Sunday, January 26, 2020

ಸುಖದ ಮೂಲ ವೈರಾಗ್ಯ (Sukhada moola vairagya)

ಲೇಖಕರು: ನಾಗರಾಜ್. ಗುಂಡಪ್ಪ.ಜಿ 
(ಪ್ರತಿಕ್ರಿಯಿಸಿರಿ : lekhana@ayvm.in)



ವೈರಾಗ್ಯವೆಂದೊಡನೆ ನಮ್ಮ ಕಣ್ಣ ಮುಂದೆ ಬಂದು ನಿಲ್ಲುವ ಚಿತ್ರವು ಖಾವಿ ವೇಷ ತೊಟ್ಟಿರುವ ಸನ್ಯಾಸಿಯದೋ ಅಥವಾ ಗಡ್ಡ ಮೀಸೆ ಬಿಟ್ಟು ನಿಲುವಂಗಿ ಧರಿಸಿ ಜೈ ಶಂಕರ್ ಎಂದು ಅಬ್ಬರಿಸುವ ಭೈರಾಗಿಯದೋ ಆಗಿರುತ್ತದೆ. ಏಕೆಂದರೆ, ವೈರಾಗ್ಯವೆಂದರೆ ಪ್ರಾಪಂಚಿಕ ಭೋಗಗಳ ತ್ಯಾಗ ಅಥವಾ  ನಿರಾಕರಣೆ ಎನ್ನುವ ಅಭಿಪ್ರಾಯವೇ ಇಂದು ಜನಮನದಲ್ಲಿ ನೆಲೆ ಮಾಡಿದೆ. ಹೀಗಾಗಿ ವೈರಾಗ್ಯವೇ ಸುಖದ ಮೂಲ ಎಂದರೆ ಅದು ಬಹಳ ವಿರೋಧಾಭಾಸವಾಗಿ ತೋರುತ್ತದೆ. ಆದುದರಿಂದ, ವೈರಾಗ್ಯ ಮತ್ತು ಸುಖದ ನಡುವಿನ ಸಂಬಂಧ ವಿಚಾರ ಯೋಗ್ಯ ವಿಷಯವಾಗಿದೆ.

ರಾಗ ಎಂದರೆ ಅಂಟು ಎಂದರ್ಥ. ಈ ಅಂಟು ಇಲ್ಲದಿರುವಿಕೆಯೇ ವಿರಾಗ ಅಥವಾ ವೈರಾಗ್ಯ. ವೈರಾಗ್ಯಕ್ಕೂ ಸುಖಕ್ಕೂ ಇರುವ ನಂಟನ್ನು ನಮ್ಮ ದೈನಂದಿನ ಜೀವನದುದ್ದಕ್ಕೂ ಗಮನಿಸಬಹುದು. ಮಕ್ಕಳಿಗೆ ಚಾಕಲೇಟನ್ನೋ, ಐಸ್ ಕ್ರೀಮನ್ನೋ ಕೊಟ್ಟರೆ, ಅಯ್ಯೋ ತಿಂದರೆ ಆ ತಿಂಡಿ ಮುಗಿದೇ ಹೋಗುತ್ತದೆಯಲ್ಲಾ ಎನ್ನುವ ರಾಗದಿಂದ ಎಷ್ಟೋ ಹೊತ್ತು ತಿನ್ನದೇ ಉಳಿಸಿಕೊಂಡಿರುತ್ತದೆ ಅಥವಾ ಬಹಳ ಹೊತ್ತು ತೆಗೆದುಕೊಂಡು ನಂತರ ತಿನ್ನುತ್ತವೆ. ಇಲ್ಲಿ, ತಿಂಡಿ ಆಗಿಹೋಗಬಾರದು ಎನ್ನುವ ರಾಗದಿಂದ ತಿನ್ನದೇ ಉಳಿಸಿಕೊಂಡರೆ, ತಿಂಡಿಯಿಂದ ದೊರೆಯುವ ಸುಖವನ್ನು ಅನುಭವಿಸುವ ಹಾಗಿಲ್ಲ. ತಿಂಡಿ ಆಗಿ ಹೋದರೂ ಪರವಾಗಿಲ್ಲ ಎನ್ನುವ ವೈರಾಗ್ಯವಿದ್ದು, ತಿಂದರೆ, ತಿಂಡಿಯ ಸುಖಾನುಭವ ಉಂಟಾಗುತ್ತದೆ.

