Tuesday, March 16, 2021

ಕರ್ಮಯೋಗಿ ಪೂಜ್ಯ ಶ್ರೀಶಂಕ್ರಣ್ಣಯ್ಯ (ಜಿ.ಕೆ.ಶಂಕರರಾವ್) Karmayogi Pujya SrIsankrannayya (G.K.Sankararao)

  ಸಂಗ್ರಹ: ಶ್ರೀ ಎ. ಕೃಷ್ಣಮೂರ್ತಿ

ಪೂಜ್ಯ ಶ್ರೀಶಂಕ್ರಣ್ಣಯ್ಯ

(ಉಪಕಾರ್ಯದರ್ಶಿಗಳು, ಅ.ಯೋ.ವಿ.ಮಂ, ಬಸರೀಕಟ್ಟೆಶಾಖೆ - 1962 - 78)

(ಧನ್ಯಜೀವಿತಕಾಲ: 1934 – 1978)

ಪೂಜ್ಯ ಶ್ರೀ ಜಿ.ಕೆ. ಶಂಕರರಾಯರು ಬಹುಮುಖ ಪ್ರತಿಭೆಯ ಉತ್ಸಾಹಿ ಯುವಕರಾಗಿದ್ದವರು. ಅಚ್ಚುಕಟ್ಟಿಗೆ ಇನ್ನೊಂದು ಹೆಸರೇ ಶಂಕರರಾವ್. ಅವರು ಉತ್ತಮ ಅಧ್ಯಾಪಕರು; ಕಲಾವಂತರು; ನಿಷ್ಠಾವಂತ ಸೇವಾರ್ಥಿಗಳು; ಶಾಲೆಯ ಮಕ್ಕಳ ಕಣ್ಮಣಿ; ಕೊಳಲುವಾದಕರು; ಅಧ್ಯಾತ್ಮಜೀವಿಗಳು. ತಮ್ಮ ಅಧ್ಯಾತ್ಮ ಗುರುವಿಗೆ ನೆಚ್ಚಿನ ಶಿಷ್ಯರು. ಹಾಗೆಯೇ ವಿರಕ್ತರು ಮತ್ತು ತ್ಯಾಗಿಗಳು. ಅವರೊಬ್ಬರು ಜೊತೆಯಲ್ಲಿ ಇದ್ದರೆ ಹತ್ತು ಜನ ಇದ್ದಂತೆ. ಅವರು ಒಳ್ಳೆಯ ಕಾರ್ಯಪಟುಗಳು ಹಾಗೂ ಶ್ರೇಷ್ಠ ಸಂಘಟಕರು. ವಿನೋದಪ್ರಿಯರೂ ಹೌದು. ಸದಾ ಹಸನ್ಮುಖಿಗಳು, ಉತ್ಸಾಹಿಗಳು. ಸಂಸ್ಕೃತಿ ಪ್ರಿಯರಾದ ಆದರ್ಶ ನಾಯಕರು. ಸದ್ಗೃಹಸ್ಥರು. ಪರೋಪಕಾರ ಎನ್ನುವುದು ಅವರ ಹುಟ್ಟುಗುಣ. ತಮಗೆ ಎಷ್ಟೇ ಕಷ್ಟವಾದರೂ ಕೂಡ, ಬೇರೆಯವರ ಕಷ್ಟದಲ್ಲಿ ನೆರವಾಗುತ್ತಿದ್ದವರು. ಅವರು ಅತ್ಯಂತ ಸರಳ ವ್ಯಕ್ತಿಯಾಗಿದ್ದರು. ಕಷ್ಟಸಹಿಷ್ಣುಗಳಾಗಿದ್ದರು. ಅವರ ಉಪಕಾರ ಸ್ಮರಣೆಮಾಡಿದರೆ ಅವರದ್ದೊಂದೇ ಮಾತು- "ನಿಮಗೆ ಸಾಧ್ಯವಾದಾಗ ನೀವೂ ಬೇರೆಯವರಿಗೆ ಸಹಾಯಮಾಡಿ"

ಶ್ರೀಯುತರು ಪೂಜ್ಯರಾದ ಗುಡ್ಡೇತೋಟದ ಶ್ರೀ ಕೃಷ್ಣರಾಯರು ಮತ್ತು ಶ್ರೀಮತಿ ಸುಬ್ಬಲಕ್ಷ್ಮಿ ಇವರ ಎರಡನೆಯ ಪುತ್ರರು. ಅವರುಹುಟ್ಟಿದ್ದು, 8-1-1934 ರಲ್ಲಿ. ಕೃಷ್ಣರಾಯರದು 9 ಮಕ್ಕಳಿದ್ದ ತುಂಬು ಕುಟುಂಬ. ಅವರೆಲ್ಲರಿಗೂ ಶಂಕರರಾಯರು ಅಚ್ಚುಮೆಚ್ಚಿನವರು.

ಶಂಕರರಾಯರ ತಂಗಿ ಶ್ರೀಮತಿ ಶಾರದಾರವರು,- 'ಶಾಲೆಯು ಶ್ರೀಲಕ್ಷ್ಮೀಕಾಂತಜನಾರ್ದನಸ್ವಾಮಿ ದೇವಸ್ಥಾನದ ಆವರಣದಲ್ಲಿ ಇತ್ತು. ಬಸರೀಕಟ್ಟೆಯ ಸುತ್ತಮುತ್ತಲಿದ್ದ ಪುಟ್ಟ ಹಳ್ಳಿಯ ಮನೆಗಳವರ ಮದುವೆ ಸಮಾರಂಭ ಬಸರೀಕಟ್ಟೆಯ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿತ್ತು. ಆಗ ಶಂಕರರಾಯರು ಮಂಟಪದ ಅಲಂಕಾರದಿಂದ ಆರಂಭಿಸಿ ಮದುವೆ ಮುಗಿಯುವವರೆಗೂ ಆ ಮನೆಯವರಿಗೆ ಸಹಾಯ ಮಾಡುತ್ತಿದ್ದರು. ಹೀಗೆ, ಊರಿಗೆ, ಶಾಲೆಗೆ ದಣಿವರಿಯದೇ ದುಡಿಯುತ್ತಿದ್ದ ಅವರನ್ನು ಶಾಲೆಯ ವಿದ್ಯಾರ್ಥಿಗಳೇ ಅಲ್ಲದೇ ಊರಿನವರೂ 'ಶಂಕ್ರಣ್ಣಯ್ಯ' ಎಂದೇ ಕರೆಯುತ್ತಿದ್ದರು. ಅವರಿಗೆ ಯಾರೇ ಪರಿಚಿತರಾಗಲಿ ಅವರ ಸ್ವಭಾವಕ್ಕೆ ಹೊಂದಿಕೊಳ್ಳುತ್ತಿದ್ದರು ಮತ್ತು ಅವರ ಸಂಕೋಚವನ್ನು ಹೋಗಲಾಡಿಸುತ್ತಿದ್ದರು. ಸುತ್ತಮುತ್ತಲಿನ ಆಯಾಯಾ ಊರಿನವರು ಪ್ರೀತಿಯಿಂದ ಅವರ ಮನೆಗೆ ಬಂದು ಹೋಗುತ್ತಿದ್ದರು. ಬಂದವರು ತಮ್ಮ ಕಷ್ಟಸುಖಗಳನ್ನು ವಿಜ್ಞಾಪನೆ ಮಾಡಿಕೊಳ್ಳುತ್ತಿದ್ದರು. ಶಂಕರರಾಯರು ಅವರೆಲ್ಲರ ಕಷ್ಟ ಸುಖಗಳನ್ನು ಆಲಿಸಿ ಅವರಿಗೆ ಸಮಾಧಾನಕರವಾದ ಮಾತುಗಳನ್ನು ಆಡುತ್ತಿದ್ದರು ಮತ್ತು ಅವಶ್ಯಕತೆ ಇರುವವರಿಗೆ ಕೈಲಾದ ಸಹಾಯವನ್ನೂ ಮಾಡುತ್ತಿದ್ದರು. ಅವರೆಂದರೆ ವಿದ್ಯಾಶಾಲೆಯ ಸಂಸ್ಥಾಪಕರಾದ ಗುರುದಾಸ ದಂಪತಿಗಳಿಗೆ ತುಂಬಾ ಅಚ್ಚುಮೆಚ್ಚು.' ಎಂದು ನೆನೆಪಿಸಿಕೊಳ್ಳುತ್ತಾರೆ.      

ಶ್ರೀಮತಿ ಕಾತ್ಯಾಯನಿದತ್ತರವರು- 'ನನಗೆ ನನ್ನ ಚಿಕ್ಕಂದಿನಿಂದಲೂ ಪೂಜ್ಯ ಶ್ರೀಶಂಕರರಾಯರು ಪರಿಚಯ. ನಾನು ಅವರನ್ನು ಪ್ರೀತಿಯಿಂದಲೂ ಗೌರವದಿಂದಲೂ ಶಂಕ್ರಣ್ಣಯ್ಯನವರು ಎಂಬುದಾಗಿ ಕರೆಯುತ್ತಿದ್ದೆ. ಭಗವಂತನ ಗುಣಗಳಲ್ಲಿ ಒಂದಾದ ಪ್ರೀತಿ ಎಂಬುದು ಅವರಲ್ಲಿ ತುಂಬಾ ವ್ಯಕ್ತವಾಗುತ್ತಿತ್ತು. ಅವರು ಎಲ್ಲರನ್ನೂ ಒಂದೇ ಭಾವದಿಂದ ನೋಡುತ್ತಿದ್ದರು. ಆದುದರಿಂದ ನಾವು ಅವರನ್ನು ಆತ್ಮೀಯತೆಯಿಂದ 'ಅಣ್ಣನವರು' ಎಂದೇ ಕರೆಯುತ್ತಿದ್ದೆವು. ಅವರು ಅಸಾಮಾನ್ಯ ವ್ಯಕ್ತಿಗಳಾಗಿದ್ದರು. ಮಾತಿನಲ್ಲಿ ನಿಪುಣತೆ, ಮಾಡುವ ಕೆಲಸದಲ್ಲಿ ನಿಪುಣತೆ, ಕೆಲಸ ಮಾಡಿಸುವುದರಲ್ಲಿ ನಿಪುಣತೆ, ಹೀಗೆ ಎಲ್ಲದರಲ್ಲಿಯೂ ನಿಪುಣತೆಯುಳ್ಳ ಆದರ್ಶ ವ್ಯಕ್ತಿಗಳಾಗಿದ್ದರು. ಮತ್ತು ಈ ನಿಪುಣತೆಗಳನ್ನು ಭಗವತ್ಕಾರ್ಯಕ್ಕಾಗಿ ವಿನಿಯೋಗಿಸಿದ ಮಹಾನುಭಾವರಾಗಿದ್ದರು. ಅವರಲ್ಲಿದ್ದ ಗುಣಗಳಲ್ಲಿ ಒಂದನ್ನಾದರೂ ಅಳವಡಿಸಿಕೊಂಡರೆ ಜೀವನದಲ್ಲಿ ನಾವು ಸಫಲತೆಯನ್ನು ಪಡೆಯಬಹುದು ಎಂದೆನಿಸುತ್ತದೆ.'ಎನ್ನುತ್ತಾರೆ.  

ತಂಗಿ ಶಾರದಾರವರು- 'ನಮ್ಮ ಅಣ್ಣ ಶಂಕ್ರಣ್ಣಯ್ಯನವರದು ಚಿಕ್ಕಂದಿನಿಂದಲೇ ಸುಟಿಯಾದ ಪ್ರಕೃತಿ. ತಮ್ಮ ಎಂಟನೆಯ ವಯಸ್ಸಿನಲ್ಲಿಯೇ ಒಂದು ಸಭೆಯಲ್ಲಿ, ಹರಿಕಥೆ ಮಾಡಿದ್ದರೆಂದು ನಮ್ಮ ತಾಯಿಯವರು ಹೇಳುತ್ತಿದ್ದರು. ಅವರ ಮೊದಲ ವಿದ್ಯಾಭ್ಯಾಸ ಅವರ ಅಣ್ಣಂದಿರೊಡನೆ ಬೆಂಗಳೂರಿನ ಕೆಂಗೇರಿ ಆಶ್ರಮದಲ್ಲಾಯಿತು. ನಂತರ ಶಿವಮೊಗ್ಗದಲ್ಲಿ ಎಸ್. ಎಸ್.ಎಲ್.ಸಿ ಓದಿ,ನಂತರ, ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ 1954ನೇ ಇಸವಿಯಲ್ಲಿ ಬಿ.ಎಸ್. ಸಿ ಡಿಗ್ರಿ ಪದವಿಯಲ್ಲಿ ಮೊದಲನೇ ಸ್ಥಾನ ಪಡೆದರು. ನಂತರ, ನಮ್ಮ ತಂದೆಯವರ ಅಪೇಕ್ಷೆಯಂತೆ ಬ್ಯಾಂಕಿನಲ್ಲಿ ಉದ್ಯೋಗವೂ ಸಿಕ್ಕಿತು. ಅಷ್ಟರಲ್ಲಾಗಲೇ ಅವರಿಗೆ ಶ್ರೀ ರಾಮಕೃಷ್ಣ ಗುರುದಾಸರ ಪರಿಚಯವೂ ಆಗಿತ್ತು. ಪೂಜ್ಯ ಗುರುದಾಸರು ಋಷಿಮುನಿಗಳು ಸಾರಿದ 'ಆತ್ಮ ಸಾಕ್ಷಾತ್ಕಾರವೇ ಜೀವನದ ಪರಮಗುರಿ' ಎಂಬುದನ್ನು ಮನಗಂಡು ಅದನ್ನೇ ಶ್ರೀಸದ್ಗುರು ವಿದ್ಯಾಶಾಲೆಯ ಶಿಕ್ಷಣದಲ್ಲಿ ಅಳವಡಿಸಿದ್ದರು. ಈ ಶಾಲೆಯಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಅವಕಾಶವಿತ್ತು. 5ನೇ ತರಗತಿಯಿಂದ 10ನೇ ತರಗತಿಯವರೆಗೆ ಇಲಾಖಾ ನಿಯಮದ ಪಠ್ಯಕ್ರಮದ ಜೊತೆಗೆ ಸಂಗೀತ, ಸಂಸ್ಕೃತ, ಭಜನೆ, ರಾಮಾಯಣ, ಮಹಾಭಾರತ, ಭಗವದ್ಗೀತೆ, ವೇದ, ಉಪನಿಷತ್ ಇತ್ಯಾದಿ ವಿಷಯಗಳನ್ನು ಅಳವಡಿಸಿದ್ದರು. ಇದರಿಂದ ಆಕರ್ಷಿತರಾದ ಶಂಕರರಾಯರು ಮನೆಯಲ್ಲಿ ಪ್ರತಿರೋಧವಿದ್ದರೂ ಒಪ್ಪಿಸಿ, ಬ್ಯಾಂಕ್  ಕೆಲಸ ಬಿಟ್ಟು ಶ್ರೀ ಸದ್ಗುರು ವಿದ್ಯಾಶಾಲೆಯಲ್ಲಿ ಯಾವ ಪ್ರತಿಫಲಾಪೇಕ್ಷೆಯೂ ಇಲ್ಲದೆ ನಮ್ಮ ತಂದೆಯವರ ವಿರೋಧದ ನಡುವೆಯೂ ಅಧ್ಯಾಪಕರಾಗಿ ಸೇವಾ ವೃತ್ತಿ ಕೈಗೊಂಡರು. ಬಸ್ಸಿನ ಸೌಕರ್ಯವಿಲ್ಲದಿದ್ದಾಗ ಗುಡ್ಡೇತೋಟದಿಂದ ಬಸರೀಕಟ್ಟೆಗೆ ಎಂಟು ಮೈಲಿ ದೂರವನ್ನು ಯಾತಾಯಾತ ಕಾಲ್ನಡಿಗೆಯಿಂದಲೇ ಕ್ರಮಿಸುತ್ತಿದ್ದರು.'ಎಂದು ಅವರನ್ನು ನೆನೆಪಿಸಿಕೊಳ್ಳುತ್ತಾರೆ. 

