Saturday, April 24, 2021

ಮೋಕ್ಷಸಾಧನವಾಗಿ ಕಾವ್ಯಗಳು (Moksasadhanavagi kavyagalu)

ಡಾ.  ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)


ಮಾನವಜೀವನದ ಪರಮಲಕ್ಷ್ಯ ಭಗವತ್ಸಾಕ್ಷಾತ್ಕಾರವೇ ಎಂಬುದನ್ನು ಸನಾತನಾರ್ಯ ಭಾರತಮಹರ್ಷಿಗಳು ಉದ್ಘೋಷಿಸಿರುತ್ತಾರೆ. ವೇದಾದಿಸಾಹಿತ್ಯಗಳಲ್ಲಿ ಅದರ ಪಾರಮ್ಯವನ್ನು ಕೊಂಡಾಡಿರುವುದು ಸರ್ವವಿದಿತವಾಗಿರುವ ವಿಷಯವೇ ಆಗಿದೆ.ಹಾಗೆಯೇ ಕಾವ್ಯಗಳಲ್ಲಿಯೂ ಅದರದೇ ಆದ ಶೈಲಿಯಲ್ಲಿ ಮೋಕ್ಷದ ಶ್ರೇಷ್ಠತೆ ಮತ್ತು ಮೋಕ್ಷವನ್ನು ದೊರಕಿಸಿಕೊಡುವ ಸಾಧನಗಳು ಪ್ರತಿಪಾದಿತವಾಗಿರುವುದನ್ನು ನೋಡುತ್ತೇವೆ. ಮುಮುಕ್ಷುವಿಗೆ ಬೇಕಾದ ದೃಢಭಕ್ತಿ, ಜೀವನವ್ಯವಹಾರ,ಶರೀರಸ್ವಾಸ್ಥ್ಯ, ಗುರುವಾಕ್ಯದಲ್ಲಿ ಶ್ರದ್ಧೆ, ಜೀವನದ್ವಂದ್ವಗಳಾದ ಸುಖ-ದುಃಖ, ಲಾಭಾಲಾಭ, ಜಯ-ಪರಾಜಯ ಮುಂತಾದವಿಷಯಗಳಲ್ಲಿ  ಸಮಚಿತ್ತತೆ ಅಲ್ಲಲ್ಲಿ ಪಾತ್ರಗಳ ಮೂಲಕ, ಸನ್ನಿವೇಶಗಳ ಮೂಲಕ, ವರ್ಣನೆಗಳ ಮೂಲಕ ಪ್ರತಿಪಾದಿತವಾಗಿವೆ.ಈ ಲೇಖನದಲ್ಲಿ ಕೆಲವು ಉದಾಹರಣೆಗಳನ್ನು ವಾಚಕರ ಮುಂದಿಡಲು ಪ್ರಯತ್ನಿಸಲಾಗಿದೆ.

ಜೀವನದ ಪರಮಲಕ್ಷ್ಯವಾದ ಭಗವತ್ಸಾಕ್ಷಾತ್ಕಾರವನ್ನು ಸಾಧಿಸಬೇಕಾದರೆ ಮಾನವಜನ್ಮ ಬೇಕೇ ಬೇಕು. 'ಈದುಃಖಮಯವಾದ ಸಂಸಾರಸಾಗರವನ್ನು ದಾಟಲು ಈ ಮಾನವದೇಹವೆಂಬ ನೌಕೆಯನ್ನು ಪಡೆದಿದ್ದೀಯೆ. ಎಷ್ಟರಲ್ಲಿ ಈಶರೀರನೌಕೆಯು ಸಂಸಾರಸಾಗರದ ಅಲೆಗಳಿಗೆ ಸಿಕ್ಕಿ ನಶಿಸುವುದಿಲ್ಲವೋ ಅಷ್ಟರಲ್ಲಿ ಈ ಸಂಸಾರಸಾಗರವನ್ನು ದಾಟಿಬಿಡು'ಎಂಬ ಜ್ಞಾನಿಗಳ ಆದೇಶದಂತೆ ಉಪದೇಶದಂತೆ ಶರೀರದ ಸ್ವಾಸ್ಥ್ಯಕಾಪಿಡುವುದು ಅತ್ಯಂತ ಮುಖ್ಯವಾಗಿದೆ.