ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್
(ಪ್ರತಿಕ್ರಿಯಿಸಿರಿ lekhana@ayvm.in)
ಭಕ್ತವತ್ಸಲನು ಶ್ರೀರಾಮ. ಭಕ್ತಿಯಿಂದ ಯಾರು ಅನನ್ಯವಾಗಿ ಭಾವಿಸುತ್ತಾರೋ ಅಂತಹವರ ಬದುಕಿನಲ್ಲಿ ಆಶಾಕಿರಣವಾಗಿ ಬಂದು ಅವನ ಎಲ್ಲಾ ಬಂಧನವನ್ನು ಬಿಡಿಸುವವನೇ ಭಕ್ತವತ್ಸಲ. ಭಾಗವತಾದಿ ಪುರಾಣಗಳಲ್ಲಿ ಭಕ್ತಪ್ರಹ್ಲಾದ, ಅಂಬರೀಷ, ಭೀಷ್ಮ ಇಂತಹ ಅನೇಕ ಭಾಗವತೋತ್ತಮರ ಕಥೆಗಳನ್ನು ಕೇಳಿದ್ದೇವೆ. ಭಕ್ತ ಮತ್ತು ಸ್ವಾಮಿಯ ನಡುವೆ ಇರುವ ಸೇತುವೆಯೇ ಭಕ್ತಿ. ಅವರಿಬ್ಬರ ನಡುವೆ ಇರುವ ಸಂಬಂಧವೇ ಅಂತಹದ್ದು. ಅದು ಭಕ್ತಿ ಎಂಬ ಬಂಧದಿಂದ ಕೂಡಿದ್ದು. 'ಭಕ್ತಿ' ಎಂಬುದಕ್ಕೆ ವಿರುದ್ಧವಾದ ಪದ 'ವಿಭಕ್ತಿ'. ಬೇರೆಯಾಗುವಿಕೆಯೇ ವಿಭಕ್ತಿ. ಎರಡನ್ನೂ ಒಂದಾಗಿಸುವ ಸಾಧನವೇ ಭಕ್ತಿ. ಭಕ್ತ ಬೇರೆಯಲ್ಲ, ಸ್ವಾಮಿ ಬೇರೆಯಲ್ಲ ಎಂಬ ಭಾವನೆ. ಸ್ವಾಮಿಯಲ್ಲಿ ಭಕ್ತನು ಒಂದಾಗಿ ಸೇರುವಿಕೆ. ಹಾಗಾಗಿ ಯಾರು ಶ್ರೀರಾಮನನ್ನು ಅನನ್ಯಗತಿಕರಾಗಿ ಭಾವಿಸುತ್ತಾರೋ ಅಂತಹವರನ್ನು ಕೈಹಿಡಿದು ದಡ ಸೇರಿಸುವವನೇ ಭಕ್ತವತ್ಸಲ. ಅಂದರೆ ತಾಯಿ ಹಸುವು ಯಾವ ರೀತಿಯಾಗಿ ಕರುವಿನ ಜೀವನಕ್ಕೆ ಬೇಕಾದ ಹಾಲನ್ನು ಪ್ರೀತಿಯಿಂದ ಸುರಿಸುತ್ತದೆಯೋ, ಅಂತೆಯೇ ಸ್ವಾಮಿಯು ಭಜಕನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾನೆ. ತಾನು ಯಾವ ಆನಂದಾನುಭವವನ್ನು ಪಡೆದಿರುತ್ತಾನೋ ಅಂತಹದ್ದೇ ಆನಂದವನ್ನು ಕರುಣಿಸುತ್ತಾನೆ. ಇವರಿಬ್ಬರ ಆನಂದದಲ್ಲಿ ಯಾವ ವ್ಯತ್ಯಾಸವೂ ಬಾರದ ರೀತಿಯಲ್ಲಿ ಸ್ವಾಮಿಯ ನಡೆಯಿರುತ್ತದೆ. ಈ ಎಲ್ಲಾ ಗುಣಗಳಿಂದ ಕೂಡಿದವನನ್ನು 'ಭಕ್ತವತ್ಸಲ' ಎಂದು ಕರೆಯುತ್ತೇವೆ. ಶ್ರೀಮದ್ರಾಮಾಯಣದಲ್ಲಿ ಭಕ್ತೆಯಾದ ಶಬರಿ, ಭಕ್ತನಾದ ಹನುಮಾನ್ ಮತ್ತು ವಿಭೀಷಣ ಇವರ ಮೇಲೆ ತೋರಿದ ಪ್ರೀತಿಯಿಂದ ಶ್ರೀರಾಮನು ಭಕ್ತವತ್ಸಲನಾದ.
