Monday, April 15, 2024

ವ್ಯಾಸ ವೀಕ್ಷಿತ - 83 ಧೃತರಾಷ್ಟ್ರನ ಮೇಲೆ ವಿದುರೋಕ್ತಿಯ ಪರಿಣಾಮ (Vyaasa Vikshita - 83 Dhritarashtrana Mele Viduroktiya Parinama)

ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಇನ್ನು ಧೃತಿ (ಎಂದರೆ ಧೈರ್ಯ), ಅನುಕ್ರೋಶ (ಎಂದರೆ ದಯೆ), ಕ್ಷಮೆ (ಎಂದರೆ ಸಹನೆ), ಸತ್ಯ, ಹಾಗೂ ಪರಾಕ್ರಮಗಳು ಯಾವನಲ್ಲಿ ನಿತ್ಯವಾಗಿ ನೆಲೆಗೊಂಡಿವೆಯೋ ಅಂತಹ ಪಾಂಡವಶ್ರೇಷ್ಠನನ್ನು, ಎಂದರೆ ಯುಧಿಷ್ಠಿರನನ್ನು, ಯುದ್ಧದಲ್ಲಿ ಗೆಲ್ಲುವುದಾದರೂ ಹೇಗೆ? ಯಾರ ಪಕ್ಷವನ್ನು ರಾಮನು (ಎಂದರೆ ಬಲರಾಮನು) ವಹಿಸಿದ್ದಾನೋ, ಯಾರಿಗೆ ಮಂತ್ರಿಯಾಗಿ ಜನಾರ್ದನನಿದ್ದಾನೋ, ಯಾರ ಪಕ್ಷದಲ್ಲಿ ಸಾತ್ಯಕಿಯಿದ್ದಾನೋ - ಅಂತಹ ಪಾಂಡವರಿಗೆ ಯುದ್ಧದಲ್ಲಿ ಗೆಲ್ಲಲಾಗದು ಯಾವುದು? ಯಾರಿಗೆ ದ್ರುಪದನು (ಹೆಣ್ಣುಕೊಟ್ಟ) ಮಾವನೋ, ಯಾರಿಗೆ ಶ್ಯಾಲಕರಾಗಿ (ಎಂದರೆ ಪತ್ನಿಯ ಸಹೋದರರಾಗಿ) ಧೃಷ್ಟದ್ಯುಮ್ನಾದಿ ಪಾರ್ಷತರಿರುವರೋ (ಎಂದರೆ ಪೃಷತವಂಶಕ್ಕೆ ಸೇರಿದವರು, ದ್ರುಪದನ ಮಕ್ಕಳು, ವೀರಭ್ರಾತೃಗಳು) - ಅಂತಹವರನ್ನು  ಜಯಿಸಲಾಗದು ಎಂಬುದನ್ನು ಅರ್ಥಮಾಡಿಕೋ. ಅವರು ದಾಯಾದ್ಯರು (ಎಂದರೆ ತಂದೆಯ ರಾಜ್ಯದ ಉತ್ತರಾಧಿಕಾರಿಗಳು) - ಇದೆಲ್ಲವನ್ನೂ ಮನಗಂಡು ಧರ್ಮದಿಂದ ಅವರೊಂದಿಗೆ ನಡೆದುಕೋ.

ಪುರೋಚನನಿಂದಾದ ಕಾರ್ಯದಿಂದಾಗಿ ಮಹತ್ತಾದ ಅಪಕೀರ್ತಿಯೇ ನಿನಗುಂಟಾಗಿದೆ, ಧೃತರಾಷ್ಟ್ರ! ಪಾಂಡವರ ವಿಷಯದಲ್ಲಿ ನೀನು ಅನುಗ್ರಹವನ್ನು ತೋರಿ, ಇನ್ನು ಆ ಅಪಯಶಸ್ಸನ್ನು ತೊಳೆದುಕೋ. ಪಾಂಡವರಿಗೆ ಈಗ ಮಾಡುವ ಅನುಗ್ರಹವು ನಮ್ಮ ವಂಶದ ಎಲ್ಲರಿಗೂ ಜೀವನ-ಪ್ರದವಾದದ್ದು ಹಾಗೂ ಪರ-ಶ್ರೇಯಸ್ಸಾದದ್ದು (ಎಂದರೆ ಉತ್ತಮ-ಶ್ರೇಯಸ್ಸನ್ನು ಕೊಡುವಂತಹುದು); ಹಾಗೂ (ಇಡೀ)ಕ್ಷತ್ರಿಯ-ಕುಲಕ್ಕೆ ವೃದ್ಧಿಯನ್ನುಂಟುಮಾಡುವಂತಹುದು.

