ಪ್ರತ್ಯಾಹಾರ ಎಂದರೆ ಹಿಂದಕ್ಕೆಳೆದುಕೊಳ್ಳುವುದು ಎಂದರ್ಥ. ಮನಸ್ಸನ್ನು ಹೊರ ವಿಷಯಗಳಿಂದ ಹಿಂದಕ್ಕೆ ಸೆಳೆದು ಅಂತರ್ಮುಖವಾಗಿಸುವುದೇ ಅಷ್ಟಾಂಗಯೋಗದ ಐದನೇ ಮೆಟ್ಟಿಲಾದ ಪ್ರತ್ಯಾಹಾರ.
ಮನಸ್ಸು ಅಂತರ್ಮುಖವಾಗಿರುವುದು ಅಥವಾ ಬಹಿರ್ಮುಖವಾಗಿರುವುದು ಎಂದರೇನು? ನಮ್ಮ ಜಾಗೃದಾವಸ್ಥೆಯಲ್ಲಿ ಮನಸ್ಸು ಇಂದ್ರಿಯಗಳೊಡಗೂಡಿ ಬಾಹ್ಯಪ್ರಪಂಚದೊಂದಿಗೆ ಸ್ಪಂದಿಸುತ್ತಿರುವಾಗ ಮನಸ್ಸು ಬಹಿರ್ಮುಖವಾಗಿರುತ್ತದೆ. ಇದು ನಮಗೆ ಪರಿಚಿತವಾದ ಸ್ಥಿತಿಯಾಗಿರುತ್ತದೆ. ಆದರೆ, ಮನಸ್ಸು ಇಂದ್ರಿಯದ ಸಂಪರ್ಕವನ್ನು ಕಳಚಿಕೊಂಡಿರುವ ಸ್ಥಿತಿಯನ್ನೂ ಅರ್ಥ ಮಾಡಿಕೊಂಡರೆ, ಪ್ರತ್ಯಾಹಾರ ಸುಲಭವಾಗಿ ಅರ್ಥವಾಗುತ್ತದೆ. ಉದಾಹರಣೆಗೆ ಮಕ್ಕಳು ಓದುವುದರಲ್ಲಿ ಬಹಳ ಮಗ್ನರಾಗಿರುವಾಗ , ಅವರ ಲಕ್ಷ್ಯವೆಲ್ಲಾ ಕಣ್ಣಿನೊಡಗೂಡಿ ಪುಸ್ತಕದ ಕಡೆಗಿರುತ್ತದೆ. ಆಗ ತಾಯಿಯು ಊಟಕ್ಕೆ ಕರೆದರೆ, ಆಕೆಯ ಮಾತಿನ ಶಬ್ದತರಂಗಗಳು ಕಿವಿಯವರೆವಿಗೂ ತಲುಪಿದರೂ ಸಹ ಮಕ್ಕಳಿಗೆ ತಾಯಿಯ ಮಾತು ಕೇಳಿರುವುದಿಲ್ಲ. ಈ ಉದಾಹರಣೆಯಲ್ಲಿ ಮನಸ್ಸು ಕಿವಿಯಿಂದ ವಿಯೋಗಗೊಂಡಿತ್ತು, ಆದರೆ ಕಣ್ಣಿನೊಡಗೂಡಿ ಬಹಿರ್ಮುಖವಾಗಿಯೇ ಇತ್ತು. ಹಾಗೆಯೇ ಐದು ಇಂದ್ರಿಯಗಳಿಂದಲೂ ಹಿಂತಿರುಗಿ ಮನಸ್ಸು ಅಂತರ್ಮಗ್ನವಾಗುವುದಕ್ಕೂ ಸಾಧ್ಯವಿದೆ ಮತ್ತು ಇದನ್ನೇ ಪ್ರತ್ಯಾಹಾರವೆನ್ನುವುದು. ಗಾಢನಿದ್ರೆಯಲ್ಲಿಯೂ ಮನಸ್ಸು ತನ್ನ ಹಿಂದಿನ ಅವಸ್ಥೆಗಳಲ್ಲಿ ಲಯವಾಗುತ್ತದೆ. ಆದರೆ ನಿದ್ರಾಪೂರ್ವದಲ್ಲಿ ಉಂಟಾಗುವ ಅಂತರ್ಮುಖತೆಯಲ್ಲಿ ಮನಸ್ಸಿಗೆ ಅರಿವಿರುವುದಿಲ್ಲವಾದುದರಿಂದ ಇದನ್ನು ಯೋಗಾಂಗವಾದ ಪ್ರತ್ಯಾಹಾರವೆಂದು ಹೇಳುವುದಿಲ್ಲ. ಯೋಗಾಂಗವಾದ ಪ್ರತ್ಯಾಹಾರದಲ್ಲಿ ಬಾಹ್ಯಪ್ರಪಂಚದ ಅರಿವನ್ನು ಕಳಚಿಕೊಂಡಿದ್ದರೂ ಸಹ ಒಳಪ್ರಪಂಚದ ಅರಿವಿರುತ್ತದೆ.