ಕುಮಾರಸಂಭವಮಹಾಕಾವ್ಯದಲ್ಲಿ 'ಶರೀರಮಾದ್ಯಂ ಖಲು ಧರ್ಮಸಾಧನಮ್' ಎಂಬ ಮಹಾಕವಿ ಕಾಳಿದಾಸನ ಮಾತುಇದನ್ನು ಪುಷ್ಟೀಕರಿಸುತ್ತದೆ. ಶರೀರವು ರೋಗರುಜಿನಗಳ ಆಗರವಾಗಿದ್ದರೆ, ಅದರ ನಿವಾರಣೆಗಾಗಿ ಔಷಧೋಪಚಾರಗಳಸೇವನೆಯೇ ಮೊದಲಾದ ಕರ್ಮಗಳಲ್ಲಿ ತೊಡಗಿದ್ದು, ಜೀವನದ ಅಮೂಲ್ಯ ಕಾಲವನ್ನು ಹಾಳುಮಾಡಿಕೊಳ್ಳಬೇಕಾಗುತ್ತದೆ.ಶರೀರಸ್ವಾಸ್ಥ್ಯವನ್ನು ಕಡೆಗಾಣಿಸದೆ ಅದಕ್ಕೆ ಬೇಕಾದ ಆರೈಕೆಯನ್ನು ಮಾಡಿಕೊಂಡು ಹಿತಭುಕ್, ಮಿತಭುಕ್, ಋತುಭುಕ್ಮತ್ತು ಕಾಲಭುಕ್ ಆಗಿರುತ್ತಾ ಆತ್ಮಸಾಧನೆಯನ್ನು ಮಾಡಬೇಕೆಂದು ತಿಳಿದುಬರುತ್ತದೆ.ಮೋಕ್ಷಸಾಧನೆಗೆಂದು ಗುರು ಕೊಟ್ಟ ಮಾರ್ಗದಲ್ಲಿ ನಡೆಯುವಾಗ ಪ್ರಕೃತಿಯಲ್ಲಿ ಉಂಟಾಗುವ ಏರುಪೇರುಗಳು, ಸಿದ್ಧಿಗಳುಮತ್ತು ಆಕರ್ಷಣೆಗಳು ಮನಸ್ಸನ್ನು ಕಲಕಿಬಿಟ್ಟು ಸಾಧಕನನ್ನು ಪಥಭ್ರಷ್ಟನನ್ನಾಗಿಸುತ್ತದೆ. ಹಾಗಾಗದೇ, ಮೋಕ್ಷವೆಂಬ ಒಂದೇಗುರಿಯನ್ನು ಹೊಂದಿರುವವನಿಗೆ ಸಂಯಮ, ತಾಳ್ಮೆ, ಮನಸ್ಸ್ಥೈರ್ಯಗಳಿದ್ದು ಎದೆಗುಂದದೇ ಧೈರ್ಯವಾಗಿಮುಂದುವರೆಯಬೇಕಾಗುತ್ತದೆ. ಪರಶಿವನು ತಪಸ್ಸನ್ನಾಚರಿಸುವಾಗ ತ್ರಿಲೋಕಸುಂದರಿಯಾದ ಪಾರ್ವತಿಯು ಶಿವನಬಳಿ ಬಂದು ತಾನು ಅವನಿಗೆ ಸೇವೆಮಾಡುವುದಾಗಿಯೂ ತನಗೆ ಅನುಮತಿಯನ್ನು ನೀಡಬೇಕೆಂದು ಕೇಳಿಕೊಳ್ಳುತ್ತಾಳೆ.ತಪಸ್ಸು ಮಾಡುವಾಗ 'ಏಕಸ್ತಪಃ' ಒಬ್ಬನೇ ಇರಬೇಕೆಂದು ಅನುಭವಿಗಳ ಮಾತು. ಹಾಗಿರುವಾಗ ಒಬ್ಬ ಸ್ತ್ರೀಯ ಉಪಸ್ಥಿತಿತಪಸ್ವಿಗಳ ಮನಸ್ಸನ್ನು ಕದಡುವುದರಲ್ಲಿ ಸಂದೇಹವಿಲ್ಲ. ಇದಕ್ಕೆ ಅನೇಕ ನಿದರ್ಶನಗಳು ವಾಚಕರಿಗೆ ತಿಳಿದಿರುವುದೇ ಆಗಿದೆ.