ಮಾನವಶರೀರದ ಮರ್ಮವನ್ನು ತಿಳಿದಿದ್ದ ಶ್ರೀರಂಗಮಹಾಗುರುಗಳು, 'ಮಾನವಶರೀರವು ಕೇವಲ ಭೋಗಾಯತನವೇ ಅಲ್ಲ.ಇದು ಯೋಗಾಯತನವೂ ಅಹುದು. ಭಗವಂತ ಕೊಟ್ಟಿರುವ ಇಂದ್ರಿಯಗಳ ದ್ವಾರಾ ಪ್ರಾಪಂಚಿಕ ಸುಖಸಾಧನಗಳನ್ನುಬಳಸಿಕೊಂಡು ಹೊರಬದುಕನ್ನು ನಡೆಸಲು ಶರೀರವು ಭೋಗಾಯತನವಾಗಿದೆ. ಹಾಗೆಯೇ ಮಾನವ ಜೀವನದಪರಮೋನ್ನತವಾದ ಲಕ್ಷ್ಯವಾದ ಅಂತಃಸುಖವನ್ನು ಒದಗಿಸಬಲ್ಲ, ಆತ್ಮದರ್ಶನವನ್ನು ಮಾಡಿಸಬಲ್ಲ ಒಳಜೀವನವನ್ನುನಡೆಸಲು ಭೋಗಾಯತನವೂ ಆಗಿದೆ ಮಾನವಶರೀರ' ಎಂದು ತಿಳಿಹೇಳುತ್ತಿದ್ದರು.ಹೊರಬದುಕಿಗೆ ಬೇಕಾಗುವ ವ್ಯವಹಾರವನ್ನು ತಿಳಿಸುವುದಷ್ಟೇ ಕಾವ್ಯದ ಪ್ರಯೋಜನವಲ್ಲ. ಒಳಜೀವನಕ್ಕೆ ಪೋಷಕವಾದ,ಮೋಕ್ಷಮಾರ್ಗದಲ್ಲಿ ಮುನ್ನಡೆದು ಒಳಬೆಳಕಿನ ದರ್ಶನಕ್ಕೆ ಬೇಕಾದ ನಡೆ, ವ್ಯವಹಾರವನ್ನೂ ಕಾವ್ಯಗಳು ತಿಳಿಸಿಕೊಡುತ್ತವೆ.ಮೋಕ್ಷಮಾರ್ಗಕ್ಕೆ ಅಡ್ಡಿಯನ್ನುಂಟುಮಾಡುವ, ತಿಳಿದೋ ತಿಳಿಯದೆಯೋ ಮಾಡುವ ಅಪರಾಧಗಳ ಬಗ್ಗೆ ಎಚ್ಚರವಹಿಸುವಂತೆಅಲ್ಲಲ್ಲಿ ಉಪದೇಶಿಸಿರುವುದನ್ನು ಕಾಣಬಹುದು. ಕೆಲವು ಪ್ರಸಂಗಗಳನ್ನು ವಾಚಕರ ಮುಂದಿಡುವ ಪ್ರಯತ್ನ ಇದಾಗಿದೆ.ಅಭಿಜ್ಞಾನಶಾಕುಂತಲದ ಪ್ರಸಂಗ. ಕಣ್ವಮಹರ್ಷಿಗಳ ಆಶ್ರಮದಲ್ಲಿ, ದುಷ್ಯಂತನು ಶಕುಂತಲೆಯನ್ನು ನೋಡಿ ಅವಳಲ್ಲಿಅನುರಕ್ತನಾಗಿದ್ದಾನೆ. ಮತ್ತೆ ಅವಳನ್ನು ನೋಡಬೇಕೆಂದು ಇಚ್ಚೆಪಡುತ್ತಾನೆ. ಆದರೂ ಕಾರಣವಿಲ್ಲದೆ ಆಶ್ರಮಕ್ಕೆ ಹೇಗೆಹೋಗುವುದು? ಅಲ್ಲಿರುವ ಋಷಿಮಹರ್ಷಿಗಳು