Sunday, June 6, 2021

ಶ್ರೀರಾಮನ ಗುಣಗಳು -8 ಧರ್ಮಜ್ಞನಾದ ಶ್ರೀರಾಮ (Sriramana Gunagalu -8 Dharmajnanada Srirama)

ಲೇಖಕರು: ವಿದ್ವಾನ್ ಶ್ರೀ ನರಸಿಂಹ ಭಟ್ಟ
(ಪ್ರತಿಕ್ರಿಯಿಸಿರಿ lekhana@ayvm.in)


ವಾಲ್ಮೀಕಿಗಳು ಶ್ರೀರಾಮನ ಗುಣವಿಶೇಷಗಳಲ್ಲಿ 'ಧರ್ಮಜ್ಞಃ' ಎಂಬುದೂ ಒಂದು ಎಂದು ಗುರುತಿಸಿದ್ದಾರೆ. ಧರ್ಮವನ್ನುತಿಳಿದವನು ಧರ್ಮಜ್ಞ. 'ಧರ್ಮ' ಎಂಬ ಪದವನ್ನು ನಾವು ಅನೇಕ ಬಾರಿ ಅನೇಕ ಕಡೆ ಕೇಳಿದ್ದೇವೆ. ಆದರೆ, ಅದರ ನಿಜವಾದಅರ್ಥ ಮಾತ್ರ ನಮಗೆ ಆದಂತೆ ಕಾಣುವುದಿಲ್ಲ. ಧರ್ಮದ ಬಗ್ಗೆ ಶ್ರೀರಂಗಮಹಾಗುರುವು ಹೇಳುತ್ತಿದ್ದರು "ಧರ್ಮವುಶಾಸ್ತ್ರಗಳ ಪುಸ್ತಕದಲ್ಲಿ ಸಿಕ್ಕುವುದಿಲ್ಲ. ಅದು ಜ್ಞಾನಿಗಳ ಹೃದಯದಲ್ಲಿ ಅಡಗಿದೆ. 'ಧರ್ಮಸ್ಯ ತತ್ತ್ವಂ ನಿಹಿತಂಗುಹಾಯಾಂ' ಎಂದು. ಇದು ಧರ್ಮದ ಬಗೆಗಿನ ಒಂದು ಮಟ್ಟಿನ ವಿಷಯವನ್ನು ಮನವರಿಕೆ ಮಾಡಲು ಸಮರ್ಥವಾಗಿವೆ.ಎಂದು ಹೇಳಬಹುದು. ಅಂದರೆ ಧರ್ಮವನ್ನು ತಿಳಿಯುವುದು ಕಷ್ಟ ಎಂದಂತಾಯಿತು.. ಹಾಗಾದರೆ ಇದನ್ನು ತಿಳಿಯುವುದು  ಅಸಾಧ್ಯವೇ?! ಎಂದರೆಅಲ್ಲ, ದೊಡ್ಡವರು ನಡೆದ ಮಾರ್ಗವೇ ಧರ್ಮ ಎಂದು ಹೇಳಿದ್ದಾರೆ.     
'ಧೃಞ್-ಧಾರಣೇ' ಎಂಬ ಮೂಲದಿಂದ ಉಂಟಾದ ಪದವೇ ಧರ್ಮ. ಯಾವುದು ಎಲ್ಲವನ್ನೂ ಧರಿಸಿದೆಯೋ ಅದನ್ನುಧರ್ಮ ಎನ್ನುತ್ತಾರೆ. ಈ ಪ್ರಪಂಚವನ್ನು ಹಿಡಿದಿಟ್ಟುಕೊಂಡ ಯಾವ ಶಕ್ತಿಯಿದೆಯೋ ಅದನ್ನೇ ಧರ್ಮ ಎನ್ನುತ್ತಾರೆ.ಅದನ್ನು ಪರಬ್ರಹ್ಮ, ಭಗವಂತ, ದೇವರು ಇತ್ಯಾದಿ ಪದಗಳಿಂದಲೂ ವ್ಯವಹರಿಸುತ್ತೇವೆ. ಅಂದರೆ ಮೂಲತಃ ಭಗವಂತನೇಧರ್ಮ. ಭಗವಂತನೇ ಈ ವಿಶ್ವವನ್ನು ಧರಿಸಿದ್ದಾನೆ- ತನ್ನ ಹಿಡಿತದಲ್ಲಿ ಇರಿಸಿಕೊಂಡಿದ್ದಾನೆ ಎಂದೆಲ್ಲಾ ಹೇಳಬಹುದು.