Friday, November 5, 2021

ದೀಪಾವಳಿ - 2 ಆಂತರಿಕ ಅನುಭವಗಳು ಮತ್ತು ಸಾಂಕೇತಿಕ ಸಂಪ್ರದಾಯಗಳು (Deepavali - 2 Inner Experience and Symbolic traditions)

 ಕನ್ನಡ ಅನುವಾದ : ಎಂ. ಆರ್. ಭಾಷ್ಯಮ್

ಮೂಲ ಆಂಗ್ಲಭಾಷೆ : ಡಾ. ಮೋಹನ್ ರಾಘವನ್

(ಪ್ರತಿಕ್ರಿಯಿಸಿರಿ lekhana@ayvm.in)


 


ಈ ಲೇಖನದಲ್ಲಿ ನಾವು ತ್ರಯೋದಶಿಯಂದು ಆಚರಿಸುವ ಧನ ತ್ರಯೋದಶಿ (ಧನ್ತೇರಸ್), ಧನ್ವಂತರಿ ಜಯಂತಿ, ಯಮದೀಪಂ ಇವುಗಳ ಸಾಂಪ್ರದಾಯಿಕ ಆಚರಣೆ ಮತ್ತು ಅವುಗಳ ಹಿಂದೆ ಅಡಗಿರುವ ಗಾಢವಾದ ಆಂತರಿಕ ಅನುಭವಗಳ ಸಂಕೇತಗಳ ಬಗ್ಗೆ ಅನ್ವೇಷಿಸೋಣ. ಮೇಲ್ನೋಟಕ್ಕೆ ಕೆಲವು ಕಥೆಗಳಿಂದ ಆಯ್ದ ಹಲವು ದೇವತೆಗಳ ಒಕ್ಕೂಟದಂತೆ ತೋರಿದರೂ, ಆಧ್ಯಾತ್ಮಿಕ ಅನುಭವಗಳ ಬೆಳಕಿನಲ್ಲಿ ಪರಿಶೀಲಿಸಿದಾಗ, ಈ ರೂಪಕಗಳು ಸುಸಂಬದ್ಧವಾಗಿ, ಆಂತರಿಕ ಅನುಭವಗಳಿಂದ ನೇರವಾಗಿ ಪ್ರಸರಿಸಿವೆ.

 

ಮೂಲಭೂತ  ತತ್ವಗಳು

 