ಪೂಜ್ಯ ಗುರುದಾಸರ ಮಗಳು ಶ್ರೀಮತಿ ವಿಜಯವಲ್ಲೀ,- 'ಬಸರೀಕಟ್ಟೆಯ ಶ್ರೀಸದ್ಗುರು ವಿದ್ಯಾಶಾಲೆಯು ಶ್ರೀ ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಸ್ಥಾನದ ಆವರಣದಲ್ಲಿ ಶ್ರೀರಂಗಮಹಾಗುರುಗಳ ಸತ್ಸಂಕಲ್ಪದಂತೆ 1952 ರಿಂದ ನಡೆಯುತ್ತಿದ್ದುದೆಲ್ಲವೂ ಗತಕಾಲದವೈಭವ.

ನನ್ನ ಬಾಲ್ಯವನ್ನು ನೆನೆಸಿಕೊಂಡರೆ ನನಗೆ ಬುದ್ಧಿ ತಿಳಿದಾಗಿನಿಂದಲೂ ತಂದೆತಾಯಿಯರ ಜೊತೆ ಶಂಕ್ರಣ್ಣಯ್ಯನವರನ್ನು ನೋಡಿದ ನೆನೆಪಿದೆ, ಕಾರಣ ದೇವಸ್ಥಾನದ ಎದುರಿನ ಕಟ್ಟಡವೇ ಅವರ ಮನೆಯಾಗಿತ್ತು. ಅದನ್ನು 'ಮೇಷ್ಟ್ರಮನೆ' ಎಂದೇ ಕರೆಯುವ ರೂಢಿ ಇವತ್ತಿಗೂ ಇದೆ.  

ಶಂಕ್ರಣ್ಣಯ್ಯನವರ ಹುಟ್ಟೂರು ಬಸರೀಕಟ್ಟೆಯಿಂದ 10-12 ಕಿ. ಮಿ. ದೂರದ ಗುಡ್ಡೇತೋಟ ಎಂಬ ಹಳ್ಳಿ. ಅವರು ವಿದ್ಯಾಶಾಲೆಗೆ ಬಂದು ಸೇರಿದುದು ಯಾವುದೋ ಋಣಾನುಬಂಧದಿಂದ ಎನಿಸುತ್ತದೆ. ಅವರು ನಮ್ಮ ತಂದೆಗೆ ಬಸರೀಕಟ್ಟೆಗೆ ಬರುವ ಮೊದಲು ಬರೆದಿದ್ದ ಪತ್ರವನ್ನು ಓದಿದ ನೆನಪಾಗುತ್ತದೆ. ವಿಷಯವೇನೆಂದರೆ ಅವರು ಆ ಕಾಲದಲ್ಲೇ ಪದವೀಧರರಾಗಿದ್ದು ಅದಕ್ಕೆ ತಕ್ಕುದಾದ ಸರ್ಕಾರಿ ಕೆಲಸವು ದೊರೆಯುವ ಅವಕಾಶವಿದ್ದರೂ ಅವರಿಗೆ ಅದರಲ್ಲಿ ಆಕರ್ಷಣೆ ಇರದಿದ್ದುದು. ಅವರ ಮಾತಿನಲ್ಲೇ ಬರೆಯುವುದಾದರೆ 'ಸ್ವಾಮಿ, ನಾನು ನಿಮ್ಮಲ್ಲಿಗೆ ಬಂದು ವಿದ್ಯಾಶಾಲೆಯಲ್ಲಿ ಸೇವೆ ಸಲ್ಲಿಸಬೇಕೆಂದು ನನ್ನ ಮನಸ್ಸು ಕಾತರಿಸುತ್ತಿದೆ. ಇದಲ್ಲದೆ ನನಗಿನ್ನಾವುದರಲ್ಲೂ ಮನಸ್ಸು ಹತ್ತುತ್ತಿಲ್ಲ. ನಿಮ್ಮಲ್ಲಿಗೆ ಬಂದು ಸೇರಬೇಕೆಂದು ನಾನು ದಿನವೂ ನಮ್ಮ ಮನೆಯ ಬಳಿ ಇರುವ ಬೆಟ್ಟದಲ್ಲಿ ಕುಳಿತು ಪ್ರಾರ್ಥಿಸುತ್ತಿದ್ದೇನೆ...' —ಇತ್ಯಾದಿ. 

ನಮ್ಮ ಹಾಗೂ ಶಂಕ್ರಣ್ಣಯ್ಯನವರ ಕುಟುಂಬದ ಒಡನಾಟ ತುಂಬಾ ಅನ್ಯೋನ್ಯವಾಗಿತ್ತು. ಅವರ ಮಗ ಶ್ರೀನಿವಾಸ, ನಾನು ಸಮವಯಸ್ಕರು. ನಾವಿಬ್ಬರೂ ಒಂದೇ ಶಾಲೆಯಲ್ಲಿ ಬಾಲ್ಯದಿಂದಲೂ ಓದಿದವರು. ದಿನವೂ ಆಟಪಾಟಗಳನ್ನಾಡುತ್ತಿದ್ದೆವು. ಅವನಿಗೇನಾದರೂ ಆಟದ ಸಾಮಾನು ತಂದರೆ ನನಗೂ ಅದೇ ರೀತಿಯದು ಸಿಗುತ್ತಿತ್ತು. ನಮ್ಮ ತಂದೆಯವರು ಮಿತಭಾಷಿಗಳು. ಅವರು ಲೌಕಿಕ ವ್ಯವಹಾರದಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುತ್ತಿರಲಿಲ್ಲ. ಆದುದರಿಂದ ಶಾಲೆಯ ಆಡಳಿತದ ಜವಾಬ್ದಾರಿಯನ್ನು ಶಂಕ್ರಣ್ಣಯ್ಯನವರೇ ವಹಿಸಿದ್ದರು. ನನ್ನನ್ನು ಮೈಸೂರಿನಲ್ಲಿ ಕಾಲೇಜಿಗೆ ಸೇರಿಸಲು ಅವರೇ ಬಂದಿದ್ದರು. ಹಾಗಾಗಿ ಅವರಲ್ಲಿ ತುಂಬಾ ಸಲುಗೆ ಇದ್ದು ನಮಗೆ ಚಿಕ್ಕಪ್ಪನಂತೆ ಇದ್ದರು.  ಲಕ್ಷ್ಮ್ಮಣನು ರಾಮನ ನೆರಳಾಗಿ ಹೇಗೆ ಸೂಚನೆಯನ್ನು ಅನುಸರಿಸುತ್ತಿದ್ದನೋ ಹಾಗೆಯೇ ಇವರು ನಮ್ಮ ತಂದೆಯ ಬಲಗೈಯ್ಯಂತಿದ್ದರು' ಎನ್ನುತ್ತಾರೆ.

ವಿದ್ಯಾಶಾಲೆಯ ಪ್ರಾಧ್ಯಾಪಕರಾಗಿದ್ದ ಶ್ರೀಯುತ ಚೆನ್ನಕೇಶವರವರು- 'ಯೋಗೈಶ್ವರ್ಯಸಂಪನ್ನರಾದ ಪರಮಪೂಜ್ಯ ಶ್ರೀರಂಗಸದ್ಗುರುಗಳ ಆಶಯದಂತೆ ಬಸರೀಕಟ್ಟೆಯ ಶ್ರೀಲಕ್ಷ್ಮೀಜನಾರ್ದನಸ್ವಾಮಿ ದೇವಾಲಯದ ಆವರಣದಲ್ಲಿ ಪೂಜ್ಯ ಗುರುದಾಸರು 1952ರಲ್ಲಿ ಸ್ಥಾಪಿಸಿದ್ದ, ಗುರುಕುಲ ಪದ್ಧತಿಯಂತೆ ನಡೆಯುತ್ತಿದ್ದ ಸಂಸ್ಥೆಯಾದ ಬಸರೀಕಟ್ಟೆಯ ಶ್ರೀಸದ್ಗುರುವಿದ್ಯಾಶಾಲೆಯು  ಶಂಕ್ರಣ್ಣಯ್ಯನವರನ್ನು ಸೆಳೆಯುತ್ತಿತ್ತು. ಈ ಸಂಸ್ಥೆಯು ಮಕ್ಕಳಿಗೆ ಭಾರತೀಯ ಸಂಸ್ಕೃತಿಯ ಬಗ್ಗೆ ಪರಿಚಯಕೊಟ್ಟು ಅದರ ಬಗ್ಗೆ ಶಿಕ್ಷಣ ಹೊಂದಿಸುವುದೇ ಅದರ ಮುಖ್ಯ ಉದ್ದೇಶವಾಗಿತ್ತು. ಜೊತೆಗೆ ಆಧುನಿಕ ವಿದ್ಯಾಭ್ಯಾಸದ ಶಿಕ್ಷಣವನ್ನೂ ಕೊಡಲಾಗುತ್ತಿತ್ತು. ಅವರ ಬಹುಮುಖ ಪ್ರತಿಭೆಗೆ ಅಲ್ಲಿ ಒಳ್ಳೆಯ ಅವಕಾಶ ಸಿಕ್ಕಿತು. 

ಸಂಸ್ಕೃತ ಮತ್ತು ಸಂಗೀತದಲ್ಲಿ ವಿದ್ವಾಂಸರಾಗಿ ಈ ಊರಿನವರೇ ಆಗಿದ್ದ ಶ್ರೀರಾಮಕೃಷ್ಣ ಗುರುದಾಸರು ಈ ಶಾಲೆಯ ಪ್ರಧಾನಾಚಾರ್ಯರು. ಶ್ರೀಗುರುದಾಸರ ಧರ್ಮಪತ್ನಿ ಶ್ರೀಮತಿ ಕಲ್ಯಾಣೀ ಗುರುದಾಸರು ಮತ್ತು ಶ್ರೀ ಜಿ.ಕೆ.ಶಂಕರರಾಯರು ಖಾಯಂ ಶಿಕ್ಷಕರು. ಶಂಕರರಾಯರು ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡಲು ಗುರುದಾಸರ ಪ್ರಯತ್ನಕ್ಕೆ ಹೆಗಲು ಕೊಟ್ಟರು. ಮುಖ್ಯವಾಗಿ ವಿದ್ಯಾಶಾಲೆಯ ವ್ಯವಸ್ಥಾಪಕರಾಗಿ ಮತ್ತು ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೆ ಪಾಠಮಾಡುವುದು ಅವರ ಕೆಲಸವಾಗಿತ್ತು' ಎಂದು ನೆನೆಪಿಸಿಕೊಳ್ಳುತ್ತಾರೆ.