ಏನೆಂದುಕೊಂಡಾರು? ಎಂಬ ಚಿಂತೆ. ಸೇನಾಪತಿಯು 'ಮಹರ್ಷಿಗಳಿಂದಕರವಸೂಲಿ' ಎಂಬ ನೆಪವೊಡ್ಡಿ ಹೋಗಬಹುದೆಂಬ ಸಲಹೆ ಕೊಡುತ್ತಾನೆ. ಅದಕ್ಕೆ ದುಷ್ಯಂತನು ' ಶ್ರೀಸಾಮಾನ್ಯರಿಂದವಸೂಲು ಮಾಡುವ ಕರವು ದೇಶದ ಅನೇಕ ಕೆಲಸಗಳಿಗೆ ಉಪಯೋಗಿಸಲ್ಪಟ್ಟು ಕ್ಷಯಿಸುವುದು. ಆದರೆ, "ತಪಃಷಡ್ಭಾಗಮಕ್ಷಯ್ಯಂ ದದತ್ಯಾರಣಕಾ ಹಿ ನಃ" – ಋಷಿಗಳು ಕ್ಷಯಿಸದೇ ಇರುವ ತಮ್ಮ ತಪಸ್ಸಿನ ಫಲದ ಆರನೇ ಒಂದುಭಾಗವನ್ನು ದೇಶಕ್ಕಾಗಿ ಕೊಡುತ್ತಾರೆ. ಅಲ್ಲದೇ, ಅವರು ಯಾವಾಗಲೂ ಕ್ಷಮಾಪ್ರಧಾನರು. ಹಾಗೆಂದ ಮಾತ್ರಕ್ಕೇ ಅವರೊಡನೆಹೇಗೆ ಬೇಕಾದರೂ ವರ್ತಿಸಬಹುದೆಂದಲ್ಲ. ಸುಡಬಲ್ಲ ತೇಜಸ್ಸು ಅವರಲ್ಲಿ ಗೋಪ್ಯವಾಗಿ ಇದ್ದೇ ಇರುತ್ತೆ. ಭೂತಕನ್ನಡಿಯನ್ನುಯಾರು ಬೇಕಾದರೂ ಮುಟ್ಟಬಹುದು. ಆದರೆ, ಅದರ ಮೇಲೆ ಮತ್ತೊಂದು ತೇಜಸ್ಸಿನ ಸಂಪರ್ಕವುಂಟಾದರೆ ಹೇಗೆಸುಡುತ್ತದೋ ಹಾಗೆಯೇ 'ತದನ್ಯ ತೇಜೋಭಿಭವಾತ್ ವಮಂತಿ' ಋಷಿಗಳ ವಿಷಯದಲ್ಲಿ ಅವರಿಗೆ ಸಮ್ಮತವಲ್ಲದ ನಡೆಯುವಿರುದ್ಧ ಪರಿಣಾಮವನ್ನು ಉಂಟುಮಾಡುತ್ತದೆ ಎಂದು ಎಚ್ಚರಿಕೆ ನೀಡುವ ದುಷ್ಯಂತನ ಧರ್ಮಪ್ರಜ್ಞೆಆಶ್ಚರ್ಯವನ್ನುಂಟುಮಾಡುತ್ತದೆ ಮತ್ತು ಅವನಲ್ಲಿ ಗೌರವಭಾವವನ್ನು ಮೂಡಿಸುತ್ತದೆ. ಮತ್ತು ಋಷಿಗಳ ವಿಷಯದಲ್ಲಿನಮಗಿರಬೇಕಾದ ಎಚ್ಚರವನ್ನು ತಿಳಿಸಿಕೊಡುತ್ತದೆ.
