ಶ್ರೀಃ
ಭಕ್ತಿ ಬಲವೋ-ದೌರ್ಬಲ್ಯವೋ ?
ಲೇಖಕರು: ವಿದ್ವಾನ್|| ಶ್ರೀ ಛಾಯಾಪತಿ
"ಇಡಬೇಕೀಶ್ವರನಲ್ಲಿ ಭಕ್ತಿರಸಮಂ", " ಭಕ್ತಿಃ ಶೂಲಿನಿ" ಎಂಬಿವೇ ಮೊದಲಾದ ನೀತಿಯ ಮಾತುಗಳು ಮಾನವನಲ್ಲಿ ಇರಬೇಕಾದ ಅವಶ್ಯಕ ಗುಣಗಳಲ್ಲಿ ಭಕ್ತಿಯೂ ಒಂದು ಎಂದು ಗಣಿಸುತ್ತದೆ. ಭಕ್ತರನ್ನು ದೇಶದಾದ್ಯಂತ ಗೌರವಿಸುವ ಮನೋಧರ್ಮ ಬೆಳೆದಿದೆ.
ಇಂತಹ ಭಕ್ತಿಯ ಬಗೆಗೆ ಇತ್ತೀಚೆಗೆ ಹಲವು ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಭಕ್ತಿ ಕೇವಲ ಭಾವನೆ. ಇದರಲ್ಲಿ ನಂಬಿಕೆಯ ಪಾಲೇ ಜಾಸ್ತಿ. ವಿಚಾರದ ಪಾಲು ಕಡಿಮೆ. ಭಕ್ತಿ ಮನುಷ್ಯನಿಗೆ ಸ್ವಾವಲಂಬನೆಯನ್ನು ತಪ್ಪಿಸಿ ಪರಾವಲಂಬನೆಯನ್ನು ಬೆಳೆಸಿಬಿಡುತ್ತದೆ. ತನ್ನಲ್ಲಿ ಯಾವ ಶಕ್ತಿಯೂ ಇಲ್ಲ ಎಂದು ತೋಡಿಕೊಳ್ಳುವ ದೈನ್ಯವೃತ್ತಿ ಆತ್ಮವಿಶ್ವಾಸವನ್ನು ಕಳೆದು ಬಿಡುತ್ತದೆ. ಜೀತದಾಳಿನ ಮನೋಧರ್ಮವನ್ನು, ಗುಲಾಮಗಿರಿಯ ಮನೋಭಾವವನ್ನು ಹರಡುತ್ತದೆ ಈ ಭಕ್ತಿ. ಹೀಗೆ ಬುದ್ಧಿ ಬಲವನ್ನು ಕುಂಠಿತಗೊಳಿಸಿ, ವಿಚಾರಶಕ್ತಿಯನ್ನು ಕಳೆದು, ಮೌಢ್ಯದತ್ತ ತಳ್ಳಿ, ಮಾನವನ ಏಳಿಗೆಗೆ ಹಾನಿಯುಂಟು ಮಾಡುತ್ತದೆ. ಈ ಮುಗ್ಧಭಕ್ತಿಯ ದುರ್ಲಾಭವವನ್ನು ಪಡೆದ ಶೋಷಕರ ಶೋಷಣೆಗೀಡಾಗುತ್ತಿದ್ದಾನೆ ಮಾನವ. ಆದ್ದರಿಂದ ಭಕ್ತಿ ಮಾನವನನ್ನು ಏಳಿಗೆಯಿಂದ ಕಟ್ಟಿ ಹಾಕುವ ಶೃಂಖಲೆ. ಆದ್ದರಿಂದ ಭಕ್ತಿಯಿಲ್ಲದಿದ್ದರೂ ತೊಂದರೆಯಿಲ್ಲ. ಅಪಾಯವೇನೂ ಇಲ್ಲ. ಆದರೆ ಕೋಟಲೆಗೊಳಗಾಗುವುದು ಮಾತ್ರ ಬೇಡ.
