ಯಾವುದಾದರೂ ಒಂದು ವಸ್ತು ಅಥವಾ ವ್ಯಕ್ತಿಯ ಸಮಗ್ರವಾದ ಪರಿಚಯವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದಿರುವಾಗ, 'ಸಮುದ್ರದಷ್ಟು ಗಂಭೀರ' ಎಂಬ ಒಂದು ಉದಾಹರಣೆಯನ್ನು ಕೊಡುವುದು ಸಾಮಾನ್ಯ. ಯಾರನ್ನಾದರೂ, 'ಸಮುದ್ರವನ್ನು ನೋಡಿದ್ದೀಯಾ?' ಎಂದು ಪ್ರಶ್ನೆಯನ್ನು ಕೇಳಿದರೆ, ಉತ್ತರ, 'ನೋಡಿದ್ದೇನೆ' ಎಂದಾದರೆ, ಸಮುದ್ರದ ಆಳ ಮತ್ತು ಅದರ ಹರವು ಗೊತ್ತಾಯಿತೇ? ಸಮುದ್ರವನ್ನು 'ರತ್ನಾಕರ- ರತ್ನಗಳ ಗಣಿ' ಎನ್ನಲಾಗುತ್ತದೆ. ಅದರ ಮೌಲ್ಯ ಮನಸ್ಸಿಗೆ ಬಂತೇ? ಎಂದು ಕೇಳಬೇಕಾಗುತ್ತದೆ. ಆಗ ಉತ್ತರವು ಇಲ್ಲವೆಂದೇ ಬರುವುದು ಸಹಜ. ಹಾಗಾದರೆ, 'ನೋಡಿಲ್ಲ' ಎಂದೂ ಹೇಳಲಾಗದು. ಏಕೆಂದರೆ ನೀರಿನ ಆಕರವಾದ ಸಮುದ್ರವನ್ನು ಕಣ್ಣಿನಿಂದ ನೋಡಿದ್ದಾಗಿದೆ, ಅದರ ಅಲೆಗಳ ಏರಿಳಿತಗಳಿಂದ ಉಂಟಾದ ಧ್ವನಿಯನ್ನೂ ಆಲಿಸಿದ್ದಾಗಿದೆ, ಆದರೆ ಸಮುದ್ರ ಅರ್ಥವಾಯಿತೆ? ಇಲ್ಲ. ನೋಡಿದ್ದು ಹೌದಾ? ಹೌದು. ನೋಡಿದ್ದರೂ ಸರಿಯಾಗಿ ಅರ್ಥವಾಯಿತೇ? ಎಂದರೆ ಅದೂ ಇಲ್ಲ. ಹೀಗೆ ವಿಭಿನ್ನವಾದ ವಿರುದ್ಧವಾದ ಎರಡು ಉತ್ತರಗಳನ್ನು ನಾವು ಇಲ್ಲಿ ಗಮನಿಸಬಹುದು. ಸಮುದ್ರಕ್ಕಿರುವ ಈ 'ಗಾಂಭೀರ್ಯ' ಎಂಬ ಗುಣವನ್ನು ಶ್ರೀರಾಮನಲ್ಲಿರುವುದನ್ನು ಕಂಡು ವಾಲ್ಮೀಕಿಗಳು 'ಸಮುದ್ರ ಇವ ಗಾಂಭೀರ್ಯೇ' ಎಂದು ಬಣ್ಣಿಸಿದರು.
ಒಂದು ವಿಷಯವು ಸುಲಭವಾಗಿ ಅರ್ಥವಾಗಿದೆ ಎಂದು ವಿವರಿಸುವಾಗ 'ಅಂಗೈಯ ಮೇಲಿನ ನೆಲ್ಲಿಕಾಯಿ- ಪಾಣೌ ಆಮಲಕಂ' ಎನ್ನುತ್ತೇವೆ. ಆದರೆ ವಿಷಯದ ಸಮಗ್ರ ಪರಿಚಯ ಆಗಿದೆಯೇ? ಎಂದರೆ ಆಗಿಲ್ಲವೆಂದೇ ಹೇಳಬೇಕು. ನಮ್ಮ ಇಂದ್ರಿಯದ ಸಂಸರ್ಗ ಯಾವ ಭಾಗಕ್ಕೆ ಆಗಿದೆಯೋ ಅಷ್ಟನ್ನು ಮಾತ್ರ ನಾವು ಅರಿತುಕೊಳ್ಳಬಹುದು. ಉಳಿದ ಭಾಗದ ಅರಿವು ಆಗಿರುವುದೇ ಇಲ್ಲ. ಹೀಗಿರುವಾಗ ಶ್ರೀರಾಮನ ಆಂತರ್ಯವನ್ನು ತಿಳಿಯಲು ಹೊರಟರೆ ಸಮುದ್ರವನ್ನು ತಿಳಿಯಲು ಹೊರಟ ಸಾಹಸವೇ ಸರಿ ಎಂಬ ಸತ್ಯವನ್ನು ವಾಲ್ಮೀಕಿಗಳು ಈ ಭಾಷೆಯಲ್ಲಿ ವಿವರಿಸಿದ್ದಾರೆ.
