ಲೇಖಕರು: ವಾದಿರಾಜ. ಪ್ರಸನ್ನ
ಮಾಯಣ್ಣ ಬಡಾವಣಯಲ್ಲಿ ಮಧ್ಯಮವರ್ಗದ ಕುಟುಂಬದವರೊಬ್ಬರು ವಾಸವಾಗಿದ್ದರು. ಆ ದಂಪತಿಗಳಿಗೆ ಇಬ್ಬರು ಮಕ್ಕಳು, ಹರ್ಷ ಮತ್ತು ತೃಷ್ಣಾ. ಇಬ್ಬರು ಮಕ್ಕಳಿಗೂ ಟೆನ್ನಿಸ್ ಕ್ರೀಡೆಯಲ್ಲಿ ಬಹಳ ಆಸಕ್ತಿ. ಮನೆಯ ಮುಂದೆಯೇ ಇದ್ದ ಖಾಲಿ ನಿವೇಶನದಲ್ಲಿ ಪ್ರತಿನಿತ್ಯವೂ ಟೆನ್ನಿಸ್ ಅಭ್ಯಾಸ ಮಾಡುತ್ತಿದ್ದರು. ಇವರ ಪರಿಶ್ರಮದ ಫಲವಾಗಿ ಹಲವಾರು ಪದಕಗಳು ಬಂದಿದ್ದವು.
ಒಮ್ಮೆ ರಜಾದಿನವಾದ ಭಾನುವಾರದಂದು ಅಣ್ಣ-ತಂಗಿಯರಿಬ್ಬರೂ ತಮಗೆ ತುಂಬಾ ಪ್ರಿಯವಾದ ಟೆನ್ನಿಸ್ ಆಡುತ್ತಿದ್ದರು. ಇಬ್ಬರೂ ತೀವ್ರ ಪೈಪೋಟಿಯಲ್ಲಿ ಸೆಣೆಸಾಡುತ್ತಿದ್ದರು. ಊಟದ ಸಮಯವೂ ಮೀರಿತ್ತು. ಅದನ್ನೂ ಮರೆತು ಆಟದಲ್ಲಿ ಮಗ್ನರಾಗಿದ್ದರು. ಮನೆಯಿಂದ ಅವರ ತಾಯಿಯು ಊಟಕ್ಕೆ ಕರೆದರೂ ಅವರಿಗೆ ಕೇಳಿಸಲಿಲ್ಲ, ತಾಯಿಯೇ ಮೈದಾನಕ್ಕೆ ಬಂದು, "ಮಧ್ಯಾಹ್ನ ಮೂರುಘಂಟೆಯಾಗಿದೆ; ಊಟಕ್ಕೆ ಬನ್ನಿ" ಎಂದರು. "ಇದು ಕಡೆಯ ಮ್ಯಾಚು; ಮುಗಿದಮೇಲೆ ಬರುತ್ತೇವೆ" ಎಂದರು. ಇವರ ಆಟವು ಮುಗಿಯುವಲ್ಲಿ ಮುಸ್ಸಂಜೆಯಾಗಿತ್ತು. ಮನೆಗೆ ತೆರಳಿ ಅಮ್ಮ, ತುಂಬಾ ಹೊಟ್ಟೆ ಹಸಿವಾಗುತ್ತಿದೆ ಬೇಗ ಊಟವನ್ನು ಹಾಕು ಎಂದರು. ತಾಯಿಯು 'ಆಗಲೇ ಕರೆದರೂ ನೀವು ಬರಲಿಲ್ಲ, ಎಷ್ಟು ಹೊಟ್ಟೆ ಹಸಿವಾಗಿದೆ ನೋಡಿ ಈಗ' ಎಂದು, ಮಮತೆಯಿಂದ ಊಟ ಬಡಿಸಿದಳು.
ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಆ ಹುಡುಗರಿಗೆ ಹಸಿವು ಇದ್ದರೂ, ಕಾಳಜಿಯಿರುವ ತಾಯಿಯು ಕರೆದರೂ, ಆಟದ ಸೆಳೆತದಿಂದ ಹಸಿವು ಕಾಣದಾಗಿತ್ತು. ಈ ದೃಷ್ಟಾಂತವು ನಾಗಾಲೋಟದಿಂದ ಓಡುತ್ತಿರುವ ನಮ್ಮ ಜೀವನ ವಿಧಾನವನ್ನೇ ಬಿಂಬಿಸುತ್ತದೆ. ಭೋಗವಸ್ತುಗಳೇ ತುಂಬಿರುವ ಈ ಪ್ರಪಂಚವೇ ಒಂದು ಮಾಯಣ್ಣ ಬಡಾವಣೆಯಾಗಿದೆ. ಟೆನ್ನಿಸ್ ಬಾಲಿನಂತೆ ನಮ್ಮ ಮನಸ್ಸು ಅತ್ತಣಿಂದ ಇತ್ತ, ಇತ್ತಣಿಂದ ಅತ್ತ ಹಾರಾಡುತ್ತಿದೆ. ಕೆಲವೊಮ್ಮೆ ಹರ್ಷ, ಮತ್ತೊಮ್ಮೆ ಇಂದ್ರಿಯಗಳ ತೃಷ್ಣೆ. ಆಟದಲ್ಲಿ ಮಗ್ನರಾಗಿದ್ದಾಗ ಹೊಟ್ಟೆ ಹಸಿವು ಮರೆತಂತೆ, ಜೀವಕ್ಕೆ ನೆಮ್ಮದಿಯನ್ನು ಕೊಡುವ ಮಹದಾನಂದದ ಸಹಜವಾದ ಆಸೆ ಮರೆಯಾಗಿ ಹೋಗಿದೆ. ಮಗುವು ಅಮ್ಮನ ಬಳಿ ಬಂದು ಕುಳಿತಂತೆ, ಇಂದ್ರಿಯಗಳ ಆಟವನ್ನು ನಿಗ್ರಹಿಸಿ ಸ್ತಬ್ಧವಾಗಿ ಕುಳಿತರೆ ಒಳ ನೆಮ್ಮದಿಯ ತಾಣ ದೊರೆತೀತು.