ಇಂತಹ ವಿಚಾರಗಳು ಭಕ್ತಿಪರರ ಮನಸ್ಸನ್ನೂ ಕಲಕ ಹತ್ತಿವೆ. ತಮ್ಮ ಭಕ್ತಿಯನ್ನು ವಿಮರ್ಶೆಗೊಳಪಡಿಸಿಕೊಳ್ಳುವಂತೆ ಮಾಡಿದೆ. ಅನೇಕರ ಭಕ್ತಿಯನ್ನು ಕಡಿಮೆಗೊಳಿಸಿರುವುದೂ ಉಂಟು.. ಅಂತೆಯೇ ವಿಚಾರದತ್ತ ಒಲಿಯುವ ಸ್ವಭಾವವುಳ್ಳ ಯುವ ಪೀಳಿಗೆಯ ಮನಸ್ಸು ಭಕ್ತಿಭಾವದಿಂದ ಜಾರುತ್ತಿದೆ.
ಈ ಯಾವ ವಿಚಾರವನ್ನೂ ಗಣಿಸದ ವೀರಭಕ್ತರ ಸಂಖ್ಯೆಗೇನೂ ಕೊರತೆಯಿಲ್ಲವಾದರೂ ಇದರ ನಿಜವೇನು ಎಂಬುದನ್ನು ಅರ್ಥಮಾಡಿಕೊಳ್ಳಬಯಸುವ ನ್ಯಾಯವಾದ ಮನಸ್ಸಿಗೆ ಸಮರ್ಪಕವಾದ ಉತ್ತರ ಅಗತ್ಯವಾಗಿದೆ. ಈ ದಿಶೆಯಲ್ಲಿ ಒಂದು ಸಣ್ಣ ಪ್ರಯತ್ನ ಈ ಬರಹ.
ಜೇನಿನ ಸವಿ ಯಾರಿಗೆ ತಿಳಿಯದು? ಆ ಸವಿ ನಮ್ಮ ಮನಸ್ಸನ್ನು ತನ್ನತ್ತ ಸೆಳೆಯುತ್ತದೆ. ಒಮ್ಮೆ ಸವಿದರೆ ಮತ್ತೆ ತನ್ನತ್ತ ಸೆಳೆಯುವ ಗುಣ ಅದರಲ್ಲಿದೆ. ಮನಸ್ಸು ಅತ್ತ ಒಲಿಯುತ್ತದೆ. ಅದೇ ಮನಸ್ಸಿನ ಒಲವು. ಆ ಒಲವು ಮತ್ತೆ ಜೇನನ್ನು ಸವಿಯುವುದಕ್ಕೆ ಪೋಷಕವಾದುದರಿಂದ ಜೇನಿನ ಸವಿಯಲ್ಲಿ ಒಲವು ಅಗತ್ಯ. ಆ ಒಲವು ನಮಗೆ ಜೇನಿನ ಸವಿಯ ಸುಖವನ್ನು ನೀಡುತ್ತದೆ. ಅದು ಭಾವನೆ ನಿಜ. ಆದರೂ ಅದು ನಮ್ಮ ಬಾಳನ್ನು ಉಳಿಸಲು, ಬೆಳೆಸಲು ಸಹಾಯ ಮಾಡುತ್ತದೆ. ಈ ಜೇನಿನಂತಯೇ ಮಲ್ಲಿಗೆಯ ಕಂಪು, ಬೆಳದಿಂಗಳ ತಂಪು, ಕೋಗಿಲೆಯ ಗಾನದ ಇಂಪು ಇವುಗಳೂ ನಮ್ಮ ಮನದಲ್ಲಿ ಒಲವನ್ನು ಮೂಡಿಸುತ್ತವೆ. ಆ ಒಲವು-ಪ್ರೀತಿ ನಮಗೆ ಸುಖ ನೀಡುತ್ತದೆ.