ಮಕ್ಕಳ ಮುಂದೆ ಅವರಿಗೆ ಪ್ರಿಯವಾಗಿರುವ ತಿನಿಸನ್ನು ಇಟ್ಟು 'ಈ ದಿನ ಈ ಕೆಲಸವನ್ನು ಮಾಡಿದ ಮೇಲೆ ಈ ತಿನಿಸನ್ನುತಿನ್ನಬೇಕು' ಎಂದು ಹೇಳಿಹೋದಾಗ ಏನಾಗುತ್ತದೆಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಆದರೂ ಶಿವನಅನುಮೋದನೆ ಎಲ್ಲರಿಗೂ ಆಶ್ಚರ್ಯವನ್ನುಂಟುಮಾಡುತ್ತದೆ. 'ವಿಕಾರಹೇತೌ ಸತಿ ವಿಕ್ರಿಯಂತೇ ಯೇಷಾಂ ನ ಚೇತಾಂಸಿ ತಏವ ಧೀರಾಃ', 'ಮನೋವಿಕಾರವನ್ನು ಉಂಟುಮಾಡುವ ವಸ್ತುವು ಪ್ರತ್ಯಕ್ಷವಾಗಿ ಇರುವಾಗಲೂ ಯಾರ ಮನಸ್ಸು ಕದಡದೇಇರುತ್ತದೆಯೋ ಅವನೇ ಧೀರ' ಎಂಬ ಕವಿಕಾಳಿದಾಸನ ಮಾತು ಶಿವನ ಮನಸ್ಸ್ಥೈರ್ಯಕ್ಕೆ ಕನ್ನಡಿಯಂತೆ. ಇದರಿಂದಅಧ್ಯಾತ್ಮಮಾರ್ಗದಲ್ಲಿ ಹೋಗುವವರಿಗೆ ಮನಸ್ಸ್ಥೈರ್ಯ ಎಷ್ಟು ಮುಖ್ಯವೆಂಬುದು ತಿಳಿದುಬರುತ್ತದೆ.

ಗುರುವು ಸಾಧಕನಿಗೆ ಮಂತ್ರವನ್ನೋ ಧ್ಯಾನಮೂರ್ತಿಯನ್ನೋ ಅಥವಾ ಇನ್ನಾವುದನ್ನೋ ಅವಲಂಬನೆಯಾಗಿ ಕೊಟ್ಟಿರುವಾಗಅಧ್ಯಾತ್ಮಮಾರ್ಗದಲ್ಲಿ ಸಾಗುವವನಿಗೆ ಆ ಗುರುವಾಕ್ಯದಲ್ಲಿ ಶ್ರದ್ಧೆ ಅತ್ಯಂತ ಮುಖ್ಯವಾಗಿರುತ್ತದೆ. ಶ್ರೀಗುರುವಿನ ಆಜ್ಞೆಯನ್ನುಮರುಮಾತನಾಡದೆ, ತರ್ಕಕ್ಕೆ ವಿಷಯವಾಗಿಸದೇ ನಂಬಿಕೆಯಿಂದ ಗುರುವಾಕ್ಯವನ್ನು ಪಾಲಿಸಬೇಕಾಗುತ್ತದೆ. ರಘುವಂಶಮಹಾಕಾವ್ಯದಲ್ಲಿ ಕೌತ್ಸನ ವಿಷಯದಲ್ಲಿ ರಘುಮಹಾರಾಜನಾಡುವ 'ಆಜ್ಞಾ ಗುರೂಣಾಂ ಹ್ಯವಿಚಾರಣೀಯಾ', 'ಗುರುಗಳಆಜ್ಞೆಯು ವಿಚಾರಣೆಗೆ ಯೋಗ್ಯವಲ್ಲ' ಎಂಬ ಮಾತು ಈ ವಿಷಯವನ್ನು ಪ್ರತಿಬಿಂಬಿಸುತ್ತದೆ.