ಲೇಖಕರು: ಡಾ. ಆರ್. ಮೋಹನ
ದೇವರ್ಷಿ ನಾರದರೊಮ್ಮೆ ಶ್ರೀಮನ್ನಾರಾಯಣನ ಬಳಿ ಪ್ರಶ್ನಿಸಿದರಂತೆ. ‘ನಿನ್ನ ಭಕ್ತರ ಪೈಕಿ ಯಾರನ್ನು ಶ್ರೇಷ್ಠನೆಂದು ಭಾವಿಸುವೆ ?’. ತನ್ನ ಸ್ತುತಿಯನ್ನು ನಾರಾಯಣನ ಮುಖದಿಂದ ಕೇಳಬೇಕೆಂಬ ಕಿಂಚಿತ್ ಅಹಂಕಾರ ಸೋಂಕಿದ ಬಯಕೆಯದು. ಹರಿ ಮಂದಸ್ಮಿತನಾಗಿ ‘ಅತ್ತ ನೋಡು. ಆ ಹಳ್ಳಿಯಲ್ಲಿ ನೇಗಿಲು ಹಿಡಿದ ರೈತನೇ ನನ್ನ ಸರ್ವಶ್ರೇಷ್ಠ ಭಕ್ತ’ ಎಂದನು. ನಾರದರು ಪೆಚ್ಚಾದರು, ಆದರೆ ಸೋಲೊಪ್ಪಿಕೊಳ್ಳಲಿಲ್ಲ. ಆ ರೈತನನ್ನು ವಿಚಾರಿಸಿ ಬರೋಣವೆಂದು ಇಬ್ಬರೂ ಸಾಮಾನ್ಯ ಪ್ರಯಾಣಿಕರಂತೆ ವೇಶ ಧರಿಸಿ ಹಳ್ಳಿಗೆ ಬಂದರು. ರೈತನು ಸಕುಟುಂಬನಾಗಿ ಆದರ ಹಾಗೂ ಪ್ರೀತಿಯಿಂದ ಹರಿ-ನಾರದರನ್ನು ಸತ್ಕರಿಸಿದನು. ಹಲವು ದಿನಗಳು ಅವರಿಬ್ಬರೂ ರೈತನೊಡನೆ ಕಳೆದು, ಅವನ ದಿನಚರಿಯನ್ನು ಗಮನಿಸಿಕೊಂಡರು. ಪ್ರಾತಃ ಹರಿಸ್ಮರಣೆಯೊಂದಿಗೆ ಎದ್ದು, ಸ್ನಾನಾದಿಗಳ ಮುಗಿಸಿ, ಗದ್ದೆಗೆ ತೆರಳುತ್ತಿದ್ದ. ನೇಗಿಲು ಹಿಡಿಯುವ ಮುನ್ನ, ಊಟಕ್ಕೆ ಪೂರ್ವಭಾವಿಯಾಗಿ, ಸಂಜೆ ಮನೆಗೆ ತೆರಳಿದ ನಂತರ, ಪುನಃ ರಾತ್ರೆ ಮಲಗುವ ಮುನ್ನ ನಿಯಮಿತವಾಗಿ ಹರಿಸ್ಮರಣೆಮಾಡುತ್ತಿದ್ದ. ಮೂರು ದಿನಗಳ ನಂತರ ಹರಿ-ನಾರದರು ರೈತನಿಗೆ ಕೃತಜ್ಞತೆಯನ್ನು ತಿಳಿಸಿ ಹೊರಟು ಬಂದರು. ನಾರದರು ಹರಿಯನ್ನು ಕೆಣಕುತ್ತ ‘ ಇದೇನೋ ನಿನ್ನ ಶ್ರೇಷ್ಠ ಭಕ್ತಲಕ್ಷಣ ?’ ಎಂದರು. ಹರಿ ನಕ್ಕು ‘ಹೌದು ನಾರದ ನೀನು ಗೆದ್ದೇ ಎಂದು ಒಪ್ಪಿಕೊಳ್ಳುವೆ. ಆದರೆ ಒಂದು ಕೆಲಸ ನೀನೂ ಮಾಡಬೇಕು. ಈ ಎಣ್ಣೆಯಿಂದ ತುಂಬಿದ ಮಡಕೆಯನ್ನು ತಲೆಯ ಮೇಲೆ ಹೊತ್ತು ಒಂದು ಪ್ರದಕ್ಷಿಣೆ ಮಾಡು. ಎಣ್ಣೆ ಒಂದು ತೊಟ್ಟೂ ಕೆಳಕ್ಕೆ ಚೆಲ್ಲಕೂಡದು’ ಎಂದರು. ನಾರದರು ತುಂಬಾ ಜಾಗರೂಕರಾಗಿ, ನಿಧಾನಕ್ಕೆ ಚಲಿಸುತ್ತ ಚಾಚೂ ತುಳುಕದೆ ಹರಿಯ ಪ್ರದಕ್ಷಿಣೆಯನ್ನು ಮುಗಿಸಿದರು. ಸೊಕ್ಕಿನಿಂದ ‘ ನೋಡಿದ್ದೀಯಾ? ಈಗ ಒಪ್ಪಿಕೊಳ್ಳುವೆಯಾ ?’ ಎಂದರು. ‘ಅದು ಸರಿ, ಆದರೆ ಈ ಪ್ರದಕ್ಷಿಣೆ ಮಾಡುವಾಗ ನೀನು ಎಷ್ಟು ಬಾರಿ ನನ್ನ ಸ್ಮರಣೆ ಮಾಡಿದೆ ಕಂದಾ ?’ ಎಂದ ಹರಿ. ನಾರದರ ಮುಖ ಬಣ್ಣ ಬದಲಾಯಿತು. ಮಡಕೆ-ಎಣ್ಣೆಯ ಪರದಾಟದಲ್ಲಿ ಅವರು ಹರಿಯನ್ನು ಪೂರ್ಣವಾಗಿ ಮರೆತೇ ಬಿಟ್ಟಿದ್ದರು.
ಇದು ನಮ್ಮದೇ ಕಥೆಯಾಗಿದೆ. ದಿನವಿಡೀ ಕೆಲಸದ ಪರದಾಟ. ಮುಗಿಯದು ಕೆಲಸ. ಸಿಗದು ನೆಮ್ಮದಿ. ಈ ಬಯಲಾಟದ ನಡುವೆ ನಮ್ಮ ಮನಸ್ಸನ್ನು ಉಲ್ಲಾಸದಿಂದಲೂ ಶಾಂತಿಯಿಂದಲೂ ಇರಿಸುವುದು ಹೇಗೆ ಎನ್ನುವುದು ನಮ್ಮ ಸಮಸ್ಯೆ. ನಾವು ಇಂದ್ರಿಯಗಳ ಬಯಕೆಯನ್ನುಮಡಕೆಯಂತೆ ತಲೆಯ ಮೇಲೆ ಹೊತ್ತಿದ್ದೇವೆ. ಕ್ಷಣದಲ್ಲಿ ಚೂರಾಗುವ ಮಾಯಾಮೃಗವೆಂಬ ಮಡಕೆಯನ್ನು ಅಮೃತವೆಂದು ಭಾವಿಸಿ ನಾವು ಪೂಜಿಸುತ್ತೇವೆ. ಆದರೆ ಆನಂದ ಉಲ್ಲಾಸದ ಬುಗ್ಗೆಯೊಂದು ನಮ್ಮ ಶಿರವೆಂಬ ಕುಂಭದಲ್ಲಿ ಅಡಗಿದೆ ಎಂಬುದನ್ನು ಮರೆತಿದ್ದೇವೆ. ಹೃದಯ ಗುಹೆಯಲ್ಲಿ ರಮಿಸಿ, ಶಿರದ ಕುಂಭದಲ್ಲಿರುವ ಅಮೃತಪಾನ ಮಾಡುವುದಕ್ಕಾಗಿ ಶಿವ ಧ್ಯಾನ, ಹರಿ ಸ್ಮರಣೆಗಳು ಸಾಧನಗಳು ಎಂಬುದು ಶ್ರೀರಂಗ ಮಹಾಗುರುಗಳ ಮಹದನುಭವ. ನಮ್ಮ ದೈನಂದಿನ ಜೀವನದ ನಡುವೆ ಆಗಾಗ್ಯೆ ಆದರೂ ನಮ್ಮೊಳಗಿರುವ ಆ ಆನಂದದ ಮೂರುತಿಯನ್ನು ಸ್ಮರಿಸಿ, ‘ನಾವಿರುವುದು ನಿನಗಾಗಿ’ ಎಂದರೆ ಅದೇ ಕರ್ಮಯೋಗ.