ಜೀವನದ ಸುಖದ ಸಾರವೇನು ? ಅದರ ನೆಲೆ ಎಲ್ಲಿದೆ? ಎಂದು ಹುಡುಕ ಹೊರಟ ಜೀವಿಗಳಿಗೆ, ಅವರ ಹೃದಯ ಬಿಲವು ತೆರೆದು ಒಳಗೆ ತುಂಬಿ ಬೆಳಗುವ ಸುಖದ ನಿಧಿಯೊಂದು ಗೋಚರವಾಯಿತು. ಸವಿಜೇನು ನಮ್ಮ ಮನವನ್ನು ತನ್ನತ್ತ ಒಲಿಸಿದಂತೆ, ಮನವು ಆ ಸುಖದ ನಿಧಿಯತ್ತ ಒಲಿಯಿತು. ಅಲ್ಲೇ ಪುಳಕಗೊಂಡಿತು. ಸುಖದ ನಿಧಿ ಇಲ್ಲಿಯೇ ಇದೆ ಎಂದರಿತ ಬಳಿಕ ಮನಸ್ಸಿನ ಒಲವಿನ ಪ್ರವಾಹವೇ ಅತ್ತ ಹರಿಯಿತು. ಆ ಹರಿವೇ ಭಕ್ತಿ. "ಸಾಪರಾನುರಕ್ತಿರೀಶ್ವರೇ"–"ಸಾತ್ವಸ್ಮಿನ್ ಪರಮಪ್ರೇಮರೂಪಾ"—ಭಕ್ತಿಯು ಈಶ್ವರನಲ್ಲಿ ಪರಮಪ್ರೇಮರೂಪವಾದುದು ಎಂಬ ಮಾತು ಇದನ್ನು ಹೇಳುತ್ತದೆ.
ಆದ್ದರಿಂದ ಪ್ರೀತಿಯ ಉತ್ಕೃಷ್ಟತಮವಾದ ರೂಪವೇ ಭಕ್ತಿ. ಅಂತೆಯೇ ಪರಮಪ್ರೇಮದಿಂದ ಸುಖದ ನೆಲೆಯೇ ದೊರೆತುದರಿಂದ ಅದಕ್ಕೆ ಸಾಧನವಾದ ಭಕ್ತಿ ಸುಖರೂಪವಾದುದು. ಭಕ್ತಿ --ಎಂದರೆ ಸೇರುವಿಕೆ-ಎಂಬರ್ಥವೂ ಬರುತ್ತದೆ. ತನ್ನ ಹೃದ್ಗೋಚರವಾದ ಸುಖನಿಧಿಯಲ್ಲಿ, ಅದರ ತಂಪು-ಇಂಪುಗಳಲ್ಲಿ ಒಂದಾಗುವುದೇ ಭಕ್ತಿ. ಅದರಲ್ಲಿ ಸುಖಿಸುವುದೇ ಭಕ್ತಿ.
ಪ್ರತಿಜೀವಿಯ ಹೃದಯದಲ್ಲಿಯೂ ಆ ಸುಖದ ನಿಧಿಯುಂಟು. ಅದನ್ನು ಅನುಭವಿಸುವ ಯೋಗ್ಯತೆಯುಂಟು. ಆ ಅನುಭವಕ್ಕೆ ಕೀಲಿಕೈ ಭಕ್ತಿ. ಅನುಭವಿಗಳ ಹೃದಯದಿಂದ ಮೂಡಿಬಂದ ಭಕ್ತಿ ಸಂದೇಶಗಳು ಆ ಅನುಭವದತ್ತ ಕರೆದೊಯ್ಯುವ ಮಾರ್ಗದರ್ಶಿಗಳು. ಆದ್ದರಿಂದಲೇ "ಮೋಕ್ಷ ಸಾಧನ ಸಾಮಗ್ರ್ಯಾಂ ಭಕ್ತಿರೇವ ಗರೀಯಸೀ"
"ತನ್ನ ಜೀವನದಲ್ಲಿ ನೆಲೆಮುಟ್ಟಿಸುವ ಸಾಮಗ್ರಿಗಳಲ್ಲಿ ಭಕ್ತಿಯೇ ಹಿರಿದಾದ ಸಾಮಗ್ರಿ" ಎಂಬ ಮಾತನ್ನು ನಾವು ನೋಡುತ್ತೇವೆ.
