ದೇವರಲ್ಲಿ ಏನನ್ನಾದರೂ ಬೇಡುವ ಅನೇಕ ಮಂದಿ ನಮಗೆ ಕಾಣಸಿಗುತ್ತಾರೆ. ಹೀಗೆ ಪ್ರಾರ್ಥಿಸುವಾಗ, ಜನರು ಕೆಲವೊಮ್ಮೆ ತೀರ ಅವೈಜ್ಞಾನಿಕವಾದ ಪ್ರಾರ್ಥನೆಗಳನ್ನೂ ಮಾಡುವುದುಂಟು.
ಸೃಷ್ಟಿನಿಯಮಗಳಿಗೆ ವಿರುದ್ಧವಾದುದನ್ನು ಭಗವಂತನೂ ಕೊಡುವುದಿಲ್ಲ. ಒಮ್ಮೊಮ್ಮೆ ಮೇಲ್ನೋಟಕ್ಕೆ ಪವಾಡಸದೃಶವಾದ ಕೆಲವು ಘಟನೆಗಳು ನಡೆದಿವೆ ಎನ್ನಿಸಿದರೂ, ಸೂಕ್ಷ್ಮವಾಗಿ ನೋಡಿದಾಗ ಆ ಘಟನೆಯ ಹಿಂಬದಿಯಲ್ಲಿರುವ ನಿಸರ್ಗನಿಯಮದ ಅರಿವು ನಮಗಿಲ್ಲದಿರುವುದರಿಂದ ನಾವು "ಅದ್ಭುತವೊಂದು ನಡೆಯಿತು" ಎನ್ನುತ್ತೇವೆ. ದೂರದಲ್ಲಿರುವ ರಿಮೋಟಿನಿಂದ ಟಿ. ವಿ ಯನ್ನು ಚಾಲೂ ಮಾಡುವುದೂ ಮೊದಲಿಗೆ ಪವಾಡದಂತೆಯೇ ಭಾಸವಾಗುತ್ತದೆ. ಆದರೆ ಒಬ್ಬ ವಿಜ್ಞಾನದ ವಿದ್ಯಾರ್ಥಿಗೆ ಇದೊಂದು ವಿಜ್ಞಾನದ ಬಳಕೆಯಷ್ಟೆ.
ಭಗವಂತನು ಎಲ್ಲರ ಪ್ರಾರ್ಥನೆಗಳನ್ನೂ ನೆರವೇರಿಸಲಾದೀತೆ? ಎಂದು ಯೋಚಿಸೋಣ-
ಕಳ್ಳನೊಬ್ಬ ರಾತ್ರಿ ಮಾಲಿನೊಡನೆ ತಪ್ಪಿಸಿಕೊಳ್ಳಲೆತ್ನಿಸುವಾಗ "ನೀನು ನನ್ನನ್ನು ನಿಜವಾಗಿ ಕಾಪಾಡುವವನೇ ಆಗಿದ್ದಲ್ಲಿ ಇಂದು ಸೂರ್ಯೋದಯ ತಡವಾಗಿ ಆಗಲಿ; ಇಲ್ಲದಿದ್ದರೆ ನಾನು ಸಿಕ್ಕಿಬಿದ್ದೇನು" ಎಂದು ಪ್ರಾರ್ಥಿಸಬಹುದು. ಸಮಕಾಲದಲ್ಲಿ ಮತ್ತಾವುದೋ ಕಾರಣಕ್ಕಾಗಿ ಇನ್ನೊಬ್ಬ, "ಭಗವಂತ, ಇಂದು ಸೂರ್ಯೋದಯ ಬೇಗ ಆಗಲಪ್ಪ. ಹಾಗಾದಲ್ಲಿ ನೀನು ನನ್ನನ್ನು ಕಾಪಾಡಿದಂತೆ" ಎನ್ನಬಹುದು. ಭಗವಂತ ಯಾರ ಪ್ರಾರ್ಥನೆಗೆ ಕಿವಿಗೊಡಬೇಕು?
ದೇವರು ನಮ್ಮ ಪ್ರಾರ್ಥನೆಯನ್ನು ಈಡೇರಿಸಬೇಕೆಂದಾದರೆ, ಅದನ್ನು ಸ್ವೀಕರಿಸಲು ನಮಗೆ ಒಂದು ಯೋಗ್ಯತೆಯೂ ಇರಬೇಕು. ಒಬ್ಬ ಒಳ್ಳೆಯ ತರಬೇತುಗಾರ, ಸಮರ್ಥನಾದ ಒಬ್ಬ ವ್ಯಕ್ತಿಯನ್ನು ಒಳ್ಳೆಯ ಓಟಗಾರನನ್ನಾಗಿ ಮಾಡಬಹುದು. ಆದರೆ, ಕುಂಟನೊಬ್ಬ "ನಾನು ಒಲಿಂಪಿಕ್ಸ್ ಸ್ಪರ್ಧೆಯ ಓಟದಲ್ಲಿ ಮೊದಲಸ್ಥಾನ ಗಳಿಸುವಂತೆ ಮಾಡಿ" ಎಂದು ತರಬೇತುದಾರನಲ್ಲಿ ದುಂಬಾಲು ಬಿದ್ದರೆ, ಅವನು ಏನು ತಾನೇ ಮಾಡಿಯಾನು? ಅವೈಜ್ಞಾನಿಕವಾದ ವರಗಳನ್ನು ಕೊಡುವುದು ದೇವರಿಗೂ ಹೇಗೆ ಸಾಧ್ಯವಿಲ್ಲವೆಂಬ ಬಗ್ಗೆ ತಿಳಿವಳಿಕೆ ಕೊಡುತ್ತಾ ಶ್ರೀರಂಗಮಹಾಗುರುಗಳು ಹೇಳಿದ ಮಾತುಗಳು ಇಲ್ಲಿ ಮನನೀಯ.
