Wednesday, February 3, 2021

ಅಸೂಯೆಯ ಸದುಪಯೋಗ (Asuyeya Sadupayoga)

ಲೇಖಕಿ: ಸೌಮ್ಯಾ ಪ್ರದೀಪ್

(ಪ್ರತಿಕ್ರಿಯಿಸಿರಿ lekhana@ayvm.in)




ಅಸೂಯೆಯ ಸದುಪಯೋಗ ಲೇಖಕಿ: ಸೌಮ್ಯಾ ಪ್ರದೀಪ್ ಒಮ್ಮ ವೈಕುಂಠದಲ್ಲಿ ನಾರದರು ಹಾಗೂ ತುಂಬುರರು ಮಹಾವಿಷ್ಣುವಿನ ಮುಂದೆ ಗಾಯನ ಸೇವೆಯನ್ನು ಮಾಡಿ ವಿಷ್ಣುವಿನ ಪ್ರಶಂಸೆಗೆ ಪಾತ್ರರಾದರು. ನಾರದರು ಮಹಾವಿಷ್ಣುವಿನ ಬಳಿಸಾರಿ ಕುತೂಹಲದಿಂದ ನಮ್ಮಿಬ್ಬರಲ್ಲಿ ಯಾರ ಗಾಯನ ಉತ್ಕೃಷ್ಟವಾಗಿತ್ತು ಎಂದು ಪ್ರಶ್ನಿಸಿದಾಗ, ನಾರಾಯಣನು ನೀವಿಬ್ಬರೂ ನನ್ನ ಮಕ್ಕಳೇ, ಇಬ್ಬರ ಗಾಯನವೂ ಪ್ರಶಂಸನೀಯವಾಗಿತ್ತು ಎಂದು ಹೇಳುತ್ತಾನೆ. ಆದರೂ ನಾರದರು ಅನೇಕಬಾರಿ ಪ್ರಶ್ನಿಸಲಾಗಿ ತುಂಬುರರ ಗಾಯನವೇ ಅತ್ಯುತ್ಕೃಷ್ಟವಾಗಿತ್ತು ಎಂಬ ಉತ್ತರವನ್ನು ವಿಷ್ಣುವಿನಿಂದ ಪಡೆದ ನಾರದರ ಮನದಲ್ಲಿ ಅಸೂಯೆ ಉದ್ಭವಿಸುತ್ತದೆ. ಇದನ್ನು ಗಮನಿಸಿದ ಮಹಾವಿಷ್ಣು ಈ ಅಸೂಯೆಯ ಪರಿಣಾಮ ಒಳ್ಳೆಯದೇ ಆಗುತ್ತದೆ ಎಂದು ತಿಳಿದು ನಸುನಗುತ್ತಾನೆ.


ನಾರದರು ಉದ್ಭವಿಸಿದ ಅಸೂಯೆಯನ್ನು ಕೊಂಚ ತಡೆಹಿಡಿದು ನಾನೂ ತುಂಬುರರಂತೆ ಆಗಲು ಏನು ಮಾಡಬೇಕೆಂದು ಕೃಪೆಮಾಡಿ ತಿಳಿಸಬೇಕೆಂದು ಅರುಹಿದಾಗ, ನೀನು ಪ್ರತಿನಿತ್ಯವೂ ಶ್ರದ್ದೆಯಿಂದ ಅಭ್ಯಾಸಮಾಡು, ಮುಂದೆ ನಾನು ದ್ವಾಪರಯುಗದಲ್ಲಿ ಕೃಷ್ಣನಾಗಿ ಅವತರಿಸಿದಾಗ ನಿನಗೆ ಸಮಗ್ರವಾದ ಗಾನವಿದ್ಯೆಯನ್ನು ಉಪದೇಶಿಸುತ್ತೇನೆ.  ಅಲ್ಲಿಯವರೆಗೆ ಸಹನೆಯಿಂದಿರು ಎಂದು ಸಂತೈಸುತ್ತಾನೆ. ಅಂತೆಯೇ ನಾರದರು ದ್ವಾಪರಯುಗ ಬರುವವರೆಗೂ ಕಾದು ನಂತರ ಕೃಷ್ಣನ ಬಳಿಗೆ ಬಂದು ಗಾನವಿದ್ಯೆಯನ್ನು ಉಪದೇಶಿಸಬೇಕೆಂದು ಕೋರಿ ಕೃಷ್ಣನಿಂದ ಉಪದೇಶ ಪಡೆದು ಅವರೂ ಗಾನವಿದ್ಯೆಯಲ್ಲಿ ಪ್ರಾವಿಣ್ಯವನ್ನು ಹೊಂದುತ್ತಾರೆ.