ಜೀವನದಲ್ಲಿ ಯಾವಾಗಲೂ ಸುಖವೇ ಇರುತ್ತದೆ ಎಂದಾಗಲೀ ಅಥವಾ ದುಃಖವೇ ಇರುತ್ತದೆ ಎಂದಾಗಲೀ ಇಲ್ಲ. ಸುಖದುಃಖಗಳ ಮಿಶ್ರಣವೇ ಜೀವನ. ಆದರೂಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಜೀವನವನ್ನು ನಿರ್ವಹಿಸಬೇಕಾಗಿದೆ. 'ಹೇಗೆ ಕಾಯೊಂದರ ಬೆಳವಣಿಗೆಯಲ್ಲಿಕಾಲಕಾಲದಲ್ಲಿ ಉಪ್ಪು, ಹುಳಿ, ಖಾರ, ಒಗಚು ಮುಂತಾದ ರಸಗಳಿಂದ ಕೂಡಿರುತ್ತಾ ಕಡೆಯಲ್ಲಿ ಮಧುರರಸದಲ್ಲಿಯೇ ಹೋಗಿನಿಲ್ಲುತ್ತದೆಯೋ ಹಾಗೆಯೇ ಮಾನವನ ಜೀವನವೂ ಕೂಡ ಅನೇಕ ಏರಿಳಿತಗಳಿಂದ ಕೂಡಿದ್ದಾಗಿ ಕಡೆಯಲ್ಲಿ ಎಲ್ಲ ರಸಗಳಿಗೂನೆಲೆಯಾದ ಭಗವಂತನಲ್ಲಿಯೇ ನೆಲೆನಿಲ್ಲುತ್ತದೆ' ಎಂಬ ಶ್ರೀರಂಗಮಹಾಗುರುವಿನ ವಾಣಿ ಇಲ್ಲಿ ಸ್ಮರಣೀಯ. ಆದರೆ, ಈ ಮಧ್ಯೆಧೃತಿಗೆಡದೆ ಇಟ್ಟ ಹೆಜ್ಜೆಯನ್ನು ಹಿಂತೆಗೆಯಬಾರದು. ಸ್ಥಿರನಾಗಿ ಇರಬೇಕು ಸ್ಥಿತಪ್ರಜ್ಞನಂತೆ, ಶ್ರೀರಾಮನಂತೆ.ಕವಿ ಕಾಳಿದಾಸನು ತನ್ನ ರಘುವಂಶಮಹಾಕಾವ್ಯದಲ್ಲಿ ತಂದೆ ದಶರಥನ ಆಣತಿಯ ಮೇರೆಗೆ ವನವಾಸಕ್ಕೆ ಹೊರಟುನಿಂತಶ್ರೀರಾಮನನ್ನು ವರ್ಣಿಸುತ್ತಾನೆ. 'ದಧತೋ ಮಂಗಳಕ್ಷೌಮೇ ವಸಾನಸ್ಯ ಚ ವಲ್ಕಲೇ | ದದೃಶುಃ ವಿಸ್ಮಿತಾಸ್ತಸ್ಯ ಮುಖರಾಗಂಸಮಂ ಜನಾಃ || " – 'ಪಟ್ಟಾಭಿಷೇಕಕ್ಕೆ ಮಂಗಳಕರವಾದ ರೇಶಿಮೇ ಬಟ್ಟೆಯನ್ನು ಧರಿಸಿರುವಾಗಲೂ, ಈಗ ನಾರು ಮಡಿಯುಟ್ಟು ವನವಾಸಕ್ಕೆ ಹೊರಟು ನಿಂತಾಗಲೂ ಕೂಡ ಆಶ್ಚರ್ಯದಿಂದ ಕೂಡಿದ ಸಾಕೇತಪುರವಾಸಿಗಳು ಶ್ರೀರಾಮನ ಮುಖರಾಗದಲ್ಲಿ ಯಾವ ಒಂದು ಬದಲಾವಣೆಯನ್ನೂ ಕಾಣಲಿಲ್ಲ' ಎಂದು ವರ್ಣಿಸುತ್ತಾನೆ. 'ಜೀವನದಲ್ಲಿಎದುರಾಗುವ ಏರುಪೇರುಗಳನ್ನು ಸಹಿಸಿಕೊಂಡು ಧ್ಯೇಯವನ್ನು ಸಾಧಿಸಬೇಕು' ಎಂಬ ತಿಳಿವಳಿಕೆ ಕಾವ್ಯಗಳಲ್ಲಿ ಕಂಡುಬರುತ್ತದೆ.