     1956ನೇ ಇಸವಿಯಲ್ಲಿ ಅವರು ಅಷ್ಟಾಂಗ ಯೋಗ ವಿಜ್ಞಾನಮಂದಿರದ ಶ್ರೀರಂಗಮಹಾಗುರುಗಳ ಸಂಪರ್ಕಕ್ಕೆ ಬಂದರು. "ಸ್ವಾಧ್ಯಾಯ ಪ್ರವಚನಾಭ್ಯಾಂ ನ ಪ್ರಮದಿತವ್ಯಮ್" ಎಂಬುದು ಹಿಂದಿನ ಗುರುಕುಲದಲ್ಲಿ ಶಿಷ್ಯರಿಗೆ ಗುರುಗಳು ಬೋಧಿಸುತ್ತಿದ್ದ ಹಿತನುಡಿ. ಅದರಂತೆ ಅಷ್ಟಾಂಗಯೋಗ ವಿಜ್ಞಾನಮಂದಿರದ ಶ್ರೀರಂಗಮಹಾಗುರುಗಳ ಶಿಷ್ಯರಾದ ಪೂಜ್ಯ ಶಂಕರರಾಯರು ಗುರುವಿನಿಂದ ಉಪದೇಶಿಸಲ್ಪಟ್ಟ ಜ್ಞಾನವಿಜ್ಞಾನಗಳ ಸಾಧನೆಯ ಜೊತೆಗೆ ಅದಕ್ಕೆ ಪೋಷಕವಾದ ಸಂಸ್ಕೃತ ಮತ್ತು ಹಿಂದೀ ಭಾಷೆಯನ್ನು ಕಲಿಯುತ್ತಾ, ಅಧ್ಯಾಪಕ ವೃತ್ತಿಯ ಜೊತೆಗೆ ಈ ಎರಡೂ ಭಾಷೆಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾದರು. ಶ್ರೀ ಗುರುದಾಸರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡುತ್ತಾ, ವೇಣುವಾದನವನ್ನು ತಮ್ಮ ಹವ್ಯಾಸವನ್ನಾಗಿ ಇಟ್ಟುಕೊಂಡಿದ್ದರು.

ವಿದ್ಯಾಶಾಲೆಯಲ್ಲಿ ವಿದ್ಯಾರ್ಥಿನಿಯಾಗಿದ್ದು ಅಲ್ಲೇ ಉಪಾಧ್ಯಾಯಿನಿಯಾಗಿದ್ದ ಶ್ರೀಮತಿ ಕಾತ್ಯಾಯನಿದತ್ತರವರು 'ಯೋಗೇಶ್ವರರಾದ ಅಷ್ಟಾಂಗಯೋಗ ವಿಜ್ಞಾನಮಂದಿರದ ಶ್ರೀರಂಗಮಹಾಗುರುಗಳು ಬಸರೀಕಟ್ಟೆ ಕ್ಷೇತ್ರಕ್ಕೆ ದಯಮಾಡಿಸಿ ಹಲವಾರು ಪ್ರವಚನಗಳನ್ನು ದಯಪಾಲಿಸಿದರು. ವಿದ್ಯಾಶಾಲೆಯನ್ನು ಅಷ್ಟಾಂಗಯೋಗ ವಿಜ್ಞಾನಮಂದಿರದ ಶಾಖೆಯನ್ನಾಗಿ ಘೋಷಿಸಿದರು. ಅದರ ಕಾರ್ಯದರ್ಶಿಗಳಾಗಿ ಪೂಜ್ಯ ಗುರುದಾಸರನ್ನೂ, ಶಂಕ್ರಣ್ಣಯ್ಯನವರನ್ನು ಉಪಕಾರ್ಯದರ್ಶಿಗಳನ್ನಾಗಿಯೂ ನಿಯೋಜಿಸಿದರು. ಅವರಿಬ್ಬರೂ ಆಜೀವಪರ್ಯಂತ ಇದೇ ಸೇವೆಯಲ್ಲಿದ್ದರು. ಅಲ್ಲಿಯೂ ಶಂಕ್ರಣ್ಣಯ್ಯನವರು ಅವರ ಪಾಲಿನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಉತ್ತಮ ಸಲಹೆಗಳನ್ನು ಕೊಡುತ್ತಿದ್ದರು. ಮಂದಿರದ ಈ ಶಾಖೆಯ ಹಣಕಾಸಿನ ಜವಾಬ್ದಾರಿಯನ್ನು ಶ್ರೀ ಶಂಕ್ರಣ್ಣಯ್ಯನವರೇ ನಿರ್ವಹಿಸುತ್ತಿದ್ದರು. ಯಾರಾದರೂ ಅಭಿನಂದಿಸಿದರೆ 'ಪರೋಪಕಾರಾರ್ಥಂ ಇದಂ ಶರೀರಂ' ಎಂಬಂತೆ 'ತಾನು ಇರುವುದೇ ಇತರಿಗಾಗಿ, ಭಗವಂತ ಭಾಗವತರ ಸೇವೆಗಾಗಿ' ಎಂಬುದನ್ನು ಆಚರಣೆಯಿಂದಲೇ ಮನಸ್ಸಿಗೆ ತರುತ್ತಿದ್ದರು.


ಶ್ರೀರಂಗಸದ್ಗುರು ದಂಪತಿಗಳು ಬಸರೀಕಟ್ಟೆಗೆ ಆಗಮಿಸಿದಾಗ ಅವರ ಸೇವಾನುಕೂಲಗಳನ್ನು ಶ್ರೀ ಗುರುದಾಸರು ಮತ್ತು ಕಲ್ಯಾಣಮ್ಮನವರು ನಿರ್ವಹಿಸುತ್ತಿದ್ದರು. ಅದರಲ್ಲಿ ಶಂಕ್ರಣ್ಣಯ್ಯನವರ ಪಾತ್ರವೂ ಹಿರಿದಾಗಿರುತ್ತಿದ್ದಿತು. ಅವರು ಪ್ರತಿಯೊಬ್ಬ ವಿದ್ಯಾರ್ಥಿಗೂ ಕೆಲವು ಕೆಲಸಗಳನ್ನು ಹಂಚುತ್ತಿದ್ದರು. ಅವುಗಳೆಲ್ಲದರ ಮೇಲ್ವಿಚಾರಣೆ ಶಂಕ್ರಣ್ಣಯ್ಯನವರದೇ ಆಗಿರುತ್ತಿದ್ದಿತು. ಯಾವ ಕೆಲಸವನ್ನಾದರೂ ತುಂಬಾ ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಶಂಕ್ರಣ್ಣಯ್ಯನವರ ಮನೆ, ಹರಿದಾಸರ ಮನೆ ಹಾಗೂ ಜನಾರ್ದನಸ್ವಾಮಿ ದೇವಸ್ಥಾನದ ಮಧ್ಯದಲ್ಲಿ ಇತ್ತು. ಅವರ ಧರ್ಮಪತ್ನಿ ಸರಸ್ವತಕ್ಕ ಅವರೂ ಕೂಡಾ ತುಂಬಾ ಆತ್ಮೀಯರು. ಅವರು ನಿಜವಾದ ಅರ್ಥದಲ್ಲಿ ಸಹಧರ್ಮಿಣಿಯಾಗಿದ್ದರು. ಮಿತ ಭಾಷಿಣಿಯಾದ ಅವರಿಗೆ ನಮ್ಮನ್ನೆಲ್ಲಾ ಕಂಡರೆ ತುಂಬಾ ಪ್ರೀತಿ. ಅವರ ಮಕ್ಕಳು  ಶ್ರೀನಿವಾಸ ಹಾಗೂ ಕಲ್ಯಾಣಿ, ಅವರ ತಂದೆತಾಯಿಯರಂತೆ ಸರಳ ವ್ಯಕ್ತಿಗಳು. 

ಶ್ರೀಗುರುದಂಪತಿಗಳು ಬಸರೀಕಟ್ಟೆಗೆ 1962 ರಿಂದ 1967 ರವರೆಗೆ ಅನೇಕ ಸಲ ದಯಮಾಡಿಸಿದ್ದರು. ಆಗ ಅವರು ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ ಅನೇಕ ಪ್ರವಚನಗಳನ್ನು ದಯಪಾಲಿಸಿ ಅದರ ಬಗ್ಗೆ ತಿಳಿವಳಿಕೆಯನ್ನು ಎಲ್ಲರಿಗೂ ಕೊಟ್ಟರು. ಆ ಸಮಯದಲ್ಲಿ ಕಾರ್ಯಕ್ರಮಕ್ಕೆ ಮೈಸೂರು, ಬೆಂಗಳೂರಿನಿಂದ ಮತ್ತು ಬಸರೀಕಟ್ಟೆಯ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಜನರು ಸೇರುತ್ತಿದ್ದರು. ಇದಲ್ಲದೆ, ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯುತ್ತಿದ್ದವು. ಆಗ ನಮಗೆಲ್ಲಾ ಹಬ್ಬದ ಸಂಭ್ರಮವಾಗಿರುತ್ತಿತ್ತು. ಆ ಸಮಯದಲ್ಲಿ ಶಂಕ್ರಣ್ಣಯ್ಯನವರ ಪಾತ್ರ ತುಂಬಾ ದೊಡ್ಡದಾಗಿರುತ್ತಿತ್ತು. ಬಂದವರಿಗೆ ಊಟದ ವ್ಯವಸ್ಥೆ, ಮಲಗಲು ಹಾಸಿಗೆ ವ್ಯವಸ್ಥೆ, ಸ್ನಾನದ ವ್ಯವಸ್ಥೆ ಇತ್ಯಾದಿಗಳನ್ನು ಮಾಡಬೇಕಾಗಿದ್ದಿತು. ಆ ಸಮಯದಲ್ಲಿ ಅವರು ಶ್ರೀಯುತರಾದ ಬಿ.ವಿ.ಶ್ರೀನಿವಾಸ ಮೇಷ್ಟ್ರು, ಬಿ.ಆರ್.ಚೆನ್ನಕೇಶವ ಮೇಷ್ಟ್ರು, ಬಿ.ಎ.ಶ್ರೀನಿವಾಸ ಮೇಷ್ಟ್ರು ಮುಂತಾದ ಹಿರಿಯರನ್ನು ಮುಂದಿಟ್ಟುಕೊಂಡು ಇವೆಲ್ಲದರ ವ್ಯವಸ್ಥೆಯನ್ನು ತುಂಬಾ ಚೆನ್ನಾಗಿ ನಿರ್ವಹಿಸುತ್ತಿದ್ದರು. ಅಂತೆಯೇ ಶ್ರೀಗುರು ದಂಪತಿಗಳ ಯೋಗಕ್ಷೇಮದ ಜವಾಬ್ದಾರಿಯೂ ತುಂಬಾ ಇರುತ್ತಿತ್ತು. ಅದೆಲ್ಲವನ್ನೂ ಶಂಕ್ರಣ್ಣಯ್ಯನವರೇ ವಹಿಸಿಕೊಂಡು ಗುರುದಂಪತಿಗಳ ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದರು. 'ಸೇವೆ' ಎಂಬ ಪದದ ಅರ್ಥ ಗೊತ್ತಾಗಿದ್ದುದೇ ಶಂಕ್ರಣ್ಣಯ್ಯನವರಿಂದ. ಅವರು 'ಪಾದಸೇವೆ'ಎಂಬ ವಿಷಯದ ಬಗ್ಗೆ ಪ್ರವಚನವನ್ನೇ ಮಾಡಿದ್ದಾರೆ. ಆದರೆ ಇಷ್ಟೆಲ್ಲಾ ವಿಷಯಗಳು ಅವರಿಗೆ ಗೊತ್ತಿತ್ತು ಎಂದು ಆ ಸಂದರ್ಭದಲ್ಲಿ ನಮ್ಮ ಅರಿವಿಗೇ ಬಂದಿರಲಿಲ್ಲ. ಈಗ ಯೋಚಿಸಿದಾಗ ಆಶ್ಚರ್ಯವಾಗುತ್ತದೆ. ಎಷ್ಟೊಂದು ಆಧ್ಯಾತ್ಮಿಕ ವಿಷಯ ತಿಳಿದಿದ್ದರೂ, ಎಷ್ಟೊಂದು ಸಾಧನೆ ಮಾಡುತ್ತಿದ್ದರೂ ಯಾವುದನ್ನೂ ತೋರಿಸಿಕೊಳ್ಳದೇ, ಎಲೆಮರೆಯ ಹಣ್ಣಿನಂತೆ ಇದ್ದರಲ್ಲಾ ಎಂದು! ಅವರಿಗೆ ಅನೇಕಾನೇಕ ನಮಸ್ಕಾರಗಳು.' ಎಂದು ನೆನಪಿಸಿಕೊಳ್ಳುತ್ತಾರೆ.

ಶ್ರೀ ಸದ್ಗುರು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀಯುತ ಬಿ.ವಿ.ಶ್ರೀನಿವಾಸರು 'ಆಗಿನ್ನೂ ಅಧಿಕೃತವಾಗಿ ಹೈಸ್ಕೂಲ್ ಆರಂಭವಾಗಿರಲಿಲ್ಲ. ಆದರೆ ಅವರು ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ವಿದ್ಯಾಶಾಲೆಯ ಪ್ರತಿಯೊಂದು ಕೆಲಸದಲ್ಲೂ ಜವಾಬ್ದಾರಿ ಹೊತ್ತು ನಡೆಸಿದರು. ವಸತಿ ಶಾಲೆಗೆ ಬೇಕಾಗುವ ತರಕಾರಿಗಳನ್ನು ಹಿತ್ತಲಲ್ಲಿ ಬೆಳೆಯುವುದು, ಪೂಜೆಗೆ ಹೂಗಿಡ ಬೆಳೆಸುವುದು, ಅಡುಗೆಗೆ-ಸ್ನಾನಕ್ಕೆ ಬೇಕಾದ ಕಟ್ಟಿಗೆ ಸಂಗ್ರಹಿಸುವುದು, ಇವೆಲ್ಲದರಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದರು.' ಎಂದು ನೆನೆಪಿಸಿಕೊಳ್ಳುತ್ತಾರೆ. 

