Sunday, December 12, 2021

ಶ್ರೀರಾಮನ ಗುಣಗಳು - 35 ಕರುಣಾಮಯೀ - ಶ್ರೀರಾಮ (Sriramana Gunagalu -35 Karunamayi - Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 

(ಪ್ರತಿಕ್ರಿಯಿಸಿರಿ lekhana@ayvm.in)



ಕರುಣಾಮಯೀ, ಕರುಣಾಸಾಗರ, ದಯಾಮಯೀ, ಕೃಪಾಸಿಂಧು ಮುಂತಾದ ಗುಣಗಳಿಂದ ಭಗವಂತನನ್ನು ಕೊಂಡಾಡುವುದುಂಟು. ಈ ಎಲ್ಲಾ ಗುಣಗಳು ಒಂದರ್ಥದಲ್ಲಿ ಸಮಾನವಾದವುಗಳೇ. ಇವೆಲ್ಲವೂ ಒಂದೇ ಕಡೆ ಅನ್ವಯವಾಗುವಂತವುಗಳಾಗಿವೆ. ಹಾಗಾಗಿ ಇವು ಶ್ರೀರಾಮನಿಗೂ ಪರಿಪೂರ್‍ಣವಾಗಿ ಅನ್ವಿತವಾಗುತ್ತವೆ. ಪ್ರಯತ್ನಪೂರ್ವಕವಾಗಿಯಾದರೂ ಬೇರೆಯವರ ಕಷ್ಟವನ್ನು ಪರಿಹರಿಸಲು ಇಚ್ಛೆಪಡುವವನನ್ನು 'ಕರುಣಾಮಯೀ' ಎನ್ನುತ್ತಾರೆ. ಬೇರೆಯವರು ಕಷ್ಟಪಡುವುದನ್ನು ಅವರು ಸಹಿಸಲಾರರು. ಸಮಸ್ತ-ಭೂತಕೋಟಿಯೂ ಯಾವುದೇ ಕ್ಲೇಶವನ್ನು ಅನುಭವಿಸಬಾರದು ಎಂಬ ಭಾವ ಅವರಿಗೆ ಸದಾ ಆಡುತ್ತಿರುತ್ತದೆ. ತಾವು ಕಷ್ಟಪಟ್ಟರೂ ಪರವಾಗಿಲ್ಲ, ಮತ್ತೊಬ್ಬರಿಗೆ ತೊಂದರೆ ಉಂಟಾಗಬಾರದು ಎಂಬ ಅನುಕಂಪ ಅವರದ್ದು. ಒಬ್ಬ ಶತ್ರುವಾದರೂ ಅವನೊಬ್ಬ ಜೀವಿಯಲ್ಲವೇ! ಅವನಿಗೂ ಉತ್ತಮತ್ವ ಪ್ರಾಪ್ತವಾಗಲಿ ಎಂಬ ಕೃಪಾದೃಷ್ಟಿ. ಇಂತಹ ಎಲ್ಲ ಭಾವಗಳನ್ನೂ ಶ್ರಿರಾಮನ ಚರಿತದಲ್ಲಿ ನಾವು ಕಾಣಬಹುದು. ಇದು ನಮ್ಮ ಜೀವನಕ್ಕೆ ಆದರ್ಶ. ಅನುಸರಣೀಯ.