'ಅನಸೂಯಾ'(ಅಸೂಯೆ ಇಲ್ಲದಿರುವಿಕೆ) ಎಂಬುದು ಆತ್ಮಗುಣಗಳಲ್ಲಿ ಒಂದು. ಇಂತಹ ಆತ್ಮಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಭಗವಂತನ ಪ್ರೀತಿಗೆ ಪಾತ್ರರಾಗಲು ಸಾಧ್ಯ. ಆದರೆ ಬಲವಾಗಿ ಬೇರೂರಿರುವ ಅಸೂಯೆಯನ್ನು ಬೇಗನೆ ತ್ಯಜಿಸುವುದು ಕಷ್ಟಸಾಧ್ಯ. ಹಾಗಾಗಿ ಯಾವುದೇ ಕ್ಷೇತ್ರದಲ್ಲಾದರೂ ಕೂಡ ಇನ್ನೊಬ್ಬರ ಏಳಿಗೆಯನ್ನು ಕಂಡು ಮನದಲ್ಲಿ ಉದ್ಭವಿಸಿದ ಅಸೂಯೆಯನ್ನು ಸಂಪೂರ್ಣವಾಗಿ ಬಿಡಲು ಸಾಧ್ಯವಿಲ್ಲದಿದ್ದಾಗ ಅವರಿಗೆ ಏನಾದರೂ ತೊಂದರೆ ಕೊಟ್ಟು ಪತಿತರನ್ನಾಗಿ ಮಾಡಬೇಕು ಎಂಬ ಪ್ರವೃತ್ತಿಯನ್ನು ಬಿಟ್ಟು ನಾವೂ ಅವರಂತೆಯೇ ಏಳಿಗೆಯನ್ನು ಹೊಂದಲು ಸರ್ವರೀತಿಯಿಂದಲೂ ಪ್ರಯತ್ನಿಸಬೇಕು. ಈ ಪುರಾಣದ ಕಥೆಯಲ್ಲಿ, ಉದ್ಭವಿಸಿದ ಅಸೂಯೆಯನ್ನು ನಾರದರು ಮಾಡಿದಂತೆ ಒಳ್ಳೆಯ ಕಡೆ ತಿರುಗಿಸಿದಾಗ ನಾವೂ ಏಳಿಗೆಯನ್ನು ಹೊಂದಬಹುದು; ಪರರಿಗೂ ತೊಂದರೆಯಾಗುವುದಿಲ್ಲ. ಹೇಗೆ ಮೋಹವನ್ನು ಬಿಡಲಾಗದ ಪಕ್ಷದಲ್ಲಿ ಆ ಮೋಹವನ್ನು ಭಗವಂತನಲ್ಲಿಟ್ಟಾಗ ಭಕ್ತಿಯಾಗಿ ಭಗವಂತನನ್ನು ಹೊಂದಲು ದಾರಿಯಾಗುವುದೋ ಅಂತೆಯೇ, "ಅರಿಷಡ್ವರ್ಗಗಳನ್ನು ಹರಿಷಡ್ವರ್ಗಗಳನ್ನಾಗಿ ಮಾಡಿಕೊಳ್ಳಿ ಎಂಬ ಶ್ರೀರಂಗಮಹಾಗುರುಗಳ ವಾಣಿ ಸ್ಮರಣೀಯವಾಗಿದೆ.


ಸೂಚನೆ: 3/02/2021 ರಂದು ಈ ಲೇಖನ
ಉದಯವಾಣಿ ಯಲ್ಲಿ ಪ್ರಕಟವಾಗಿದೆ.