ಲೇಖಕಿ: ಸೌಮ್ಯಾ ಪ್ರದೀಪ್
(ಪ್ರತಿಕ್ರಿಯಿಸಿರಿ lekhana@ayvm.in)
ವಿದ್ಯಾರ್ಜನೆಗೆ ಅಹಂಕಾರವೇ ದೊಡ್ಡ ಶತ್ರು, ಯಾವುದೇ ಒಂದು ವಿದ್ಯೆಯನ್ನು ಗುರುವಿನಿಂದ ಪಡೆಯಲು ಅಹಂಕಾರವನ್ನು ತ್ಯಜಿಸಿ ವಿನೀತರಾಗುವುದು ಅತಿ ಮುಖ್ಯ, ಹಾಗಾದಾಗ ಮಾತ್ರ ಆ ವಿದ್ಯೆಯ ರಹಸ್ಯವನ್ನು ಅರಿಯಲು ಸಾಧ್ಯ. ಸಂಗೀತ,ಸಾಹಿತ್ಯ ನಾಟ್ಯ ಜೋತಿಷ್ಯ ಇತ್ಯಾದಿ ಎಲ್ಲಾ ಭಾರತೀಯವಾದ ವಿದ್ಯೆಗಳಿಗೂ ಪರಮಾತ್ಮನೇ ಮೂಲ, ಅವನಿಂದಲೇ ಎಲ್ಲಾ ವಿದ್ಯೆಗಳೂ ವಿಕಾಸವಾಗಿವೆ. ಯಾವ ಭಾರತೀಯ ವಿದ್ಯೆಯನ್ನಾದರೂ ಜ್ಞಾನಿಯಾದ ಗುರು ಮುಖೇನ ಉಪದೇಶವನ್ನು ಪಡೆದು ಅಹಂಕಾರವನ್ನು ಸಂಪೂರ್ಣವಾಗಿ ತ್ಯಜಿಸಿ ನಿಷ್ಠೆಯಿಂದ ಅನುಸಂಧಾನ ಮಾಡಿದಾಗ ಸರ್ವವಿದ್ಯಾ ಮೂಲನಾಗಿರುವ ಭಗವಂತನ ಸಾಕ್ಷಾತ್ಕಾರದ ಆನಂದವನ್ನು ಅನುಭವಿಸ ಬಹುದು. ಮಹರ್ಷಿಗಳು ತಾವು ಅಂತಹ ಫಲವನ್ನು ಪಡೆದು ಲೋಕದ ಉದ್ಧಾರಕ್ಕಾಗಿ ಅವುಗಳನ್ನು ಕರುಣಿಸಿ ಕೊಟ್ಟಿದ್ದಾರೆ.
ಅಂತಹ ಮಹರ್ಷಿಪ್ರಣೀತವಾದ ವಿದ್ಯೆಗಳು ಕೇವಲ ಲೌಕಿಕವಾದ ತಿಳುವಳಿಕೆ ಮಾತ್ರವಲ್ಲ. ಜೀವನದ ಮೂಲದಿಂದ ವ್ಯಾಪಿಸಿ ತುದಿಯವರೆಗೂ ನಮ್ಮನ್ನು ಕರೆದೊಯ್ಯಬಲ್ಲವಾಗಿವೆ. 'ಸಾ ವಿದ್ಯಾ ಯಾ ವಿಮುಕ್ತಯೇ" ಎಂಬ ವಾಣಿಯಂತೆ ಜೀವನದ ನೆಲೆಯಾದ ಜ್ಞಾನವನ್ನು ಹೊಂದಿಸುವುದೇ ವಿದ್ಯೆ. ಭಾರತೀಯ ವಿದ್ಯೆಗಳು ಇಹ-ಪರ ಜೀವನಗಳೆರಡಕ್ಕೂ ತಂಪು ನೀಡಿ ಕೊನೆಗೆ ಪರಮಾರ್ಥದಲ್ಲಿ ನಿಲ್ಲಿಸುತ್ತವೆ, ಅಂತಹ ಆತ್ಮತತ್ವದ ಅರಿವನ್ನು ಮೂಡಿಸುವ ಬ್ರಹ್ಮವಿದ್ಯೆಯನ್ನು ಭಗವತ್ಸ್ವರೂಪರಾದ ಗುರುವಿನ ಬಳಿ ಯಾಚಿಸುವಾಗ ಅಹಂಕಾರ ವರ್ಜಿತರಾಗಿರಬೇಕು," ಹೇಗೆ ನೀರನ್ನು ತುಂಬಲು ಬಾವಿಗೆ ಇಳಿಬಿಟ್ಟ ಕೊಡ ಸಂಪೂರ್ಣವಾಗಿ ಬಾಗಿದಾಗ ತುಂಬಿದ ಕೊಡವಾಗಿ ಮೇಲಕ್ಕೆ ಬರುತ್ತದೆಯೋ ಅಂತೆಯೇ ಭಗವಂತನ ಬಳಿ ನಾವು ಅಹಂಕಾರವನ್ನು ತೊರೆದು ನಮ್ಮ ಮನೋಬುದ್ಧಿಗಳನ್ನು ಅವನೆಡೆಗೆ ಸಂಪೂರ್ಣವಾಗಿ ಬಾಗಿಸಿ ಶರಣಾಗತಿ ಯನ್ನು ಹೊಂದಿದಾಗ ಅವನು ನಮ್ಮಲ್ಲಿ ತುಂಬಿಕೊಳ್ಳುತ್ತಾನೆ, ಅಹಂಕಾರವಿದ್ದೆಡೆ ಭಗವಂತನು ಬರುವುದಿಲ್ಲಾಪ್ಪ" ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ವಿನೀತನಾದ ಶಿಷ್ಯನಿಗೆ ಗುರುವು ತನ್ನ ಪರಿಪೂರ್ಣ ಜ್ಞಾನವನ್ನು ಧಾರೆಯೆರೆಯುತ್ತಾನೆ, ವಿದ್ಯೆಯು ವಿನಯವನ್ನು ಹೇಗೆ ತಂದುಕೊಡುತ್ತದೆಯೋ ಅಂತೆಯೇ ವಿನಯವಂತನಲ್ಲಿ ವಿದ್ಯೆಯು ನೆಲೆಗೊಳ್ಳುತ್ತದೆ ಎಂಬ ಮಾತೂ ಸತ್ಯ. ಅಹಂಕಾರವನ್ನು ತ್ಯಜಿಸಿ ವಿನಯವಂತರಾಗಿ ಜೀವನದ ನೆಲೆ ಮುಟ್ಟಿಸುವ ವಿದ್ಯಾರ್ಜನೆಯನ್ನು ಮಾಡುವತ್ತ ಮನಸ್ಸನ್ನು ಹರಿಸೋಣ.
ಸೂಚನೆ: 11/11/2021 ರಂದು ಈ ಲೇಖನ ವಿಜಯವಾಣಿಯ ಸಂಸ್ಕೃತಿ ಯಲ್ಲಿ ಪ್ರಕಟವಾಗಿದೆ.