Sunday, December 1, 2019

ಎಲ್ಲೆಲ್ಲಿ ನೋಡಿದರೂ ನೀನೇ (Ellelli nodidaru neene)

ಲೇಖಕರು: ತಾರೋಡಿ ಸುರೇಶ.  


ಮಹಭಾರತದ ಒಂದು ಪ್ರಸಂಗ. ಒಂದು ಅನೌಪಚಾರಿಕ ಸಭೆ ಸೇರಿತ್ತು. ಸಭೆಯಲ್ಲಿ ಶ್ರೀಕೃಷ್ಣ, ಹಿರಿಯರಾದ ಭೀಷ್ಮಾದಿಗಳು, ಕೌರವ- ಪಾಂಡವರು, ಬಂಧುಗಳು ಹಾಗೂ ಅನ್ಯಾನ್ಯ ಪ್ರಮುಖರು ಎಲ್ಲರೂ ಸೇರಿದ್ದ ಸನ್ನಿವೇಶ. ಶ್ರೀಕೃಷ್ಣನು ತನಗೆ ಸಹಜವಾದ ಒಳ-ಹೊರಗಿನ ಪ್ರಸನ್ನತೆ.ಪ್ರಕಾಶಗಳಿಂದ ಶೋಭಿಸುತ್ತಿದ್ದನು. ಇಂತಹ ಹಿನ್ನೆಲೆಯಲ್ಲಿ ಶ್ರೀಕೃಷ್ಣಪರಮಾತ್ಮನು ಧರ್ಮರಾಜ ಮತ್ತು ದುರ್ಯೋಧನ ಇವರನ್ನು ಉದ್ದೇಶಿಸಿ ಒಂದು ಚಿಕ್ಕ ಸ್ಪರ್ಧೆಯನ್ನು ಮುಂದಿಡುತ್ತಾನೆ. ಪರಸ್ಪರ ಅವಕಾಶವೇ (ಖಾಲಿಜಾಗ) ಉಳಿಯದಂತೆ ಯಾವುದಾದರೂ ಒಂದು ವಸ್ತುವಿನಿಂದ ಇಡೀ ಭವನವನ್ನು ತುಂಬಬೇಕು. ಎಂದು ಸ್ಪರ್ಧೆಯ ವಿಧಿಯನ್ನು ಹೇಳುತ್ತಾನೆ. ತಕ್ಷಣ ಧುರ್ಯೋಧನನಿಗೆ ಅತೀವವಾದ ಉತ್ಸಾಹವುಂಟಾಗುತ್ತದೆ. ರಾಜಸ ಸ್ವಭಾವದವನಾದ ಆತನಿಗೆ ಇದೇ ತನ್ನ ಶ್ರೀಮಂತಿಕೆಯನ್ನು ಎತ್ತಿ ತೋರಿಸಲು ಸದವಕಾಶ ಅನ್ನಿಸುತ್ತದೆ.ತನ್ನ ಬಳಿಯಿರುವ ಸಮಸ್ತ ಐಶ್ವರ್ಯವನ್ನು ತಂದು ತುಂಬಿಸುತ್ತಾನೆ. ಎರಡು ವಸ್ತುಗಳ ಮಧ್ಯೆ ಸ್ವಲ್ಪವೂ ಅವಕಾಶ ಉಳಿಯಬಾರದು ಎನ್ನುವುದು ಸ್ಪರ್ಧೆಯ ನಿಯಮವಾಗಿತ್ತು. ಎಷ್ಟು ತುಂಬಿದರೂ ಕೂಡ ಎರಡು ವಸ್ತುಗಳ ನಡುವೆ ಬಿರುಕು ಚಿಕ್ಕದೋ,ದೊಡ್ಡದೋ ಇದ್ದೇ ಇರುತ್ತಿತ್ತು.ಧುರ್ಯೋಧನನು ಸ್ಪರ್ಧೆಯಲ್ಲಿ ಸೋತನು.

ಅಲ್ಲಿಯವರೆಗೂ ಶಾಂತಮಾನಸನಾಗಿ ಕುಳಿತಿದ್ದ ಧರ್ಮರಾಜನು ಎದ್ದು ನಿಂತನು.ಒಳಗೆ ಹೋಗಿ ಮೌನವಾಗಿ ಯಾವ ಆಢಂಬರವೂ ಇಲ್ಲದೆ ಶ್ರೀಕೃಷ್ಣನ ಮಧುರವಾದ ಸ್ಮರಣೆಯೊಡನೆ ಸೌಮ್ಯವಾದ ಹೆಜ್ಜೆಯೊಂದಿಗೆ ದೀಪವೊಂದನ್ನು ಆ ಭವನದೊಳಗೆ ತಂದು ಹಚ್ಚಿಟ್ಟನು. ಮರುಕ್ಷಣದಲ್ಲಿ ಇಡೀ ಭವನವನ್ನು ಒಂದು ಬಿಂದುವಿನಷ್ಟೂ ಜಾಗವನ್ನೂ ಬಿಡದೆ ಬೆಳಕು ವ್ಯಾಪಿಸಿಕೊಂಡಿತು. ಯಾವೆರಡು ವಸ್ತುಗಳ ನಡುವೆಯೂ ಬೆಳಕೊಂದೇ ಕಾಣುತ್ತಿತ್ತು.ಎತ್ತ ನೋಡಿದರೂ ಬೆಳಕೇ ಬೆಳಕು.

ನಮ್ಮ ಜೀವನಮೂಲದಲ್ಲಿ ಪರಂಜ್ಯೋತಿಯೊಂದು ಬೆಳಗುತ್ತಿದೆಯಂತೆ.ಸಮಸ್ತ ಪಿಂಡಾಂಡ-ಬ್ರಹ್ಮಾಂಡಕ್ಕೂ ಇದೇ ಮೂಲ. ‘ಅವನು ಕೋಟಿಕೋಟಿ ಪ್ರಕಾಶವಪ್ಪಾ. ಆದರೂ ಬೆಳುದಿಂಗಳಂತೆ ತಂಪಾಗಿದಾನೆ. ಅವನ ತೆಕ್ಕೆಯಲ್ಲಿ ಸಿಕ್ಕಿ ಆನಂದತುಂದಿಲರಾಗುತ್ತೇವಪ್ಪಾ’ ಎಂದು ಶ್ರೀರಂಗಮಹಾಗುರುಗಳು ಆ ಮೂಲಬೆಳಕಿನ ದರ್ಶನದ ಅನುಭವವನ್ನು ವರ್ಣಿಸುತ್ತಿದ್ದರು. ಅಂತಹ ಪರಂಜ್ಯೋತಿಯ ಅವತಾರವಾದ ಶ್ರೀಕೃಷ್ಣ ಪರಮಾತ್ಮನೇ ಉಪಸ್ಥಿತನಾಗಿದ್ದ ಸಭೆ. ಅವನನ್ನು ಪ್ರತಿನಿಧಿಸುವ ದೀಪವೊಂದನ್ನು ಬೆಳಗಿಸಿದ ಧರ್ಮರಾಜ. ವಿಶ್ವವನ್ನೆಲ್ಲಾ ಒಳಗೂ-ಹೊರಗೂ ತುಂಬಿಕೊಂಡಿರುವ ಶಕ್ತಿಯೇ ಅದು. ಅದನ್ನು ಕಂಡನುಭವಿಸಿದ ಧರ್ಮರಾಜನು ಶ್ರೀಕೃಷ್ಣನ ಹೃದಯವನ್ನು ಅರಿತವನಾಗಿದ್ದು ಅದಕ್ಕೆ ತಕ್ಕಂತೆಯೇ ವರ್ತಿಸಿಕೊಂಡ.

ಸೂಚನೆ:  ದಿನಾಂಕ 30/11/2019 ರಂದು ಈ ಲೇಖನ ಉದಯ ವಾಣಿಯ ಮಹರ್ಷಿ ಬೆಳಕು  ಅಂಕಣದಲ್ಲಿ ಪ್ರಕಟವಾಗಿದೆ.