ವಿದ್ಯಾಶಾಲೆಯ ವಿದ್ಯಾರ್ಥಿನಿಯಾಗಿದ್ದ ಶ್ರೀಮತಿ ಶೃಂಗೇರಿ ಉಷಾರವರು, 'ಅವರು ಗುದ್ದಲಿ ಹಿಡಿದು ನೆಲ ಅಗೆಯುತ್ತಿದ್ದರು; ಗರಗಸ ಹಿಡಿದು ಮರ ಕೊಯ್ಯುತ್ತಿದ್ದರು; ಕೊಡಲಿ ಹಿಡಿದು ಕಟ್ಟಿಗೆ  ಒಡೆಯುತ್ತಿದ್ದರು. ಶಾಲೆಯ ಮಕ್ಕಳಿಂದ ವಸತಿಗೃಹ, ಪಶುಪಾಲನೆ, ಹಾಸ್ಟೆಲ್ ಗೆ  ಕಟ್ಟಿಗೆ ಸರಬರಾಜು ಮುಂತಾದ ಕಾರ್ಯಗಳನ್ನು ನಿರ್ದೇಶಿಸುವುದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತಯಾರು ಮಾಡಿದರು. ಯಾವ ಕೆಲಸ ಮಾಡಿದರೂ ಅದು ಭಗವಂತನ ಸೇವೆಯೇ ಎಂಬುದನ್ನು ಮೈಗೂಡಿಸಿದರು.' ಎಂದು ನೆನೆಯುತ್ತಾರೆ. 

ಶ್ರೀಯುತ ಬಿ.ವಿ.ಶ್ರೀನಿವಾಸರು 'ಶ್ರೀಸದ್ಗುರು ವಿದ್ಯಾಶಾಲೆಯಲ್ಲಿ ಪ್ರತಿವರ್ಷ ಭಾದ್ರಪದಮಾಸದಲ್ಲಿ 21 ದಿನದ ಪರ್ಯಂತ ಶ್ರೀ ಗುರುಗಣಪತಿ ಮಹೋತ್ಸವವು ಬಹಳ ವೈಭವದಿಂದ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಶ್ರೀ ಗಣಪತಿ ಮಂಟಪದ ತಯಾರಿ ಅವರದ್ದೇ ಆಗಿರುತ್ತಿತ್ತು. ಅವರ ನೇತೃತ್ವದಲ್ಲಿ ಬಣ್ಣದ ಕಾಗದದಿಂದ ಬಹಳ ಸುಂದರವಾಗಿ ಮಂಟಪದ ನಿರ್ಮಾಣವಾಗುತ್ತಿತ್ತು. ಹಿಡಿದ ಕೆಲಸವನ್ನು ಹಗಲು ರಾತ್ರಿ ಎನ್ನದೆ ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಅವರ ಸ್ವಭಾವ. ಒಂದು ವರ್ಷ ಶ್ರೀಗಣೇಶ ಉತ್ಸವಕ್ಕಾಗಿ ಬೃಹದ್ಗಾತ್ರದ ಗಣಪತಿ ವಿಗ್ರಹವನ್ನು ಅವರೇ ತಯಾರಿಸಿದ್ದರು. ಸುಮಾರು ಒಂದು ತಿಂಗಳ ಕಾಲದಲ್ಲಿ ತಯಾರಿಸಿದ ಆ ವಿಗ್ರಹವು ಬಹು ಸುಂದರವಾಗಿತ್ತು. ಪೇಟೆಯಲ್ಲಿ ತಯಾರಾಗುತ್ತಿದ್ದ ವಿಗ್ರಹಗಳ ಸೌಂದರ್ಯವನ್ನು ಮೀರಿಸುವಂತಿತ್ತು.'

ಇದನ್ನು ಮುಂದುವರಿಸುತ್ತಾ ಶ್ರೀಮತಿ ಕಾತ್ಯಾಯನಿದತ್ತರವರು 'ಶ್ರೀಸದ್ಗುರು ವಿದ್ಯಾಶಾಲೆಯಲ್ಲಿ ಪ್ರತಿವರ್ಷ 21 ದಿನಗಳ ಪರ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ಗಣೇಶೋತ್ಸವದಲ್ಲಿ ಬೆಳಗಿನ ವೇಳೆ ಪೂಜೆಯನ್ನು ಷೋಡಶೋಪಚಾರಪೂರ್ವಕ ಮಂತ್ರೋಕ್ತವಾಗಿ ಪೂಜ್ಯ ಗುರುದಾಸರು ನೆರವೇರಿಸುತ್ತಿದ್ದರು. ಪೂಜ್ಯ ಶ್ರೀ ರಂಗಪ್ರಿಯ ಶ್ರೀ ಶ್ರೀಗಳು ರಚನೆಮಾಡಿರುವ 'ಶ್ರೀಗಣೇಶ ಮಾನಸ ಪೂಜಾಸ್ತೋತ್ರ'ಕ್ಕೆ ಶ್ರೀ ಗುರುದಾಸರು ರಾಗಸಂಯೋಜನೆ ಮಾಡಿದ್ದರು. ಅದರಂತೆ ಗುರುದಾಸ ದಂಪತಿಗಳು ಸಂಜೆ ವೇಳೆಯಲ್ಲಿ ಸ್ತೋತ್ರರೂಪದಿಂದ ಗುರುಗಣಪತಿಯನ್ನು ಪೂಜಿಸುತ್ತಿದ್ದರು. ನಾವುಗಳೂ ಅವರ ಜೊತೆ ಸೇರಿ ಸ್ತೋತ್ರಪೂಜೆಯನ್ನು ಮಾಡುತ್ತಿದ್ದೆವು. ಪೂಜಾನಂತರ ಅಷ್ಟಾವಧಾನ ಸೇವೆ ಸಂಪನ್ನವಾಗುತ್ತಿತ್ತು. ಆ ಸಮಯದಲ್ಲಿ ಗೀತಾಶಾಸ್ತ್ರಸೇವೆಯನ್ನು ಮಾಡಲು ಪೂಜ್ಯ ಗುರುದಾಸರು ನನಗೆ ಹೇಳುತ್ತಿದ್ದರು. ಭಗವದ್ಗೀತೆಯಲ್ಲಿರುವ ಭಕ್ತಿಯೋಗದ ಎರಡು ಸ್ತೋತ್ರಗಳನ್ನು ಪ್ರತಿದಿನವೂ ಅರ್ಥಸಹಿತ ಹೇಳಬೇಕಾಗಿದ್ದಿತು. ಶ್ರೀ ಶಂಕ್ರಣ್ಣಯ್ಯನವರು ಅದನ್ನು ನನಗೆ ಹೇಳಿಕೊಟ್ಟು ಅಭ್ಯಾಸ ಮಾಡಿಸುತ್ತಿದ್ದರು. ಅವರು ನನಗೆ ಅದರ ಬಗ್ಗೆ ಎಷ್ಟು ಚೆನ್ನಾಗಿ ತರಬೇತಿ ಕೊಡುತ್ತಿದ್ದರೆಂದರೆ, ಆ ಸೇವೆಯನ್ನು ನಾನು ಮಾಡಿದನಂತರ ಎಲ್ಲರೂ ಮುಕ್ತಕಂಠದಿಂದ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದರು. 21 ದಿನಗಳು ಪೂಜೆ ಸಂಪನ್ನವಾದ ನಂತರ ಕವಲುಕುಡಿಗೆ ಕೆರೆಯಲ್ಲಿ ಅದನ್ನು ವಿಸರ್ಜಿಸುತ್ತಿದ್ದರು.

ಪ್ರತಿ ವರ್ಷವೂ ಗಣಪತಿಯನ್ನು ಮಾಡಿಸಿ ಪೂಜೆಗೆ ತರುತ್ತಿದ್ದರು. ಒಂದು ವರ್ಷ ಶಂಕ್ರಣ್ಣಯನವರೇ ಗಣಪತಿ ವಿಗ್ರಹವನ್ನು ಮಣ್ಣಿನಲ್ಲಿ ಮಾಡಿದರು. ದೇವಸ್ಥಾನದ ಮಹಡಿಯಲ್ಲಿ ಪೂಜ್ಯ ಕಲ್ಯಾಣಮ್ಮನವರು ನಡೆಸುತ್ತಿದ್ದ ಕ್ಲಾಸ್ ರೂಮಿನಲ್ಲಿದ್ದ ಒಂದು ಟೇಬಲ್ ಮೇಲೆ ಗಣಪತಿಯನ್ನು ಮಾಡುತ್ತಿದ್ದರು. ಹಾಗೆ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಪೂಜ್ಯ ಗುರುದಾಸರು ಕಣ್ಣುಮುಚ್ಚಿ ಅಂತರಂಗದಲ್ಲಿ ಗಣಪತಿಯನ್ನು ನೋಡಿಕೊಂಡು, 'ಸೊಂಡಿಲು ಹೀಗೆ ಬರಬೇಕು; ಕಿವಿ ಹೀಗೆ ಇರಬೇಕು'ಎಂದು ಮಾರ್ಗದರ್ಶನ ಮಾಡುತ್ತಿದ್ದರು. ಶಂಕ್ರಣ್ಣಯ್ಯನವರು ಅವರು ಹೇಳಿದಂತೆಯೇ ಮಾಡುತ್ತಿದ್ದರು. ಅದು ಈಗ ನನಗೆ ಹಿಂದಿನ ಮಹರ್ಷಿಗಳ ಕಾಲವನ್ನು ನೆನಪಿಸುತ್ತದೆ. ಆ ವಿಗ್ರಹ ತುಂಬಾ ಸುಂದರವಾಗಿ ಮೂಡಿಬಂದಿತ್ತು. ಇದು ಅವರ ಕಲಾನೈಪುಣ್ಯಕ್ಕೆ ಸಾಕ್ಷಿಯಾಗಿದೆ.'

ಶ್ರೀಮತಿ ವಿಜಯವಲ್ಲೀ 'ಸದ್ಗುರು ವಿದ್ಯಾಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗಣಪತಿ ಉತ್ಸವದಲ್ಲಂತೂ ಪೂರ್ವಭಾವಿಯಾಗಿ ಮಂಟಪಗಳ ಸಿಂಗಾರ ತಯಾರಿಯನ್ನು ಉಳಿದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಶಂಕ್ರಣ್ಣಯ್ಯನವರೇ ಮಾಡುತ್ತಿದ್ದರು. ಅವರ ಕೊನೆಯ ವರ್ಷದ ಗಣಪತಿಯನ್ನು ತಮ್ಮ ಕೈಯಿಂದಲೇ  ರಚಿಸಿ ಕೃತಕೃತ್ಯರಾಗಿದ್ದರು. ಆ ಗಣಪತಿ ಹಬ್ಬದ ವೈಭವ ಅದರಲ್ಲಿ ಭಾಗಿಯಾದವರ ಮನಸ್ಸಿನಲ್ಲಿರುವುದಂತು ನಿಜ.

ಶಾಲಾ ವಾರ್ಷಿಕೋತ್ಸವದಲ್ಲಿ ನಮ್ಮ ತಂದೆ ಗುರುದಾಸರು ಪೌರಾಣಿಕ ನಾಟಕಗಳನ್ನು ಮಕ್ಕಳಿಂದ ಮಾಡಿಸುತ್ತಿದ್ದರು. 'ಭಕ್ತಪ್ರಹ್ಲಾದ' ನಾಟಕದಲ್ಲಿ ನಾನು ಪ್ರಹ್ಲಾದನಾದರೆ ಶಂಕ್ರಣ್ಣಯ್ಯ ಉಗ್ರನರಸಿಂಹನ ಪಾತ್ರ ವಹಿಸಿದ್ದರು. ಈ ರೀತಿ ಎಲ್ಲ ಕಲೆಗಳಲ್ಲಿ ಪಾರಂಗತರಾದ ಪರೋಪಕಾರಿ ಶಂಕ್ರಣ್ಣಯ್ಯ ದೀರ್ಘಾಯುಷಿಯಾಗಿ ಇರಬೇಕಾಗಿತ್ತೆಂದು ನಮ್ಮ ಆಸೆ. ಭಗವಂತನ ಸಂಕಲ್ಪ ಯಾರು ಮೀರಲಾಗುತ್ತದೆ. ನಮ್ಮ ಬಾಲ್ಯದ ಫೋಟೋಗಳನ್ನೆಲ್ಲಾ ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದು ಅವರ ಸ್ಮರಣೆ ಚಿರವಾಗಿರಿಸಿದ ಶಂಕ್ರಣ್ಣಯ್ಯನವರಿಗೆ ಈ ನುಡಿನಮನ,' ಎಂದು ಸ್ಮರಿಸುತ್ತಾರೆ.    

     'ಶ್ರೀಸದ್ಗುರು ವಿದ್ಯಾಶಾಲೆಯಲ್ಲಿ ಪ್ರತಿವರ್ಷ ನಡೆಯುತ್ತಿದ್ದ ವಾರ್ಷಿಕೋತ್ಸವದಲ್ಲಿ ಆಗ ನೃತ್ಯ ನಾಟಕ ಇತ್ಯಾದಿ ಕಾರ್ಯಕ್ರಮಗಳು ಇರುತ್ತಿದ್ದವು. ಆಗ ಪ್ರತಿಭಾವಂತ ಮಕ್ಕಳಿಗೆ ಬಹುಮಾನವೂ ಇರುತ್ತಿದ್ದವು. ನಾಟಕವನ್ನು ಪೂಜ್ಯ ಗುರುದಾಸರೊಂದಿಗೆ ಶಂಕ್ರಣ್ಣಯ್ಯನವರೂ ಅಭ್ಯಾಸ ಮಾಡಿಸುತ್ತಿದ್ದರು. ಭಕ್ತಪ್ರಹ್ಲಾದ, ರಾಸಕ್ರೀಡೆ, ಶ್ರೀರಾಮ ಪಟ್ಟಾಭಿಷೇಕ, ಸೀತಾಪರಿತ್ಯಾಗ ಇತ್ಯಾದಿ ಅನೇಕ ನಾಟಕಗಳನ್ನು ಆಡಿಸಿದ್ದರು. ಅವರು ಎಲ್ಲೂ ತಪ್ಪಾಗದಂತೆ, ಯಾರ ಮನಸ್ಸಿಗೂ ನೋವಾಗದಂತೆ ತಿದ್ದುತ್ತಿದ್ದರು' ಎನ್ನುತ್ತಾರೆ ಶ್ರೀಮತಿ ಕಾತ್ಯಾಯನಿದತ್ತ.