ಯೋಗಶಾಸ್ತ್ರಗಳಲ್ಲಿ ಐದು ವಿಧವಾಗಿ ಪ್ರತ್ಯಾಹಾರ ಸಾಧನೆಯನ್ನು ಹೇಳುತ್ತಾರೆ. ಇವುಗಳಲ್ಲಿ ಐದನೆಯದಾದ ಪ್ರಾಣಧಾರಣೆಯನ್ನು ಆಸನಾಭ್ಯಾಸಿಗಳು ಹಲವೊಮ್ಮೆ ಶವಾಸನದೊಂದಿಗೆ ಸೇರಿಸಿ ಮಾಡುತ್ತಾರೆ. ಕಾಲಿನಿಂದ ಪ್ರಾರಂಭಿಸಿ ಪಾದಾಂಗುಷ್ಠ, ಹಿಮ್ಮಡಿ, ಹರಡು, ಮಂಡಿ, ತೊಡೆ, ಲಿಂಗ, ನಾಭಿ, ಹೃದಯ, ಕಂಠಕೂಪ, ತಾಲು, ನಾಸ, ಕಣ್ಣುಗಳು, ಭ್ರೂಮಧ್ಯ, ಹಣೆ ಮತ್ತು ನೆತ್ತಿ - ಈ ಜಾಗಗಳಲ್ಲಿ ಮನಸ್ಸನ್ನು ನಿಲ್ಲಿಸುವುದರಿಂದ ಮನಸ್ಸಿನ ಜೊತೆಯಲ್ಲಿ ಪ್ರಾಣವೂ ಈ ಜಾಗಗಳಲ್ಲಿ ಧಾರಣೆಯಾಗುತ್ತದೆ. ಇದರಿಂದ ಮನಸ್ಸು ಅಂತರ್ಮುಖವಾಗುವುದಲ್ಲದೇ, ವಿಶ್ರಾಂತವೂ (Relaxed) ಆಗುತ್ತದೆ.
ಶ್ರೀರಂಗಮಹಾಗುರುಗಳು, ಭಾರತೀಯ ವಿದ್ಯೆಗಳೆಲ್ಲವೂ ಯೋಗದ ಅಂತಿಮ ಸ್ಥಿತಿಗೆ ತಲುಪಿಸುವ ಸಾಮರ್ಥ್ಯವನ್ನು ಹೊಂದಿವೆ ಎನ್ನುವ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸುತ್ತಿದ್ದರು. ಉದಾಹರಣೆಗೆ ಸರಿಯಾಗಿ ಗಾನ ಮಾಡಲ್ಪಟ್ಟ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಿದ್ದರೆ ತಲ್ಲೀನತೆಯುಂಟಾಗಿ ತಾನಾಗಿಯೇ ಕಣ್ಣುಮುಚ್ಚುವಂತಾಗುತ್ತದೆ. ಇದು ಪ್ರತ್ಯಾಹಾರದ ಒಂದು ಆರಂಭಿಕ ನಡೆ. ನಾದಯೋಗಿಗಳ ಗಾನವನ್ನೇ ಅನುಸಂಧಾನ ಮಾಡಿದರೆ, ಪ್ರತ್ಯಾಹಾರವು ಸಂಪೂರ್ಣವಾಗಿ ಉಂಟಾಗುವುದಲ್ಲದೇ, ನಾದಯೋಗದ ಮೂಲಕ ಸಮಾಧಿಸ್ಥಿತಿಯನ್ನೂ ತಲುಪಬಹುದು.
ಹೀಗೆ ಉಳಿದ ಯೋಗಾಂಗಗಳಂತೆಯೇ, ಪ್ರತ್ಯಾಹಾರವೂ ಸಹ ಅಷ್ಟಾಂಗಯೋಗದಲ್ಲಲ್ಲದೇ ಅನೇಕ ಭಾರತೀಯ ವಿದ್ಯೆಗಳಲ್ಲಿ ಅಂತರ್ಗತವಾಗಿದೆ.
ಸೂಚನೆ : 6/2/2021 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.