ಆಶಾ ಸೋಮಯಾಜಿ
(ಪ್ರತಿಕ್ರಿಯಿಸಿರಿ lekhana@ayvm.in)
ಆಧ್ಯಾತ್ಮಜೀವನವನ್ನು ನಡೆಸುವುದೆಂದರೆ ಒಳಬೆಳಗುವ ಆತ್ಮನಿಗೆ ಅನುಗುಣವಾಗಿ ಬಾಳುವುದು ಎಂಬುದು ಜ್ಞಾನಿಗಳ ಮಾತು. ಅದಕ್ಕಾಗಿ ತಪಸ್ಸು,ಸಾಧನೆ, ಅನುಷ್ಠಾನ ಎಲ್ಲವೂ ಬೇಕು. ಅನುಷ್ಠಾನಪರರು, ವಿದ್ವಾಂಸರು ವೇದಾದಿ ವಿದ್ಯೆಗಳನ್ನು ಅಭ್ಯಾಸ ಮಾಡಿ ಆಧ್ಯಾತ್ಮಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಇನ್ನು ಮನೆಯ ಗೃಹಸ್ಥರು ನಿತ್ಯ ಪೂಜಾ ಪಾಠಗಳಿಂದ ವೇದ ಪಾರಾಯಣದಿಂದ ಅದನ್ನುತಿಳಿದು ಹೊಂದಲು ಪ್ರಯತ್ನಿಸುತ್ತಾರೆ.ಎಲ್ಲರೂ ಆಧ್ಯಾತ್ಮ ಜೀವನವನ್ನು ತಮ್ಮ ನೆಮ್ಮದಿಗಾಗಿ ಅಪೇಕ್ಷಿಸಲೇ ಬೇಕು. ಹಾಗಾದರೆ ಸ್ತ್ರೀಯರಿಗೆ ಆಧ್ಯಾತ್ಮ ಜೀವನಬೇಡವೇ? ಅವರ ಗೃಹಕೃತ್ಯಗಳಲ್ಲಿ ಮೇಲೆ ಹೇಳಿದಂತೆ ಮಾಡಲು ಅವರಿಗೆ ಸಮಯವೇ ಸಿಕ್ಕದಲ್ಲಾ? ಇನ್ನು ದುಡಿಯುವಮಹಿಳೆ ಆದರಂತೂ ಕೇಳುವುದೇ ಬೇಡ. ಸ್ತ್ರೀಯರು ಆಧ್ಯಾತ್ಮ ಜೀವನವನ್ನು ತಮ್ಮದಾಗಿಸಿಕೊಳ್ಳುವುದು ಹೇಗೆ ಎಂಬ ಪ್ರಶ್ನೆಪ್ರಸ್ತುತವಾಗಿದೆ.
ಭಾರತೀಯರ ಜೀವನ ವಿಧಾನವನ್ನು ನಮ್ಮ ಮಹರ್ಷಿಗಳು ಸ್ತ್ರೀ-ಪುರುಷರೆಲ್ಲರಿಗೂ ಒಳ-ಹೊರ ಜೀವನಕ್ಕೆಅನುಕೂಲವಾಗುವಂತೆಯೇ ರೂಪಿಸಿದ್ದಾರೆ ಎಂಬುದನ್ನು ನಾವು ಮರೆಯಲಾಗದು. ಸ್ತ್ರೀಯರ ದಿನಚರಿಯಲ್ಲಿಯೇ ಭಗವಂತನನ್ನುಹೆಜ್ಜೆ ಹೆಜ್ಜೆಯಲ್ಲಿಯೂ ಸ್ಮರಿಸುವ ಜೀವನ ವಿಧಾನ ನಮ್ಮದು. ನಮ್ಮ ದಿನ ಭಗವಂತನ ಸ್ಮರಣೆಯಿಂದಲೇ ಆರಂಭ. ಬೆಳಿಗ್ಗೆಕರಾಗ್ರೇ ವಸತೇ ಲಕ್ಷ್ಮೀಃ ಎಂದು ದಿನ ಆರಂಭವಾಗುತ್ತದೆ. ಒಳಗೆ ಬೆಳಗುವ ಪರಮಾತ್ಮನಿಗೆ ಅಭಿಷೇಕವೆಂಬಭಾವದಿಂದ ಸ್ನಾನ, ಅವನ ಸ್ಮರಣೆಯಿಂದ ಒಳ-ಹೊರ ಜೀವನದ ಮಧ್ಯ ಭಾಗವಾದ ಬಾಗಿಲಿನ ಹೊಸಲನ್ನು ತೊಳೆದು,ರಂಗವಲ್ಲಿಯಿಂದ ಸಿಂಗರಿಸಿ ಆತ್ಮಸೂರ್ಯನ ಪ್ರತಿನಿಧಿಯಾದ ಸೂರ್ಯದೇವನನ್ನು ಸ್ವಾಗತಿಸುತ್ತಾಳೆ. ನಂತರ ದೇವರಕೋಣೆಯನ್ನು ಶುಚಿಗೊಳಿಸಿ ತನ್ನಲ್ಲಿ ಬೆಳಗುವ ದೇವನ ಪ್ರತಿನಿಧಿಯಾದ ದೀಪವನ್ನು ಬೆಳಗುವವಳೂ ಅವಳೇ.ಪತಿಯು ಮಾಡುವ ಪೂಜೆಗೆ ಪುಷ್ಪ, ಪತ್ರ, ಹಣ್ಣುಗಳನ್ನು ಒದಗಿಸಿ ಸಹಾಯ ಮಾಡುತ್ತಾಳೆ . ತನ್ನ ಕುಟುಂಬದ ಶ್ರೇಯಸ್ಸಿಗಾಗಿತುಳಸಿ ಮಾತೆಯನ್ನು ಪೂಜಿಸಿ ನಂತರ ಅಡಿಗಡಿಗೂ ಗೋವಿಂದನ ಸ್ಮರಣೆ ಮಾಡುತ್ತ ಅಡುಗೆ ಪದಾರ್ಥಗಳನ್ನು ತಯಾರಿಸಿ-ಎಲ್ಲವೂ ನಿನ್ನದೇ ಎಂದು ಭಗವಂತನಿಗೆ ನಿವೇದಿಸಿ ಅದನ್ನು ಪ್ರಸಾದವನ್ನಾಗಿಸಿಕೊಂಡು ಮನೆಮಂದಿಗೆಲ್ಲಾ ಬಡಿಸಿ ತಾನೂಸ್ವೀಕರಿಸಿ ಸಂತೋಷ ಪಡುತ್ತಾಳೆ. ಶ್ರೀರಂಗ ಮಹಾಗುರುಗಳು - "ಗೃಹಿಣಿಯಾದವಳು ಏಕನಿಷ್ಠೆ ,ಪ್ರಾಮಾಣಿಕತೆ, ನಿರ್ಮಲವಾದಮನಸ್ಸಿನಿಂದ ತನ್ನ ಎಲ್ಲಾ ಗೃಹಕೃತ್ಯಗಳನ್ನು ಭಗವಂತನಿಗೆ ಅರ್ಪಿಸಿದ್ದಲ್ಲಿ ಅದು ಖಂಡಿತ ಅವನಿಗೆ ತಲುಪುತ್ತದೆ" ಎಂದಿರುವುದುಇಲ್ಲಿ ಸ್ಮರಣೀಯ.