಅನೇಕ. ಸುಮ್ಮನೆ ಸುತ್ತಿಕೊಂಡಿರುವುದು ಒಂದು. ಪಂಚಕಚ್ಛದ ಶೈಲಿ ಮತ್ತೊಂದು. ಕಚ್ಛ ಎಂದರೆ ಬಟ್ಟೆಯ ತುದಿ ಅಥವಾ ಅಂಚು. ಐದು ಜಾಗಗಳಲ್ಲಿ ತುದಿಯನ್ನು ಮಡಿಸಿ / ಗಂಟು ಹಾಕಿ  ಕಟ್ಟಿರುವುದರಿಂದ ಇದು ಪಂಚ-ಕಚ್ಛಾ. ಸೀರೆಯ ಕೆಳಭಾಗವನ್ನು ಉಡುವ ಕ್ರಮದಲ್ಲೂ ಈ ಎರಡು ಶೈಲಿಗಳು ಕಂಡುಬರುತ್ತವೆ. ಅಂತರೀಯವನ್ನು ಉಡುವ ಎಲ್ಲಾ ಶೈಲಿಗಳಲ್ಲೂ ಸಮಾನವಾಗಿರುವುದೆಂದರೆ ನಾಭಿಯ ಎಡ-ಬಲ ಭಾಗಗಳಲ್ಲಿ ಎರಡು ಗಂಟುಮಾಡಿ ಸೊಂಟವನ್ನು ಬಿಗಿಯಾಗಿ ಬಂಧಿಸುವ ಕ್ರಮ. ಕಚ್ಛೆ ಅಂತರೀಯದಲ್ಲಿ ಇದರ ಜೊತೆಗೆ, ಲಿಂಗ-ಮೂಲಗಳನ್ನು ಮುಚ್ಚಿ ಬಿಗಿಯಾಗಿ ಕಟ್ಟುವ ಮತ್ತೊಂದು ಬಂಧವೂ ಸೇರಿಕೊಳ್ಳುತ್ತದೆ. ಇಂತಹ ವಸ್ತ್ರಧಾರಣೆಯೇ ನಮ್ಮಲ್ಲಿ ಸಹಜವಾಗಿಯೇ ಉಡ್ಡೀಯನ ಹಾಗೂ ಮೂಲ ಬಂಧಗಳನ್ನು ಉಂಟು ಮಾಡಲು ಅತ್ಯಂತ ಸಹಕಾರಿ ಎಂಬುದು ಯೋಗರಹಸ್ಯಜ್ಞರಾದ ಶ್ರೀರಂಗಮಹಾಗುರುಗಳ ಅಭಿಪ್ರಾಯ. ಯೋಗಶಾಸ್ತ್ರದಲ್ಲಿ ಜಾಲಂಧರ, ಉಡ್ಡೀಯನ ಮತ್ತು ಮೂಲಬಂಧ ಎಂಬುದಾಗಿ ಮೂರು ಬಂಧಗಳ ಉಲ್ಲೇಖವಿದೆ. ಈ ಮೂರು 'ಬಂಧ'ಗಳನ್ನು ಸಾಧಿಸಿದವನಿಗೆ ಕಾಲಪಾಶದ 'ಬಂಧನ'ವೇ ಕಳಚಿ ಹೋಗುತ್ತಂತೆ ! ಅಂದರೆ ಅವನು ಯೋಗಸಿದ್ಧಿಯನ್ನು ಪಡೆದು ಮುಕ್ತನಾಗುತ್ತಾನೆ ಎಂದೇ ಅರ್ಥ.


ಬಂಧ ಹೇಗೆ ಯೋಗಸಿದ್ಧಿಯನ್ನು ಕೊಟ್ಟೀತು?     