ಈ ರೀತಿಯ ಸನ್ನಿವೇಶವು ನಮ್ಮ ಅನುಭವಕ್ಕೂ ಬಂದಿರಬಹುದು; ಮದುವೆ-ಸಮಾರಂಭಗಳಂತಹ ಸದ್ದುಗದ್ದಲವಿರುವ ಜಾಗದಲ್ಲಿ, ನಮ್ಮ ಜೇಬಿನಲ್ಲೇ ಇರುವ ಮೊಬೈಲ್ಗೆ ಕರೆಗಳು ಬಂದಿದ್ದರೂ, ನಮಗೆ ಕೇಳಿಸಿಯೇ ಇರುವುದಿಲ್ಲ. ಇದಕ್ಕೆ ಹೊರಗಿನ ಸದ್ದುಗಳು ಹೆಚ್ಚಾಗಿರುವುದೂ, ಹೊರಗಿನ ಆಕರ್ಷಣೆಗಳು ನಮ್ಮನ್ನು ಸೆಳೆಯುತ್ತಿರುವುದೂ ಕಾರಣ. ಇದೇ ರೀತಿ ನಮ್ಮೊಳಗೇ ಇರುವ ಜೀವದ ಆಸೆಯೂ ಒಂದಿದೆ. ನಮ್ಮ ಇಂದ್ರಿಯಗಳ ಸೆಳತದಿಂದ ಆ ಆಸೆಯು ನಮಗೆ ತಿಳಿಯದೆಯೇ ಹೋಗುತ್ತದೆ. ಹೊಟ್ಟೆಯ ಹಸಿವು ಎಷ್ಟು ಸಹಜವೋ, ಅಂತೆಯೇ, ಜೀವಕ್ಕೆ ಭಗವಂತನನ್ನು ಕಂಡು ಹರ್ಷಿಸುವ ಹಸಿವೆಯೂ ಇರುತ್ತದೆ ಎಂಬುದು ಭಾರತೀಯ ಮಹರ್ಷಿಗಳು ಕಂಡ ಸತ್ಯ.
ನಮ್ಮ ಜೀವನವನ್ನು ಕೇವಲ ಉದರತೃಪ್ತಿಗೋಸ್ಕರವಲ್ಲದೆ, ದಾಮೋದರನ ತೃಪ್ತಿಗಾಗಿಯೂ ನಡೆಸಬೇಕೆಂಬುದು ಶ್ರೀರಂಗ ಮಹಾಗುರುಗಳ ಅಭಿಪ್ರಾಯವಾಗಿದೆ. ಉದರತೃಪ್ತಿ-ಇಂದ್ರಿಯಸುಖ ಬೇಡವೆಂದಲ್ಲ. ಸುಖವನ್ನು ಧರ್ಮದ ಮಿತಿಯಲ್ಲಿ ಸವಿಯಬೇಕು. ಭೌತಿಕಕ್ಷೇತ್ರದ ತೃಪ್ತಿಗೆ ಮಾತ್ರ ಸೀಮಿತವಾಗದೇ, ದೈವೀಸುಖ - ಆತ್ಮಸುಖಗಳನ್ನೂ ಪಡೆಯುವ ಶಕ್ತಿಯು ನಮ್ಮ ಶರೀರಕ್ಕಿದೆ. ಇಹ ಪರಗಳ ಹಿತವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಹರ್ಷಿಗಳ ಆಶಯದಂತೆ ಜೀವನ ವಿಧಾನ, ಆಚಾರ-ವಿಚಾರಗಳು, ವಿಧಿ-ನಿಷೇಧಗಳನ್ನಾಚರಿಸಿ, ಜೀವಕ್ಕಿರುವ ಸಹಜ ಅಪೇಕ್ಷೆಯಾದ ಭಗವಂತನ ಸಾಕ್ಷಾತ್ಕಾರವನ್ನು ಪಡೆಯೋಣ.