ಅದೇ ರೀತಿಯಲ್ಲಿ, ವಯಸ್ಕರನ್ನು ಗಮನಿಸುವುದಾದರೆ, ಸರ್ಕಾರ ಹೊಸ ರೀತಿಯ ಕರೆನ್ಸಿ ನೋಟನ್ನು ಮುದ್ರಿಸಿರುತ್ತದೆ. ಪ್ರಾರಂಭದಲ್ಲಿ ಈ ಹೊಸ ನೋಟಿನ ಮೇಲೆ ಕೆಲವರಿಗೆ ವ್ಯಾಮೋಹವಿದ್ದು ಖರ್ಚು ಮಾಡಲು ಮನಸ್ಸು ಬರುವುದಿಲ್ಲ. ಹೀಗೆ ನೋಟಿನ ಮೇಲೆ ರಾಗವಿದ್ದರೆ, ಅದರಿಂದ ಖರೀದಿಸಬಹುದಾದ ವಸ್ತುಗಳಿಂದ ದೊರೆಯುವ ಸುಖವು ದೊರೆಯುವುದಿಲ್ಲ. ನೋಟನ್ನೇ ಇಟ್ಟುಕೊಂಡು ಸುಮ್ಮನಿರಬೇಕಾಗುತ್ತದೆ. ಆದರೆ ನೋಟಿನ ಬಗ್ಗೆ ವೈರಾಗ್ಯವಿದ್ದು ಅದನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಿದರೆ, ಖರೀದಿಸಿದ ವಸ್ತುವಿನಿಂದ ದೊರೆಯುವ ಸುಖವನ್ನು ಅನುಭವಿಸಬಹುದು.

ಈ ಪ್ರಸಂಗಗಳಲ್ಲಿ ರಾಗವು ಮುಂದಿನ ಸುಖಕ್ಕೆ ಅಡಚಣೆಯಾದರೆ, ವೈರಾಗ್ಯವು ಮುಂದಿನ ಹಂತದ ಸುಖಕ್ಕೆ ದಾರಿಯಾಗುತ್ತದೆ.

ಈ ನೀತಿಯನ್ನು ಪಾರಮಾರ್ಥಿಕ ಜೀವನಕ್ಕೂ ವಿಸ್ತರಿಸಿದರೆ, ಪ್ರಪಂಚದ ಬಗೆಗಿನ ರಾಗವು ಅದನ್ನು ಮರೆತರೆ ಉಂಟಾಗುವ ತುರೀಯ ಸ್ಥಿತಿ ಮತ್ತು ಆ ಸ್ಥಿತಿಯಲ್ಲಿ ದೊರೆಯುವ ಅಧ್ಯಾತ್ಮಿಕ ಸುಖಕ್ಕೆ ಅಡಚಣೆಯನ್ನುಂಟು ಮಾಡುತ್ತದೆ. ಸಂಪೂರ್ಣ ವೈರಾಗ್ಯವು ಅಸದೃಶವಾದ ಆತ್ಮಾನಂದಕ್ಕೆ ದಾರಿ ಮಾಡಿಕೊಡುತ್ತದೆ. ಆ ಆತ್ಮಾನಂದವನ್ನೇ ಪರಮಗುರಿಯಾಗಿಟ್ಟುಕೊಂಡು ಪರಮವೈರಾಗ್ಯವನ್ನೇ ವಿಶೇಷವಾಗಿ ಅನುಸಂಧಾನ ಮಾಡುವವರು ಸನ್ಯಾಸಿಗಳು ಅಥವಾ ಭೈರಾಗಿಗಳಾಗುತ್ತಾರೆ. ಆದರೆ, ಎಲ್ಲರೂ ಪರಮವೈರಾಗ್ಯವನ್ನೇ ಅನುಸಂಧಾನ ಮಾಡಬೇಕೆಂದಿಲ್ಲಾ; ಪ್ರಾಪಂಚಿಕ ಜೀವನದಲ್ಲಿ ತೊಡಗಿಕೊಂಡೂ ಸಹಾ ಆತ್ಮ ಸಾಧನೆ ಮಾಡಬಹುದು. ಅಂತಹವರೂ ಸಹಾ ವಿವೇಕಬಲದಿಂದ ತಮ್ಮ ವೈರಾಗ್ಯದ ಮಟ್ಟವನ್ನು ಹೆಚ್ಚಿಸಿಕೊಂಡರೆ, ಆತ್ಮ ಸಾಧನೆಗೆ ಬಹಳ ಪೋಷಕವಾಗಿರುತ್ತದೆ ಮತ್ತು ಹಿಂದೆ ಗಮನಿಸಿದಂತೆ ಇಂದ್ರಿಯ ಸುಖಕ್ಕೂ ದಾರಿ ಮಾಡಿಕೊಡುತ್ತದೆ.

