Sunday, December 26, 2021

ಶ್ರೀರಾಮನ ಗುಣಗಳು - 37 ಭಾಷಾಭಿಜ್ಞ - ಶ್ರೀರಾಮ(Sriramana Gunagalu -37 Bhaashaabhijna Shrirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಮಾನವನು ತನ್ನ ಭಾವನೆಗಳನ್ನು ಇನ್ನೊಬ್ಬರಿಗೆ ತಲುಪಿಸಲು ಲಿಪಿ, ಚೇಷ್ಟೆ, ಸಂಜ್ಞೆ, ಮೌನ, ಭಾಷೆ ಹೀಗೆ ಹಲವು ಮಾಧ್ಯಮಗಳನ್ನು ಬಳಸುತ್ತಾನೆ. ಅವುಗಳಲ್ಲಿ ಭಾಷೆಯು ಅತ್ಯುತ್ತಮವಾದ ಸಂವಹನ ಮಾಧ್ಯಮ. ಅದು ಉತ್ತಮವಾಗಿದ್ದಾಗ ಮಾತ್ರ ಭಾವವೂ ಅದೇ ಮಟ್ಟದಲ್ಲಿ ಆಚೆ ತಲುಪಲು ಸಾಧ್ಯ. ಭಾಷೆಯ ಹಿಂದೆ ಅವ್ಯಕ್ತವಾದ ಪರಾ, ಪಶ್ಯಂತೀ, ಮಧ್ಯಮಾ ಎಂಬ ಮೂರು ಅವಸ್ಥೆಗಳು ಇವೆ. ಭಾಷೆಯೆಂಬುದು ವ್ಯಕ್ತವಾದ ಮಾತಿನ ರೂಪ. ಹಾಗಾಗಿ ಭಾಷೆಯು ನಾಲ್ಕನೆಯ ಅವಸ್ಥೆಯಾಗಿದೆ. ಇದಕ್ಕೆ 'ವೈಖರೀ' ಎಂಬುದಾಗಿಯೂ ಕರೆಯುತ್ತಾರೆ. ಭಾಷೆಯ ಹಿಂದಿನ ಅವಸ್ಥೆಗಳು ಯೋಗಿ ಅಥವಾ ಋಷಿಮಾತ್ರ ಸಂವೇದ್ಯವಾಗಿವೆ. ಭಾಷೆಯು, ಬಳಸಿದವನ ಭಾವವನ್ನು ಹೊತ್ತು ತರುತ್ತದೆ. ಆ ಭಾವವನ್ನು ತಿಳಿಯಲು, ಯಾವ ಭಾಷೆಯನ್ನು ಅಲ್ಲಿ ಉಪಯೋಗಿಸಲಾಗಿದೆಯೋ, ಅದನ್ನು ಕೇಳುವವನೂ ತಿಳಿದಿರಬೇಕಾಗುತ್ತದೆ. ಅಷ್ಟೆ ಅಲ್ಲ, ಉತ್ತಮವಾದ ಅಭಿಪ್ರಾಯವನ್ನು ಹೊರಡಿಸಲು ಭಾಷೆಯ ಜ್ಞಾನವೂ ಅಷ್ಟೇ ಅಗತ್ಯವಾಗಿದೆ. ಇದನ್ನೇ 'ಭಾಷಾಭಿಜ್ಞತೆ' ಎನ್ನಬಹುದು. ಹಾಗಾಗಿ ಭಾಷೆಯ ಅಭಿಪ್ರಾಯವನ್ನು ಅರಿಯಲು, ಅದರ ಎಲ್ಲಾ ಅವಸ್ಥೆಗಳನ್ನೂ ತಿಳಿದಿದ್ದರೆ ಮಾತ್ರವೇ ಸಾಧ್ಯ. ಯಾರು ಈ ನಾಲ್ಕು ಅವಸ್ಥೆಗಳನ್ನು ಅರಿಯಬಲ್ಲರೋ ಅವರು ಮಾತ್ರವೇ 'ಭಾಷಾಭಿಜ್ಞ' ಎಂಬ ಪದಕ್ಕೆ ಯೋಗ್ಯರಾಗುತ್ತಾರೆ.


ವೈಖರೀರೂಪವಾದ ಭಾಷೆಯಿಂದ ಅದರ ಹಿಂದಿನ ಭಾವವನ್ನು ಅರಿಯಲು ಸಾಮಾನ್ಯವಾದ ನಾಮಪದ ಕ್ರಿಯಾಪದಗಳಿಂದ ಕೂಡಿದ ವ್ಯಾಕರಣ ಜ್ಞಾನಮಾತ್ರ ಸಾಲದು. ಶ್ರೀರಾಮನು ಎಂತಹ ಭಾಷಾಭಿಜ್ಞನಾಗಿದ್ದ ಎಂಬುದಕ್ಕೆ ಶ್ರೀಮದ್ರಾಮಾಯಣದ ಒಂದು ಉದಾಹರಣೆ ಸಾಕು. ಸುಗ್ರೀವದೂತನಾಗಿ ಹನುಮಂತನು ಶ್ರೀರಾಮನ ಬಳಿ ಬರುತ್ತಾನೆ. ಆಗ ಅನೇಕ ಮಾತನ್ನು ಹನುಮಂತನು ಆಡುತ್ತಾನೆ. ಅಲ್ಲಿ ಹನುಮಂತನು ಆಡಿದ ಮಾತನ್ನು ಶ್ರೀರಾಮನು ಪ್ರಶಂಸಿಸುತ್ತಾ ಲಕ್ಷ್ಮಣ ಬಳಿ ಹೇಳುತ್ತಾನೆ –"ಇಷ್ಟು ಹೊತ್ತು ಈತ ಮಾತನಾಡಿದರೂ ಒಂದು ಮಾತನ್ನು ತಪ್ಪಾಗಿ ಆಡಲಿಲ್ಲ. ಇಂತಹ ಪರಿಶುದ್ಧವಾದ ಭಾಷೆಯನ್ನು ಬಳಸಲು ಅದಕ್ಕೆ ಹಿಂದೆ ಎಷ್ಟು ಅಧ್ಯಯನ ಅವಶ್ಯ!  ಋಗ್ವೇದಾದಿ ನಾಲ್ಕು ವೇದಗಳನ್ನು ಚೆನ್ನಾಗಿ ತಿಳಿಯದೇ ಇಷ್ಟು ಸ್ಪಷ್ಟವಾಗಿ ಮಾತನಾಡಲು ಸಾಧ್ಯವಿಲ್ಲ. ಇವನನ್ನು ನೋಡಿದರೆ ವ್ಯಾಕರಣವನ್ನು ಎಷ್ಟು ಚೆನ್ನಾಗಿ ತಿಳಿದಿದ್ದಾನೆ ಎಂಬುದು ಗೊತ್ತಾಗುತ್ತದೆ. ಅಲ್ಲದೆ ಇವನ ವೈಖರೀವಾಕ್ಕು ಹಿಂದಿನ ಮೂರು ಅವಸ್ಥೆಗಳನ್ನು ಸಹಜವಾಗಿ ಅಭಿವ್ಯಕ್ತಿಪಡಿಸುತ್ತಿದೆ" ಎಂದು ಹೇಳುತ್ತಾನೆ. ಇಲ್ಲಿ ಹನುಮಂತನು ಬಹಳ ಸ್ಫುಟವಾಗಿ ಮಾತನಾಡಿರುವುದು ಎಷ್ಟು ವಿಶೇಷವೋ ಅದಕ್ಕಿಂತಲೂ ವಿಶೇಷವಾದದ್ದು ಶ್ರೀರಾಮನು ಅದನ್ನು ಗುರುತಿಸಿರುವುದು. ಒಬ್ಬನ ಭಾಷಾಪ್ರೌಢಿಮೆಯನ್ನು ಇನ್ನೊಬ್ಬ ಭಾಷಾಭಿಜ್ಞ ತಾನೇ ತಿಳಿಯಬಲ್ಲ! ಇಲ್ಲಿ ನಾವು ಗುರುತಿಸಬೇಕಾದುದು ಶ್ರೀರಾಮನ ಭಾಷಾಭಿಜ್ಞತೆಯನ್ನು. ಇನ್ನೊಂದು ಉದಾಹರಣೆಯನ್ನು ನೋಡಬಹುದು. ಅತ್ತ ವಿಭೀಷಣನು ಅಣ್ಣನಾದ ರಾವಣನ ಸಂಬಂಧವನ್ನು ಕಡಿದುಕೊಂಡು ಬರುತ್ತಾನೆ. ಆಗ ರಾಮನು ವಿಭೀಷಣನ ಭಾವ ಮತ್ತು ಭಾಷೆಯನ್ನು ತಿಳಿದು ಅವನ ಶರಣಾಗತಿಯ ಇಂಗಿತವನ್ನು ತಿಳಿದನು. ಅಂದರೆ ಒಬ್ಬನ ಶಬ್ದಪ್ರಯೋಗದಿಂದ ಅವನ ಒಳಹೊರ ಸಂಗತಿಗಳನ್ನು ಎಷ್ಟು ಸ್ಪಷ್ಟವಾಗಿ ತಿಳಿಯಬಹುದು ಎಂಬುದಕ್ಕೆ ಶ್ರೀರಾಮನ ಅನೇಕ ನಿದರ್ಶನಗಳು ನಮಗೆ ಸಿಗುತ್ತವೆ.

ಸೂಚನೆ : 26/12/2021 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.