Tuesday, December 10, 2019

ಶ್ರೀ ನರಸಿಂಹಾವತಾರದ ಪಾಠ (Shree narasimhavatarada paata)

ಲೇಖಕರು: ಸುಬ್ರಹ್ಮಣ್ಯ ಸೋಮಯಾಜಿ


ಹಿರಣ್ಯಕಶಿಪುವಿನ ರಾಜಾಂಗಣ. ತನ್ನ ಸ್ವಂತ ಮಗನಾದ ಪ್ರಹ್ಲಾದ ಕುಮಾರನೇ ತನ್ನ ಶತ್ರು (ಎಂದು ಅವನು ಭಾವಿಸಿದ!).  ವಿಷ್ಣುದೇವನ ಸಂಕೀರ್ತನೆಯನ್ನು ಬಿಡಲೊಲ್ಲನು. ಸಹಿಸಲಾರದ ಕೋಪದಿಂದ ಹಿರಣ್ಯಕಶಿಪು ಕೇಳುತ್ತಾನೆ- ಎಲ್ಲಿದ್ದಾನೆ ನಿನ್ನ ನಾರಾಯಣ? “ ಎಲ್ಲೆಲ್ಲಿಯೂ ಇದ್ದಾನೆ ತಂದೆಯೇ?” ಮಗನ ಸಹಜವಾದ ಉತ್ತರ. ಅತಿಯಾದ ಕೋಪದಿಂದ ಈ ಕಂಬದಲ್ಲಿ? ಎಂದು ಕೇಳಿದಾಗ ಸ್ವಲ್ಪವೂ ವಿಚಲಿತನಾಗದೇ “ ಅಲ್ಲೂ ಇದ್ದಾನೆ” ಎಂದು ಬಾಲಕನ ಉತ್ತರ. ಕೋಪಾವೇಶದಿಂದ ಕಂಬವನ್ನು ಒಡೆದಾಗ ಮಹಾ ಪ್ರಕಾಶದಿಂದ ಶ್ರೀ ನರಸಿಂಹ ದೇವರ ಅವತಾರ.. ಹಿರಣ್ಯಕಶಿಪುವಿನ ಹೃದಯವನ್ನು ಸೀಳಿ ಅವನ ವಧೆ ಮಾಡುತ್ತಾನೆ. ಈ ಪುರಾಣದ ಕಥೆ  ನಮಗೆಲ್ಲ ಗೊತ್ತಿರುವುದೇ.

ಈ ಕಥೆಯ ಒಂದು ಒಳಮರ್ಮವನ್ನು ಶ್ರೀರಂಗ ಮಹಾಗುರುಗಳು ಹೇಳುತ್ತಿದ್ದರು-“ಮೇರುಸ್ತಂಭ” ಎಂದರೆ ಬೆನ್ನುಮೂಳೆ. ಅಂತರಂಗವನ್ನು ಆಸುರೀ ಶಕ್ತಿಗಳು ಆಕ್ರಮಣ ಮಾಡಿದಾಗ ಅದು ಹಿರಣ್ಯಕಶಿಪುವಿನ ಸಭಾಸ್ತಂಭವಾಗುತ್ತದೆ. ಪ್ರಹ್ಲಾದರೂಪಿಯಾದ ಪರಿಶುದ್ಧಾತ್ಮನ ಪರಾ ಭಕ್ತಿಯ ಪ್ರಭಾವದಿಂದ ಪರಮಾತ್ಮ ಶ್ರೀ ನರಸಿಂಹನು ಪ್ರಕಾಶಮಯವಾಗಿ ಪ್ರಣವ ಗರ್ಜನೆಯನ್ನು ಮಾಡುತ್ತಾ ಆ ಸ್ತಂಭವನ್ನು ಭೇದಿಸಿಕೊಂಡು ದೈತ್ಯಭೀಕರ ರೂಪದಿಂದ ಆವಿರ್ಭವಿಸುತ್ತಾನೆ. ಅಂತರಂಗದ ಮನೆಯ ಒಳಹೊರಗಿನ ಮಧ್ಯಸ್ಥಾನವಾದ ಹೊಸ್ತಿಲಿನಲ್ಲಿ ಕುಳಿತು ಲಯ-ವಿಕ್ಷೇಪಗಳ ಸಂಧಿಕಾಲವಾದ ಸಂಧ್ಯಾಸಮಯದಲ್ಲಿ ಅವಿದ್ಯಾರೂಪಿಯಾದ ಅಸುರರಾಜನ ಎದೆಯನ್ನು ಸೀಳಿ ಅವನ ಸಿಂಹಾಸನವನ್ನು ಏರಿ ಕುಳಿತುಕೊಳ್ಳುತ್ತಾನೆ. ವಾಸ್ತವವಾಗಿ ಅದು ಭಗವಧ್ಯಾನ ಸಿಂಹಾಸನವೇ. ಅಸುರರ ಆಕ್ರಮಣದಿಂದ ಅದನ್ನು ಮುಕ್ತಗೊಳಿಸಿ ಅದರಲ್ಲಿ ತಾನು ಕುಳಿತು ಅದನ್ನು ಪವಿತ್ರಗೊಳಿಸಿ ದೇವರಾಜ್ಯವು ಮತ್ತೆ ಪ್ರತಿಷ್ಠಿತವಾಗುವಂತೆ ಮಾಡುತ್ತಾನೆ.

