ಒಂದೂರು. ಆಲದಮರದ ಕೆಳಗೆ ಪಂಚಾಯತ್ ಕಟ್ಟೆ. ಊರಿನ ಮುಖಂಡರು ಕುಳಿತಿದ್ದರು. ಒಬ್ಬ ಬೇರೆಯೂರಿನವ ಅಲ್ಲಿಗೆಬಂದು 'ಸ್ವಾಮಿ, ನಾನು ಈ ಊರಿನಲ್ಲಿ ವಾಸಮಾಡಬೇಕೆಂದಿದ್ದೇನೆ. ಈ ಊರಿನ ಜನರು ಹೇಗೆ? ಒಳ್ಳೆಯವರೇ?' ಎಂದುಪ್ರಶ್ನಿಸಿದ. ಅದಕ್ಕೆ ಊರಿನ ಮುಖಂಡರು, 'ಸ್ವಾಮಿ, ತಮ್ಮ ಆಚಾರ, ವ್ಯವಹಾರ ಮತ್ತು ಮಾತಿನಂತೆ ನಮ್ಮೂರಿನ ಜನರಪ್ರತಿಕ್ರಿಯೆಯಿರುತ್ತದೆ' ಎಂದರು. ಮಾತು ಮತ್ತು ವ್ಯವಹಾರದಿಂದ ಸಮಾಜವು ನಮ್ಮನ್ನು ಅಳೆಯುತ್ತದೆ. ಈ ವಿಷಯದಲ್ಲಿ ಸಮಾಜ ಒಂದು ಕನ್ನಡಿಯಂತೆ. ನಮ್ಮ ನಡೆ-ನುಡಿ, ಆಚಾರ-ವಿಚಾರ-ವ್ಯವಹಾರಗಳು ಶುದ್ಧವಾಗಿದ್ದರೆ ಅವುಗಳೇ ಸಮಾಜದಲ್ಲಿ ಪ್ರತಿಬಿಂಬಿತವಾಗುತ್ತವೆ. ನಾವು ಶುದ್ಧರಾಗಿದ್ದರೆ ಸಮಾಜವು ಶುದ್ಧವಾಗಿರುತ್ತದೆ. ನಾವು ಅಶುದ್ಧರಾಗಿದ್ದರೆ ಸಮಾಜವೂ ಅಶುದ್ಧವಾಗಿರುವಂತೆ ಕಾಣುತ್ತದೆ.ಯಾವ ರೀತಿಯ ವ್ಯವಹಾರವನ್ನಿಟ್ಟುಕೊಂಡರೆ, ಪದ್ಮಪತ್ರದ ಮೇಲಿರುವ ಜಲಬಿಂದುವಿನಂತೆ, ಹೊರ ಬಾಳಾಟಕ್ಕೂಪೋಷಕವಾಗಿ, ಒಳಜೀವನಕ್ಕೂ ಅನುಕೂಲವಾಗುವುದೋ ಆ ರೀತಿಯ ವ್ಯವಹಾರವನ್ನು ನಮ್ಮ ಋಷಿಮಹರ್ಷಿಗಳೂಮಹಾಕವಿಗಳೂ ತಮ್ಮ ಸಾಹಿತ್ಯದಲ್ಲಿ ಉಪದೇಶಿಸಿರುತ್ತಾರೆ. ಇಂದ್ರಿಯಜೀವನವಷ್ಟೇ ಅಲ್ಲದೇ, ಇಂದ್ರಿಯಸುಖದಲ್ಲಷ್ಟೇಸಿಲುಕದೇ ಇಂದ್ರಿಯಾತೀತವಾದ ಒಳಬದುಕನ್ನು, ಭಗವತ್ಸಾಕ್ಷಾತ್ಕಾರಕ್ಕೆ ಪೋಷಕವಾದ ಬದುಕನ್ನು ನಡೆಸುವವ್ಯವಹಾರವನ್ನು ಕಾವ್ಯಶಾಸ್ತ್ರಗಳಲ್ಲಿ ತಿಳಿಸಿಕೊಟ್ಟಿರುತ್ತಾರೆ. ಗುರುಹಿರಿಯರಲ್ಲಿ, ಬಂಧುಬಾಂಧವರಲ್ಲಿ, ದೇವತೆಗಳ ವಿಷಯದಲ್ಲಿ,ಶತ್ರು-ಮಿತ್ರ-ಉದಾಸೀನರ ವಿಷಯಗಳಲ್ಲಿ ಹೇಗೆ ವರ್ತಿಸಬೇಕೆಂಬುದನ್ನು ಅನೇಕ ದೃಷ್ಟಾಂತಗಳ ಮೂಲಕ, ಸನ್ನಿವೇಶಗಳಮೂಲಕ, ಪಾತ್ರಗಳ ಮೂಲಕ ಪರಿಚಯಿಸಿರುತ್ತಾರೆ. ಸಹೃದಯರು ಅದನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮ ಜೀವನದಲ್ಲಿಅಳವಡಿಸಿಕೊಳ್ಳಬಹುದಾಗಿದೆ. ಈ ವಿಷಯದಲ್ಲಿ ಕೆಲವು ದೃಷ್ಟಾಂತಗಳನ್ನು ನೋಡೋಣ.ಮಾನವಜೀವನದ ಒಂದು ಆಮೂಲಾಗ್ರವಾದ ನೋಟವನ್ನು ತಿಳಿಸುವ, ಕವಿಕುಲಗುರು ಕಾಳಿದಾಸನರಘುವಂಶಮಹಾಕಾವ್ಯದಲ್ಲಿನ ಶ್ಲೋಕವೊಂದನ್ನು ಶ್ರೀರಂಗಮಹಾಗುರುವು ಉದ್ಧರಿಸಿ ಹೇಳುತ್ತಿದ್ದುದ್ದನ್ನು ಮೊದಲುತೆಗೆದುಕೊಳ್ಳೋಣ. ಆ ಶ್ಲೋಕವು ಇಂತಿದೆ-
ಶೈಶವೇsಭ್ಯಸ್ತವಿದ್ಯಾನಾಂ ಯೌವನೇ ವಿಷಯೈಷಿಣಾಮ್ |
ವಾರ್ಧಕೇ ಮುನಿವೃತ್ತೀನಾಂ ಯೋಗೇನಾಂತೇ ತನುತ್ಯಜಾಮ್ ||
ರಘುವಂಶದ ಮಹಾರಾಜರನ್ನು 'ಶೈಶವದಲ್ಲಿ ಸಕಲವಿದ್ಯೆಗಳನ್ನೂ ಅಭ್ಯಸಿಸಿ, ಆ ವಿದ್ಯೆಗಳ ಬೆಳಕಿನಲ್ಲಿ, ಯೌವನದಲ್ಲಿವಿಷಯಸುಖಗಳಿಗೆ ಅಂಟಿಕೊಳ್ಳದೇ ವಿಷಯಸುಖಗಳನ್ನು ಅನುಭವಿಸುತ್ತಾ, ವಾರ್ಧಕ್ಯದಲ್ಲಿ ಮುನಿವೃತ್ತಿಯಲ್ಲಿರುತ್ತಾ ತಮ್ಮಹೃದಯಾಕಾಶದಲ್ಲಿ ಬೆಳಗುತ್ತಿರುವ ಪರಂಜ್ಯೋತಿಯನ್ನು ಧ್ಯಾನಿಸುತ್ತಾ, ಯೋಗವಿದ್ಯೆಯನ್ನಾಶ್ರಯಿಸಿ ತಮ್ಮ ದೇಹವನ್ನುಬಿಟ್ಟು ಮುಕ್ತಿಯನ್ನು ಪಡೆಯುತ್ತಿದ್ದರು' ಎಂದು ವರ್ಣಿಸುತ್ತಾನೆ ಕವಿ ಕಾಳಿದಾಸ. ಇದು ರಘುವಂಶದ ಮಹಾರಾಜರ ಜೀವನವಿಧಾನವಾದರೂ, ಸಕಲ ಜಗತ್ತಿಗೂ ಮಾದರಿಯಾಗಿರುತ್ತದೆ. 'ಮನುಷ್ಯಜನ್ಮ ದೊಡ್ಡದು ಅದನ್ನುಹಾಳುಮಾಡಿಕೊಳ್ಳಬೇಡಿರೋ ಹುಚ್ಚಪ್ಪಗಳಿರಾ' ಎಂಬ ದಾಸರ ಮಾತಿನಂತೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಲು ಒಂದುಉಪದೇಶ ಅಥವಾ ದಿಗ್ದರ್ಶನ ಈ ಶ್ಲೋಕದಲ್ಲಿದೆ. ಮಾನವಜೀವನದ ನಾಲ್ಕೂ ಹಂತಗಳಲ್ಲಿ ಜೀವನವನ್ನು ರೂಪಿಸಿಕೊಳ್ಳುವವಿಧಾನವನ್ನು ನಿರೂಪಿಸಲಾಗಿದೆ. ಗುರುಹಿರಿಯರ ವಿಷಯದಲ್ಲಿ ಸಂಯಮದಿಂದ ವರ್ತಿಸಬೇಕು. ವಿಶ್ವಪ್ರಸಿದ್ಧ ಅಭಿಜ್ಞಾನಶಾಕುಂತಲದ ಒಂದು ಸನ್ನಿವೇಶ. ದುಷ್ಯಂತಮಹಾರಾಜ ಬೇಟೆಯಾಡುತ್ತಾ ಜಿಂಕೆಯೊಂದನ್ನು ಅಟ್ಟಿಸಿಕೊಂಡು ಕಣ್ವಾಶ್ರಮದ ಹತ್ತಿರ ಬರುತ್ತಾನೆ.
'ಆಶ್ರಮಮೃಗವನ್ನು ಕೊಲ್ಲಬೇಡ' ಎಂಬ ಋಷಿಗಳ ಮಾತನ್ನು ಮನ್ನಿಸುತ್ತಾಅವರ ಮಾತಿನಂತೆ ಮಹರ್ಷಿಗಳ ಆಶ್ರಮವನ್ನು ಪ್ರವೇಶಿಸುತ್ತಾನೆ. ಪ್ರವೇಶಿಸುವ ಮೊದಲು ತನ್ನ ಕಿರೀಟ, ಬಿಲ್ಲು, ಬಾಣ,ಬತ್ತಳಿಕೆ ಅಷ್ಟೇ ಏಕೆ ಪಾದರಕ್ಷೆಯನ್ನೂ ಬಿಟ್ಟು ಹೊರಟುನಿಂತಾಗ, ಸಾರಥಿಯು, 'ಸ್ವಾಮಿ, ತಾವು ಇದನ್ನೇಲ್ಲಾ ಧರಿಸಿಹೋದರೆ ಮಹಾರಾಜನೆಂದು ಗೌರವವನ್ನು ಸೂಚಿಸುತ್ತಾರೆ' ಎನ್ನುತಾನೆ. ಅದಕ್ಕೆ, 'ವಿನೀತವೇಷೇಣ ಪ್ರವೇಷ್ಟವ್ಯಾನಿತಪೋವನಾನಿ ನಾಮ', 'ತಪೋವನವನ್ನು ವಿನೀತವೇಷದಿಂದ ಪ್ರವೇಶಿಸಬೇಕಷ್ಟೇ', ಎಂಬ ದುಷ್ಯಂತನ ಉತ್ತರ ಗುರುಹಿರಿಯರವಿಷಯದಲ್ಲಿ ಹೇಗೆ ವರ್ತಿಸಬೇಕೆಂಬುದನ್ನು ಪ್ರತಿಬಿಂಬಿಸುತ್ತದೆ. ಹೋಗುತ್ತಿರುವ ಜಾಗ ಜ್ಞಾನಿಗಳಾದ, ಸಂಸಾರದಸುಖಗಳನ್ನು ತೊರೆದು ನಿರ್ಲಿಪ್ತರಾಗಿರುವ ಮಹರ್ಷಿಗಳ ಆಶ್ರಮ. ಅಲ್ಲಿ ಮಹಾರಾಜನ ತ್ರಿಕರಣಗಳಲ್ಲಿನ ವಿನಯವುಶೋಭಿಸುತ್ತದೆಯೇ ಹೊರತು ಅವನ ಐಶ್ವರ್ಯ ಪ್ರದರ್ಶನವಲ್ಲ. ದೇಶಕಾಲಾದಿಗಳನ್ನರಿತು ಹೇಗೆ ವ್ಯವಹರಿಸಿದರೆ ಋಷಿಗಳಸಂತೋಷಕ್ಕೆ, ಅವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆಂಬ ಲೋಕನೀತಿಯಲ್ಲಿ ದುಷ್ಯಂತ ನಿಷ್ಣಾತ. ಅದರಂತೆ ಅವನವ್ಯವಹಾರ.