ಮಹತ್ತಾದ ಭಾರವನ್ನು ಎತ್ತುವಾಗ, ಪೂರ್ವಸಿದ್ಧತೆಯನ್ನು ಹೇಗೆ ಮಾಡಿಕೊಳ್ಳುತ್ತೇವೆ ? ಸೊಂಟಕ್ಕೆ ಬಿಗಿದು, ಎತ್ತಬೇಕಾದ ವಸ್ತುವಿನ ಅಡಿಯಲ್ಲಿ ಕೈ ಹಾಕಿ ಸಜ್ಜಾಗುತ್ತೇವೆ. ಒಂದು ಕ್ಷಣ ದಮ್ ಕಟ್ಟಿ, ಎವೆಯಿಕ್ಕದೇ ಕಟ್ಟಿಗೆಯಂತಾಗುತ್ತೇವೆ. ಆಗ ಭಾರವನ್ನು ಎತ್ತುವ ಕೆಲಸ ಅನಾಯಾಸವಾಗಿ ಸಿದ್ಧಿಸುತ್ತೆ. ಇಲ್ಲಿ ಭಾರ ಎತ್ತಲು ಉಸಿರಿನ ಮೇಲೆ ನಿಯಂತ್ರಣ ಅವಶ್ಯಕ. ಅದನ್ನು ಸದಾಕಾಲವೂ ಉಳಿಸುವುದಕ್ಕೆ ನಡುವಿಗೆ ಬಿಗಿದ ಬಟ್ಟೆ ಸಹಕಾರಿಯಾಗಿತ್ತು.  


ಯೋಗಸಾಧನೆಗಂತೂ ಉಸಿರಾಟದ ಮೇಲೆ ನಿಯಂತ್ರಣ ಅವಶ್ಯಕ ಮಾತ್ರವಲ್ಲ ಅನಿವಾರ್ಯವೂ ಹೌದು. ಆದರೆ ಯೋಗಸಿದ್ಧಿಗೆ ಸಹಕಾರಿಯಾದ ಪ್ರಾಣಾಯಾಮ ಕೇವಲ ದಮ್ ಕಟ್ಟುವುದಲ್ಲ. ಅದರ ಒಂದು ಅಂಶವಷ್ಟೇ. ಯೋಗಸಾಧನೆಗೆ ಅನೇಕ ಒಳ ಪ್ರಕ್ರಿಯೆಗಳು ನಡೆದಿರಬೇಕು. ಪ್ರಾಣ ಮನಸ್ಸುಗಳು ಒಳಮುಖವಾಗಿ ಹರಿದು ಧ್ಯೇಯದಲ್ಲಿ ಲೀನವಾಗಿರಬೇಕು. ಧಾರಣ-ಧ್ಯಾನ-ಸಮಾಧಿ ಸಿದ್ಧಿಸಬೇಕು. ಸಮಾಧಿಯ ಸೌಖ್ಯವನ್ನು ಅನುಭವಿಸಬೇಕಾದರೆ ಒಳಮುಖವಾಗಿ ಹರಿದ ಪ್ರಾಣಗಳು ಹೊರಬಾರದಂತೆ, ಕೆಳಗಿಳಿಯದಂತೆ ನೋಡಿಕೊಳ್ಳುವುದೇ ಈ ಬಂಧಗಳು. ಬಂಧಗಳು ಮೂರು ಜಾಗದಲ್ಲಿ ಉಂಟಾಗುತ್ತವೆ. ಕಂಠದಲ್ಲಿ ಜಾಲಂಧರ, ಉದರಸ್ಥಾನದಲ್ಲಿ ಉಡ್ಡೀಯನ ಬಂಧ, ಮತ್ತು ಲಿಂಗ-ಮೂಲ ಗಳಲ್ಲಿ ಮೂಲಬಂಧ. ಭಾರತೀಯವಾದ ಪಂಚೆ-ಸೀರೆಗಳ ವಿನ್ಯಾಸ  ಉಡ್ಡೀಯನ ಮತ್ತು ಮೂಲ ಬಂಧಗಳನ್ನು ಉಂಟುಮಾಡಲು ಭೌತಿಕವಾದ ಸಹಕಾರವನ್ನು ನೀಡುತ್ತದೆ.  