ಹೀಗೆ ನೋಡಿದಾಗ ಶ್ರೀರಾಮನು ತಂದೆಯ ಪಿತೃವಾಕ್ಯಪರಿಪಾಲನವನ್ನು ಒಂದು ಬಗೆಯ ಕಾರುಣ್ಯ ಎಂದರೂ ತಪ್ಪಾಗಲಾರದು. ತಾಯಿ ಕೈಕೇಯಿಯು ದಶರಥನಲ್ಲಿ ಕೇಳಿಕೊಂಡ ವರ. ಅದನ್ನು ಪಾಲಿಸದಿದ್ದರೆ ತಂದೆಯು, ಕೊಟ್ಟಮಾತಿಗೆ ತಪ್ಪಿತಸ್ಥನೆಂಬ ಅಪಖ್ಯಾತಿಯು ರಘುಕುಲತಿಲಕನಾದ ದಶರಥನಿಗೆ ಉಂಟಾಗುತ್ತದೆ. ಅಲ್ಲದೆ ವರವನ್ನು ಮನ್ನಿಸದಿದ್ದರೆ ಕೈಕೇಯಿಯ ವರ್ತನೆಯಿಂದ ದಶರಥನ ಬಾಳಲ್ಲಿ ಮಂಕು ಕವಿಯಬಹುದು. ಇದನ್ನು ತಪ್ಪಿಸಲು ಒಬ್ಬ ಆದರ್ಶ ಮಗನಾಗಿ ಶ್ರೀರಾಮನು ತಂದೆಯ ವರವನ್ನು ಅನುಷ್ಠಾನಗೊಳಿಸಿದ. ಇದು ಶ್ರಿರಾಮನು ತಂದೆಯಮೇಲೆ ತೋರಿದ ಕರುಣೆ. ಮತ್ತು ಅರಣ್ಯವಾಸಕ್ಕೆ ತಾಯಿ ಕೈಕೇಯಿಯೇ ಕಾರಣವೆಂದು ತಿಳಿದರೂ ಶ್ರೀರಾಮನು ಅವಳನ್ನು ಮಾತೃಭಾವವಲ್ಲದ ಭಾವದಿಂದ ಕಂಡಿಲ್ಲ. ಇದು ಅವನ ತಾಯಿಯ ಮೇಲಿನ ದಯೆಯಲ್ಲವೇ? ಯುದ್ಧವೆಲ್ಲವೂ ಮುಗಿದ ಬಳಿಕ ಸೀತಾಸಮೇತನಾಗಿ ಶ್ರೀರಾಮನು ಭರತನಿದ್ದ ನಂದಿಗ್ರಾಮಕ್ಕೆ ಬರುತ್ತಾನೆ. ಅಲ್ಲಿ ಭರತನ ವಿರಕ್ತಜೀವನ ಸಾಗಿತ್ತು. ಅಣ್ಣನ ನಿರೀಕ್ಷೆಯಲ್ಲಿದ್ದ ಆತ. ಅಣ್ಣ ಬರದಿದ್ದರೆ ಆತ ಹಾಗೆಯೇ ತನ್ನ ಜೀವಿತವನ್ನೆ ಅಂತ್ಯವಾಗಿಸಲೂ ನಿರ್ಧಸಿದ್ದ ಸಂದರ್ಭ. ಇದನ್ನು ತಿಳಿದ ಕರುಣಾಮಯೀ ಶ್ರೀರಾಮ ಯುದ್ಧ ಮುಗಿದ ಆಕ್ಷಣದಲ್ಲೇ ವಿಮಾನವೇರಿ ನಂದಿಗ್ರಾಮಕ್ಕೆ ಬಂದು, ದುಃಖತಪ್ತನಾದ ತಮ್ಮನನ್ನು ಸಂತೈಸುವುದು ಅವನ ಕಾರುಣ್ಯವಲ್ಲದೇ ಮತ್ತೇನು? ವನವಾಸಕ್ಕೆ ತೆರಳಿದಾಗ ಅವನ ಜೊತೆಯಲ್ಲೇ ಅರಣ್ಯಕ್ಕೆ ತಾನೂ ಬರುವುದಾಗಿ ಸೀತಾಮಾತೆ ತಿಳಿಸುತ್ತಾಳೆ. ಆಗ ಶ್ರೀರಾಮನನಡೆ 'ತಂದೆಯ ಆಜ್ಞೆ ನನಗೆ ಮಾತ್ರ. ನಿನಗೆ ಅರಣ್ಯವಾಸದ ಕಷ್ಟ ಬೇಡ' ಎಂದ. ಮತ್ತು ಯಾವಾಗ ಅಯೋಧ್ಯಾಪುರಜನರು ರಾಮನನ್ನೇ ಹಿಂಬಾಲಿಸಹೊರಟರೋ, ಅವರಿಗೂ ಇದೇ ರೀತಿಯಾದ ಮಾತನ್ನು ಹೇಳುವುದರ ಮೂಲಕ ತನ್ನ ಕಷ್ಟದಲ್ಲಿ ಬೇರೆಯವರು ಭಾಗಿಯಾಗುವುದು ಬೇಡವೆಂಬ ಆ ಕರುಣೆಯ ಭಾವ ಶ್ರೀರಾಮನದ್ದಾಗಿತ್ತು. ಇನ್ನೂ ಹೆಚ್ಚೇಕೆ ದುಷ್ಟರಾದ ವಾಲಿಯನ್ನಾಗಲಿ, ರಾವಣ ಕುಂಭಕರ್ಣಾದಿ ರಾಕ್ಷಸರ ಸಂಹಾರದ ಬಳಿಕ ಶ್ರೀರಾಮನು ತೋರಿದನಡೆ ಕರುಣೆಗೆ ಸಾಕ್ಷಿಯಾಗಿದೆ. ಸ್ವತಃ ತಾನು ನಿಂತು ಅವರ ಸಂಹಾರದ ಬಳಿಕ ಉತ್ತರಕ್ರಿಯೆಯನ್ನು ಮಾಡಿಸಿ ವೈರಭಾವವನ್ನು ಬಿಟ್ಟು ಆತ್ಮೈಕ್ಯವನ್ನು ಸಾರಿದ ಮಹಾಮಹಿಮ.

ಸೂಚನೆ : 12/12/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ "ಶ್ರೀರಾಮನ ಗುಣಗಳು" ಅಂಕಣದಲ್ಲಿ ಪ್ರಕಟವಾಗಿದೆ.