ವಿಷ್ಣು-ಎಂದರೆ ವ್ಯಾಪಿಸಿರುವವನು. ಸರ್ವವ್ಯಾಪಿಯಾದ ಭಗವಂತ. ಎಲ್ಲೆಲ್ಲಿಯೂಇದ್ದಾನೆ ಎಂಬ ಭಕ್ತ ಪ್ರಹ್ಲಾದನ ಮಾತು ಅವನ ವ್ಯಾಪ್ತಿಯನ್ನು ತಿಳಿಸುವ ಸತ್ಯಾರ್ಥದ ಮಾತಾಗಿತ್ತು. ಆದರೆ ಈ ಸತ್ಯಾರ್ಥವನ್ನು ಗ್ರಹಿಸದೇ ಕಂಬದಂತಾಗಿದೆ, ಹಿರಣ್ಯಕಶಿಪುವಿನ ಹೃದಯ. ಅದನ್ನು ಸೀಳಲೇ ಬೇಕಾಯಿತು. ಹೊರಬುದ್ಧಿಗೆ ಇದು ಕ್ರೌರ್ಯದಂತೆ ಕಾಣಬಹುದು. ನಮಗೆ ಅತ್ಯಂತ ಕಹಿ ಎನ್ನಿಸುವ ಔಷಧವು ನಮ್ಮೊಳಗಿನ ರೋಗವನ್ನು ಪರಿಹರಿಸಿ ನಮ್ಮನ್ನು ಆರೋಗ್ಯವಂತರನ್ನಾಗಿಸುವ ಮಾಧುರ್ಯಾಂಶವನ್ನು ಹೊಂದಿರುವುದಿಲ್ಲವೇ? ಹಾಗೆಯೇ ನಮ್ಮ ರೋಗದ ಸ್ವರೂಪಕ್ಕೆ ತಕ್ಕ ಔಷಧವನ್ನು ಅವನು ಕೊಟ್ಟು ನಮ್ಮನ್ನು ಸಹಜಸ್ಥಿತಿಗೆ ತರಿಸುವುದು ಭಗವಂತನ ಕರುಣೆಯೇ ಆಗಿದೆ.

ಒಂದು ದೃಷ್ಟಿಯಿಂದ ನಮ್ಮಅಂತರಂಗವೂ ಅಸುರಾಕ್ರಾಂತವಾಗಿದೆ. ಎಂದೇ ನಮ್ಮ ಹೃದಯಗಳೂ ಹಿರಣ್ಯಕಶಿಪುವಿನ ಹೃದಯದಂತೆ, ಅವನ ಸಭಾಸ್ತಂಭದಂತೆಯೇ ಸ್ತಂಭೀಭೂತವಾಗಿವೆ. ಎಲ್ಲೆಲ್ಲಿಯೂ ಇರುವ ಆ ಮಹಾಚೇತನನನ್ನು ಅರಿಯಲಾಗದ, ಅನುಭವಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ನಮಗೆ ಆ ಆನಂದದ, ನೆಮ್ಮದಿಯ ಅನುಭವ ಆಗಬೇಕೆಂದೇ ಕರುಣಾಮಯನಾದ ದೇವನು ಜ್ಞಾನಿಗಳ, ಮಹರ್ಷಿಗಳ, ಸಜ್ಜನರ ಮುಖೇಣ ನಮ್ಮ ಅರಿವನ್ನು ತಿಳಿಗೊಳಿಸಲು ಪ್ರಯತ್ನಿಸುತ್ತಿದ್ದಾನೆ. ಜಡವಾದ ನಮ್ಮ ಹೃದಯಗಳನ್ನು ಸತ್ಯಾರ್ಥದಿಂದ ಆರ್ದ್ರಗೊಳಿಸುವ ಕೆಲಸ ಈ ದೇಶದಲ್ಲಿ ಅವಿರತವಾಗಿ ನಡೆದಿದೆ. ಭಾರತೀಯ ಸಂಸ್ಕೃತಿಯ ಮಹರ್ಷಿಪ್ರಣೀತವಾದ ಎಲ್ಲ ಜೀವನ ವಿಧಾನಗಳೂ ನಮಗೆ ಈ ನೈಜವಾದ ಅನುಭವದ ಅಮೃತಧಾರೆಯನ್ನು ಉಣಿಸಲೆಂದೇ ಬಂದಿವೆ ಎಂಬುದನ್ನು ಮರೆಯದಿರೋಣ.


ಸೂಚನೆ:  10/12/2019 ರಂದು ಈ ಲೇಖನ ವಿಜಯವಾಣಿ ಮನೋಲ್ಲಾಸ ಅಂಕಣದಲ್ಲಿ ಪ್ರಕಟವಾಗಿದೆ.