ಡಾಬು-ಒಡ್ಯಾಣ-ಮೇಖಲೆ 

ಸ್ತ್ರೀಯರು ಆಭರಣವಾಗಿ ತೊಡುವ ಡಾಬು (ಒಡ್ಯಾಣ), ಬ್ರಹ್ಮಚಾರಿಗಳು ಸೊಂಟಕ್ಕೆ ಸುತ್ತುವ ಅಭಿಮಂತ್ರಿತ ಮೌಂಜೀ (ಮೇಖಲಾ) ಇವೂ ಸಹ ಇದೇ ಕೆಲಸವನ್ನೇ ಮಾಡುತ್ತವೆ. ಈಗಾಗಲೇ ಗಮನಿಸಿರುವ ಅಂತರೀಯದ ಯೋಗರಹಸ್ಯವನ್ನೇ ನಾವು ವೇದಾಗಳಲ್ಲಿಯೂ ಕಾಣುತ್ತೇವೆ. ವೇದಗಳು ಮೇಖಲೆಯನ್ನು ಸಾಕ್ಷಾತ್ ದೇವೀಸ್ವರೂಪಿಣಿಯಾಗಿ ಕಾಣುತ್ತದೆ. ಪ್ರಾಣ-ಅಪಾನಗಳಿಗೆ ಬಲವನ್ನು ತಂದು ಕೊಡವವಳೆಂದು ಕೊಂಡಾಡುತ್ತದೆ. ಋಷಿಗಳ ಆಯುಧವೆಂದೂ, ಸಹೋದರಿಯೆಂದೂ ಕೊಂಡಾಡುತ್ತಾರೆ. ಸನ್ಮತಿಯನ್ನೂ ಮೇಧೆಯನ್ನೂ ಕೊಡುವವಳು ಮೇಖಲೆ. 


ಪಂಚೆ, ಸೀರೆ, ಡಾಬು, ಮೇಖಲೆ ಮುಂತಾದವು ಹೊರಗಡೆಯಿಂದ ಆಕರ್ಷಕವಾದ ಅಲಂಕಾರವಾಗಿಯೂ ಇದ್ದು ಅದ್ಭುತವಾದ ಯೋಗಸಾಧನವೂ ಆಗಿವೆ ಎಂಬುದನ್ನು ಗಮನಿಸಬೇಕು. ಇಂತಹ ಅಲಂಕಾರವನ್ನು ತಂದುಕೊಟ್ಟ ಋಷಿಗಳ ಮೇಧೆಗೆ ನಮೋನಮಃ ! 

ಸೂಚನೆ : 22/1/2022 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.

Thursday, January 20, 2022

ಸಮರ್ಪಣೆಗಿರಲಿ ಪರಿಶುದ್ಧ ಮನೋಭಾವ (Samarpanegirali Parishuddha Manobhava)

ಲೇಖಕಿ: ಸೌಮ್ಯಾ ಪ್ರದೀಪ್ 

(ಪ್ರತಿಕ್ರಿಯಿಸಿರಿ lekhana@ayvm.in)