ವೃದ್ಧೆಯಾದ ಶಬರಿಯು ಶ್ರೀರಾಮನ ಬರುವಿಕೆಗಾಗಿ ಅನೇಕ ವರ್ಷಗಳ ಪರ್ಯಂತ ಕಾದಿದ್ದಾಳೆ. ಪ್ರತಿದಿನ ಶ್ರೀರಾಮನು ಬರುವ ಮಾರ್ಗವನ್ನು ಶುಚಿಗೊಳಿಸಿ ಭಕ್ತವತ್ಸಲನನ್ನು ಬಿಜಯಂಗೈಯ್ಯಲು ಸಿದ್ಧಳಾಗಿರುತ್ತಿದ್ದಳು. 'ಇಂದೇ ಬರುವನು ಸ್ವಾಮಿ' ಎಂಬ ಉತ್ಸಾಹ ಪ್ರತಿನಿತ್ಯವೂ ಇರುತ್ತಿತ್ತು. ಅಂತರಂಗದ ಕರೆಯನ್ನು ಅರಿತ ಶ್ರೀರಾಮನಿಗೆ ಬರದಿರಲು ಹೇಗೆ ಸಾಧ್ಯ!. ಪ್ರೀತಿಗೆ ಮಾರುಹೋದ ಶ್ರೀರಾಮನು 'ಶಬರೀದತ್ತಫಲಾಶನ' ಎಂಬ ಬಿರುದನ್ನೂ ಪಡೆದನು. ಭಕ್ತನಾದ ಮಾರುತಿಯ ಅನನ್ಯಕಾರ್ಯಕ್ಕೆ ಸ್ವಾಮಿ ಶ್ರೀರಾಮ ಮರುಗಿದ. ಆಸಾಧ್ಯಕಾರ್ಯಸಾಧಕನಾದ ಮಾರುತಿಯು ಲಂಕೆಯನ್ನು ಲಂಘಿಸಿ ಸೀತಾಮಾತೆಯನ್ನು ಪತ್ತೆಮಾಡಿದ. ಲಂಕಾಧಿಪನಿಗೆ ರಾಮಭಟನ ಅಲ್ಪಪರಿಚಯವನ್ನೂ ಮಾಡಿಸಿದ. ಇಷ್ಟನ್ನು ಮಾಡಿದ ಹನುಮನಿಗೆ ಭಕ್ತವತ್ಸಲನ ಕೊಡುಗೆ ಏನು? ಆಲಿಂಗನ. ತನ್ನೊಳಗೇ ಸೇರಿಸಿಕೊಂಡ. ಇದು ಶ್ರೀರಾಮನ ವಾತ್ಸಲ್ಯದ ಪ್ರತೀಕ.
ರಾಮನ ಪತ್ನಿಯಾದ ಸೀತಾಮಾತೆಯನ್ನು ಅಪಹರಿಸಿದ್ದರಿಂದ ರಾವಣನನ್ನು ಸಂಹರಿಸುವುದೊಂದೇ ಮಾರ್ಗವಾಗಿತ್ತು. ಈ ಮಧ್ಯೇ ರಾವಣನ ಅನುಜ ವಿಭೀಷಣನು ಬಗೆಬಗೆಯಾಗಿ ಸೀತೆಯನ್ನು ರಾಮನಿಗೆ ಒಪ್ಪಿಸಲು ಪ್ರಯತ್ನಿಸಿದ. ಅದಾವುದನ್ನೂ ಕೇಳದ ದುಷ್ಟ ಅಣ್ಣನನ್ನೇ ತ್ಯಾಗ ಮಾಡಿ ಶ್ರೀರಾಮನನ್ನು ಶರಣಾದ ವಿಭೀಷಣ. ಅಣ್ಣನನ್ನೇ ಧಿಕ್ಕರಿಸಿ ಬಂದ ಭಕ್ತನನ್ನು ಸ್ವಾಮಿ ಬರಮಾಡಿಕೊಂಡ ಪರಿ ಅಷ್ಟೇ ವಿಶಿಷ್ಟವಾದುದು. ಅಷ್ಟೇ ಅಲ್ಲ ತಾನು ಜಯಿಸಿದ ಲಂಕೆಗೆ ಆ ಭಕ್ತನನ್ನೇ ರಾಜನನ್ನಾಗಿಸಿ ಭಕ್ತನ ತ್ಯಾಗವನ್ನೇ ಸ್ವಾಮಿಯೂ ಮಾಡಿ ಇಬ್ಬರ ಸಾಂಗತ್ಯವನ್ನು ಜಗತ್ತಿಗೆ ಸಾರಿದನೆಂದರೇ ಅವನು ತಾನೇ ಭಕ್ತವತ್ಸಲ!.