ರಾಜನೇ, ದ್ರುಪದನೊಬ್ಬ ದೊಡ್ಡರಾಜನೇ; ಆತನೊಂದಿಗೆ ಈ ಹಿಂದೆ ವೈರವನ್ನು ಕಟ್ಟಿಕೊಂಡಿದ್ದಾಗಿದೆ; ಆತನನ್ನು ನಮ್ಮತ್ತ ಒಲಿಸಿಕೊಂಡಲ್ಲಿ, ಅರ್ಥಾತ್ ಮಿತ್ರತ್ವದೊಂದಿಗೆ  ಸೇರಿಸಿಕೊಂಡಲ್ಲಿ, ಅದು [ನಮಗೆ] ಸ್ವಪಕ್ಷವೃದ್ಧಿಗೇ ಕಾರಣವಾಗುತ್ತದೆ. ಇನ್ನು ದಾಶಾರ್ಹರು - ಎಂದರೆ ಯದುವಂಶೀಯರು, ಬಲಶಾಲಿಗಳು ಮತ್ತು ಅವರ ಸಂಖ್ಯೆಯು ಸಹ ಹೆಚ್ಚೇ (ಕೃಷ್ಣನು ಅವರ ಕಡೆಯಲ್ಲಿ ಒಬ್ಬನೇ): ಕೃಷ್ಣನು ಎಲ್ಲೋ ಅವರೆಲ್ಲರೂ ಅತ್ತಲೇ; ಮತ್ತು ಕೃಷ್ಣನೆಲ್ಲಿರುವನೋ ಅಲ್ಲಿಯೇ ಜಯವಾದರೂ ಇರುವುದು (ಯತಃ ಕೃಷ್ಣಃ ತತೋ ಜಯಃ)!

ಅಷ್ಟೇ ಅಲ್ಲ ರಾಜನೇ, ಯಾವ ಕಾರ್ಯವನ್ನು ಸಾಮಮಾರ್ಗದಿಂದಲೇ ಸಾಧಿಸಲಾದೀತೋ, ಅಂತಹದನ್ನು ಯುದ್ಧದಿಂದ ಸಾಧಿಸಿಹೊರಡುವವನು ದೈವ-ಶಪ್ತನೇ ಸರಿ (ಎಂದರೆ ದೇವಶಾಪಕ್ಕೆ ಒಳಗಾದವನೇ ಸರಿ). ಪಾಂಡವರಿನ್ನೂ ಜೀವಿಸಿರುವರು - ಎಂಬುದನ್ನು ಕೇಳಿಯೇ ಪೌರರೂ ಜಾನಪದರೂ ಅವರ ದರ್ಶನದ ವಿಷಯದಲ್ಲಿ ಅತ್ಯಂತ ಉತ್ಸುಕರಾಗಿರುತ್ತಾರೆ. ಅವರಿಗೆಲ್ಲ ಸಂತೋಷವನ್ನುಂಟುಮಾಡು, ರಾಜನೇ.

ದುರ್ಯೋಧನನೂ ಕರ್ಣನೂ ಶಕುನಿಯೂ ಅಧರ್ಮದಲ್ಲಿ ಸೇರಿಕೊಂಡವರು; ದುಷ್ಟವಾದ ಪ್ರಜ್ಞೆ ಅವರದು; ಜೊತೆಗೆ ಮೂರ್ಖರು ಸಹ: ಅವರ ಮಾತಿಗೆ ಕಿವಿಗೊಡಬೇಡ. ರಾಜನೇ, ಗುಣಶಾಲಿಯಾದ ನಿನಗೆ ಇದನ್ನು ಹಿಂದೆಯೇ ಹೇಳಿದ್ದಾಗಿದೆ. ದುರ್ಯೋಧನ(ನೊಬ್ಬ)ನ ಅಪರಾಧದಿಂದಾಗಿ ಈ ಪ್ರಜಾಸ್ತೋಮವು ವಿನಾಶಹೊಂದೀತು (ದುರ್ಯೋಧನಾಪರಾಧೇನ ಪ್ರಜೇಯಂ ವೈ ವಿನಂಕ್ಷ್ಯತಿ)!

ಆಗ ಧೃತರಾಷ್ಟ್ರನು ಹೇಳಿದನು:

ಶಂತನುಪುತ್ರನಾದ ಭೀಷ್ಮನು ಜ್ಞಾನಿಯು; ಪೂಜ್ಯದ್ರೋಣನಂತೂ ಋಷಿಯೇ: ಆದ್ದರಿಂದ ಅವರುಗಳಾಡುವ ಮಾತು ಪರಮಹಿತವಾದದ್ದೇ ಸರಿ. ನೀನಾದರೂ ಸತ್ಯವನ್ನೇ ನುಡಿಯುತ್ತೀಯೆ. ವೀರರೂ ಮಹಾರಥಿಗಳೂ ಆದ ಕುಂತೀಪುತ್ರರು ಹೇಗೆ ಪಾಂಡುವಿಗೂ ