ಲೇಖಕರು: ಡಾ|| ಕೆ. ಎಸ್. ಕಣ್ಣನ್
(BSc, MA (Sanskrit), MPhil, PhD, ವಿದ್ವತ್)
(BSc, MA (Sanskrit), MPhil, PhD, ವಿದ್ವತ್)
(ಪ್ರತಿಕ್ರಿಯಿಸಿರಿ lekhana@ayvm. in)
ಧನುರ್ವಿದ್ಯೆಯನ್ನು ಹೇಳಿಕೊಡುತ್ತಾ ದ್ರೋಣಾಚಾರ್ಯರು ಮರದ ಮೇಲಿನ ಭಾಸಪಕ್ಷಿ(=ಹದ್ದು)ಯೊಂದನ್ನು ತೋರಿಸಿ, "ನಾ ಹೇಳಿದಾಗ ಅದರ ತಲೆಯನ್ನು ಕತ್ತರಿಸತಕ್ಕದ್ದು” ಎಂದು ಹೇಳಿದರು.
ಮೊದಲು ಯುಧಿಷ್ಠಿರನ ಸರದಿ. "ಯುಧಿಷ್ಠಿರಾ, ಬಾಣವನ್ನು ಹೂಡು, ನನ್ನ ಮಾತು ಮುಗಿಯುತ್ತಿದ್ದಂತೆ ಬಾಣವನ್ನು ಬಿಡು" ಎಂದು ಹೇಳಿದರು. ಪಕ್ಷಿಯತ್ತ ಬಾಣಬಿಡಲೋಸುಗ ಯುಧಿಷ್ಠಿರನು ಬಿಲ್ಲನ್ನು ಹೆದೆಯೇರಿಸಿ ನಿಂತನು. ಆಗ ದ್ರೋಣರು " ಮರದ ತುದಿಯಲ್ಲಿರುವ ಪಕ್ಷಿಯನ್ನು ನೋಡುತ್ತಿದ್ದೀಯಲ್ಲವೆ?" ಎಂದು ಕೇಳಿದರು. "ನೋಡುತ್ತಿದ್ದೇನೆ, ಗುರುಗಳೇ" ಎಂದನಾತ.
ಮರುಕ್ಷಣದಲ್ಲಿ, "ಈ ವೃಕ್ಷವನ್ನೂ ನನ್ನನ್ನೂ ನೋಡುತ್ತಿರುವೆಯಲ್ಲವೆ?" ಅದಕ್ಕೆ ಯುಧಿಷ್ಠಿರನು "ಈ ಮರವನ್ನೂ ತಮ್ಮನ್ನೂ ನನ್ನ ಸಹೋದರರನ್ನೂ ಭಾಸಪಕ್ಷಿಯನ್ನೂ ನೋಡುತ್ತಿದ್ದೇನೆ" ಎಂದನು.
ಮತ್ತೆ ಅದೇ ಪ್ರಶ್ನೆ-ಉತ್ತರಗಳು. ಅಸಮಾಧಾನದಿಂದ ದ್ರೋಣರು "ದೂರ ಸರಿ. ಈ ಲಕ್ಷ್ಯವನ್ನು ವೇಧಿಸಲು (= ಗುರಿಯನ್ನು ಹೊಡೆಯಲು) ನಿನಗಸಾಧ್ಯ" ಎಂದರು.
ಆ ಬಳಿಕ ದುರ್ಯೋಧನ ಮೊದಲಾದವರ ಸರದಿ. "ಎಲ್ಲವನ್ನೂ ನೋಡುತ್ತಿದ್ದೇನೆ" ಎಂಬುದೇ ಪ್ರತಿಯೊಬ್ಬರ ಉತ್ತರ! ಭೀಮಾದಿಗಳ ಉತ್ತರವೂ ಅದೇ!
ಆಮೇಲೆ ಅರ್ಜುನನ ಸರದಿ. ಅವರ ಅದೇ ಪ್ರಶ್ನೆಗೆ "ನಾನು ಭಾಸಪಕ್ಷಿಯನ್ನು ಮಾತ್ರ ನೋಡುತ್ತಿದ್ದೇನೆ. ಮರವಾಗಲಿ ತಾವಾಗಲಿ ನನಗೆ ಕಾಣುತ್ತಿಲ್ಲ" ಎಂದನು. "ನೀನು ಪಕ್ಷಿಯನ್ನು ನೋಡುತ್ತಿರುವೆ ತಾನೆ?" ಎಂದು ಅವರು ಕೇಳಲು, "ಪಕ್ಷಿಯ ತಲೆಯನ್ನು ಮಾತ್ರ ಕಾಣುತ್ತಿದ್ದೇನೆ. ಪಕ್ಷಿಯ ಶರೀರವನ್ನಲ್ಲ("ಶಿರಃ ಪಶ್ಯಾಮಿ ಭಾಸಸ್ಯ, ನ ಗಾತ್ರಮ್") ಎಂದನು. ದ್ರೋಣರಿಗೆ ರೋಮಾಂಚವಾಯಿತು. "ಬಿಡು ಬಾಣವನ್ನು" ಎಂದರು. ಪಕ್ಷಿಯ ತಲೆ ಕತ್ತರಿಸಿ ಬಿದ್ದಿತು. ದ್ರೋಣರಿಗೆ ಪರಮಾನಂದವಾಯಿತು.
ಮುಂದೆ ಅರ್ಜುನನು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದನಷ್ಟೆ?
ಯಾವುದೇ ಕೆಲಸವನ್ನು ಚೆನ್ನಾಗಿ ಮಾಡಲೂ ಏಕಾಗ್ರತೆ ಬೇಕು. ಗುರಿಯತ್ತಲೇ ಮನಸ್ಸಿರಬೇಕು. ಮನಸ್ಸು ಅತ್ತಿತ್ತ ಹರಿಯುತ್ತಿದ್ದರೆ ಏಕಾಗ್ರತೆಯೆಲ್ಲಿ? (ಇಂದಿನ ವಿದ್ಯಾರ್ಥಿಗಳಿಗೊಂದು ಅನ್ವಯ: ಇಂಟರ್ನೆಟ್‍ನಲ್ಲಿ ಬಂದುಬಂದದ್ದನ್ನೆಲ್ಲಾ ನೋಡುತ್ತಿದ್ದರೆ ಏಕಾಗ್ರತೆಯೆಲ್ಲಿ?!) ಅಧ್ಯಾತ್ಮಕ್ಕೂ ಏಕಾಗ್ರತೆ-ಜಾಗ್ರತೆ ಬೇಕಾದದ್ದೇ. ಸ್ವಲ್ಪವೂ ಎಚ್ಚರ ತಪ್ಪದೆ ಬ್ರಹ್ಮಲಕ್ಷ್ಯವನ್ನು ವೇಧಿಸಬೇಕು !– ಎಂದೇ ಉಪನಿಷದುಪದೇಶವೂ.
ಕೊನೆಯ ಮಾತು: "ತನ್ನ ಪಾಡಿಗಿದ್ದ ಒಂದು ಪಕ್ಷಿಯನ್ನು ಕೊಲ್ಲಿಸಿಬಿಟ್ಟರಲ್ಲಾ!" ಎಂದು ಕೊರಗಬೇಡಿ! ಶಿಲ್ಪಿಯೊಬ್ಬನಿಂದ ಮಾಡಿಸಲಾಗಿದ್ದ ಕೃತ್ರಿಮ ಪಕ್ಷಿಯದು !