ಪಾಂಡವರು ವನವಾಸದಲ್ಲಿರುವ ಸಂಧರ್ಭ. ರಾತ್ರಿ ಪಾಂಡವರ ಹಾಗೂ ದ್ರೌಪದಿಯ ಭೋಜನವಾದ ನಂತರ, ಹತ್ತು ಸಾವಿರ ಶಿಷ್ಯರೊಡನೆ ಪಾಂಡವರ ಕುಟೀರಕ್ಕೆ ಮಹರ್ಷಿದುರ್ವಾಸರ ಆಗಮನ; ಧರ್ಮರಾಯನು ಅತ್ಯಂತ ಭಕ್ತಿಯಿಂದ ಅವರನ್ನು ಎದುರುಗೊಂಡು ಕುಶಲವನ್ನು ವಿಚಾರಿಸುತ್ತಾನೆ. ನದಿಯಲ್ಲಿ ಆಹ್ನಿಕಗಳನ್ನು ಪೂರೈಸಿ ಬರುವಷ್ಟರಲ್ಲಿ ತಮಗೂ ಹಾಗೂ ತಮ್ಮ ಶಿಷ್ಯಂದಿರಿಗೂ ಭೋಜನದ ವ್ಯವಸ್ಥೆಯಾಗಬೇಕೆಂದು ಆದೇಶಿಸಿ ನದಿಗೆ ತೆರಳುತ್ತಾರೆ. ಪಾಂಡವರಿಗೆ ಸೂರ್ಯದೇವನಿಂದ ಕೊಡಲ್ಪಟ್ಟ ಅಕ್ಷಯ ಪಾತ್ರೆಯಲ್ಲಿ ರಾತ್ರಿ ದ್ರೌಪದಿಯ ಭೋಜನವಾದ ನಂತರ ಪದಾರ್ಥಗಳು ಸೃಷ್ಟವಾಗಲು ಮಾರನೆಯ ದಿನ ಸೂರ್ಯೋದಯದವರೆಗೂ ಕಾಯಬೇಕು, ಬಂದ ಅತಿಥಿಗಳನ್ನು ಸತ್ಕರಿಸುವುದು ಹೇಗೆ? ಮಹರ್ಷಿ ದುರ್ವಾಸರ ಕೋಪಕ್ಕೆ ಗುರಿಯಾಗದಿರುವುದಕ್ಕೆ ದಾರಿ ಏನು? ಎಂಬುದಾಗಿ ಚಿಂತಿಸುತ್ತಾ ಧರ್ಮರಾಯನು ತಮಗೆ ಬಂದ ಸಂದಿಗ್ಧ ಪರಿಸ್ಥಿತಿಯನ್ನು ದ್ರೌಪದಿಗೆ ತಿಳಿಸುತ್ತಾನೆ, ಆಗ ದ್ರೌಪದಿಯೂ ಕ್ಷಣಕಾಲ ಯೋಚಿಸಿ ತಮ್ಮ ಅಪದ್ಭಾಂಧವನಾದಂತಹ ಶ್ರೀಕೃಷ್ಣನ ಮೊರೆಯನ್ನೇ ಹೋಗುತ್ತಾಳೆ. ಅವಳ ಪ್ರಾರ್ಥನೆಗೆ ಓಗೊಟ್ಟು ಪ್ರತ್ಯಕ್ಷನಾದ ಶ್ರೀಕೃಷ್ಣನು ತನಗೆ ಸ್ವಲ್ಪ ಆಹಾರವನ್ನು ನೀಡುವಂತೆ ಆಜ್ಞಾಪಿಸುತ್ತಾನೆ. ಆಗ ದ್ರೌಪದಿಯು, ಅಕ್ಷಯ ಪಾತ್ರೆಯಲ್ಲಿ ಹುಡುಕಿ ಪಾತ್ರೆಗೆ ಅಂಟಿಕೊಂಡಿದ್ದ ಒಂದೇ ಒಂದು ಕಾಳನ್ನು ಭಕ್ತಿಯಿಂದ, ಸಮರ್ಪಣಾ ಭಾವದಿಂದ ಭಗವಂತನಿಗೆ ಅರ್ಪಿಸಿದಾಗ ಅದನ್ನು ಸ್ವೀಕರಿಸಿ ಸಂತೃಪ್ತನಾಗುತ್ತಾನೆ.ಆಗ ನದೀತೀರದಲ್ಲಿ ಆಹ್ನಿಕಗಳನ್ನು ನೆರವೇರಿಸುತ್ತಿದ್ದ ದೂರ್ವಾಸರಿಗೆ ಹಾಗೂ ಅವರ ಎಲ್ಲಾ ಶಿಷ್ಯಂದಿರಿಗೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಏಕೆಂದರೆ ಉದರದಲ್ಲಿ ವೈಶ್ವಾನರ ರೂಪದಲ್ಲಿರುವುದು ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನಲ್ಲವೇ?