ಜೀವಿಯ ಸಹಜ ಸುಖದ ನೆಲೆಯನ್ನು ಕಂಡು ಅನುಭವಿಸಿದಾಗ ಒಲಿದ ಮನಸ್ಸಿನ ಧಾರೆಯೇ ಭಕ್ತಿ. ಅದು ಸಹಜ. ಅದು ಮನಸ್ಸಿನ ಬಲವೇ ಹೊರತು ದೌರ್ಬಲ್ಯವಲ್ಲ. ಜೀವಿಗಳೆಲ್ಲರೂ ಯಾವ ಪರಮಾವಧಿಯ ಸೌಖ್ಯಕ್ಕಾಗಿ ಹಂಬಲಿಸುವರೋ ಅಂತಹ ಪರಮಾವಧಿಯ ಸೌಖ್ಯದ ಹಾದಿ ತೋರುವ ಭಕ್ತಿ ಬಲವಲ್ಲದೇ ಮತ್ತೇನು ?
ತನ್ನ ಜೀವನದ ಒಳಮೈಯಲ್ಲಿ ಮಿಂಚಿದ ಸತ್ಯದ ಪ್ರಕಾಶದಿಂದ ರೂಪಗೊಂಡ ಭಾವನೆ ಭಕ್ತಿ. ಆದ್ದರಿಂದ ಅರಿವಿನ ಆಧಾರದಿಂದ ರೂಪಗೊಂಡ ಭಾವನೆಯೇ ಹೊರತು, ವಿಚಾರ ಬಲಹೀನವಾದ ಶಕ್ತಿಯಲ್ಲ ಭಕ್ತಿ.
ಹಣಕ್ಕಾಗಿ, ಉದರ ನಿಮಿತ್ತವಾಗಿ ಗುಲಾಮಗಿರಿಯನ್ನು ಸಂತೋಷವಾಗಿ ಒಪ್ಪಿಕೊಳ್ಳುವ ಮಾನವ, ತನ್ನ ಜೀವಿತ ಪರಮ ಸೌಖ್ಯದ ಲಾಭಕ್ಕಾಗಿ ಭಕ್ತಿಯತ್ತ ಒಲೆಯುವುದು ಹೇಗೆ ತಪ್ಪಾದೀತು?
ಭಕ್ತಿ ತನ್ನ ಜೀವನವು ಯಾವ ಅವಲಂಬನೆಯ ಮೇಲಿದೆಯೋ, ಆ ನಿಜವಾದ ಅವಲಂಬನೆಯನ್ನು ನೀಡಿ ಬಾಳನ್ನು ಹಸನುಗೊಳಿಸುವುದರಿಂದ ಇಲ್ಲಿ ಪರಾವಲಂಬನೆಯ ಪ್ರಶ್ನೆಯೇ ಇಲ್ಲ. ಜೀವನದ ಮೂಲಶಕ್ತಿಯ ಪರಿಚಯಕ್ಕೆ ಬಂದಾಗ ಅದರಿಂದ ತನ್ನ ಜೀವನ ತುಂಬಿ ಬೆಳೆಯುವುದನ್ನು ಗುರುತಿಸಿದಾಗ, ತನ್ನಲ್ಲಿ ಯಾವಶಕ್ತಿಯೂ ಇಲ್ಲ ಎಂದು ತೋಡಿಕೊಳ್ಳುವ ಭಾವ ವಸ್ತುಸ್ಥಿತಿಯ ಗುರುತಿಸುವಿಕೆಯೇ ಹೊರತು, ಅದರಲ್ಲಿ ದೈನ್ಯವಾಗಲೀ, ಆತ್ಮವಿಶ್ವಾಸದ ಕಳೆಯುವಿಕೆಯಾಗಲೀ ಇಲ್ಲ. ಆತ್ಮವನ್ನು ಕಂಡಾಗ ಮೂಡುವ ವಿಶ್ವಾಸದ ಹೇಳಿಕೆಯು ಆತ್ಮವಿಶ್ವಾಸವನ್ನು ಹೇಗೆ ಕಳೆದೀತು ?