ಶ್ರೀಯುತ ಬಿ.ವಿ.ಶ್ರೀನಿವಾಸರು ಮುಂದುವರಿಸುತ್ತಾ, 'ಶ್ರೀಸದ್ಗುರು ವಿದ್ಯಾಶಾಲೆಯ ವಾರ್ಷಿಕೋತ್ಸವದಲ್ಲಿ ಶಂಕ್ರಣ್ಣಯ್ಯನವರದ್ದು ಪ್ರಧಾನಪಾತ್ರ. ಶ್ರೀಗುರುದಾಸರ ನಿರ್ದೇಶನದಂತೆ ನಡೆಯುತ್ತಿದ್ದ ಈ ಕಾರ್ಯಕ್ರಮದ ಬಹುಪಾಲು ಜವಾಬ್ದಾರಿ ಇವರದ್ದೆ!  ನಾಟಕ, ನೃತ್ಯಗಳ ನಿರ್ದೇಶನ ಮತ್ತು ಪಾತ್ರಧಾರಿಗಳ ಮೇಕಪ್ಪು ಇವುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದರು. ಹಿಂದಿ ಅಧ್ಯಾಪಕರಾದ ಶ್ರೀ ಸುಬ್ರಹ್ಮಣ್ಯ ಆಚಾರ್ಯರ ಜೊತೆ 'ಇಂಚಾಂಡ ಎಂಚ' ಎಂಬ ತುಳುನಾಟಕದಲ್ಲಿ 'ಪಿಜುಣಎಂಬ ಹಾಸ್ಯ ಪಾತ್ರದಲ್ಲಿ ನಟಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಿತು. 

ಈ ಶಾಲೆಯಲ್ಲಿ ಸಾಗರ, ಬೆಂಗಳೂರು, ಮೈಸೂರು ಮೊದಲಾದ ದೂರದ ಊರಿನಿಂದ ವಿದ್ಯಾರ್ಥಿಗಳು ಬಂದು ಸೇರಿದ್ದರು. ಕ್ರಮೇಣ ವಿದ್ಯಾರ್ಥಿಗಳ ಸಂಖ್ಯೆ 85ಕ್ಕೆ ಏರಿತು. ಶಾಲಾ ಸಮಯದ ನಂತರ ವಿದ್ಯಾರ್ಥಿಗಳನ್ನು ಪಕ್ಕದ ಹೊನ್ನಗುಂಡಿಯ ಗದ್ದೆಯೊಂದರಲ್ಲಿ ತರಕಾರಿ ಬೆಳೆಸಲು ಕರೆದುಕೊಂಡು ಹೋಗುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಶಾಲೆಯ ಹಾಗೂ ದೇವಸ್ಥಾನದ ಆವರಣವನ್ನು ವಿದ್ಯಾರ್ಥಿ ವಿದ್ಯಾರ್ಥಿನಿಯರು ಸ್ವಚ್ಛವಾಗಿಟ್ಟುಕೊಂಡಿರುತ್ತಿದ್ದರು. ಪೂಜ್ಯ ಶಂಕ್ರಣ್ಣಯ್ಯನವರಿಗೆ ಎಲ್ಲಾ ವಿಷಯಗಳಲ್ಲೂ ಪ್ರಾವೀಣ್ಯವಿದ್ದು ಸಕಲ ಕಲಾ ಪ್ರವೀಣರಾಗಿದ್ದರು.' ಎಂದು ನೆನೆಯುತ್ತಾರೆ.    

ಶ್ರೀಮತಿ ಶೃಂಗೇರಿ ಉಷಾರವರು, 'ಶಂಕ್ರಣ್ಣಯ್ಯನವರ ದೈವಭಕ್ತಿ, ಶ್ರದ್ಧೆ, ಅವರು ಪೂಜಾಕಾಲದಲ್ಲಿ ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಗೊತ್ತಾಗುತ್ತಿತ್ತು. ಧ್ಯಾನಕ್ಕೆ ಕುಳಿತರೆ ವಿಗ್ರಹದಂತೆ ಕುಳಿತಿರುತ್ತಿದ್ದರು. ಯಾರಾದರೂ ನಮಸ್ಕಾರ ಮಾಡಿದರೆ ಒಂದೆರಡು ಕ್ಷಣವಾದರೂ ಕಣ್ಣುಮುಚ್ಚಿ, ಪ್ರತಿನಮಸ್ಕಾರ ಮಾಡಿ, ಕಣ್ಣುಬಿಟ್ಟಾಗ ಅವರ ಕಣ್ಣುಗಳು ಒಳಗೆ ಸೇರಿಕೊಂಡಂತೆ ಚಿಕ್ಕದಾಗಿರುತ್ತಿದ್ದವು. 'ಸಾಧಕನು ಧ್ಯಾನ ಮಾಡಿ ಕಣ್ಣು ಬಿಟ್ಟಾಗ ಅವನ ಕಣ್ಣುಗಳು ಇರುವೆ ಕಡಿದಂತೆ ಸಣ್ಣಗಾಗಿರುತ್ತವೆ' ಎಂದು ಪರಮಹಂಸರು ಹೇಳಿದುದನ್ನು ಓದಿದಾಗ ನೆನೆಪಿಗೆ ಬರುವುದು ಶಂಕ್ರಣ್ಣಯ್ಯನವರ ಕಣ್ಣುಗಳು.     

ಶ್ರೀಸದ್ಗುರು ಪ್ರೌಢಶಾಲೆ ಆರಂಭಗೊಂಡ ಮೇಲೆ ಅವರು ಶಿಕ್ಷಕರಾಗಿ ತರಗತಿಯಲ್ಲಿ ಹೇಗೆ ಪಾಠ ಆರಂಭಿಸುತ್ತಿದ್ದರೆಂಬುದಕ್ಕೆ ಇದು ಒಂದು ಸಣ್ಣ ಉದಾಹರಣೆ.

ಶಂಕರರಾವ್: ನೆನ್ನೆ ಏನು ಪಾಠಮಾಡಿದ್ದೆ?

ವಿದ್ಯಾರ್ಥಿಗಳು: ಗ್ರಹಣಗಳು ಸಾರ್.

ಶಂಕರರಾವ್: ಸೂರ್ಯಗ್ರಹಣ ಆಯ್ತಾ?

ವಿದ್ಯಾರ್ಥಿಗಳು: ಆಯ್ತು ಸಾರ್.

ಶಂಕರರಾವ್: ಚಂದ್ರಗ್ರಹಣ ಆಗಿದೆಯಾ?

ವಿದ್ಯಾರ್ಥಿಗಳು: ಆಗಿದೆ ಸಾರ್.

ಶಂಕರರಾವ್: ಖಂಡಗ್ರಹಣ?

ವಿದ್ಯಾರ್ಥಿಗಳು: (ಉತ್ಸಾಹದಿಂದ)ಆಯ್ತು ಸಾರ್.

ಶಂಕರರಾವ್: ಪಾಣಿಗ್ರಹಣ.

ವಿದ್ಯಾರ್ಥಿಗಳು: (ಇನ್ನೂಉತ್ಸಾಹದಿಂದ)ಆಯ್ತು ಸಾರ್.

ಶಂಕರರಾವ್: ಹೌದಾ? ಯಾರಿಗೆಲ್ಲಾ ಪಾಣಿಗ್ರಹಣ ಆಗಿದೆ?

ಎಂದು ಜೋರಾಗಿ ನಗುತ್ತಿದ್ದರು. ವಿದ್ಯಾರ್ಥಿಗಳಿಗೂ ಆ ತಮಾಷೆ ಅರ್ಥವಾಗಿ ಜೋರಾಗಿ ನಗುತ್ತಿದ್ದರು. 'ಸರಿ-ಸರಿ. ಪಾಣಿಗ್ರಹಣದ ಬಗ್ಗೆ ಮುಂದೆ ನೋಡಿಕೊಳ್ಳೋಣ. ಈಗ ಪಾಠ ಮುಂದುವರಿಸೋಣ' ಎಂದು ಸೀರಿಯಸ್ಸಾಗಿ ಪಾಠ ಮುಂದುವರಿಸುತ್ತಿದ್ದರು.

'ಯೋಗಃ ಕರ್ಮಸು ಕೌಶಲಂ'ಎಂಬಂತೆ ಏನೇ ಕೆಲಸ ಮಾಡಲಿ, ಅದರಲ್ಲಿ ಅಚ್ಚುಕಟ್ಟು; ಅದನ್ನು ಸಮರ್ಪಕವಾಗಿ ಮುಗಿಸುತ್ತಿದ್ದ ರೀತಿ ಅನನ್ಯವಾದುದು. ಇಷ್ಟೆಲ್ಲಾ ಮಾಡಿದರೂ 'ನಾನು ಮಾಡಿದೆ' ಎಂಬ 'ಅಹಂ' ಅವರಲ್ಲಿರಲಿಲ್ಲ. ಯಾವುದೇ ಸನ್ನಿವೇಶದಲ್ಲೂ ಭಾವೋದ್ವೇಗವನ್ನು ಪ್ರದರ್ಶಿಸುತ್ತಿರಲಿಲ್ಲ. ಸುಖದುಃಖಗಳನ್ನು ಸಮಚಿತ್ತದಿಂದ ಸ್ವೀಕರಿಸುವ ಆತ್ಮೋನ್ನತಿಯನ್ನು ಅವರು ಸಾಧಿಸಿಕೊಂಡಿದ್ದರು'ಎಂದು ಸ್ಮರಿಸುತ್ತಾರೆ.    

ವಿದ್ಯಾಶಾಲೆಯ ವಿದ್ಯಾರ್ಥಿನಿಯಾಗಿದ್ದ ಶ್ರೀಮತಿ ಸುನಂದಾರವರು 'ಬಸರೀಕಟ್ಟೆಯ ಶ್ರೀಸದ್ಗುರು ವಿದ್ಯಾಶಾಲೆಯಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವಾಗ ಶಂಕ್ರಣ್ಣಯ್ಯ ಮೇಲ್ಗಡೆ ತೊಲೆಯನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಪಾಠಮಾಡುತ್ತಿದ್ದರು. ಅದಕ್ಕೆ, ಮಕ್ಕಳೆಲ್ಲ ಅನ್ವರ್ಥವಾಗಿ 'ಶಂಕ್ರಣ್ಣಯ್ಯ ಶಾಲೆಯ ಆಧಾರಸ್ತಂಭ' ಎಂದೇ ಕರೆಯುತ್ತಿದ್ದರು. ಅವರು ಅಲ್ಲಿನ ಎಷ್ಟೋ ಬಡ ವಿದ್ಯಾರ್ಥಿಗಳಿಗೆ ಜೀವನಾಧಾರಸ್ತಂಭವೂ ಆಗಿದ್ದರು. ಹಣದ ತೊಂದರೆಯಿಂದ ಓದು ಮುಂದುವರಿಸಲಾಗದವರಿಗೆ ಶಾಲೆಯ ಫೀಸ್ ಮತ್ತು ಪುಸ್ತಕದ ಖರ್ಚನ್ನು ಇವರೇ ವಹಿಸಿಕೊಳ್ಳುತ್ತಿದ್ದರು. ಬಡ ವಿದ್ಯಾರ್ಥಿಗಳಿಗೆ ವಸತಿ ಗೃಹದಲ್ಲಿ ವಾಸಿಸಲು ಅವಕಾಶ ಕಲ್ಪಿಸಿ ಊಟೋಪಚಾರಗಳ ವ್ಯವಸ್ಥೆಯನ್ನು ನಿರ್ವಹಿಸುತ್ತಿದ್ದರು. ಶಾಲೆಯ ಸಮವಸ್ತ್ರವನ್ನು ಕೊಳ್ಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಆಢ್ಯರಾದ ಪೋಷಕರಿಂದ ವಂತಿಗೆ ವಸೂಲಿಮಾಡಿ ಸಮವಸ್ತ್ರ ಕೊಡಿಸುತ್ತಿದ್ದರು. ಜೀವನಾಧಾರವಿಲ್ಲದ ವಿದ್ಯಾರ್ಥಿಗಳಿಗೆ ಓದು ಮುಗಿದ ನಂತರ ಅದೇ ಶಾಲೆಯಲ್ಲೇ ಯಾವುದಾದರೂ ಯೋಗ್ಯತೆಗೆ ತಕ್ಕಂತೆ ಉದ್ಯೋಗ ಕೊಡಿಸುತ್ತಿದ್ದರು. ನೆಲೆ ಇಲ್ಲದವರಿಗೆ ಸ್ವಂತ ಮನೆಮಾಡಿಕೊಳ್ಳಲು ಸಹಕಾರ ಕೊಡುತ್ತಿದ್ದರು. ಹೀಗೆ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. ಇವರಿಂದ ಸಹಾಯ ಪಡೆದವರಲ್ಲಿ ನಾನೂ ಒಬ್ಬಳು. ಇಂದಿಗೂ ಅವರು ವಿದ್ಯಾರ್ಥಿಗಳ ಹೃದಯದಲ್ಲಿ ಅಚ್ಚಳಿಯದ ನೆನೆಪಾಗಿ ಉಳಿದಿದ್ದಾರೆ. ಅವರ ಸಂಪರ್ಕಕ್ಕೆ ಬಂದವರೆಲ್ಲರೂ ಅವರನ್ನು ಮರೆಯುವಂತೆಯೇ ಇಲ್ಲ'ಎಂದು ಆರ್ದ್ರವಾಗಿ ಸ್ಮರಿಸುತ್ತಾರೆ.