ಹಿಂದಿನ ಲೇಖನದಲ್ಲಿ ನೋಡಿದಂತೆ, ಭಾರತೀಯ ಸಂಸ್ಕೃತಿ ವಿಶದೀಕರಿಸುವಂತೆ, ಈ ಜೀವನದಗುರಿ ಯೋಗ-ಭೋಗಮಯವಾದ ಜೀವನ - ಯೋಗದಿಂದ ಒಳ ಶಾಂತಿ, ತೃಪ್ತಿ, ಆನಂದಗಳ ಅನುಭವ ಮತ್ತು ಇದನ್ನು ಅಪಾಯಕ್ಕೆ ಒಳಪಡಿಸದೆ ಭೋಗದಿಂದ ಇಂದ್ರಿಯ ಸುಖಾನುಭವ. ಶ್ರೀರಂಗಮಹಾಗುರುಗಳು ಈ ವೈವಿಧ್ಯವನ್ನು ಬೀಜ-ವೃಕ್ಷಗಳ ಉದಾಹರಣೆಯಿಂದ ವಿಶದಪಡಿಸುತ್ತಿದ್ದರು. ಬೀಜವೇ ವೃಕ್ಷದ ಮೂಲ. ಬೀಜವೇ ಸೂಕ್ಷ್ಮರೂಪದಲ್ಲಿರುವ ಪರಿಪೂರ್ಣ ವೃಕ್ಷ. ಆ ಬೀಜವು ನಮ್ಮ ಉಪಯೋಗಕ್ಕೆ ಬರಬೇಕಾದರೆ, ಅದು ಬೆಳೆದು, ವೃಕ್ಷವಾಗಿ, ಪುಷ್ಪಗಳೊಂದಿಗೆ ಪ್ರಫುಲ್ಲಿಸಿ ಹಣ್ಣುಗಳನ್ನು ಕೊಡಬೇಕಾಗುತ್ತದೆ. ಈ ದ್ವಿವಿಧತೆ ನಮ್ಮ ಸಂಸ್ಕತಿಯಲ್ಲಿನ ರೂಪಕ- ಸಂಕೇತಗಳು, ಉಪಮಾನ- ಉಪಮೇಯಗಳು, ಕಥೆ- ನುಡಿಗಳಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡಿದೆ. ಈ ಬೀಜ-ವೃಕ್ಷಗಳನ್ನೇ, ವೇದಗಳಲ್ಲಿ ದ್ಯಾವಾ-ಪೃಥಿವಿಯಾಗಿಯೂ, ದಿವಿ-ಭುವಿಗಳಾಗಿಯೂ; ಶಾಸ್ತ್ರ- ಆಗಮ- ತಂತ್ರಗಳಲ್ಲಿ ಪುರುಷ-ಪ್ರಕೃತಿಗಳಾಗಿಯೂ, ಪುರಾಣಗಳಲ್ಲಿ ಶಿವ-ಶಕ್ತಿ, ಲಕ್ಷ್ಮೀ-ನಾರಾಯಣರಾಗಿಯೂ ಪ್ರಸ್ತುತಪಡಿಸಿದ್ದಾರೆ. ಇವುಗಳನ್ನು, ಶ್ರದ್ಧಾವಂತರು ದೈವೀ ಮಾತಾ-ಪಿತೃಗಳೆಂದೇ ಸಂಭೋದಿಸುತ್ತಾರೆ. ಇವುಗಳು ಬರಿಯ ಸಂಕೇತಗಳಲ್ಲದೆ, ಆಂತರಿಕ ಸತ್ಯಗಳ ಮತ್ತು ಅವುಗಳ ಅನುಭವಗಳ ಚಿತ್ರಣ - ನಿರೂಪಣೆಗಳಾಗಿವೆ. ಶಿವನನ್ನು ನಿರಂತರವಾಗಿ ಧ್ಯಾನದಲ್ಲಿ ತನ್ಮಯನಾಗಿರುವ ತಪಸ್ವಿಯಂತೆಯೂ, ನಾರಾಯಣನನ್ನು ಯೋಗನಿದ್ರೆಯಲ್ಲಿ ಮುಳುಗಿರುವ ಶೇಷಶಾಯಿಯಂತೆಯೂ ವರ್ಣಿಸಲಾಗುತ್ತದೆ. ಪಾರ್ವತೀ- ಲಕ್ಷ್ಮಿಯರು ಸಮೃದ್ಧಿ, ವಿದ್ಯೆ ಮತ್ತು ಐಶ್ವರ್ಯಗಳನ್ನು ಕರುಣಿಸುವ ದೈವೀಮಾತೆಯರು. ದೇವತೆಗಳೆಲ್ಲರೂ ಈ ದೈವೀ ದಂಪತಿಗಳ ಅನುಗ್ರಹ ಮತ್ತು ಶಕ್ತಿಗಳಿಂದ ವಿವಿಧವಾದ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಸೂರ್ಯ ನಿಜಕ್ಕೂ ಪರಂಜ್ಯೋತಿಯ ಪ್ರಕಾಶ ಮತ್ತು ಪ್ರಭೆಗಳ ಪ್ರತಿಬಿಂಬ.