ಅದನ್ನೇ ಶ್ರುತಿಯು ಹೀಗೆ ಸಾರುತ್ತಿದೆ 'ಧರ್ಮೋ ವಿಶ್ವಸ್ಯ ಜಗತಃ ಪ್ರತಿಷ್ಠಾ' ಎಂದು. ಇಂತಹ ಧರ್ಮವನ್ನು ತಿಳಿದವನನ್ನೇ'ಧರ್ಮಜ್ಞ' ಎಂದು ಹೇಳುತ್ತಾರೆ.'ವಿಷ್ಣೋರರ್ಧಂ ಮಹಾಭಾಗಂ ಪುತ್ರಮೈಕ್ಷ್ವಾಕುನಂದನಮ್' ಎಂದು ರಾಮಾಯಣದಲ್ಲಿ ಹೇಳುವಂತೆ,ಶ್ರೀರಾಮನಾದರೋ ಭಗವಂತನ ಅವತಾರವಲ್ಲವೇ. 'ರಾಮೋ ವಿಗ್ರಹವಾನ್ ಧರ್ಮಃ' ಎಂಬಂತೆ ರಾಮನು ಧರ್ಮದಮೂರ್ತರೂಪ. ಅಧರ್ಮದ ನಾಶ  ಮತ್ತು ಧರ್ಮದ ಪ್ರತಿಷ್ಠಾಪನೆಗಾಗಿಯೇ ಶ್ರೀರಾಮನಅವತಾರವಷ್ಟೆ. ಈ ಎಲ್ಲಾ ಕಾರಣಗಳಿಂದ ರಾಮನೇ ಧರ್ಮ. ಅವನೊಬ್ಬ ಧರ್ಮಜ್ಞ ಎಂದರೆ ಅವನನ್ನು ಅವನು ಅರ್ಥಮಾಡಿಕೊಂಡಿದ್ದ ಎಂದರ್ಥ.ತಾನು ಯಾರು? ತನ್ನ ಮೂಲ ಏನು? ತನ್ನ ಅವತಾರದ ಉದ್ದೇಶವೇನು? ಎಂದು ಬಲ್ಲವನಾಗಿದ್ದ. ಶ್ರೀರಾಮನು ನಡೆಯಲ್ಲಾಗಲಿ, ನುಡಿಯಲ್ಲಾಗಲಿ ಎಲ್ಲೂ ಧರ್ಮಕ್ಕೆವಿರೋಧವಾಗದಂತೆ ಜೀವನ ನಡೆಸಿದ್ದನ್ನು ರಾಮಾಯಣದುದ್ದಕ್ಕೂ ಕಾಣಬಹುದು.ಇದಕ್ಕೆ ಒಂದು ಉದಾಹರಣೆ ಕೊಡಬಹುದು. ಕೈಕೇಯಿಯ ವರದ ಕಾರಣದಿಂದ ರಾಮನು ಅರಣ್ಯಕ್ಕೆ ಹೋಗುವ ಸಂದರ್ಭಬರುತ್ತದೆ. ಆಗ ಕೈಕೇಯಿಯು ಹಿಂದಿನ ವರದ ವೃತ್ತಾಂತವನ್ನು ರಾಮನಿಗೆ ತಿಳಿಸುತ್ತಾಳೆ. ಆಗ ರಾಮನು ಅವಳ ಮಾತಿಗೆಕೊಡುವ ಉತ್ತರ ಹೀಗಿದೆ. ಅದು ಶ್ರೀರಾಮನಂತಹ ಧರ್ಮಮೂರ್ತಿಯಿಂದ ಮಾತ್ರ ಬರಲು ಸಾಧ್ಯ. 'ನ ಹ್ಯತೋ ಧರ್ಮಚರಣಂಕಿಂಚಿದಸ್ತಿ ಮಹತ್ತರಮ್' ಎಂದು. (ತಂದೆಯ ಆಜ್ಞೆಯನ್ನು ಪಾಲಿಸುವುದಕ್ಕಿಂದ ದೊಡ್ಡ ಧರ್ಮಾಚರಣೆಇನ್ನೊಂದಿಲ್ಲ) ಹೀಗೆ ಹೇಳುತ್ತಾ ಶ್ರೀರಾಮನು ಯಾವುದೇ ವಿಕಾರವಿಲ್ಲದಂತೆ ಇದ್ದನು. 

ಪಟ್ಟಾಭಿಷೇಕದವಾರ್ತೆಯನ್ನು ಕೇಳಿದಾಗ ಯಾವ ಭಾವವಿತ್ತೋ ಅದೇ ಭಾವ 'ಅರಣ್ಯಕ್ಕೆ ಹೋಗು!' ಎಂದಾಗಲೂ ರಾಮನಲ್ಲಿಕಾಣುತ್ತಿತ್ತು. ಇದು ಶ್ರೀರಾಮನ ಧರ್ಮಜ್ಞತೆಗೆ ನಿದರ್ಶನವಲ್ಲವೇ?!

ಸೂಚನೆ : 6/6/2021 ರಂದು ಈ ಲೇಖನವು  ಹೊಸದಿಗಂತ ಪತ್ರಿಕೆಯ ಅಂಕಣದಲ್ಲಿ ಪ್ರಕಟವಾಗಿದೆ.