ಅವನೇ ದ್ರೌಪದಿಯು ಸಮರ್ಪಿಸಿದ ಆಹಾರದಿಂದ ಸಂತೃಪ್ತನಾದಾಗ ಅವನನ್ನೇ ಉಪಾಸಿಸುವ ದುರ್ವಾಸರು ಹಾಗೂ ಅವರ ಶಿಷ್ಯಂದಿರೂ ಸಂತೃಪ್ತರಾಗಿ ಪಾಂಡವರನ್ನು ಹರಸಿ ಅಲ್ಲಿಂದ ತೆರಳುತ್ತಾರೆ. ಪರಮಾತ್ಮನು ಭಗವದ್ಗೀತೆಯಲ್ಲಿ ಹೇಳಿರುವಂತೆ ಪತ್ರವನ್ನಾಗಲೀ, ಪುಷ್ಪವನ್ನಾಗಲೀ ಫಲವನ್ನಾಗಲೀ,ಒಂದು ತೊಟ್ಟು ಜಲವನ್ನಾಗಲೀ ಭಕ್ತಿಯಿಂದ ಸಮರ್ಪಿಸಿದಾಗ ನಾನು ಸಂತೃಪ್ತನಾಗುತ್ತೇನೆ ಎಂಬಂತೆ ನಿತ್ಯತೃಪ್ತನಾದ ಭಗವಂತನಿಗೆ ಭಕ್ತರು ಕೊಡುವ ದ್ರವ್ಯದ ಪರಿಮಾಣಕ್ಕಿಂತ ಅವರಲ್ಲಿರುವ ಸಮರ್ಪಣಾ ಭಾವವೇ ಪ್ರಿಯವಾದುದು. ವಿದುರನು ಅರ್ಪಿಸಿದಂತೆ , ಶಬರಿಯು ನೀಡಿದಂತೆ ಶುದ್ಧವಾದ ಭಾವವನ್ನು ಮಾತ್ರ ಅವನು ಅಪೇಕ್ಷಿಸುತ್ತಾನೆ; ಸ್ವೀಕರಿಸುತ್ತಾನೆ ಕೂಡ. ಭಗವಂತನಿಗೆ, ಭಗವತ್ಸ್ವರೂಪರಾದ ಗುರು ಹಿರಿಯರಿಗೆ ಅಥವಾ ಯಾವುದೇ ಭಗವತ್ಕಾರ್ಯಗಳಿಗೆ ದ್ರವ್ಯವನ್ನು ಸಮರ್ಪಿಸುವಾಗ ನಿರ್ಲಿಪ್ತವಾದ ಹಾಗೂ ಹಗುರವಾದ ಪರಿಶುದ್ಧಮನಸ್ಸೇ ಮುಖ್ಯ. ಹಾಗಿದ್ದಾಗ ಮಾತ್ರ ಅದು ನಿಜವಾದ ಅರ್ಥದಲ್ಲಿ ಸಮರ್ಪಣೆಯಾಗುತ್ತದೆ. 'ಬಾಹ್ಯಾಂತರಿಕ್ಷಕ್ಕೆ ಹೋದಾಗ ಚಿನ್ನದ ಗಟ್ಟಿ ಮತ್ತು ಹತ್ತಿಯ ಪಂಜಿ ಒಂದೇ ರೀತಿಯಾಗಿ ಬಿಡುತ್ತದೆ, ಎರಡೂ ಭಾರ ಕಳೆದುಕೊಂಡು ಒಂದೇ ರೀತಿಯಾಗಿಬಿಡುತ್ತದೆ, ಎರಡಕ್ಕೂ ಭಾರದ ಅಭಾವ ಉಂಟಾಗುತ್ತದೆ, ಹಾಗೆಯೇ ಭಗವಂತನಿಗೆ ಶುದ್ಧಭಾವದಿಂದ ಅರ್ಪಣೆಯಾದಾಗ ನಯಾ ಪೈಸಾ ಮತ್ತು ಸ್ವರ್ಣರಾಶಿ ಎರಡಕ್ಕೂ ಒಂದೇ ರೂಪ, ಎರಡೂ ತಮ್ಮ ಮೌಲ್ಯವನ್ನು ಕಳೆದುಕೊಂಡು ಬ್ರಹ್ಮರೂಪವನ್ನು ಹೊಂದಿಬಿಡುತ್ತವೆ' ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯವಾಗಿದೆ.


ಸೂಚನೆ: 20/1/2022 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.