ಭೌತಿಕ, ದೈವಿಕ ಮತ್ತು ಆಧ್ಯಾತ್ಮಿಕ ಎಂಬ ಮೂರು ಹಂತಗಳ ಪರಿಚಯವೂ ಒಬ್ಬ ವ್ಯಕ್ತಿಗೆ ಆದಾಗ ಮಾತ್ರ ಅದು ಅವನಿಗಾದ ಸಮಗ್ರವಾದ ಪರಿಚಯವಾಗುವುದು. 'ದೃಶ್ಯತೇ ಜ್ಞಾನಚಕ್ಷುರ್ಭಿಃ ತಪಶ್ಚಕ್ಷುರ್ಭಿರೇವ ಚ' ಎಂಬ ಮಾತಿನಂತೆ ತಪಸ್ಸಿನಿಂದ ಸಂಪಾದಿಸಿದ ದಿವ್ಯದೃಷ್ಟಿಯಿಂದ ಮಾತ್ರ ಎಲ್ಲವನ್ನೂ ಅರಿಯಲು ಸಾಧ್ಯ. ಇಂತಹ ದಿವ್ಯವಾದ ನೋಟದಿಂದ ಮಾತ್ರ ಶ್ರೀರಾಮನ ಗಾಂಭೀರ್ಯವು ಗೋಚರಿಸುವುದು. ಶ್ರೀರಂಗಮಹಾಗುರುವು ಶ್ರೀರಾಮನ ಆಂತರ್ಯವನ್ನು ಕಂಡು– "ವಾಲ್ಮೀಕಿಯ ರಾಮನು ಸ್ಥೂಲದೃಷ್ಟಿಗೆ ಮನುಷ್ಯ, ಸೂಕ್ಷ್ಮದೃಷ್ಟಿಗೆ ದೇವತೆ ಮತ್ತು ಪರಾದೃಷ್ಟಿಗೆ ಪರಂಜ್ಯೋತಿ" ಎಂದು ಹೇಳಿದ್ದಾರೆ. ಹೀಗೆ ಶ್ರೀರಾಮನನ್ನು ಮೂರೂ ದೃಷ್ಟಿಯಿಂದ ನೋಡಬಹುದು. ಕೇವಲ ಚರ್ಮಚಕ್ಷುಸ್ಸಿಗೆ ಅವನ ಬಾಹ್ಯವಾದ ಮಾನವರೂಪವು ಒಂದಿಷ್ಟು ಗೋಚರಿಸಬಹುದು. ಮನಸ್ಸಿನ ಏಕಾಗ್ರತೆಯಿಂದ ಆತನ ದಿವ್ಯತೆಯ ಅನುಭವವಾಗಬಹುದು. ಇನ್ನು ಜ್ಞಾನಿಯ ಜ್ಞಾನಚಕ್ಷುಸ್ಸಿಗೆ ಮಾತ್ರ ಆತನ ಪರಾರೂಪವು ಅನುಭವವೇದ್ಯವಾಗಬಹುದು. ಗಾಂಭೀರ್ಯವೆಂಬ ಗುಣವೂ ಕೂಡ ಸತ್ತ್ವಗುಣದಿಂದಲೇ ವಿಕಾಸವಾದುದು. ಆದ್ದರಿಂದ ಶ್ರೀರಾಮ, ಶ್ರೀಕೃಷ್ಣ ಮೊದಲಾದ ಪರಮ-ಸತ್ತ್ವ-ಸಂಪನ್ನರಾದ, ಮಹಾಪುರುಷರಲ್ಲಿ ಮಾತ್ರ ಅದು ಅಭಿವ್ಯಕ್ತವಾಗುತ್ತದೆ. ಸಾತ್ತ್ವಿಕರಾದ ವಾಲ್ಮೀಕಿಮಹರ್ಷಿಗಳೂ ಶ್ರೀರಾಮನ ಗಾಂಭಿರ್ಯವನ್ನು ಅರಿತು 'ಸಮುದ್ರ ಇವ ಗಾಂಭೀರ್ಯೇ' ಎಂದು ವಿವರಿಸಿದ್ದಾರೆ.
ಸೂಚನೆ : 8/8/2021 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯ " ಶ್ರೀರಾಮನ ಗುಣಗಳು " ಅಂಕಣದಲ್ಲಿ ಪ್ರಕಟವಾಗಿದೆ.