ಶ್ರೀಮತಿ ಕಾತ್ಯಾಯನಿದತ್ತರವರು 'ಶ್ರೀಗುರುದಂಪತಿಗಳು ಬಸರೀಕಟ್ಟೆಗೆ ಬಂದಾಗ ನಮಗೂ ಅವರಿಗೂ ಮಧ್ಯೆ ಶಂಕ್ರಣ್ಣಯ್ಯನವರೇ ವಾಹಕರಾಗಿದ್ದರು. ಶಂಕ್ರಣ್ಣಯ್ಯನವರ ಮನೆಯೇ ಶ್ರೀಗುರುದಂಪತಿಗಳ ಪಾಕಗೃಹವಾಗಿತ್ತು. ಪ್ರತಿ ದಿವಸ ಗುರುದೇವರು ಕೆಲವರನ್ನು ಸಹಭೋಜನಕ್ಕೆ ಕರೆಯುತ್ತಿದ್ದರು. ತುಂಬಾ ಜನರನ್ನು ಕರೆಯಲು ಸ್ಥಳಾವಕಾಶವಿರುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಶಂಕ್ರಣ್ಣಯ್ಯನವರು ಬಂದು 'ಕಾತ್ಯಾಯನಿ, ಗುರುದೇವರ ಜೊತೆ ಭೋಜನಕ್ಕೆ ನೀನು ಬರಬೇಕಂತೆ' ಎಂದು ಹೇಳಿದರು. ಅದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. ಜೊತೆಗೆ ಸಂಕೋಚವೂ ಆಯಿತು. 'ಹೇಗೆ ಅಷ್ಟು ದೊಡ್ಡವರ ಜೊತೆ ಕುಳಿತು ಊಟಮಾಡುವುದು' ಎಂದು. ಅಂದು ನಾನು ಗುರುದೇವರ ಎದುರಿನ ಸಾಲಿನಲ್ಲೇ ಕುಳಿತಿದ್ದೆ. ನನ್ನನ್ನು ಕಂಡು ಗುರುದೇವರು 'ಕಾತ್ಯಾಯನಿ, ಸಂಕೋಚ ಮಾಡಿಕೊಳ್ಳಬೇಡಮ್ಮ' ಎಂದು ಉಪಚಾರವನ್ನು ಹೇಳುತ್ತಾ ಪಾಯಸವನ್ನು ಬಲವಂತವಾಗಿ ಬಡಿಸಿಸಿದರು. ಈ ರೀತಿ ಗುರುದೇವರ ಅನುಗ್ರಹ ಮತ್ತು ಕೃಪಾದೃಷ್ಟಿ ಹರಿಯುವಂತೆ ಮಾಡಿದ ಶಂಕ್ರಣ್ಣಯ್ಯನವರನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸುತ್ತೇನೆ.'   

ಶ್ರೀಯುತ ಬಿ.ವಿ.ಶ್ರೀನಿವಾಸರು, 'ಮುಂದೆ ವಿದ್ಯಾಶಾಲೆಯು ಪ್ರವೃದ್ಧಮಾನಕ್ಕೆ ಬಂದು 1965 ರಲ್ಲಿ ಶ್ರೀಸದ್ಗುರು ಪ್ರೌಢಶಾಲೆಯಾಗಿ ವಿಸ್ತಾರಗೊಂಡಿತು. ಅದರ ಪ್ರಥಮ ಮುಖ್ಯೋಪಾಧ್ಯಾಯರಾಗಿ ಶ್ರೀಯುತ ಶಂಕರರಾಯರು 1967ರವರೆಗೆ ಕಾರ್ಯವನ್ನು ನಿರ್ವಹಿಸಿದರು. ಇಲಾಖಾ ನಿಯಮದಂತೆ ಮುಖ್ಯೋಪಾಧ್ಯಾಯರಾಗಲು ಬಿ.ಎಡ್  

 ಪದವಿ ಅನಿವಾರ್ಯವಾದುದರಿಂದ ಶ್ರೀ ಎಮ್. ವಾಸುದೇವಭಟ್ವರು ಮುಖ್ಯೋಪಾಧ್ಯಾಯರಾಗಿ, ಶ್ರೀ ಶಂಕ್ರಣ್ಣಯ್ಯನವರು ಹಿರಿಯ ಸಹಾಯಕ ಅಧ್ಯಾಪಕರಾದರು. ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದಂತೆ ಶಿಕ್ಷಕರ ಸಂಖ್ಯೆಯೂ ಬೆಳೆಯಿತು. ಶ್ರೀ ಶಂಕ್ರಣ್ಣಯ್ಯನವರು ಎಲ್ಲಾ ಅಧ್ಯಾಪಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಕುಟುಂಬದ ಹಿರಿಯ ಅಣ್ಣನಂತೆ ಮಾರ್ಗದರ್ಶನ ಮಾಡುತ್ತಿದ್ದರು. ಶ್ರೀ ಸದ್ಗುರು ವಿದ್ಯಾಸಮಿತಿಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದರು. ಪ್ರೌಢಶಾಲೆಯಲ್ಲಿ ವಿಜ್ಞಾನ ಮತ್ತು ಗಣಿತ ಅವರ ಬೋಧನಾ ವಿಷಯವಾಗಿದ್ದಿತು. ಬೋಧನಾ ಶೈಲಿಯಿಂದ ಅವರು ಎಲ್ಲಾ ವಿದ್ಯಾರ್ಥಿಗಳ ಮೆಚ್ಚುಗೆ ಗಳಿಸಿಕೊಂಡಿದ್ದಲ್ಲದೆ ಶಾಲೆಗೆ ಭೇಟಿ ನೀಡಿದ ತನಿಖಾಧಿಕಾರಿಗಳಿಂದ ಮೆಚ್ಚುಗೆಗೆ ಪಾತ್ರರಾಗಿದ್ದರು. ಪ್ರೌಢಶಾಲೆಯ ವಾರ್ಷಿಕೋತ್ಸವದ ತಯಾರಿ ಅವರ ಮುಂದಾಳುತನದಲ್ಲಿ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಅವರ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ಪೌರಾಣಿಕ ನಾಟಕಗಳನ್ನು ಅಭಿನಯಿಸುತ್ತಿದ್ದರು. ಅವರು ತಮ್ಮ ಸೇವಾ ಅವಧಿಯಲ್ಲಿ ಶಾಲೆಗೆ ರಜಾ ಹಾಕಿ ಬಿ.ಎಡ್ ಕಾಲೇಜಿಗೆ ಸೇರಿ ಪದವಿ ಪಡೆದರು. ಅವರ ಪರೋಪಕಾರ ಗುಣದಿಂದಾಗಿ ಅನೇಕರು ಉಪಕೃತರಾಗಿದ್ದಾರೆ. ಅದರಲ್ಲಿ ನಾನೂ ಒಬ್ಬ. ನನಗೆ ಶ್ರೀಸದ್ಗುರು ಪ್ರೌಢಶಾಲೆಯಲ್ಲಿ ನೌಕರಿಗೆ ಸೇರಲು ಅವಕಾಶ ಮಾಡಿಕೊಟ್ಟ ಅವರ ಉಪಕಾರವನ್ನು ಇಂದೂ ಸ್ಮರಿಸಿಕೊಳ್ಳುತ್ತೇನೆ' ಎಂದು ಸ್ಮರಿಸುತ್ತಾರೆ.

    'ಶ್ರೀಯುತ ಶಂಕರರಾಯರಿಗೆ ಅಲಂಕಾರಕಲೆ ಒಲಿದುಬಂದಿತ್ತು. ಭಗವಂತನ ವಿಶೇಷ ಪೂಜಾ ಸಂದರ್ಭದಲ್ಲಿ ಪೂಜೆಗೆ ಬೇಕಾದಂತಹ ಸುಂದರ ವಿನ್ಯಾಸವನ್ನೊಳಗೊಂಡ ಮಂಟಪವನ್ನು, ವಿಧವಿಧವಾದ ವಸ್ತ್ರವಿನ್ಯಾಸವನ್ನು ಅತ್ಯಂತ ಶೀಘ್ರಕಾಲದಲ್ಲಿ, ಸುಂದರವಾಗಿ ಲಭ್ಯವಿದ್ದ ಅಲ್ಪ ವಸ್ತುಗಳಿಂದಲೇ ಅದ್ಭುತವಾಗಿ ರಚಿಸುತ್ತಿದ್ದರು. ಆಗಿನ ಕಾಲದಲ್ಲಿ ಅದೂ ಹಳ್ಳಿಗಾಡಿನಲ್ಲಿ, ಈಗಿನಂತೆ ಅಂತಹ ಸೌಲಭ್ಯವೇನೂ ಇರುತ್ತಿರಲಿಲ್ಲ. ರಥೋತ್ಸವ, ಮಹೋತ್ಸವ ಮುಂತಾದ ಬೃಹತ್ಕಾರ್ಯಕ್ರಮದಲ್ಲಿ ಅದರ ಯೋಜನೆ ಮತ್ತು ನಿರ್ವಹಣೆಯ ಶ್ರಮದಾನ ಅವರಿಂದ ಇದ್ದೇ ಇರುತ್ತಿತ್ತು. ಹಳ್ಳಿಗಾಡಿನ ಆ ಬಸರೀಕಟ್ಟೆಯಲ್ಲಿ ನೂರಾರು ಜನ ಸೇರುವಂತಹ ಕಾರ್ಯಕ್ರಮದಲ್ಲಿ, ಸ್ನಾನ, ಭೋಜನ ಇತ್ಯಾದಿ ಸರ್ವವ್ಯವಸ್ಥೆಯ ರೂವಾರಿ ಇವರಾಗಿದ್ದರೂ ಇವರ ಶ್ರಮ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಎಲ್ಲವನ್ನೂ ಅಡಗಿಸಿಟ್ಟುಕೊಳ್ಳುವ ಸ್ವಭಾವ ಅವರಿಗೆ ಅವರ ಗುರುಗಳ ಅನುಗ್ರಹದಿಂದಲೇ ಬಂದಿತ್ತು.

ಶ್ರೀಯುತ ಶಂಕರರಾಯರು ಉತ್ತಮ ಛಾಯಾಗ್ರಾಹಕರಾಗಿದ್ದರು. ಛಾಯಾಗ್ರಹಣವಂತೂ ಅವರ ಎರಡನೇ ಪ್ರವೃತ್ತಿ(Second Nature) ಎನ್ನುವಷ್ಟು ಪ್ರಸಿದ್ಧ. ವಿದ್ಯಾಶಾಲೆಯ, ಮಂದಿರದ, ಗುರುಮನೆಯ ಮತ್ತು ರಥೋತ್ಸವ ಮುಂತಾದ ಮುಖ್ಯ ಕಾರ್ಯಕ್ರಮಗಳ ಚಿತ್ರಗಳು ಅವರ ಕ್ಯಾಮರಾದಿಂದಲೇ ಮೂಡಿ ಬಂದಿರುವುದು. 