"ದೇಹಪೋಷಣೆ-ಕುಟುಂಬಭರಣಗಳನ್ನು ಭಗವಂತನು ಕೊಟ್ಟ ಬುದ್ಧಿಬಲ, ಶರೀರಬಲದಿಂದ ನಿರ್ವಹಿಸಿಕೊಳ್ಳಬೇಕು. ದೇಹಪೋಷಣೆಯಲ್ಲಿ ಅಶಕ್ತರಾಗಿ ಭಗವಂತನನ್ನು ಹಣ ಕೇಳಲು ಹೋಗಬಾರದು. ಭಗವಂತನ ದೇಶದಲ್ಲಿ ಯಾವ ಧನವು ಚಲಾವಣೆಯಲ್ಲಿದೆಯೋ, ಅಂತಹ ಭಗವಂತನ ಗೌರ್ನಮೆಂಟಿನಲ್ಲಿರುವ ಹಣ ಇಲ್ಲಿ ಚಲಾವಣೆಯಲ್ಲಿಲ್ಲ. ಅದನ್ನು ತಂದರೂ ಇಲ್ಲಿ ಉಪಯೋಗಪಡುವುದಿಲ್ಲ. ನಮ್ಮ ಗೌರ್ನಮೆಂಟಿನಲ್ಲಿರುವ ಚಲಾವಣೆಯಲ್ಲಿರುವ ದುಡ್ಡು ಕೇಳಿದರೆ ನಮ್ಮದನ್ನು ಕೊಟ್ಟರೆ ಆಗಲೂ ಭಗವಂತ ಕೋರ್ಟ್ ಕೇಸ್ ಗೆ ಗುರಿಯಾಗಬೇಕಾಗುತ್ತೆ. ….. ಯಾವ ನಂಬರಿನ ನೋಟುಗಳನ್ನು ಕೊಡಬೇಕು? ಹಾಗೆ ಕೊಟ್ಟರೆ, ಖೋಟಾನೋಟು/ ಖೋಟಾನಾಣ್ಯ ತಯಾರಿಕೆಯ ಕಂಪ್ಲೇಂಟ್ ಗೆ ಬಾಧ್ಯನಾಗಬೇಕಾಗುತ್ತದೆ. ಆದ್ದರಿಂದ ಅವನಲ್ಲಿ ನಿಮ್ಮ ಕುಟುಂಬನಿರ್ವಹಣೆಗಾಗಿ ಹಣ ಕೇಳಹೋಗಬೇಡಿ. ಈ ವ್ಯವಹಾರದಲ್ಲಿ ಅವನೇ ನಿಮ್ಮ ಜೀವನ ನಿರ್ವಹಣೆಗೆ ಉಪಕರಣವಾಗಿ ಕೊಟ್ಟಿರುವ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಳ್ಳಬೇಕು."
ಭಗವಂತನಲ್ಲಿ ನಮ್ಮ ಕೋರಿಕೆಯನ್ನು ನಿವೇದನೆ ಮಾಡಿಕೊಳ್ಳುವುದು ತಪ್ಪಲ್ಲ. ಆದರೆ, ನಮ್ಮ ಪ್ರಾರ್ಥನೆಯಲ್ಲಿ ಇದು ಹೀಗೇ ಆಗಬೇಕು ಎಂಬ ಆಗ್ರಹವಿರಬಾರದಷ್ಟೆ. "ನಿನಗಿಷ್ಟವಿದ್ದರೆ ಹೀಗಾಗಲಿ" ಎಂದು ದೇವರಲ್ಲಿ ಕೇಳಿಕೊಂಡು ಹಗುರವಾಗಿರೋಣ. ಹಾಗೆ ಮನಸ್ಸು ಹಗುರವಾದಾಗ ಕಾರ್ಯಸಾಧನೆಗೆ ಬೇಕಾದ ನಮ್ಮ ಪುರುಷಪ್ರಯತ್ನವನ್ನು ಇನ್ನೂ ಚೆನ್ನಾಗಿ ಮಾಡಬಹುದಲ್ಲವೇ?
ಸೂಚನೆ: 29/04/2021 ರಂದು ಈ ಲೇಖನ ವಿಜಯವಾಣಿಯ ಮನೋಲ್ಲಾಸ ದಲ್ಲಿ ಪ್ರಕಟವಾಗಿದೆ.