ಡಾ. ಎನ್. ಎಸ್. ಸುರೇಶ್
(ಪ್ರತಿಕ್ರಿಯಿಸಿರಿ lekhana@ayvm.in)
ಕವಿ ಮತ್ತು ಪರಮಾತ್ಮಾ
ಪರಮಾತ್ಮನೇ ಆದಿ ಕವಿ. ಪರಮಾತ್ಮನನ್ನು 'ಕವಿಂ ಕವೀನಾಮ್', 'ಕವಿಗಳಿಗೂ ಕವಿ' ಎಂದು ವೇದವು ವರ್ಣಿಸಿದೆ. "ಬ್ರಹ್ಮಣಃ ಕ್ಷತ್ರಂ ನಿರ್ಮಿತಮ್ | ಬ್ರಹ್ಮಬ್ರಾಹ್ಮಣ ಆತ್ಮನಾ | ಅಂತರಸ್ಮಿನ್ ಇಮೇ ಲೋಕಾಃ | ಅಂತರ್ವಿಶ್ವಮಿದಂಜಗತ್ | ಬ್ರಹ್ಮೈವಭೂತಾನಾಂ ಜ್ಯೇಷ್ಠಮ್ | ತೇನ ಕೋಽರ್ಹತಿ ಸ್ಪರ್ಧಿತುಮ್ |""ಬ್ರಹ್ಮನಿಂದಲೇ ಎಲ್ಲವೂ ಸೃಷ್ಟಿಸಲ್ಪಟ್ಟಿದೆ. ಅವನಲ್ಲಿಯೇ ಈ ಎಲ್ಲಾ ಲೋಕಗಳೂ ಇವೆ. ಬ್ರಹ್ಮನೇ ಎಲ್ಲಾ ಜೀವಿಗಳಿಗೂ ಜ್ಯೇಷ್ಠನು. ಅವನೊಡನೆ ಸ್ಪರ್ಧಿಸಲು ಯಾರಿಗೆ ತಾನೇ ಸಾಧ್ಯ ?' ಎಂದು ವೇದ ವಾಣಿಯು ಬ್ರಹ್ಮನ ಮಹಿಮೆಯನ್ನು ಕೊಂಡಾಡುತ್ತದೆ. ಕವಿಯೂ ಕೂಡ ಆ ಪರವಸ್ತುವನ್ನು ಅನುಭವಿಸಿದವನಾಗಿರಬೇಕು. ಒಳ ಬೆಳಕನ್ನು ಕಂಡವನಾಗಿರಬೇಕು. ಅಂತಹ ಕವಿಯು ತಾನು ಅನುಭವಿಸಿದ ಆನಂದವನ್ನು ತನ್ನ ವಾಗರ್ಥ ಸಂಪತ್ತಿನಿಂದ ಓದುಗರ, ಸಹೃದಯರ ಅನುಭವಕ್ಕೆ ತಂದು ಕೊಡುವ ಸಾಮರ್ಥ್ಯವನ್ನು ಹೊಂದಿರುವವನಾಗಿರುತ್ತಾನೆ. ಇಂತಹ ಕವಿಯನ್ನು ವರ್ಣಿಸುತ್ತಾ ಶ್ರೀ ಶಂಕರಭಗವತ್ಪಾದರು ತಮ್ಮ ಜೀವನ್ಮುಕ್ತಾನಂದಲಹರಿಯಲ್ಲಿ - ಇಮಾಂ ಮುಕ್ತಾವಸ್ಥಾಂ ಪರಮಶಿವಸಂಸ್ಥಾಂ ಗುರುಕೃಪಾ-ಸುಧಾಪಾಂಗಾವಾಪ್ಯಾಂ ಸಹಜ-ಸುಖ-ವಾಪ್ಯಾಮನುದಿನಮ್ | ಮುಹುರ್ಮಜ್ಜನ್ಮಜ್ಜನ್ಭಜತಿ ಸುಕೃತೀ ಚೇನ್ನರವರಃ ತದಾ ಯೋಗೀ ತ್ಯಾಗೀ ಕವಿರಿತಿ ವದಂತೀಹ ಕವಯಃ || " ಯಾವನು ಗುರುಕೃಪಾಮೃತವೆಂಬ ನೋಟದಿಂದ ತನಗೆ ದೊರೆತ ಸಹಜಸುಖವೆಂಬ ಬಾವಿಯಲ್ಲಿ ದಿನದಿನವೂ ತನ್ನನ್ನು ಮುಳುಗಿಸಿಕೊಂಡು ಮುಕ್ತನಾಗಿ ಪರಮಾತ್ಮನಲ್ಲಿ ಬೆರೆತು ಆನಂದವನ್ನು ಅನುಭವಿಸುತ್ತಿರುವನೋ ಅವನನ್ನೇ ಕವಿಗಳು 'ತ್ಯಾಗೀ' 'ಯೋಗೀ' 'ಕವಿ' ಗಳೆಂದು ಬಣ್ಣಿಸಿದ್ದಾರೆ." ಎಂಬುದಾಗಿ ತಿಳಿಸಿದ್ದಾರೆ. ಇಂತಹವನಲ್ಲವೇ 'ಕವಿ' ಪದಕ್ಕೆ ಯೋಗ್ಯನಾದವನು ? ಏಲಕ್ಕಿ ತಿಂದವನ ಬಾಯಿಯಿಂದ ಬರುವ ಮಾತುಗಳು ಆ ಏಲಕ್ಕಿಯ ಸೌಗಂಧ್ಯವನ್ನು ಹೊತ್ತುತರುವಂತೆ ತಾನು ಒಳಗೆ ಅನುಭವಿಸಿದ ಆನಂದವನ್ನು, ಒಳಬೆಳಕನ್ನು ನೋಡುತ್ತಾ ವಾಗರ್ಥಗಳ ರೂಪವಾಗಿ ಹೊರಹೊಮ್ಮಿದ ಸಾಹಿತ್ಯವಲ್ಲವೇ 'ಕಾವ್ಯ' ಪದಕ್ಕೆ ಭಾಜನವಾಗುವುದು ? ವಾಲ್ಮೀಕಿಯೇ ಆದಿಕವಿ, ಶ್ರೀಮದ್ರಾಮಾಯಣವೇ ಆದಿಕಾವ್ಯ ಮೇಲೆ ವರ್ಣಿಸಿದ 'ಕವಿ' ಪದದ ವಿವರಣೆಗೆ ಭಾಜನರಾದವರಲ್ಲಿ ಮೊದಲಸ್ಥಾನ ವಾಲ್ಮೀಕಿಗಳಿಗೆ ಸಲ್ಲುತ್ತದೆ. ಹೃದಯಾಕಾಶದಲ್ಲಿ ಪರಂಜ್ಯೋತೀರೂಪದಲ್ಲಿ ಬೆಳಗುತ್ತಿರುವ ಯಾವ ಶ್ರೀರಾಮನನ್ನು ನಾರದಾದಿ ಮುನಿಗಳ ಉಪದೇಶದಿಂದಲೂ ಸ್ವತಃ ತಪಸ್ಸಿನಿಂದಲೂ ಕಂಡುಕೊಂಡರೋ, ಅದೇ ಶ್ರೀರಾಮನ ಜೀವನತತ್ತ್ವವನ್ನು ತಮ್ಮ ಕಾವ್ಯವಾದ ಶ್ರೀಮದ್ರಾಮಾಯಣದಲ್ಲಿ ವರ್ಣಿಸಿದ್ದಾರೆ. 'ವೇದವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ| ವೇದಃ ಪ್ರಾಚೇತಸಾದಾಸೀತ್ ಸಾಕ್ಷಾತ್ ರಾಮಾಯಣಾತ್ಮನಾ|| ಎಂದರೆ, 'ವೇದವೇದ್ಯನಾದ ಪರಮಪುರುಷನಾದ ಶ್ರೀರಾಮನು ದಶರಥಪುತ್ರನಾಗಿ ಅವತರಿಸಿರಲು, ವಾಲ್ಮೀಕಿಮುನಿಗಳಿಂದ ವೇದವು ರಾಮಾಯಣರೂಪದಲ್ಲಿ ಹೊರಹೊಮ್ಮಿತು' ಎಂಬ ವರ್ಣನೆಯು ಆದಿಕವಿ ವಾಲ್ಮೀಕಿಯ ಮತ್ತು ಆದಿಕಾವ್ಯ ರಾಮಾಯಣದ ಮಹತ್ತ್ವವನ್ನು ಸಾರುತ್ತದೆ. ಜನ್ಮ-ವ್ಯಾಧಿ-ಜರಾ-ವಿಪತ್ತಿ-ಮರಣಾದಿ ಅನೇಕ ತೊಂದರೆಗಳಿಂದ ಕೂಡಿರುವ ಸಂಸಾರವನ್ನು ದಾಟಿಸಿ ಸಹೃದಯಿಯಾದ ಓದುಗನನ್ನು ಶಾಶ್ವತವಾದ ಬ್ರಹ್ಮಪದದಲ್ಲಿ ನಿಲ್ಲಿಸುತ್ತದೆ ಆದಿಕಾವ್ಯವಾದ ಶ್ರೀಮದ್ರಾಮಾಯಣ. ಅಂತೆಯೇ, ವ್ಯಾಸಮಹರ್ಷಿಗಳ ಮಹಾಭಾರತ 'ಪಂಚಮವೇದ'ವೆಂದೇ ಪ್ರಖ್ಯಾತವಾಗಿದೆ, ಸಂಸ್ಕೃತವಾಙ್ಮಯದ ಪಂಚಮಹಾಕಾವ್ಯಗಳಾದ ಕವಿಕುಲಗುರು ಮಹರ್ಷಿ ಕಾಳಿದಾಸನ ರಘುವಂಶ ಮತ್ತು ಕುಮಾರಸಂಭವ, ಭಾರವಿಯ ಕಿರಾತಾರ್ಜುನೀಯ, ಮಾಘಮಹಾಕವಿಯ ಶಿಶುಪಾಲವಧೆ ಮತ್ತು ಶ್ರೀಹರ್ಷಕವಿಯ ನೈಷಧ ಮಹಾಕಾವ್ಯಗಳು ಪ್ರಸಿದ್ಧಕೃತಿಗಳು.