Monday, November 15, 2021

ಜೀವನದಲ್ಲಿ ಸಮತೋಲನ ಇರಲಿ (Jivanadalli Samatolana Irali)

ಲೇಖಕರು : ಸುಮುಖ ಹೆಬ್ಬಾರ್
(ಪ್ರತಿಕ್ರಿಯಿಸಿರಿ lekhana@ayvm.in)


ಒಮ್ಮೆ ಒಬ್ಬ ಪುಟ್ಟ ಬಾಲಕ ತಂದೆಯ ಜೊತೆ ಸರ್ಕಸ್ ನೋಡಲು ಹೋಗಿದ್ದ. ಅಲ್ಲಿ ಸರ್ಕಸ್ ಪಟುಗಳು ಸೈಕಲ್ಲಿನ ಮೇಲೆ, ನಿಂತುಕೊಂಡು, ನರ್ತಿಸುತ್ತಾ ಸಾಗುವುದು ಮುಂತಾದ ಭಂಗಿಗಳು ಇವನನ್ನು ಆಶ್ಚರ್ಯಚಕಿತಗೊಳಿಸಿತು. ಅನುಕರಿಸಬೇಕೆಂಬ ಮನಸ್ಸಾಯಿತು. ಮನೆಗೆ ಬಂದೊಡನೆ, ಅಪ್ಪನೊಡನೆ ಹಠ ಮಾಡಿ ಒಂದು ಸೈಕಲ್ ಖರೀದಿಸಿದ. ಸೈಕಲ್ ಓಡಿಸಲು ಬೇಕಾದ ಸಮತೋಲನ ಅಥವಾ ಸಂಯಮ ಇವನಲ್ಲಿರಲಿಲ್ಲ. ಆದರೆ ಹುಮ್ಮಸ್ಸಿನಿಂದ ಮೊದಲಿಗೇ, ಸರ್ಕಸ್ಸಿನ ಭಂಗಿಗಳನ್ನು ಪ್ರಯತ್ನಿಸಿ ಬಿದ್ದ. ಕೈ-ಕಾಲುಗಳಿಗೆ ಪೆಟ್ಟಾಯಿತು. ಅಳುತ್ತಿದ್ದ ಮಗುವನ್ನು ತಂದೆಯು ಸಂತೈಸಿ " ಮೊದಲು ನೀನು ಸೈಕಲ್ಲಿನ ಸಮತೋಲನವನ್ನು ಅಭ್ಯಾಸದಿಂದ ಸಿದ್ಧಿಸಿಕೋ . ನಂತರ ಸರ್ಕಸ್ಸಿನ ಭಂಗಿಗಳನ್ನು ಪ್ರಯತ್ನಿಸು" ಎಂಬುದಾಗಿ ಸಲಹೆ ನೀಡಿದರು. ಮಗನು ತಂದೆಯ ಮಾತಿನಂತೆ ಪ್ರಯತ್ನಿಸಲಾಗಿ, ಕಾಲಕ್ರಮೇಣ  ಸಮತೋಲನ ಸಿದ್ಧಿಸಿತು. ಮುಂದೆ ಸರ್ಕಸ್ಸಿನ ಭಂಗಿಗಳಗಳಷ್ಟೇ  ಅಲ್ಲದೇ,  ಸೈಕಲ್ಲಿನಲ್ಲಿ ಇನ್ನೂ ಹಲವಾರು ಸಾಹಸಮಯ ಭಂಗಿಗಳನ್ನು ಮಾಡುವ  ಸಾಮರ್ಥ್ಯ ಬಂದಿತು.

ಅರ್ಥ-ಕಾಮಗಳ ಹಿಂದೆ ಓಡುತ್ತಿರುವ ನಮ್ಮ ಜೀವನ, ಸಮತೋಲನವಿಲ್ಲದೆ ಸಾಹಸವನ್ನು ಮಾಡಲು ಹೊರಟ ಹುಡುಗನಂತೆಯೇ ಆಗಿದೆ. ಅದು ನಮ್ಮನ್ನು ಮೋಕ್ಷಕ್ಕೆ ಕೊಂಡೊಯ್ಯದೆ, ಪತಿತರನ್ನಾಗಿ ಮಾಡುತ್ತದೆ. ಹಾಗಾಗಿ ಅನುಕರಣೆಯು ಪ್ರತಿಯೊಬ್ಬರ ಜೀವನದಲ್ಲಿಯೂ ಹಾಸುಹೊಕ್ಕಾಗಿರುವ ವಿಷಯವಾಗಿರುವುದರಿಂದ, ಪತಿತರಾಗದಂತೆ ಬದುಕಲು ಧರ್ಮಿಷ್ಠರ ಆದರ್ಶಗಳನ್ನು ಅನುಸರಿಸುವುದು ಅನುಕೂಲಕರ ಮತ್ತು ಕ್ಷೇಮ. ಭಾರತದ ಇತಿಹಾಸದಲ್ಲಿ ಆದರ್ಶವಾದ ಧರ್ಮಿಷ್ಠ ನಾಯಕರು ಅಸಂಖ್ಯಾತ. ಅಲ್ಲದೇ, ಮಹರ್ಷಿ ಪ್ರಣೀತವಾದ ರಾಮಾಯಣ, ಮಹಾಭಾರತ, ಅಭಿಜ್ಞಾನ-ಶಾಕುಂತಲ ಮುಂತಾದ ಮಹಾಕಾವ್ಯಗಳಲ್ಲಿ, ಅನುಕರಣೀಯ ನಾಯಕರನ್ನು ಮಹರ್ಷಿಗಳು ಚಿತ್ರಿಸಿಕೊಟ್ಟಿದ್ದಾರೆ.

ಉದಾಹರಣೆಗೆ, ಶ್ರೀರಾಮನ ಆದರ್ಶ."ರಾಮೋ ವಿಗ್ರಹವಾನ್ ಧರ್ಮ:" - ಧರ್ಮದ ಮೂರ್ತಿ ಶ್ರೀರಾಮ. ಸಮತೋಲನದ ಜೀವನವು ಧರ್ಮಾತ್ಮರ ಲಕ್ಷಣ. ಶ್ರೀರಾಮನು ಸುಖ-ದುಃಖಾದಿ ದ್ವಂದ್ವಗಳಲನ್ನು ಸಮವಾಗಿ ಸ್ವೀಕರಿಸುತ್ತಿದ್ದ. ಭೋಗಕ್ಕೆ ಎಂದಿಗೂ ಅಂಟಿಕೊಂಡಿರಲಿಲ್ಲ.ಪಟ್ಟಾಭಿಷೇಕಕ್ಕೆಂದು ಬಂದಾಗಲೂ, ಮುಂದೆ ವನವಾಸವನ್ನು ಮಾಡಬೇಕೆಂದು ಹೇಳಿದಾಗಲೂ ಅವನ ಮುಖದಲ್ಲಿ ಬದಲಾವಣೆಗಳಿರಲಿಲ್ಲ. ಅಂತಹ ಧರ್ಮಿಷ್ಠ, ಮುಂದೆ ಅರ್ಥ-ಕಾಮಗಳನ್ನು ಹೇಗೆ ಅನುಭವಿಸುತ್ತಾನೆ? ಸಂಕಷ್ಟದಲ್ಲಿ ಸಿಲುಕಿದಾಗಲೂ, ಧರ್ಮವನ್ನು ಹೇಗೆ ಬಿಡದೆ ಪಾಲಿಸುತ್ತಾನೆ ಎನ್ನುವುದು, ಇತರರಿಗೆ ಆದರ್ಶ. ಬಾಲಕನಿಗೆ ತಂದೆಯು ಹೇಳಿದಂತೆ, ಇಂತಹ ನಾಯಕರ ಆದರ್ಶವು ನಮಗೆ ತಂದೆಯ ಸ್ಥಾನದಲ್ಲಿ ನಿಂತು, "ಧರ್ಮವೆಂಬ ಸಮತೋಲನವನ್ನು ಬೆಳೆಸಿಕೋ. ಧರ್ಮವು ನಿನ್ನಲ್ಲಿ ಚೆನ್ನಾಗಿ ಊರಿದ ಮೇಲೆ, ನಂರ ಅರ್ಥ-ಕಾಮಗಳಲ್ಲಿ ಆಟವಾಡು. ಆಗ ಅದು ಮೋಕ್ಷದಲ್ಲೇ ಪರ್ಯಾವಸಾನವಾಗುತ್ತದೆ" ಎಂಬ ದಿಗ್ದರ್ಶನ ಮಾಡುತ್ತದೆ. "ಹೃದಯಗುಹೆಯಲ್ಲಿರುವ ಧರ್ಮವನ್ನರಿತು ತಿಳಿಸಬಲ್ಲ ಮಹಾಜನರು ಯಾವ ಮಾರ್ಗವನ್ನು ಅನುಸರಿಸುತ್ತಾರೋ ಅದು ಸರಿಯಾದ ಹಾದಿ" ಎಂದು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು. ಹಾಗಾಗಿ ಕಾವ್ಯಗಳಲ್ಲಿನ ನಾಯಕನ ಮತ್ತು ಆದರ್ಶ ಪಾತ್ರಗಳ ಕಥಾನುಸಂಧಾನ ಹಾಗೂ ಅನುಕರಣೆಯು ಲೌಕಿಕ ಸಮಸ್ಯೆಗಳಿಗೂ ಮಾರ್ಗದರ್ಶಕವಾಗಿ, ಮೋಕ್ಷಪ್ರದವೂ ಆಗಿರುತ್ತದೆ.ಇಂತಹ ಆದರ್ಶ ನಾಯಕರಿಗೆ ಒಡಲಾದ ಭಾರತಭೂಮಿಗೂ ಹಾಗೂ ಕಾವ್ಯಗಳನ್ನು ರಚಿಸಿಕೊಟ್ಟು ನಮ್ಮನ್ನು ಉದ್ಧರಿಸಲು ಪ್ರಯತ್ನಿಸಿರುವ ಮಹರ್ಷಿಗಳ ಪರಂಪರೆಗೆ ನಮೋ ನಮಃ
ಸೂಚನೆ: 15/11/2020 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.