ಕಾಳಿದಾಸನ ಕುಮಾರಸಂಭವ ಮಹಾಕಾವ್ಯದಲ್ಲಿ ಪಾರ್ವತಿಯ ತಪಸ್ಸಿನ ಪ್ರಸಂಗ. ಬ್ರಹ್ಮಚಾರಿಯ ವೇಷದಲ್ಲಿ ಶಿವನು ಅಲ್ಲಿಗೆಬಂದು ತನ್ನನ್ನೇ ಪರಿಹಾಸಮಾಡಿಕೊಂಡು ಪಾರ್ವತಿಯ ಶಿವನಲ್ಲಿನ ನಿಲುವನ್ನು ಪರೀಕ್ಷಿಸುತ್ತಾನೆ. ಶಿವನಲ್ಲಿಯ ಪಾರ್ವತಿಯದೃಢವಾದ ಪ್ರೇಮವನ್ನು ತಿಳಿದು ತನ್ನ ಬ್ರಹ್ಮಚಾರಿವೇಷವನ್ನು ಕಳಚಿ ಶಿವನ ರೂಪದಲ್ಲಿ ನಿಲ್ಲುತ್ತಾನೆ. ಪಾರ್ವತಿಗೆ ಸಂತೋಷಆಶ್ಚರ್ಯ ಮತ್ತು ಲಜ್ಜೆಯ ಭಾವಗಳು ಏಕಕಾಲದಲ್ಲಿ ಆಗುತ್ತವೆ. ತಪಸ್ಸಿನ ಫಲವು ಸಿದ್ಧಿಸಿತ್ತು. ತಂದೆತಾಯಿಯರಸಮ್ಮತಿಯೂ ಇದ್ದಿತು. ಎಲ್ಲದಕ್ಕಿಂತಲೂ ಹೆಚ್ಚಾಗಿ ಶಿವಪಾರ್ವತಿಯರ ವಿವಾಹಕ್ಕೆ ಬ್ರಹ್ಮಾದಿಸಕಲದೇವತೆಗಳುಇದಿರು ನೋಡುತ್ತಿದ್ದರು. ಅವರ ಆಶೀರ್ವಾದವೂ ಇದ್ದಿತು. ತತ್ಕ್ಷಣದಲ್ಲಿಯೇ ಪಾರ್ವತಿಯು ಶಿವನೊಡನೆ ಹೋಗಿದ್ದರೂ ಯಾರೂಏನೂ ಹೇಳುತ್ತಿರಲಿಲ್ಲವಷ್ಟೆ. ಆದರೂ, ಜಗನ್ಮಾತೆಯಾದ ಪಾರ್ವತಿಯು ಲೋಕಮರ್ಯಾದೆಯನ್ನೂ, ತನ್ನ ಎಲ್ಲೆಯನ್ನೂಮೀರುವುದಿಲ್ಲ. ತನ್ನ ಸಖಿಯ ಮೂಲಕ ಶಿವನಿಗೆ ಸಂದೇಶವನ್ನು ಕಳುಹಿಸುತ್ತಾಳೆ. ' ಯದ್ಯಪಿ ನನ್ನ ತಪಸ್ಸಿನಿಂದ ನಾನುನಿನ್ನನ್ನು ಗೆದ್ದಿರುವೆನಾದರೂ ನಾನಿನ್ನೂ ನನ್ನ ತಂದೆಯ ಅಂಕೆಶಂಕೆಯಲ್ಲಿದ್ದೇನೆ. ಅವನೇ ನನ್ನನ್ನು ಕೊಡುವವನು. 'ದಾತಾಮೇ ಭೂಭೃತಾಂ ನಾಥಃ ಪ್ರಮಾಣೀಕ್ರಿಯತಾಮಿತಿ' ನನ್ನ ತಂದೆಯ ಹತ್ತಿರ ಬಂದು ನನ್ನನ್ನು ಮದುವೆಮಾಡಿಕೊಡಬೇಕೆಂದುಕೇಳು'. ಎಂತಹ ವ್ಯವಹಾರ ! ತಾನೂ ಪರಿಪಾಲಿಸುತ್ತಾ ಮತ್ತೊಬ್ಬರನ್ನೂ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುವಇದಲ್ಲವೇ ಆದರ್ಶ?