ಹೀಗೆ, ವೈರಾಗ್ಯವು ಈಶ್ವರ ಪ್ರೀತಿಕರವಾದ, ಲೌಕಿಕ-ಪಾರಮಾರ್ಥಿಕ ಸುಖಗಳೆರಡನ್ನೂ ದಯಪಾಲಿಸುವಂತಹಾ ಗುಣವಾಗಿದೆ. ವೈರಾಗ್ಯವು ಶ್ರೇಷ್ಠ ಸಂಪತ್ತುಗಳಲ್ಲಿಯೂ ಶ್ರೇಷ್ಠತಮವಾಗಿದೆ. ವೈರಾಗ್ಯ ಶತಕವು, ಶಾಸ್ತ್ರದಲ್ಲಿ ಪ್ರತಿವಾದಿಗಳ ಭಯ, ರೂಪದಲ್ಲಿ ಮುಪ್ಪಿನ ಭಯ, ಸುಖದಲ್ಲಿ ರೋಗಗಳ ಭಯ, ಹಣವಿದ್ದಲ್ಲಿ ರಾಜನ ಭಯ ಮುಂತಾಗಿ ಹೇಳುತ್ತಾ, ವೈರಾಗ್ಯವು ಇದ್ಯಾವ ಭಯವೂ ಇಲ್ಲದ ನಿರುಪಾಧಿಕ ಸಂಪತ್ತಾಗಿದೆ ಎಂದು ಕೊಂಡಾಡುತ್ತದೆ. ಭಾರತೀಯರು ಆಹಾರ ಸೇವಿಸಬೇಕಾದರೆ ಜ್ಞಾನ ವೈರಾಗ್ಯ ಸಿಧ್ಧ್ಯರ್ಥಂ ಭಿಕ್ಷಾಂದೇಹಿ ಪಾರ್ವತಿ ಎನ್ನುವ ಪ್ರಾರ್ಥನೆಯ ಮೂಲಕ ನಿತ್ಯದಲ್ಲಿಯೂ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವ ಗುಣರತ್ನವಾಗಿದೆ ವೈರಾಗ್ಯ. ಇಂತಹಾ ಅಮೋಘ ಗುಣರತ್ನವನ್ನು ಸಂಪಾದಿಸಿ ಧನ್ಯರಾಗೋಣ.

ಸೂಚನೆ: 25/1/2020 ರಂದು ಈ ಲೇಖನ ವಿಜಯ ಕರ್ನಾಟಕ ಪತ್ರಿಕೆಯ ಬೋಧಿ ವೃಕ್ಷ ಅಂಕಣದಲ್ಲಿ ಪ್ರಕಟವಾಗಿದೆ.