Sunday, December 29, 2019

ಕಂಬಳಿಯನ್ನು ಕೈಬಿಡು (Kambaliayannu kaibidu)

(ಪ್ರತಿಕ್ರಿಯಿಸಿರಿ lekhana@ayvm.in)


ಹಳ್ಳಿಯಲ್ಲಿ ಅಗಸನೊಬ್ಬನು ಬಟ್ಟೆಗಳನ್ನು ತೆಗೆದುಕೊಂಡು ಒಗೆಯಲು ಹೊಳೆಗೆ ಹೋಗುತ್ತಿದ್ದ. ಒಂದು ದಿನ ಪ್ರವಾಹದಲ್ಲಿ ಕೈಜಾರಿ ಒಂದು ಕಂಬಳಿ ಕೊಚ್ಚಿಕೊಂಡುಹೋಯಿತು. ಅಯ್ಯೋ ಹೋಯಿತಲ್ಲಾ ಎಂದು ಹೊಳೆಗೆ ದುಮುಕಿ ಕಂಬಳಿಯನ್ನು ಹಿಂಬಾಲಿಸಿ ಹಿಡಿದೇಬಿಟ್ಟ. ಆದರೆ ಪ್ರವಾಹದ ವೇಗ ಮಿತಿ ಮೀರಿದ್ದರಿಂದ ಕಂಬಳಿ ಸಮೇತ ಇವನನ್ನೂ ಎಳೆದುಕೊಂಡು ಹೋಗುತ್ತಿತ್ತು. ಕಂಬಳಿಯೋ ಪ್ರಾಣವೋ ಎಂಬ ಪ್ರಶ್ನೆ! ಕಂಬಳಿಯನ್ನು ಕೈಬಿಟ್ಟರೇನೆ ದಡ ಸೇರಲಾದೀತು. ದಡದಲ್ಲಿನ ಹಿತೈಷಿಗಳು ಕಂಬಳಿ! ಕಂಬಳಿ! ಎಂದರಚುತಿದ್ದವರು - ಬಿಟ್ಟುಬಿಡು; ದಡಸೇರಿಕೋ ಎಂದು ಕಿರಿಚತೊಡಗಿದರು. ಅಗಸ ಹೇಳಿದ - ನಾನೂ ಅದನ್ನೇ ಪ್ರಯತ್ನಪಡುತ್ತಿದ್ದೇನೆ ಆಗಲಿಂದಲೂ! ಆದರೆ ನಾನು ಬಿಟ್ಟರೂ ಅದು ನನ್ನನ್ನು ಬಿಡುತ್ತಿಲ್ಲವಲ್ಲಾ! ಏನು ಮಾಡಲಿ?! ಏಕೆಂದರೆ ಅವನು ಹಿಡಿದದ್ದು ಕಂಬಳಿಯನ್ನಲ್ಲ, ಒಂದು ಕರಡಿಯನ್ನು!! ಇವನು ಬಿಟ್ಟರೂ ಅದು ಇವನನ್ನು ಬಿಡುತ್ತಿಲ್ಲ ಎಂಬ ದುಃಸ್ಥಿತಿ!!

ಅಗಸನ ಪರಿಸ್ಥಿತಿ ಏನಾಯಿತೋ ತಿಳಿಯದು! ಆದರೆ ನಾವೂ ಜೀವನದ ಹೊಳೆಯಲ್ಲಿ ಸಿಲುಕುವುದು ದಿಟ. ಕೆಲವೊಮ್ಮೆ ಗುರಿಯನ್ನು ಮರೆತು ಯಾವ ಯಾವುದನ್ನೋ ಹಿಂಬಾಲಿಸುತ್ತಲೇ ಕಾಲ ಕಳೆಯುತ್ತೇವೆ. ನೆರೆ-ಹೊರೆಯವರೂ ಅದಕ್ಕೆ ಸೊಪ್ಪನ್ನು ಹಾಕಿ ಬೆಳೆಸಿಯಾರು. ಮತ್ತೊಂದು ಕಡೆ ಹಿತೈಷಿಗಳ ಮಾತುಗಳೂ ಹಿಡಿಸದು. ಕ್ರಮೇಣ ಜೀವನದಲ್ಲಿ ಸುಳಿಗಳಂತಿರುವ ಘಟನೆಗಳು ಸಂಭವಿಸಿದಾಗ ಎಚ್ಚೆತ್ತುಕೊಂಡರೂ ಕರಡಿಯಂತೆ ಅವು ನಮ್ಮನ್ನು ಬಿಡಲೊಲ್ಲವು! 

