Sunday, September 5, 2021

ಶ್ರೀರಾಮನ ಗುಣಗಳು - 21 ಸಮರ್ಥ- ಶ್ರೀರಾಮ (Sriramana Gunagalu - 21 Samartha-Shreerama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ 
(ಪ್ರತಿಕ್ರಿಯಿಸಿರಿ lekhana@ayvm.in)




ಶ್ರೀರಾಮನನ್ನು 'ಸಮರ್ಥ' ಎಂದು ಕೊಂಡಾಡುತ್ತಾರೆ. 'ಸಾಮರ್ಥ್ಯ' ಅಥವಾ 'ಶಕ್ತಿ' ಉಳ್ಳವನನ್ನು ಸಮರ್ಥ ಎನ್ನುತ್ತಾರೆ. ಸಾಮರ್ಥ್ಯ ಎಂಬುದು ಸಾಪೇಕ್ಷವಾದ ಗುಣ. ಯಾವುದರಲ್ಲಿ ಸಮರ್ಥ? ಎಂಬ ಪ್ರಶ್ನೆಯೇಳುತ್ತದೆ. ಕೆಲವರಲ್ಲಿ ಕೆಲವು ಸಾಮರ್ಥ್ಯಗಳು ಇರುತ್ತವೆ. ಆದರೆ ಒಬ್ಬನಲ್ಲಿ ಎಲ್ಲಾ ಬಗೆಯ ಸಾಮರ್ಥ್ಯಗಳು ಇರುವುದು ಒಂದು ಸೋಜಿಗವೇ ಸರಿ. ಅಂತಹ ವಿಶೇಷಗುಣಶಾಲಿ ಶ್ರೀರಾಮನು. ತಾನು ಯಾರು? ತನ್ನ ಅಂತಸ್ತು ಏನು? ತನ್ನ ಅಸ್ತಿತ್ವವೇನು? ತನ್ನ ಪರಿಮಿತಿಯೇನು? ಇಂಥ ಅನೇಕ ಅಂಶಗಳನ್ನು ಸಮರ್ಥನು ಅರಿತಿರುತ್ತಾನೆ. ಅದಕ್ಕೆ ತಕ್ಕಂತೆ ಅವನ ವ್ಯವಹಾರವೂ ಇರುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಶ್ರೀರಾಮ. ಶ್ರೀರಾಮನು ಮಹಾವಿಷ್ಣುವಿನ ಅವತಾರ. ಆ ಅವತಾರದ ಉದ್ದೇಶದ ಅರಿವು ಮತ್ತು ಆ ಉದ್ದೇಶ ಸಾಧನೆಗೆ  ಬೇಕಾದ ಶಕ್ತಿ ಅವನಲ್ಲಿತ್ತು. ತನ್ನ ಮಾನುಷರೂಪದ ಅವತಾರಕ್ಕೆ ಎಲ್ಲೂ ಗೊಂದಲವಾಗದ ರೀತಿಯಲ್ಲಿ ಅವತಾರದ ಉದ್ದಕ್ಕೂ ವರ್ತಿಸುವುದು ಒಂದು ವಿಶೇಷ ಸಾಮರ್ಥ್ಯವೇ ಸರಿ. ಅವನ ನಿಜವಾದ ಸಾಮರ್ಥ್ಯವನ್ನು ತಿಳಿದವರು ಕೆಲವರೇ ಆಗಿದ್ದರು. ಸ್ವತಃ ಅವನ ತಂದೆ ದಶರಥನೇ ಶ್ರೀರಾಮನ ಸಾಮರ್ಥ್ಯವನ್ನು ಅರಿಯಲಾಗಲಿಲ್ಲ. ಮಹರ್ಷಿ ವಿಶ್ವಾಮಿತ್ರರು ಯಜ್ಞರಕ್ಷಣೆಗಾಗಿ ಶ್ರೀರಾಮನನ್ನು ಕರೆದುಕೊಂಡುಹೋಗಬೇಕೆಂಬ ಸಂಕಲ್ಪ ಮಾಡಿದ್ದರು. ಅದಕ್ಕಾಗಿ ದಶರಥನ ಬಳಿ ಕೇಳಿದಾಗ, ದಶರಥನು, ಶ್ರಿರಾಮನು ಇನ್ನೂ ಬಾಲಕನೆಂದು ಕಳುಹಿಸಲು ನಿರಾಕರಿಸುತ್ತಾನೆ. 

ಸರ್ವಾತ್ಮನಾ ಶ್ರೀರಾಮನ ಸಾಮರ್ಥ್ಯವನ್ನು ಅರಿತ ವಿಶ್ವಾಮಿತ್ರರು ಸಿಟ್ಟಾಗಿ " ಶ್ರೀರಾಮನ ಸತ್ಯವಾದ ಪರಾಕ್ರಮ-ಸಾಮರ್ಥ್ಯವನ್ನು ನಾನು ತಿಳಿದಿದ್ದೇನೆ;  ಮತ್ತು ವಸಿಷ್ಠರೂ ತಿಳಿದಿದ್ದಾರೆ. ಅಲ್ಲದೇ, ಯಾರೆಲ್ಲಾ ತಪಸ್ಸಿನಲ್ಲಿರುವರೋ ಅವರಿಗೂ ಅವನ ಸಾಮರ್ಥ್ಯ ತಿಳಿದಿದೆ" ಎಂದು ಹೇಳುತ್ತಾರೆ. 'ಮಹರ್ಷಿಯ ಸಿಟ್ಟು ಅಪಾಯ' ಎಂದು ಭಾವಿಸಿದ ವಸಿಷ್ಠರು, ದಶರಥನಿಗೆ ರಾಮನನ್ನು ಕಳುಹಿಸಿಕೊಡಲು ಸೂಚಿಸುತ್ತಾರೆ. ಶ್ರೀರಾಮನು ಒಬ್ಬನೇ, ತಾಟಕಿ ಹಾಗೂ ಖರ, ದೂಷಣಾದಿ ಹದಿನಾಲ್ಕು ಸಹಸ್ರ ರಾಕ್ಷಸರನ್ನು ಸಂಹಾರ ಮಾಡುತ್ತಾನೆ ಎಂಬುದಾಗಿ ರಾಮಾಯಣದಲ್ಲಿ ನಾವು ನೋಡುತ್ತೇವೆ. ಏಕಾಕಿಯಾಗಿ ರಾಮನು ಮಾಡುವ ಭಯಾನಕರಾದ ರಾಕ್ಷಸರ ಸಂಹಾರವು ಎಂತಹ ಸಾಮರ್ಥ್ಯ ಇದ್ದಾಗ ಸಾಧ್ಯ! ಎಂಬುದನ್ನು ಊಹಿಸಬಹುದು. ಸೀತಾಮಾತೆಯ ಸ್ವಯಂವರಕ್ಕಾಗಿ ಜನಕನು ಒಂದು ಪಣವನ್ನು ಮುಂದಿಡುತ್ತಾನೆ. "ಯಾರು ಶಿವಧನುಸ್ಸಿಗೆ ಹೆದೆಯನ್ನು ಏರಿಸುತ್ತಾರೋ ಅಂತಹವನು ಸೀತೆಯ ಪತಿಯಾಗಲು ಅರ್ಹನಾಗುತ್ತಾನೆ" ಎಂಬುದಾಗಿ. ಪಣದಲ್ಲಿ ಎಲ್ಲಾ ರಾಜರೂ ಅಸಮರ್ಥರಾಗುತ್ತಾರೆ. ಶ್ರೀರಾಮನಾದರೋ ಜನಕನ ಇಂತಹ ಪಣವನ್ನು ಎದುರಿಸಲು ಸಮರ್ಥನಾಗುತ್ತಾನೆ. ಹಾಗೆಯೇ ರಾವಣಸಂಹಾರದ ವಿಷಯದಲ್ಲೂ ರಾಮನು ತನ್ನ ಸಾಮರ್ಥ್ಯವನ್ನು ಮೆರೆಯುತ್ತಾನೆ. ಯಾವನಿಂದಲೂ ಸೋಲಿಸಲು ಸಾಧ್ಯವಿಲ್ಲದಿರುವಷ್ಟು ಬಲಿಷ್ಠನಾದ ರಾವಣನನ್ನು ಸಂಹರಿಸಿ ಲೋಕಕಲ್ಯಾಣವನ್ನು ಮಾಡಿದ ಸಮರ್ಥ-ಧೀರ ಶ್ರೀರಾಮ.

ಸೂಚನೆ : 5/9/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.