ಅವರಿಗೆ ಪ್ರಕೃತಿಯೊಡನೆ ಒಮ್ಮಿಳಿತವಿತ್ತು. ಅಲ್ಲಿಯ ಪಕ್ಷಿಗಳ ಕೂಗಿಗೆ ಸಾಹಿತ್ಯ ರಚಿಸುವ ವಿನೋದದ ಕಾರ್ಯದಲ್ಲಿ ಶ್ರೀಗುರುಗಳೊಡನೆ ಭಾಗಿಯಾಗಿರುತ್ತಿದ್ದರು. ಅಂತಹ ಒಂದು ಪ್ರಸಂಗ ನೆನೆಪಿಸುವುದಾದರೆ, ಒಮ್ಮೆ ಮಹಾಗುರುಗಳೊಡನೆ ಭಕ್ತರ ಗುಂಪು ಪ್ರಕೃತಿಯ ಸೌಂದರ್ಯ ಸವಿಯಲು ಚಂಕ್ರಮಣ ಮಾಡುತ್ತಿದ್ದಾಗ ಗುರುಗಳು “ಬೀರಬಿಟ್ಟೆ” ಎಂಬ ಹಕ್ಕಿಯ ಕೂಗನ್ನು (ಅದುಟರ್ರಟರ್ರಟರಟರಟರ.... ಎಂದು ದೀರ್ಘವಾಗಿ ಕೂಗುತ್ತದೆ. ಮಲೆನಾಡಿನ ಜನರಿಗೆ ಇದು ಪರಿಚಿತ) ಅನುಕರಿಸುವಂತೆ, ‘ಶಂಕರ್ರಾವ್, ಈ ಹಕ್ಕಿಯ ಕೂಗಿಗೆ ಒಂದು ಸಾಹಿತ್ಯ ಹೇಳಿ’ಎಂದಾಗ ಕೊಂಚವೂ ತಡಮಾಡದೇ ಆ ಕೂಗನ್ನು ಅನುಸರಿಸಿ ‘ಕೌ..ವು...ರ್ರವ! ಪಾಂಡವರ್ಬೀಡ್ಬಿಟ್ಟಿದಾರಿದಾರಿದಾರಿದಾರೆ’ ಎಂದು ಹಕ್ಕಿಯು ಕೂಗಿದ ಧಾಟಿಯಲ್ಲೇ ಹೇಳಿದುದನ್ನು ನೆನೆಸಿಕೊಂಡರೆ ಅವರ ಪ್ರತ್ಯುತ್ಪನ್ನಮತಿ ಮತ್ತು ಅಜ್ಞಾತವಾಸದಲ್ಲಿರುವಾಗ ಪಾಂಡವರನ್ನು ಹುಡುಕುತ್ತಿದ್ದ ಕೌರವನ ಮನಸ್ಸು ಹೇಗಿತ್ತೆಂದು ಹೊಂದಿಸಿ ಹೇಳಿದ್ದು ಆಶ್ಚರ್ಯಕರವೆನ್ನಿಸುತ್ತದೆ. ಶಂಕರರಾಯರು ಪಾದಸೇವೆ ಮಾಡುವುದರಲ್ಲಿ ಪ್ರವೀಣರಾಗಿದ್ದರು. ಅದನ್ನೂ ಮಹಾಗುರುಗಳಿಂದಲೇ ಕಲಿತದ್ದು ಎಂದು ಹೇಳುತ್ತಿದ್ದರು. ಅವರು ಮಾಡುವ ಸೇವೆಯನ್ನು ಗುರುದಂಪತಿಗಳೇ ಮೆಚ್ಚಿಕೊಂಡಿದ್ದರು. ‘ನೀನು ಕಾಲೊತ್ತಿದ ರೀತಿಯಿಂದ ಬಹಳ ದೀರ್ಘಕಾಲದಿಂದಿದ್ದ ಕಾಲುಬೆರಳು ನೋವು ಪೂರ್ತಿ ವಾಸಿಯಾಗಿದೆಯಪ್ಪ.’ ಎಂದು ಗುರುಗಳೇ ಅವರ ಸೇವೆಯನ್ನು ಮೆಚ್ಚಿಕೊಂಡಿದ್ದರು’ ಎಂದು ಶಂಕರರಾಯರ ಸ್ನೇಹದ ಸವಿಯನ್ನು ಸವಿದಿರುವ ಕೃಷ್ಣಮೂರ್ತಿ ಸ್ಮರಿಸುತ್ತಾರೆ. ಶ್ರೀ ಬಿ.ವಿ.ಶ್ರೀನಿವಾಸರು ಮುಂದುವರಿಸುತ್ತಾ ‘ಶ್ರೀ ಗುರುದಾಸರ ಮತ್ತು ಶಂಕ್ರಣ್ಣಯ್ಯನವರ ಪ್ರಾರ್ಥನೆಯಂತೆ ಶ್ರೀಸದ್ಗುರು ದಂಪತಿಗಳು ಬಸರೀಕಟ್ಟೆಯ ಶ್ರೀಸದ್ಗುರು ವಿದ್ಯಾಶಾಲೆಗೆ ದಯಮಾಡಿಸುವಂತಾಯಿತು. ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಮಹಡಿಯ ಮೇಲೆ ಶ್ರೀಸದ್ಗುರು ವಿದ್ಯಾಶಾಲೆಯ ಜ್ಞಾನಮಂಟಪದಲ್ಲಿ ಶ್ರೀಗುರುದಂಪತಿಗಳ ಅಧ್ಯಕ್ಷತೆಯಲ್ಲಿ ಅನೇಕ ಕಾರ್ಯಕ್ರಮಗಳು ನಡೆದವು. ಆ ಸಂದರ್ಭದಲ್ಲಿ ಜ್ಞಾನಪ್ರವಚನ, ವಿಜ್ಞಾನಪ್ರವಚನ, ಧರ್ಮಪ್ರವಚನ, ಶ್ರೀ ಭಾರತೀ ಪೂಜಾ ಮಹೋತ್ಸವ ಹಾಗೂ ಇನ್ನಿತರ ವಿಶೇಷ ಕಾರ್ಯಕ್ರಮಗಳು ಸಂಪನ್ನವಾದವು. ಶ್ರೀ ಸದ್ಗುರು ವಿದ್ಯಾಶಾಲೆಯ ಅನೇಕ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಊರಿನ ಹಾಗೂ ನೆರೆ ಊರುಗಳ ಅನೇಕ ಮಹನೀಯರು, ಮತ್ತು ಮಹಿಳೆಯರು ಶ್ರೀರಂಗಮಹಾಗುರುಗಳ ಅನುಗ್ರಹಕ್ಕೆ ಪಾತ್ರರಾದರು. ಶ್ರೀ ಗುರುದಂಪತಿಗಳು ಈ ಕ್ಷೇತ್ರಕ್ಕೆ ತಮ್ಮ ಸಾನ್ನಿಧ್ಯ ದಯಪಾಲಿಸಿದಾಗ ಎಲ್ಲಾ ಕಾರ್ಯಕ್ರಮಗಳ ಜವಾಬ್ದಾರಿಯ ನೇತೃತ್ವವನ್ನು ಶ್ರೀಗುರುದಾಸರ ಮಾರ್ಗದರ್ಶನದಲ್ಲಿ ಶಂಕರರಾಯರು ನಿರ್ವಹಿಸುತ್ತಿದ್ದರು. ಮುಂದಿನ ದಿನಗಳಲ್ಲಿ ಶಂಕ್ರಣ್ಣಯ್ಯನವರ ಮನೆ ಮಂದಿಯೆಲ್ಲರೂ ಆಧ್ಯಾತ್ಮಿಕ ಸಾಧನಾಮಾರ್ಗದಲ್ಲಿ ಪರಿಚಿತರಾದರು. ಶ್ರೀ ಶಂಕ್ರಣ್ಣಯ್ಯನವರು ಬಸರೀಕಟ್ಟೆಯಲ್ಲಿ ಇರುವುದನ್ನು ವಿರೋಧಿಸುತ್ತಿದ್ದ ಅವರ ತಂದೆಯವರಾದ ಪೂಜ್ಯ ಶ್ರೀ ಕೃಷ್ಣರಾಯರೂ ಶ್ರೀರಂಗ ಮಹಾಗುರುಗಳ ಅನುಗ್ರಹ ಪಡೆದು ಅವರ ಪ್ರಿಯ ಶಿಷ್ಯರಾದರು. ಶ್ರೀ ಮಹಾಗುರುಗಳು ಅವರನ್ನು ಪ್ರೀತಿಯಿಂದ ‘ತಾತಯ್ಯ’ಎಂದು ಸಂಬೋಧಿಸುತ್ತಿದ್ದರು. ಮುಂದೆ ಅವರ ಕುಟುಂಬದವರೆಲ್ಲಾ ಭಗವದನುಗ್ರಹಕ್ಕೆ ಪಾತ್ರರಾದರು. ಶ್ರೀ ಗುರುದಂಪತಿಗಳು ಶ್ರೀಕೃಷ್ಣರಾಯರು ನೂತನವಾಗಿ ನಿರ್ಮಿಸಿದ ಗೃಹಕ್ಕೆ ತಮ್ಮ ಪಾದ ಬೆಳಸಿ ಗೃಹಪ್ರವೇಶೋತ್ಸವವನ್ನು ನೆರವೇರಿಸಿಕೊಟ್ಟರು’ಎಂದು ಸ್ಮರಿಸುತ್ತಾರೆ. ಶ್ರೀಮತಿ ಕಾತ್ಯಾಯನಿದತ್ತರವರು ‘ಶ್ರೀ ಜನಾರ್ದನಸ್ವಾಮಿಯು ನೆಲೆಸಿರುವ ಬಸರೀಕಟ್ಟೆಯು ಶ್ರೀ ಸದ್ಗುರುದಂಪತಿಗಳ ಸಾನ್ನಿಧ್ಯದಿಂದ ‘ಶ್ರೀ ಕ್ಷೇತ್ರ ಬಸರೀಕಟ್ಟೆ’ ಆಯಿತು. ಅಲ್ಲಿ ಇಂತಹ ಭಾಗವತರು ನೆಲೆಸಿ ಭಗವಂತನ ಸೇವೆಮಾಡಿ ಅದಕ್ಕೆ ಇನ್ನೂ ಮೆರುಗನ್ನು ಕೊಟ್ಟರು. ಶಂಕ್ರಣ್ಣಯ್ಯನವರಿಂದ ಆದ ಮತ್ತೊಂದು ಮಹತ್ಕಾರ್ಯವೆಂದರೆ ಬಸರೀಕಟ್ಟೆಯ ಎಲ್ಲ ಕಾರ್ಯಕ್ರಮಗಳ ಫೋಟೋಗಳನ್ನು ತೆಗೆದಿದ್ದು. ಮೊದಲು ಬಸರೀಕಟ್ಟೆಯಲ್ಲಿ ಫೋಟೋ ತೆಗೆಯುವ ವ್ಯವಸ್ಥೆಯೇ ಇರಲಿಲ್ಲ. ಅದಕ್ಕೆ ಬೇಕಾದ ಕ್ಯಾಮರಗಳೂ ಇರಲಿಲ್ಲ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ಕಾರ್ಯಕ್ರಮಗಳಲ್ಲಿ ಅನೇಕ ಫೋಟೋಗಳನ್ನು ತೆಗೆದರು. ಹೀಗಾಗಿ ಕಾರ್ಯಕ್ರಮಗಳ ಅನೇಕ ಸನ್ನಿವೇಶಗಳು ಫೋಟೋ ಮೂಲಕ ಉಳಿದು ಮತ್ತೆ ಮತ್ತೆ ಅವುಗಳ ಅನುಸಂಧಾನ ಮಾಡಲು ಅನುಕೂಲವಾಯಿತು. ಶಂಕ್ರಣ್ಣಯ್ಯನವರಿಗೆ ಅನಂತಾನಂತ ಕೃತಜ್ಞತೆಗಳು ಮತ್ತು ಧನ್ಯವಾದಗಳು’ಎಂದು ಸ್ಮರಿಸುತ್ತಾರೆ. ‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ ಎಂಬ ಗೀತಾಚಾರ್ಯನ ಉಪದೇಶದಂತೆ ಪೂಜ್ಯ ಶಂಕ್ರಣ್ಣಯ್ಯನವರು ತಮ್ಮ ಜೀವನದ ವಿಧಾನವನ್ನು ಇಟ್ಟುಕೊಂಡು, ಬಸರೀಕಟ್ಟೆಯ ವಿವಿಧ ಕ್ಷೇತ್ರಗಳಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಸೇವೆ ನಡೆಸಿದ ಕರ್ಮಯೋಗಿಗಳು. ಶ್ರೀ ಗುರುದಂಪತಿಗಳ ಪಾವನಸ್ಮರಣೆಯೊಡನೆ ಅವರ ಪ್ರಿಯ ಶಿಷ್ಯರಾದ ಶ್ರೀಶಂಕ್ರಣ್ಣಯ್ಯನವರ ಸೇವಾಸಂಸ್ಮರಣೆಯನ್ನೂ ಮಾಡಿಕೊಳ್ಳುತ್ತಿದ್ದೇವೆ’ಎನ್ನುತ್ತಾರೆ ಶ್ರೀನಿವಾಸರು. ಶ್ರೀಮತಿ ಕಾತ್ಯಾಯನಿದತ್ತರವರು ‘ನಾನು ಇನ್ನೊಂದು ವಿಶೇಷತೆ ಅವರಲ್ಲಿ ಕಂಡದ್ದು ಎಂದರೆ ಅಧ್ಯಾತ್ಮ ಜೀವನಕ್ಕಾಗಿ ಅವರು ಮಾಡಿದ ತ್ಯಾಗ. ಅವರು ತುಂಬ ಸ್ಥಿತಿವಂತರಾಗಿದ್ದವರು. ಆಗಿನ ಕಾಲಕ್ಕೆ ಡಿಗ್ರಿಮಾಡುವುದು ಎಂದರೆ ತುಂಬಾ ಓದಿದ ಹಾಗೆ. ಅವರಲ್ಲಿ ಪಾಂಡಿತ್ಯವಿತ್ತು. ಅವರು ಪ್ರಸಿದ್ಧವಾದ ಗುಡ್ಡೇತೋಟದ ಕುಟುಂಬಕ್ಕೆ ಸೇರಿದವರಾಗಿದ್ದರು. ಅಪಾರವಾದ ಆಸ್ತಿ ಇತ್ತು. ಅವರು ಅಷ್ಟು ಸ್ಥಿತಿವಂತರಾದರೂ ಅವೆಲ್ಲವನ್ನೂ ಬಿಟ್ಟು ಗುರುದಾಸರ ಜೊತೆಯಲ್ಲಿಯೇ ಭಗವಂತನಿಗಾಗಿ ಎಂದು ಕೊನೆಯ ತನಕ ಕೆಲಸಮಾಡಿದರು. ಇದು ಅವರ ದೊಡ್ಡತನ. ಅವರು ಸದ್ಗುರು ವಿದ್ಯಾಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿಯೂ ತುಂಬಾ ಉತ್ಸಾಹದಿಂದ ತೊಡಗಿಸಿಕೊಂಡು ತಮ್ಮ ದೇಹಾಯಾಸವನ್ನೂ ಗಮನಿಸದೆ ಕಾರ್ಯ ಪ್ರವೃತ್ತರಾಗಿರುತ್ತಿದ್ದರು. ಉದಾಹರಣೆಗೆ ಗಣೇಶನ ಹಬ್ಬದಲ್ಲಿ ಶಾಲೆಯಲ್ಲಿ 21 ದಿವಸ ಗಣೇಶನನ್ನು ಕೂರಿಸುತ್ತಿದ್ದರು. ಆಗ ಪ್ರತಿದಿನವೂ ಪೂಜಾವ್ಯವಸ್ಥೆ, ನೈವೇದ್ಯ ವ್ಯವಸ್ಥೆ ಪ್ರತಿಯೊಂದನ್ನೂ ಶಂಕ್ರಣ್ಣಯ್ಯನವರೇ ಜವಾಬ್ದಾರಿ ತೆಗೆದುಕೊಂಡು ಮಾಡುತ್ತಿದ್ದರು. ಶ್ರೀಮತಿ ಕಲ್ಯಾಣಮ್ಮನವರು ಹೇಳುತ್ತಿದ್ದರು, ‘ಶಂಕರರಾಯರು ಇದ್ದುಬಿಟ್ಟರೆ ನನಗೆ ಯಾವ ಯೋಚನೆಯೂ ಇರುವುದಿಲ್ಲ. ಎಲ್ಲಾ ಕೆಲಸವನ್ನೂ ಅವರೇ ಮಾಡುತ್ತಾರೆ ಮತ್ತು ಮಾಡಿಸುತ್ತಾರೆ.’ ಗುರುದಾಸರಿಗೆ ಅವರು ಬಲಗೈಯಂತೆ ಬೆಂಬಲವಾಗಿದ್ದರು. ಗುಡ್ಡೇತೋಟ, ತಲವಾನೆ, ಬೆಂಡೆಹೆಕ್ಕಲು, ಕೆರೆಮನೆ, ಹೊನ್ನಗುಂಡಿ, ಹಳುವಳ್ಳಿ, ಎಲೆಮಡಿಲು-- ಹೀಗೆ ಅನೇಕ ಊರಿನ ಜನರು ಗಣೇಶನಿಗೆ ನೈವೇದ್ಯಕ್ಕೆ ಸಿದ್ಧಪಡಿಸಿಕೊಂಡು ತರುತ್ತಿದ್ದರು. ಅವೆಲ್ಲವುಗಳ ಜವಾಬ್ದಾರಿಯನ್ನೂ ಶಂಕ್ರಣ್ಣಯ್ಯನವರೇ ನಿರ್ವಹಿಸುತ್ತಿದ್ದರು. ಇದಲ್ಲದೆ ಶಾಲಾವಾರ್ಷಿಕೋತ್ಸವ, ತ್ಯಾಗರಾಜರ-ಪುರಂದರದಾಸರ ಆರಾಧನೆ ಇತ್ಯಾದಿ ಬೇರೆ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಶಂಕರಣ್ಣಯ್ಯನವರ ಪಾತ್ರ ಅತಿ ದೊಡ್ಡದಾಗಿರುತ್ತಿತ್ತು. ಶ್ರೀ ಗುರುದಂಪತಿಗಳು ಬಸರೀಕಟ್ಟೆಗೆ ದಯಮಾಡಿಸಿದಾಗಲೂ ಕೆಲವು ವಿಶೇಷ ಕಾರ್ಯಕ್ರಮಗಳು ಸಂಪನ್ನವಾದವು. 1964ರಲ್ಲಿ ಅವರ ಸನ್ನಿಧಿಯಲ್ಲಿ ಶ್ರೀ ತ್ಯಾಗರಾಜ-ಪುರಂದರದಾಸರ ಆರಾಧನೆಗಳು ಸಂಪನ್ನವಾದವು. ಅಂದಿನ ಕಾರ್ಯಕ್ರಮಕ್ಕೆ ಸಭಾವೇದಿಕೆಯನ್ನು ಸಿದ್ಧಪಡಿಸುವುದು, ಅಧ್ಯಕ್ಷ ಪೀಠವನ್ನು ಸಿದ್ಧಗೊಳಿಸುವುದು ಇವೆಲ್ಲಾ ಕಾರ್ಯಗಳು ಶಂಕರಣ್ಣಯ್ಯನವರ ನೇತೃತ್ವದಲ್ಲಿ ಆಗಿದ್ದವು. ನಂತರ ಸಾಕ್ಷಾದ್ಗುರುದೇವರೇ ಆಗಮಿಸಿ ಅಧ್ಯಕ್ಷಪೀಠವನ್ನು ಅಲಂಕರಿಸಿದರು. ಅವರ ದಿವ್ಯಾಧ್ಯಕ್ಷತೆಯಲ್ಲಿ ಸಮಾರಂಭವು ತುಂಬಾ ಚೆನ್ನಾಗಿ ನಡೆಯಿತು. ನಾವೆಲ್ಲರೂ ಅದರಲ್ಲಿ ಭಾಗವಹಿಸುವ ಭಾಗ್ಯವನ್ನು ಪಡೆದು ಬಂದಿದ್ದೆವು. ಇದರಂತೆ ನಡೆದ ಇನ್ನೊಂದು ಕಾರ್ಯಕ್ರಮವೆಂದರೆ ಶ್ರೀ ಶಂಕರಜಯಂತೀ ಮಹೋತ್ಸವ. ಇದು ಶ್ರೀಗುರುದಂಪತಿಗಳ ಸನ್ನಿಧಿಯಲ್ಲಿ ನೆರವೇರಿತು. ಆ ದಿನ ನೂರಾರು ಜನರು ದೇವಸ್ಥಾನದ ಕೆಳಗಿನ ಚಂದ್ರಶಾಲೆಯಲ್ಲಿ ಸೇರಿದ್ದರು. ಇದಕ್ಕೆ ಬೇಕಾದ ಅನೇಕ ಏರ್ಪಾಡುಗಳು ಶಂಕರಣ್ಣಯ್ಯನವರ ನೇತೃತ್ವದಲ್ಲೇ ನಡೆದಿದ್ದವು. ಶ್ರೀ ಗುರುದೇವರು ಶಂಕರಜಯಂತೀ ಮಹೋತ್ಸವದ ಪ್ರಾರಂಭವನ್ನು ತಮ್ಮ ಪ್ರಣವ ಘೋಷದಿಂದ ನೆರವೇರಿಸಿ, ಭಜಗೋವಿಂದಂ ಸ್ತೋತ್ರಗಳಲ್ಲಿ ಕೆಲವನ್ನು ಗಾನಮಾಡಿದರು. ಅನಂತರ ವಿದ್ಯಾಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಶ್ರೀ ಗುರುದೇವರೇ ರಾಗಸಂಯೋಜನೆ ಮಾಡಿದ್ದ ಭಜಗೋವಿಂದಂ ಸ್ತೋತ್ರಗಳನ್ನೂ ಹಾಡಿ ಅದರ ಅರ್ಥವನ್ನು ಹಾವಭಾವದೊಡನೆ ವಿವರಿಸಿದರು. ಈ ಸ್ತೋತ್ರರೂಪಕವನ್ನು ಸ್ವತಃ ಗುರುದಾಸರೇ ರಚಿಸಿದ್ದರು. ಅದರಲ್ಲಿ ಭಾಗವಹಿಸುವ ಅವಕಾಶ ನನಗೂ ದೊರಕಿತ್ತು. ಅದರಲ್ಲಿ ಪೀಠಿಕೆಯನ್ನು ನಾನು ಹೇಳುವುದು; ಸ್ತೋತ್ರದ ಗಾಯನವನ್ನು ಗುರುದಾಸರು ಅವರ ತಂಡದೊಡನೆ ಹಾಡುವುದು; ನಂತರ ಅರ್ಥವನ್ನು ನಾನು ಹೇಳುವುದು; ಹೀಗಿತ್ತು ಅವರ ಯೋಜನೆ. ಶಂಕರಣ್ಣಯ್ಯನವರು ಅದಕ್ಕೆ ನಮಗೆಲ್ಲಾ ತುಂಬಾ ತರಬೇತಿಯನ್ನು ಕೊಟ್ಟು ನಮ್ಮನ್ನೆಲ್ಲಾ ತಿದ್ದಿ ತುಂಬಾ ಶ್ರಮವಹಿಸಿದ್ದರು. ಚಿಕ್ಕ ಹುಡುಗಿಯಾಗಿದ್ದ ನಾನು ಸ್ತೋತ್ರಕ್ಕೆ ಕೊಟ್ಟ ವಿವರಣೆಯನ್ನೂ, ಅದನ್ನು ಹೇಳಿದ ರೀತಿಯನ್ನೂ ಕೇಳಿ ಗುರುದಂಪತಿಗಳು ತುಂಬಾ ಸಂತೋಷಪಟ್ಟರು. ಗುರುದಂಪತಿಗಳ ಸನ್ನಿಧಿಯಲ್ಲಿ ಇಂತಹ ಅವಕಾಶವನ್ನು ಮಾಡಿಕೊಟ್ಟ ಪೂಜ್ಯರಾದ ಗುರುದಾಸರಿಗೂ ಮತ್ತು ಶಂಕರಣ್ಣಯ್ಯನವರಿಗೂ ಶಿರಸಾ ಸಾಷ್ಟಾಂಗವಂದನೆಗಳೊಂದಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ ಅದು ಅಲ್ಪವೇ. ಬಸರೀಕಟ್ಟೆ ಮಂದಿರದಲ್ಲಿ ಕಾರ್ಯಕ್ರಮಗಳ ಜವಾಬ್ದಾರಿ ಅವರದ್ದೇ ಆಗಿತ್ತು. ಕೆಲವೊಮ್ಮೆ ಅವರು ಇಲ್ಲದಿರುವಾಗ ನನಗೆ ಆ ಜವಾಬ್ದಾರಿಯನ್ನು ಕೊಡುತ್ತಿದ್ದರು. ಅವರು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದ ಕೆಲಸವನ್ನು ನೋಡಿ ನಾನು ಅದನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡಿರುವೆ. ಅವರು ತುಂಬಿದ ಕೊಡ; ಆದರ್ಶವ್ಯಕ್ತಿ; ಪ್ರೀತಿಯ ಆಗರ; ಸರಳಜೀವಿ; ಸೇವಾ ಮನೋಭಾವವುಳ್ಳವರು; ಸದಾ ಹಸನ್ಮುಖಿ; ವಿನಯಸಂಪನ್ನರು; ಬಡವ ಬಲ್ಲಿದರೆನ್ನುವ- ಭೇದ ಭಾವವಿಲ್ಲದೆ ಸಮದೃಷ್ಟಿಯಿಂದ ಎಲ್ಲರನ್ನೂ, ನನ್ನಂತೆ ಇದ್ದ ಚಿಕ್ಕ ಮಕ್ಕಳನ್ನೂ ಪ್ರೋತ್ಸಾಹಿಸುತ್ತಿದ್ದರು. ಅವರು ಅನೇಕ ಸದ್ಗುಣಗಳ ಆಗರವಾಗಿದ್ದರು. ಪೂಜ್ಯ ಗುರುದಾಸರೂ ಮತ್ತು ಶಂಕರರಾಯರೂ ಎರಡು ದೇಹ ಒಂದು ಆತ್ಮದಂತೆ ಇದ್ದವರು. ಶ್ರೀ ಸದ್ಗುರು ವಿದ್ಯಾಶಾಲೆಯ ಪ್ರವೃದ್ಧಿಗೆ ಶಂಕರರಾಯರ ಯೋಗದಾನ ಅಗಾಧವಾದುದು. ‘ನನಗೆ ಅಲ್ಪಾಯುಷ್ಯ’ಎಂದು ಶಂಕರರಾಯರು ಅವರ ಅಣ್ಣನ ಮಕ್ಕಳಿಗೆ ಹೇಳುತ್ತಿದ್ದರಂತೆ. ‘ನಮ್ಮ ತಂದೆಯವರು ಅನಿರೀಕ್ಷಿತವಾಗಿ ದೈವಾಧೀನರಾದಾಗ ನಮಗೆಲ್ಲರಿಗೂ ತುಂಬಾ ದಿಗ್ಭ್ರಮೆಯಾಗಿತ್ತು. ಆ ಸಮಯದಲ್ಲಿ ಅವರು ನೀಡಿದ ಧೈರ್ಯ, ಆಸರೆಯನ್ನು ಮರೆಯುವಂತೆಯೇ ಇಲ್ಲ. ನಮ್ಮ ತಂದೆಯವರ ಮರಣವನ್ನು ತುಂಬಾ ಹಚ್ಚಿಕೊಂಡಿದ್ದ ಅವರು ನಮ್ಮ ತಂದೆಯ ಮಿತ್ರರಲ್ಲಿ ‘ಗುರುದಾಸರು ಹೊರಟ ಮೇಲೆ ನನಗೆ ಇಲ್ಲಿರುವ ಆಸಕ್ತಿಯೇ ಹೊರಟುಹೋಗಿದೆ’ ಎಂದು ಹೇಳುತ್ತಿದ್ದರಂತೆ.’ ಎಂದು ಗುರುದಾಸರ ಮಗಳು ಶ್ರೀಮತಿ ವಿಜಯವಲ್ಲೀ ನೆನೆಪಿಸಿಕೊಳುತ್ತಾರೆ. ಶ್ರೀ ಗುರುದಾಸರು 1978 ಮಾರ್ಚ್ ತಿಂಗಳಿನಲ್ಲಿ ಭಗವಂತನ ಪಾದವನ್ನು ಸೇರಿಕೊಂಡರು. ಹಾಗೆಯೇ ಗುರುದಾಸರು ಪರಮಪದಿಸಿದ ಒಂದೇ ತಿಂಗಳಿನಲ್ಲಿ ಶ್ರೀಶಂಕರಣ್ಣಯ್ಯನವರೂ ಕೂಡಾ ಭಗವಂತನ ಪಾದವನ್ನು ಸೇರಿಕೊಂಡುಬಿಟ್ಟರು. ಇರುವಷ್ಟು ದಿನ ಭಗವಂತನಿಗಾಗಿ ಬದುಕಿದರು; ಕೊನೆಗೆ ಅವನಲ್ಲಿಯೇ ಲೀನವಾದರು. ಅವರ ಆದರ್ಶ ಜೀವನವೇ ನಮಗೆ ಜೀವನದಲ್ಲಿ ಸ್ಫೂರ್ತಿಯಾಗಿದೆ. ಅವರಲ್ಲಿದ್ದ ಸದ್ಗುಣಗಳು ನಮ್ಮಲ್ಲಿಯೂ ಬರಲಿ ಎಂದು ಬೇಡುತ್ತಾ, ಅವರಂತೆಯೇ ಭಗವಂತನ ಸೇವೆ ಮಾಡುವ ಮನಸ್ಸು ನಮಗೂ ಉಂಟಾಗಲಿ ಎಂದು ಬೇಡುತ್ತಾ ಭಾಗವತರ ನೆನಪು ದೋಷರಾಶಿಗಳ ಕಳೆಯಲಿ ಎಂದು ಪ್ರಾರ್ಥಿಸುತ್ತಾ ಈ ಸ್ಮೃತಿಪುಷ್ಪವನ್ನು ಭಗವಂತ ಭಗವತಿಯರ ಪಾದಾರವಿಂದಗಳಿಗೆ ಸಮರ್ಪಿಸುತ್ತೇವೆ.