ರಘುವಂಶಮಹಾಕಾವ್ಯದ ಮತ್ತೊಂದು ಪ್ರಸಂಗ. ಒಮ್ಮೆ ಇಂದ್ರನಿಗೆ ದೇವಾಸುರಯುದ್ದದಲ್ಲಿ ಸಹಾಯ ಮಾಡಲುಹೋದ ರಘುವಂಶದ ದಿಲೀಪ ಮಹಾರಾಜ. ಯುದ್ಧವಾದ ಬಳಿಕ ಇಂದ್ರನಿಂದ ಸಮ್ಮಾನಿತನಾಗಿ ಹಿಂದಿರುಗಿ ಬರುತ್ತಿರುತ್ತಾನೆ.ತನ್ನ ಪತ್ನಿಯ ಯೋಚನೆಯಲ್ಲಿಯೇ ಲಗ್ನವಾದ ಮನಸ್ಸುಳ್ಳ ದಿಲೀಪ, ಕಲ್ಪವೃಕ್ಷದ ನೆರಳಿನಲ್ಲಿ ಮಲಗಿದ್ದ, ಎಲ್ಲರಿಂದಲೂಪೂಜೆಗೆ ಯೋಗ್ಯಳಾದ ಕಾಮಧೇನುವನ್ನು ನಮಸ್ಕರಿಸುವುದಿಲ್ಲ. ಇದರಿಂದ ನೊಂದ ಕಾಮಧೇನುವಿನಿಂದಮಕ್ಕಳಾಗದಿರಲೆಂದು ಶಾಪ. ಪೂಜ್ಯರಾದವರನ್ನು ಪೂಜಿಸದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. ಈ ದಿಸೆಯಲ್ಲಿ ಮಹಾಕವಿಕಾಳಿದಾಸನ ಈ ಮಾತು ಸರ್ವದಾ ಸ್ಮರಣೀಯ. 'ಪ್ರತಿಬಧ್ನಾತಿ ಹಿ ಶ್ರೇಯಃ ಪೂಜ್ಯಪೂಜಾವತಿಕ್ರಮಃ' ಪೂಜ್ಯರನ್ನುಪೂಜಿಸದಿದ್ದಲ್ಲಿ ಮುಂದೆ ಸಂಭವಿಸಬೇಕಾದ ಶ್ರೇಯಸ್ಸನ್ನು ಅದು ತಡೆಹಿಡಿಯುತ್ತದೆ. ತಿಳಿಯದೆಯೇ ಅಥವಾ ತಿಳಿದೂ ಬೆಂಕಿಗೆಕೈಯಿಟ್ಟರೂ ತನ್ನ ಸ್ವಭಾವದಂತೆ ಸುಡುತ್ತದೆಯಲ್ಲವೇ ? ನಿರಂತರ ನಮ್ಮ ವ್ಯವಹಾರವನ್ನುಗಮನಿಸಿಕೊಂಡಿರಬೇಕಲ್ಲವೇ?