ಸಾಧಕನು ನಿರಂತರಧ್ಯಾನದಲ್ಲಿ ಮುಳುಗಿದಾಗ ಅದು ಸಮಾಧಿಯಲ್ಲಿ ಪರ್ಯವಸಾನವಾಗುತ್ತದೆ. ಆಗ ಅವನುಭಗವದ್ದರ್ಶನವನ್ನು ಮಾಡುತ್ತಾ ಆ ಒಳಬೆಳಕಿನಲ್ಲಿ ಮುಳುಗಿ, ಸಮೃದ್ಧವಾದ ಶಾಂತಿಯನ್ನೂ, ಆನಂದವನ್ನೂ ಅನುಭವಿಸುತ್ತಾಬ್ರಹ್ಮದಲ್ಲಿ ಒಂದಾಗುತ್ತಾನೆಂಬ ವಿವರಣೆಯನ್ನು ವೇದವೇ ಮುಂತಾದ ಸಾಹಿತ್ಯಗಳಲ್ಲಿ ವರ್ಣಿಸಿರುವುದನ್ನು ನೋಡುತ್ತೇವೆ.ಹಾಗೆಯೇ ಕಾವ್ಯಗಳೂ ಕೂಡ ಸಮಾಧಿಸ್ಥಿತಿಯನ್ನು ತನ್ನದೇ ಆದ ಶೈಲಿಯಲ್ಲಿ ವರ್ಣಿಸುತ್ತದೆ. ವಿಶ್ವಪ್ರಸಿದ್ಧವಾದ ಅಭಿಜ್ಞಾನ ಶಾಕುಂತಲದ ಅಂತಿಮ ಶ್ಲೋಕವು ಕಾವ್ಯಸಮಾಧಿಗೆ ಉತ್ತಮವಾದ ಉದಾಹರಣೆಯಾಗಿದೆ. ಇದರಲ್ಲಿ ಕವಿಕುಲಗುರು ಕಾಳಿದಾಸನು – ಮಮಾಪಿ ಚ ಕ್ಷಪಯತು ನೀಲಲೋಹಿತಃ ಪುನರ್ಭವಂ ಪರಿಗತಶಕ್ತಿರಾತ್ಮಭೂಃ - ಭಗವಂತನಾದನೀಲಲೋಹಿತನು(ಶಂಕರನು) ನನ್ನ ಸಂಸಾರಸಂಸೃತಿಯನ್ನು ನಾಶಮಾಡಿ ಮೋಕ್ಷವನ್ನುಂಟುಮಾಡಲೆಂದುಕೇಳಿಕೊಳ್ಳುತ್ತಾನೆ. ಶೃಂಗಾರಾದಿ ರಸಗಳನ್ನು ವಾಚಕನು ಆಸ್ವಾದಿಸುವಂತೆ ಮಾಡಿ ಕಟ್ಟಕಡೆಯಲ್ಲಿ ಭಗವದ್ರಸದಲ್ಲಿಒಂದಾಗುವಂತೆ ಮಾಡಿ ಜೀವನದ ಸಾರ್ಥಕ್ಯವನ್ನುಂಟುಮಾಡಿ ಜೀವನದ ಪರಮಲಕ್ಷ್ಯವಾದ ಮೋಕ್ಷದಲ್ಲಿ ನಿಲ್ಲಿಸಿದ್ದಾನೆಕವಿ ಕಾಳಿದಾಸ. ಆದ್ದರಿಂದಲೇ 'ಕಾವ್ಯಾನಂದವು ಬ್ರಹ್ಮಾನಂದದ ಸಹೋದರ'ವೆಂದು ಖ್ಯಾತವಾಗಿದೆ.

ಸೂಚನೆ : 24/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ  ಅಂಕಣದಲ್ಲಿ ಪ್ರಕಟವಾಗಿದೆ.