ಮಾನವ ಜೀವನದಲ್ಲಿ ಹುದುಗಿರುವ ಅಂತಶ್ಚೈತನ್ಯದ ನೆಲೆಯನ್ನು ಗುರುತಿಸಲು ಸಾಧನವಾಗಿರುವುದರಿಂದಲೇ, ಭಕ್ತಿ, ಮಾನವನ ಏಳಿಗೆಗೆ ಪೂರಕವೇ ಹೊರತು ಮಾರಕವಲ್ಲ. ಭಕ್ತಿ ಪ್ರತಿಜೀವಿಗೂ ಅತ್ಯಗತ್ಯ. ಸುಖದ ನೆಲೆಯಲ್ಲಿ ನಿಲ್ಲಿಸುವ ಸಾಧನ. ಪರಮಾವಧಿಯ ಸುಖದತ್ತ ಸೆಳೆವ ಸೂಜಿಗಲ್ಲು. ಜೀವನದ ಪ್ರೇಮನಿಧಿಯತ್ತ ಹರಿಸುವ ಪ್ರೇಮರೂಪವಾದ ಮನೋಧಾರೆ. ಜೀವಿಯು ಊಹಿಸಲಾಗದ ಕಲ್ಪನೆಗೂ ನಿಲುಕದ ಸುಖದ ಭಂಡಾರದ ಕೀಲಿಕೈ.
ಈ ಭಕ್ತಿಯ ಸವಿ ಕೊಂಚ ಊರಿದರೆ ಆಗ ತಿಳಿದೀತು ಅದರಿಂದಾಗುವ ಲಾಭ. ಜೀವನದ ಸುಖದ ನಿಧಿಯನ್ನು, ಪರಾತ್ಪರ ವಸ್ತುವನ್ನು ತಲುಪುವ ಸುಖರೂಪವಾದ ಶ್ರೇಷ್ಠಮಾರ್ಗ ಭಕ್ತಿ ಮಾರ್ಗ. ಇಂತಹ ಭಕ್ತಿಯ ರಹಸ್ಯವನ್ನು ನನ್ನ ಅರಿವಿಗೆ ತಂದುಕೊಟ್ಟ ಶ್ರೀರಂಗಮಹಾಗುರುವಿಗೆ ಭಕ್ತಿಯಿಂದ ನಮಿಸಿ ಈ ಬರಹವನ್ನು ಭಕ್ತಿಗಮ್ಯವಾದ ಪರಂಜ್ಯೋತಿಯ ಅಡಿದಾವರೆಗಳಲ್ಲಿ ಸಮರ್ಪಿಸುತ್ತೇನೆ.
ಸೂಚನೆ : ಈ ಲೇಖನವು ಶ್ರೀಮಂದಿರದಿಂದ ಪ್ರಕಾಶಿತವಾಗುವ ಆರ್ಯಸಂಸ್ಕೃತಿ ಮಾಸ ಪತ್ರಿಕೆಯ ಸಂಚಿಕೆ : ೦೭ ಸಂಪುಟ: ೦೫ ಸಂಚಿಕೆ: ಮೇ ೧೯೮೩ ತಿಂಗಳಲ್ಲಿ ಪ್ರಕಟವಾಗಿದೆ.