ಆತ್ಮಪ್ರಶಂಸೆಯೂ ಮತ್ತು ಪರನಿಂದೆಯೂ ಸಮವಾದ ಪಾಪವೆಂದು ಸ್ಮೃತಿಕಾರರು ಹೇಳುತ್ತಾರೆ. ಪರನಿಂದೆ, ಅದರಲ್ಲಿಯೂಮಹಾತ್ಮರ ನಿಂದೆಯು ಸಾಧಕನಿಗೆ ಮೋಕ್ಷಮಾರ್ಗದಲ್ಲಿ ವಿಘ್ನವಾಗಿ ಪರಿಣಮಿಸುತ್ತದೆ ಎಂಬ ಮಾತು ಕುಮಾರಸಂಭವದಲ್ಲಿಕಾಣಿಸುತ್ತದೆ. ಪಾರ್ವತಿಯ ತಪೋಭೂಮಿಯನ್ನು ಪ್ರವೇಶಿಸಿದ ಬ್ರಹ್ಮಚಾರಿಯು ಪಾರ್ವತಿಯು ಶಿವನನ್ನು ಪತಿಯನ್ನಾಗಿಪಡೆಯಬೇಕೆಂದು ತಪಸ್ಸನ್ನು ಮಾಡುತ್ತಿರುವುದಾಗಿ ತಿಳಿದು, ಶಿವನು ನಿಂದಿಸುತ್ತಾನೆ. ಇದರಿಂದ ಸಿಟ್ಟಾದ ಪಾರ್ವತಿಯು ''ಬುದ್ಧಿಹೀನರು ಲೋಕಸಾಮಾನ್ಯವಲ್ಲದ ಮತ್ತು ತರ್ಕಕ್ಕೂ ಸಿಗದ ಮಹಾತ್ಮರ ನಡೆಯನ್ನು ದ್ವೇಷಿಸುತ್ತಾರೆ. ' ನ ಕೇವಲಂಯೋ ಮಹತೋಽಪಭಾಷತೇ ಶೃಣೋತಿ ತಸ್ಮಾದಪಿ ಯಃ ಸ ಪಾಪಭಾಕ್' ಎಂದರೆ, ಮಹಾತ್ಮರ ನಿಂದೆಯನ್ನುಮಾಡುವವರಷ್ಟೇ ಅಲ್ಲದೆ, ಅದನ್ನು ಯಾರು ಕೇಳುತ್ತಾರೋ ಅವರೂ ಕೂಡ ಪಾಪಕ್ಕೆ ಭಾಗಿಗಳಾಗುತ್ತಾರೆ ಎಂಬ ಎಚ್ಚರಿಕೆಯಮಾತನ್ನು ಹೇಳುತ್ತಾಳೆ.ಜಗತ್ತೆಲ್ಲವೂ ಪುಂಪ್ರಕೃತಿಸ್ವರೂಪವಾಗಿದೆ. ಸಾಮಾನ್ಯವಾಗಿ ಇಹಲೋಕದ ವ್ಯವಹಾರವು ಸ್ತ್ರೀಪುರುಷರ ಸಮಾಗಮದಿಂದಆಗಬೇಕಿದೆ. ಪುರುಷನಿಗಿರುವ ಪ್ರಾಮುಖ್ಯ ಸ್ತ್ರೀಗೂ ಇದ್ದೇ ಇದೆ. ಪ್ರಕೃತಿಸ್ವರೂಪಿಣಿಯರಾದ ಸ್ತ್ರೀಯರನ್ನು ಸಮಾಜದಲ್ಲಿಹೇಗೆ ನಡೆಸಿಕೊಳ್ಳಬೇಕೆಂಬುದು ಸ್ಮೃತಿಕಾರರ – 'ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ' ಎಂಬ ಮಾತುಅತ್ಯಂತ ಪ್ರಸಿದ್ಧವಾಗಿದೆ. ನಮ್ಮ ಕಾವ್ಯಗಳಲ್ಲಿಯೂ ಸಹ ಸ್ತ್ರೀಯರನ್ನು ಅತ್ತ್ಯಂತ ಗೌರವದಿಂದ ನಡೆಸಿಕೊಂಡಿರುವುದಕ್ಕೆಅನೇಕ ಪ್ರಸಂಗಗಳನ್ನು ಉದ್ಧರಿಸಿ ಹೇಳಬಹುದು. 'ಮುದ್ರಾರಾಕ್ಷಸ' ವೆಂಬ ನಾಟಕದಲ್ಲಿ ಸೂತ್ರಧಾರನು ತನ್ನಸಹಧರ್ಮಿಣಿಯಾದ ನಟಿಯನ್ನು ಕುರಿತು ಹೇಳುವಾಗ ಗುಣವತೀ, ಉಪಾಯಗಳ ತವರು, ತ್ರಿವರ್ಗಗಳ ಸಾಧಕಳು, ಗೃಹದರೀತಿ-ನೀತಿ-ಸಂಪ್ರದಾಯಗಳನ್ನು ಚೆನ್ನಾಗಿ ಬಲ್ಲವಳು, ಕಾರ್ಯದಲ್ಲಿ ಚತುರೆಯು ಎಂದು ಮುಂತಾದ್ದಾಗಿ ವರ್ಣಿಸುತ್ತಾನೆ.ಸದ್ಗೃಹಿಣಿಯರು ತಮ್ಮ ಪ್ರಭಾವವನ್ನು ಬೇರೆಯವರ ಮೇಲೂ ಬೀರುತ್ತಾರೆಂಬುದಕ್ಕೆ ಶಿವನೇ ಉದಾಹರಣೆ. ವಸಿಷ್ಠರಪತ್ನಿಯಾದ ಅರುಂಧತಿಯನ್ನು ನೋಡಿದ ಕೂಡಲೇ ಶಿವನಿಗೂ ಗೃಹಸ್ಥನಾಗಬೇಕೆಂಬ ಗೌರವವುಂಟಾಗುತ್ತದೆ. ಇದರಕಾರಣವನ್ನು ವಿವರಿಸುತ್ತಾ ಕವಿಕುಲಗುರು ಕಾಳಿದಾಸನು 'ಕ್ರಿಯಾಣಾಂ ಖಲು ಧರ್ಮ್ಯಾಣಾಂ ಸತ್ಪತ್ನ್ಯೋ ಮೂಲಕಾರಣಮ್'-'ಧರ್ಮಕಾರ್ಯಗಳಿಗೆ ಸದ್ಗೃಹಿಣಿಯರೇ ಮೂಲಕಾರಣರು' ಎಂದು ತನ್ನ ಕುಮಾರಸಂಭವದಲ್ಲಿ ಹೇಳುತ್ತಾನೆ.ವಿವಾಹಸಂಬಂಧದ ಮಾತುಕಥೆಗಳಲ್ಲಿ ಅರುಂಧತಿಯೂ ಪಾತ್ರವಹಿಸಬೇಕೆಂದು ಈಶ್ವರನು ತಿಳಿಸುತ್ತಾ, 'ಪ್ರಾಯೇಣೈವಂವಿಧೇ ಕಾರ್ಯೇ ಪುರಂಧ್ರೀಣಾಂ ಪ್ರಗಲ್ಭತಾ'- 'ಪ್ರಾಯಃ ಈ ರೀತಿಯ ವಿವಾಹಕಾರ್ಯಗಳಲ್ಲಿ ಸ್ತ್ರೀಯರಿಗೆವಾಕ್ಪಟುತ್ವವಿರುತ್ತದೆಂದು' ಹೇಳುತ್ತಾನೆ. ಹಾಗೆಯೇ, ಶಿವಪಾರ್ವತಿಯರ ವಿವಾಹಪ್ರಸ್ತಾವವನ್ನು ವಸಿಷ್ಠರೇ ಮೊದಲಾದಸಪ್ತರ್ಷಿಗಳು ಹಿಮವಂತನ ಮುಂದೆ ಮಂಡಿಸಿದಾಗ ತನಗೆ ಸಮ್ಮತಿಯಿದ್ದರೂ ತನ್ನ ಪತ್ನಿಯಾದ ಮೇನೆಯ ಸಮ್ಮತಿಯನ್ನುಪಡೆಯಲು ಅವಳತ್ತ ನೋಡುತ್ತಾನೆ. ಆ ಸಂದರ್ಭದ ' ಪ್ರಾಯೇಣ ಗೃಹಿಣೀನೇತ್ರಾಃ ಕನ್ಯಾರ್ಥೇಷು ಕುಟುಂಬಿನಃ','ಪ್ರಾಯಃಗೃಹಸ್ಥರು ತಮ್ಮ ಮಗಳ ವಿವಾಹದ ವಿಷಯದಲ್ಲಿ ತಮ್ಮ ಪತ್ನಿಯರನ್ನೇ ಕಣ್ಣಾಗಿ ಉಳ್ಳವರಾಗಿರುತ್ತಾರೆ' ಎಂಬ ಕಾಳಿದಾಸನಮಾತು ಎಷ್ಟು ಸಹಜವಾಗಿದೆ !
ಅಮಂಗಳನಾಶಕ್ಕಾಗಿ ಕಾವ್ಯಗಳುಕಾವ್ಯಗಳ ನಾಲ್ಕನೇ ಪ್ರಯೋಜನವೇ ಅಮಂಗಳದ ನಾಶ. ಅಮಂಗಳಗಳು ಅಥವಾ ಕಷ್ಟಕಾರ್ಪಣ್ಯಗಳು,ರೋಗರುಜಿನಗಳು ಮನುಷ್ಯನಿಗೆ ಬರುವುದು ಅವನೇ ಮಾಡಿದ ಪಾಪಕರ್ಮಗಳಿಂದ. ಸಾಮಾನ್ಯವಾಗಿ ಮಾನವರುಪುಣ್ಯದ ಫಲಗಳಿಗೆ ಆಸೆಪಡುತ್ತಾರೆ. ಆದರೆ ಪುಣ್ಯಗಳನ್ನು ಹುಟ್ಟುಹಾಕುವ ಕರ್ಮಗಳನ್ನು ಮಾಡುವುದಿಲ್ಲ. ಪಾಪಕರ್ಮಗಳಫಲವಾದ ದುಃಖವನ್ನು ಎಂದೆಂದಿಗೂ ಇಚ್ಛಿಸುವುದಿಲ್ಲ. ಆದರೆ, ಪ್ರಯತ್ನಪೂರ್ವಕವಾಗಿ ಪಾಪಕರ್ಮಗಳನ್ನೇ ಮಾಡುತ್ತಾರೆ.ಈ ಪಾಪಕರ್ಮಗಳ ಪ್ರಾಯಶ್ಚಿತ್ತರೂಪವಾಗಿ, ಜಪಗಳನ್ನು, ಹೋಮಗಳನ್ನು ಮತ್ತು ದಾನಾದಿಗಳನ್ನು ಮಾಡಿಕೊಂಡು ಪಾಪವನ್ನು ಹೋಗಲಾಡಿಸಿಕೊಳ್ಳುತ್ತಾರೆ. ಹಾಗೆಯೇ, ದೇವತೆಗಳನ್ನು ಸ್ತುತಿಸಿ, ತಮ್ಮ ಕಷ್ಟಗಳನ್ನು ನಿವಾರಣೆಮಾಡಿಕೊಂಡಿರುವುದೂ ಕಾಣಬರುತ್ತದೆ. ಮಯೂರನೆಂಬ ಕವಿಯು ಸೂರ್ಯಶತಕವೆಂಬ ಕಾವ್ಯವನ್ನು ರಚಿಸಿ, 'ಆರೋಗ್ಯಂಭಾಸ್ಕರಾದಿಚ್ಚೇತ್' ಎಂಬಂತೆ ಸೂರ್ಯದೇವನ ಅನುಗ್ರಹದಿಂದ ತನ್ನನ್ನು ಪೀಡಿಸುತ್ತಿದ್ದ ರೋಗದಿಂದ ಮುಕ್ತನಾದನೆಂದುತಿಳಿದುಬರುತ್ತದೆ.
ಸೂಚನೆ : 17/4/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.