ಇಂತಹ ಪರಿಸ್ಥಿತಿಗೆ ತುತ್ತಾಗದಿರಲು ಜೀವನದ ಗುರಿಯನ್ನೂ ಅದನ್ನು ಸಾಧಿಸುವ ಹೆದ್ದಾರಿಯನ್ನೂ ಅರಿಯಲೇಬೇಕು. ಅಂತಹ ಮಾರ್ಗವನ್ನು ತಪಸ್ಯೆಯಿಂದ ಅನ್ವೇಷಿಸಿ-ಅರಿತು ಪರಮಕರುಣೆಯಿಂದ ನಮ್ಮ ಮಹರ್ಷಿಗಳು ಉಪದೇಶಿಸಿದರು. ಧರ್ಮ-ಅರ್ಥ-ಕಾಮ-ಮೋಕ್ಷವೆಂಬ ಚತುರ್ಭದ್ರಮಯವಾದ ಜೀವನವೇ ಆ ಹೆದ್ದಾರಿ ಎಂದು ಸಾರಿದರು. ಕೇವಲ ಅರ್ಥ-ಕಾಮಗಳನ್ನೇ ಅವಲಂಬಿಸಿದರೆ ಆರಂಭದಲ್ಲಿ ಕಂಬಳಿಯಾಗಿ ಕಾಣಿಸಿ, ಕ್ರಮೇಣ ಅದೇ ಕರಡಿಯಾಗುವುದು ನಿಸ್ಸಂಶಯ. ಆದರೆ ಮೋಕ್ಷವನ್ನೇ ಧ್ಯೇಯವಾಗಿಸಿಕೊಂಡರೆ ದಡಸೇರುವುದು ನಿಶ್ಚಯ. ಅಂದಮಾತ್ರಕ್ಕೆ ಜೀವನದಲ್ಲಿ ಅರ್ಥ-ಕಾಮಗಳು ಬೇಡವೇಬೇಡ ಎಂದೇನಲ್ಲ. ಅವುಗಳನ್ನು ಧರ್ಮದ ಜೊತೆಯಲ್ಲಿ ಸೇವಿಸಿದರೆ ಕಂಬಳಿಯೂ ಸಿಗುವುದು ಕರಡಿಯ ಹಿಂಸೆಯೂ ಕಾಣದು ಎಂಬಂತೆ ಐಹಿಕ ಸುಖವನ್ನೂ ದೊರಕಿಸಿ ಮೋಕ್ಷದ ಕಡೆಯೂ ಒಯ್ಯುವುದು. “ತುಂಟ ಹಸುವಿನಂತಹ ಅರ್ಥ-ಕಾಮಗಳನ್ನು ಧರ್ಮ-ಮೋಕ್ಷಗಳ ಹದ್ದು-ಬಸ್ತಿನಲ್ಲಿ ಇಟ್ಟುಕೊಂಡರೆ ಅಮೃತವನ್ನೇ ಕರೆಯಬಹುದು” ಎಂಬ ಯೋಗಿವರೇಣ್ಯರಾದ ಶ್ರೀರಂಗಮಹಾಗುರುವಿನ ನುಡಿಮುತ್ತನ್ನು ಇಲ್ಲಿ ಸ್ಮರಿಸೋಣ.   

ಸೂಚನೆ:  28/12/2019 ರಂದು ಈ ಲೇಖನವು ಉದಯವಾಣಿ ಮಹರ್ಷಿ ಬೆಳಕು ಅಂಕಣದಲ್ಲಿ ಪ್ರಕಟವಾಗಿದೆ.