ಪರಂಜ್ಯೋತಿಸೂರ್ಯನೊಂದಿಗೆ ಸಂಬಂಧ ನಾಶವಾಗದಂತೆ ಐಹಿಕ ಭೋಗಗಳನ್ನು ಅನುಭವಿಸಲು ಸಾಧ್ಯವಾಗಿಸುವಂತಹ ಧರ್ಮಸೇತುವೆಯ ಅವತಾರವೇ ಅವನ ಪ್ರತಿನಿಧಿ,  ಪುತ್ರ, ಯಮ. ದಂಡವನ್ನು ಕೈಯಲ್ಲಿ ಧರಿಸಿರುವ  ಯಮಧರ್ಮರಾಯನ ಹೊಣೆಗಾರಿಕೆ ಮತ್ತು ಅಧಿಕಾರ, ಪಾಪ - ಪುಣ್ಯಗಳಿಗೆ ತಕ್ಕಂತೆ ನಮ್ಮ ಕರ್ಮಗಳ ಫಲಗಳನ್ನು ಪ್ರಸಾದಿಸುವುದು.  ಶ್ರೀರಂಗಮಹಾಗುರುಗಳು, ಯೋಗ ನಾಡಿಗಳು ಮತ್ತು ಅವುಗಳ ಮಾರ್ಗಗಳಿಗೆ ಮನೆಯಾದ ನಮ್ಮಬೆನ್ನುಮೂಳೆಯನ್ನು, ಮೇರುದಂಡವನ್ನು, ಈ ಯಮದಂಡವೆಂದು ಗುರಿತಿಸುತ್ತಾರೆ. ಆದ್ದರಿಂದ ಯಮ, ನಮ್ಮ ಪಾಪ -ಪುಣ್ಯಗಳಿಗನುಗುಣವಾಗಿ ಕರ್ಮಫಲಗಳನ್ನು, ಸ್ವರ್ಗ ಅಥವಾ ನರಕ ಎಂದು ವಿತರಣೆ ಮಾಡುತ್ತಾನೆ ಎಂದು ಹೇಳಬಹುದು. ಧಾರ್ಮಿಕವಾದ ಜೀವನ  ನಡೆಸುವುದಕ್ಕೆ, ಆರೋಗ್ಯಕರವಾಗಿ, ಹದ್ದುಬಸ್ತಿನಲ್ಲಿರುವ ದೇಹೇಂದ್ರಿಯಗಳು ಮತ್ತು ಆಗಾಗ್ಗೆ ಯೋಗದಲ್ಲಿ ಮುಳುಗುವ ಮನೋಬುದ್ಧಿಗಳು ಅವಶ್ಯಕ. ಆಧಿ-ವ್ಯಾಧಿಗಳಿಂದ ಮುಕ್ತವಾದ ಬದುಕನ್ನು ಪ್ರಸಾದಿಸುವ ದಿವ್ಯವೈದ್ಯನೇ ಧನ್ವಂತರಿ ಮಹಾದೇವ. ನಮ್ಮನ್ನು ಪುಣ್ಯಕರ್ಮದೆಡೆಗೆ ಎಳೆಯುವ  ಶಕ್ತಿಗಳು ದೇವತೆಗಳಾದರೆ, ಪಾಪದತ್ತ ದೂಡುವ ಶಕ್ತಿಗಳು ಅಸುರರು, ಮೂರ್ತಿವೆತ್ತ ಅಧರ್ಮದ ರೂಪಗಳು. ದಯೆ, ದಾನ ಮೊದಲಾದವು ಪುಣ್ಯಕೆಲಸಗಳಾದರೂ, ಅವು ನಮ್ಮನ್ನು ಕರ್ಮ-ಫಲಗಳ ಚಕ್ರದಲ್ಲಿ ಬಂಧಿಸುತ್ತವೆ. ಮುಕ್ತಿ- ಮೋಕ್ಷವನ್ನು ನೇರವಾಗಿ ಹೊಂದಬೇಕಾದರೆ, ಪಾಪ-ಪುಣ್ಯ ರಹಿತವಾದ ಮಧ್ಯಯೋಗಮಾರ್ಗವನ್ನು ಅವಲಂಬಿಸಬೇಕು.

ಈ  ತತ್ವಗಳ ಪೀಠಿಕೆಯನ್ನು ಮನಸ್ಸಿನಲ್ಲಿರಿಸಿಕೊಂಡು, ದೀಪಾವಳಿಗೆ ಸಂಬಂಧಿಸಿದ ಕೆಲವು ಕಥೆಗಳ ಅಂತರಾರ್ಥದೆಡೆಗೆ ಮನಸ್ಸನ್ನು ಹರಿಸೋಣ.

 

ಸಮುದ್ರ ಮಥನ - ಲಕ್ಷ್ಮಿ ಮತ್ತು ಧನ್ವಂತ್ರಿಯರ ಆವಿರ್ಭವ

 

ಸಮುದ್ರಮಥನವು ಯೋಗದ ಒಳ ಅನುಭವಗಳಿಂದ ತುಂಬಿ ಬಹುವಾಗಿ ಕೊಂಡಾಡಲ್ಪಟ್ಟಿರುವ ಕಥೆ. ಶ್ರೀರಂಗಮಹಾಗುರುಗಳು ಈ ಪೌರಾಣಿಕ ಕಥೆಯು ಯಾವ ಆಂತರಿಕ ಅನುಭವಗಳ ತಳಹದಿಯ ಮೇಲೆ ನಿಂತಿದೆಯೋ ಅವುಗಳನ್ನು ಕಥೆಯೊಂದಿಗೆ ವರ್ಣಿಸಿದ್ದಾರೆ. ನಮ್ಮ ಪುಣ್ಯ -ಪಾಪ ಕರ್ಮಗಳ ಜೀವನಜಂಜಾಟ, ದೇವತೆಗಳು ಮತ್ತು ಅಸುರರು ಮಾಡುವ ಕ್ಷೀರಸಾಗರದ ಮಥನವನ್ನು ಪ್ರತಿಬಿಂಬಿಸುತ್ತದೆ. ನಮ್ಮಲ್ಲಿನ ಮೇರುದಂಡವೇ, ಬೆನ್ನುಮೂಳೆಯೇ, ದೇವಾಸುರರ ಕಡೆಗೋಲು- ಮಂದರಪರ್ವತ. ಕಡೆಗೋಲಿಗೆ ಬಿಗಿದುರುವ ಹಗ್ಗದ ಎರಡು ಅಂಚುಗಳೂ ದೃಢವಾಗಿ ಚಲಿಸಿದರೂ ಮೇರುದಂಡ ತನ್ನಸುತ್ತಲುಮಾತ್ರ ತಿರುಗುತ್ತಾ ಬೇರೆಚಲನವಿಲ್ಲದೆ ಸ್ವಸ್ಥಾನದಲ್ಲೇ ನಿಂತಿರುತ್ತದೆ. ಪುಣ್ಯ-ಪಾಪಗಳ ಚಾಲನೆಗಿಂತ ಭಿನ್ನವಾದ ಇದು, ಯೋಗದ ಒಳಪ್ರಯಾಣವನ್ನು ಬಿಂಬಿಸುತ್ತದೆ. ಹೇಗೆ ಕೂರ್ಮ ಸ್ವೇಚ್ಛೆಯಿಂದ ತನ್ನ ಅಂಗಗಳನ್ನು ಒಳಸೆಳೆದು ಸಂಯಮಿಸಿಕ್ಕೊಳ್ಳಬಲ್ಲದೋ, ಹಾಗೆಯೇ ಕಚ್ಛಪರೂಪಿಯಾದ ಮಹಾವಿಷ್ಣು ಇಂದ್ರಿಯಸಂಯಮವನ್ನು ಪ್ರತಿನಿಧಿಸುತ್ತಾನೆ. ಕೂರ್ಮ ಯಾವಾಗ ಸಹಕರಿಸುತ್ತಾನೆಯೋ ಆಗಷ್ಟೇ ನಿಜವಾಗಿ ಈ ಮಥನವು ಪ್ರಾರಂಭವಾಗುತ್ತದೆ ಮತ್ತು ಯೋಗದ ಆರೋಹಣ ಮೊದಲಾಗುತ್ತದೆ. ಇದರ ಮೊದಲ ಉತ್ಪತ್ತಿ ಹಾಲಾಹಲ ವಿಷ, ಅದನ್ನು ದೇವದೇವನಾದ ಶಿವ ಸ್ವೀಕರಿಸುತ್ತಾನೆ. ನಂತರ ಅನೇಕ ವಿಧವಾದ ಐಶ್ವರ್ಯಗಳು ಉತ್ಪತ್ತಿಯಾಗುವುವು. ಅವುಗಳಲ್ಲಿ ದಿವಿಯಗೋಮಾತೆ ಸುರಭಿ, ಉಚ್ಚೈಶ್ರವಸ್ ಎಂಬ ಅಶ್ವ, ಐರಾವತವೆಂಬ ಆನೆ ಪ್ರಮುಖ. ಅವುಗಳಲ್ಲೂ, ಗೋಮಾತೆಸುರಭಿ, ಧರ್ಮಮಾರ್ಗಕ್ಕೆ ಹೊಂದುವ ಅರ್ಥಗಳನ್ನು ಪ್ರತಿನಿಧಿಸುತ್ತಾಳೆ. ಗೋವು, ಹಾಲು, ಬೆಣ್ಣೆ, ತುಪ್ಪ ಮೊದಲಾದ ಯಜ್ನೋಪಯೋಗಿಯಾದ ಪದಾರ್ಥಗಳನ್ನು ನೀಡುತ್ತಾಳೆ. ಅದರ ಸಾನ್ನಿಧ್ಯವೇ ನಮ್ಮಲ್ಲಿ ತಪಸ್ಸಿಗೆ ಅನುಕೂಲವಾಗುವಂತಹ ಸ್ಥಿತಿಯನ್ನುಂಟುಮಾಡುತ್ತದೆ. ಗೋವಿನಿಂದ ಉತ್ಪತ್ತಿಯಾಗುವ ಐದು ಪದಾರ್ಥಗಳ ಮಿಶ್ರಣ -ಪಂಚಗವ್ಯ, ನಮ್ಮ ಹಿಂದಿನ ಪಾಪಕರ್ಮಗಳ ಪರಿಣಾಮಗಳನ್ನು ಶೂನ್ಯಗೊಳಿಸುತ್ತದೆ. ಸಮುದ್ರಮಥನದಲ್ಲಿ ಮುಂದಿನದಾಗಿ ವಿಶ್ವದಲ್ಲಿನ ಎಲ್ಲ ಐಶ್ವರ್ಯಗಳಿಗೂ, ನಿಧಿಗಳಿಗೂ ಆಗರವಾದ ಮಹಾಲಕ್ಷ್ಮಿಯ ಉದಯವಾಗುತ್ತದೆ. ಅವಳು ಆವಿರ್ಭವಿಸುತ್ತಿದ್ದಂತೆಯೇ, ಎಲ್ಲ ಐಹಿಕ ಐಶ್ವರ್ಯಗಳೂ ಯೋಗದ ಆಂತರಿಕ ಸಂತೃಪ್ತಿಯನ್ನು ಪ್ರತಿನಿಧಿಸುವ ಶ್ರೀಹರಿಯ ಜೊತೆಜೊತೆಯಲ್ಲೇ ಮುಂದುವರಿಯಬೇಕೆಂಬುದನ್ನು ತೋರಗೂಡುತ್ತಾ ಶ್ರೀಹರಿಯನ್ನು ಸೇರುತ್ತಾಳೆ. ಆಂತರಿಕ ಸಾಧನೆಗೆ ವಿಘ್ನವಾಗುವ ಅಥವಾ ಅದರಿಂದ ಬೇರ್ಗೊಳ್ಳುವ ಐಹಿಕ ಸುಖ-ಭೋಗಗಳನ್ನು, ಅಲಕ್ಷ್ಮಿ ಅಥವಾ ವಿರುದ್ಧಲಕ್ಷ್ಮಿ ಎಂದು ಕರೆಯುತ್ತಾರೆ. ಅಲಕ್ಷ್ಮಿ ದುಃಖದಲ್ಲಿ ಮತ್ತು ಬಂಧನದಲ್ಲಿ ಮುಳುಗಿಸುತ್ತದೆ.

ಈ ಮಥನವು  ಅಮೃತೋದ್ಭವದಲ್ಲಿ ಕೊನೆಗೊಳ್ಳುತ್ತದೆ - ಅಂದರೆ ಯೋಗಸಮಾಧಿಯ ಆನಂದದಲ್ಲಿ. ದೇವಧನ್ವಂತರಿ, ಅಮೃತದ ಘಟದೊಡನೆ ಆವಿರ್ಭವಿಸಿದನೆಂದು ಕಥೆ ಹೇಳುತ್ತದೆ. ಈ ಆನಂದದ ಕೃತಕೃತ್ಯತೆ ಸಾಧಕನ ಇಂದ್ರಿಯಗಳಿಗೆಲ್ಲಾ ಉಣಿಸಿ, ತಣಿಸಿ, ಅವನಲ್ಲೇ ಮನೆಮಾಡಿ, ಆತ ಹೋದೆಡೆಯೆಲ್ಲಾ, ಮಾಡುವಕರ್ಮಗಳಿಗೆಲ್ಲಾ ತನ್ನತಂಪನ್ನೂ,  ಕಂಪನ್ನೂ ಹರಡುತ್ತದೆ. ಆದ್ದರಿಂದ, ಈ ಅಮೃತ, ದೈಹಿಕ- ಮಾನಸಿಕ ವ್ಯಾಧಿಗಳನ್ನೆಲ್ಲಾ  ನಿವಾರಣೆ ಮಾಡುತ್ತದೆ.

 

ತ್ರಯೋದಶಿಯ ಆಚರಣೆ

 

ಈ ಮೇಲೆ ಹೇಳಿದ ತತ್ವಗಳ ಪ್ರತಿಬಿಂಬ ತ್ರಯೋದಶಿಯಂದು ಆಚರಿಸುವ ಆಚಾರ -ವ್ರತಗಳಲ್ಲಿ ಕಾಣಬಹುದು. ಮೊದಲು ನಾವು ಮನೆಯ ಕಸವೆನ್ನೆಲ್ಲ, ಅಲಕ್ಷ್ಮಿಯನ್ನೆಲ್ಲಾ, ಹೊರಗೆಸೆಯುತ್ತೇವೆ. ಇವು ನಮ್ಮನ್ನು ನರಕಕ್ಕೆ ದೂಡುವ ಪಾಪದ ವಾಸನೆಗಳು. ಆದರೆ, ಎಲ್ಲಕ್ಕೂ ಉತ್ಕೃಷ್ಟವಾದ ಮದ್ದು, ‘ದೀಪದ’ ದರ್ಶನ. ಶ್ರೀರಂಗಮಹಾಗುರುಗಳು, ಅನೇಕವಿಧವಾದ ದೀಪಗಳ ದರ್ಶನದ ಪರಿಣಾಮಗಳನ್ನು ವಿವರಿಸಿ, ಪ್ರಾಯೋಗಿಕವಾಗಿ ತೋರಿಸಿಕೊಡುತ್ತಿದ್ದರು. ಸ್ವರ್ಣವರ್ಣದ ಆಕಾರದ ಜ್ಯೋತಿ, ನಮ್ಮ ಪರಮಗುರಿಯನ್ನು ನೆನೆಪಿಗೆ ತಂದುಕೊಡುತ್ತದೆ. ಊರ್ಧ್ವಮುಖವಾಗಿ, ಶಾಂತವಾಗಿ, ನಿಶ್ಚಲವಾಗಿಬೆಳಗುವ ಜ್ಯೋತಿ, ಆಂತರಿಕ ಅಧ್ಯಾತ್ಮದೀಪದ ಹೊರ ಪ್ರತೀಕ. ಅದು ಪಾಪ-ನರಕಗಳ ನಿಕೃಷ್ಠ ವಿಷಹಾರಿ. ಆದ್ದರಿಂದಲೇ ಯಮನಿಗೆ ‘ ಮೃತ್ಯುನಾ ...’ ಎಂದು ಮೊದಲಾಗುವ ಈ ಕೆಳಗಿನ ಶ್ಲೋಕದಿಂದ ದೀಪವನ್ನು ಅರ್ಪಿಸುವ ಪರಿಪಾಠ.


 

मृत्युना पाशदण्डाभ्याम कालेन श्यामया सह |

त्रयोदश्यां दीपदानात् सूर्यज: प्रीयतां मम ||  

 

ಅಲಕ್ಷ್ಮಿಗಳಾದ ಕಸವನ್ನು ನಮ್ಮಿಂದ ಹೊರಹಾಕಿ, ಯಮನನ್ನು ದೀಪದಾನದೊಡನೆ ಸಂತೃಪ್ತಿಗೊಳಿಸಿದಾಗ, ನಮ್ಮಲ್ಲಿನ ಧರ್ಮ ಪುಷ್ಟಿಗೊಳ್ಳುತ್ತದೆ. ಇದರ ಸ್ವಾಭಾವಿಕ ಫಲಿತಾಂಶ ‘ಲಕ್ಷ್ಮಿ’ಯೇ. ಆದ್ದರಿಂದ, ಅಂದಿನಿಂದ ನಮ್ಮ ಪ್ರಯತ್ನ, ಇಹ ಐಶ್ವರ್ಯ- ಭೋಗಗಳ ಗಳಿಕೆ, ಆದರೆ ಧರ್ಮಮಾರ್ಗದೊಂದಿಗೆ. ತ್ರಯೋದಶಿಯಿಂದ ಮೊದಲ್ಗೊಂಡು ಮೂರುದಿನ, ತ್ರಿರಾತ್ರ ವ್ರತ. ಆ ದಿನಗಳಲ್ಲಿ, ಧರ್ಮ ಮತ್ತು ಭೌತಿಕ ಐಶ್ವರ್ಯಗಳ ಸಮನ್ವಯವಾದ ಗೋಮಾತೆಯನ್ನು ಪೂಜಿಸುತ್ತೇವೆ. ದೇವಧನ್ವಂತ್ರಿ, ನಮಗೆ ನೇರವಾಗಿ ಅಮೃತತ್ವವನ್ನು ಕರುಣಿಸುತ್ತಾನೆ - ದೈಹಿಕ ಅರೋಗ್ಯ ಮತ್ತು ಆಧ್ಯಾತ್ಮಿಕ ಅಡಚಣೆಗಳ ನಿವಾರಣೆಯ ಮೂಲಕ. ಕರ್ನಾಟಕದಲ್ಲಿ ತ್ರಯೋದಶಿಯ ಸಂಜೆ ಶುದ್ಧಿಮಾಡಿದ ಹಂಡೆ-ಪಾತ್ರೆಗಳಲ್ಲಿ, “ನೀರುತುಂಬುವ” ಹಬ್ಬವನ್ನು ಆಚರಿಸುತ್ತಾರೆ. ಈ ಆಚರಣೆಯೂ, ಅಲಕ್ಷ್ಮಿಯನ್ನು ನಾಶಪಡಿಸಿ, ಪವಿತ್ರತೆಯ ಸಾರವನ್ನು ಪ್ರತಿಬಿಂಬಿಸುವ ಗಂಗಾಮಾತೆಯನ್ನು ತುಂಬುವ ಪ್ರತೀಕ.


ಸೂಚನೆ : 14/11/2020 ರಂದು ಈ ಲೇಖನವು ಆಂಗ್ಲ ಭಾಷೆಯಲ್ಲಿ  AYVM blogs ಪ್ರಕಟವಾಗಿದೆ.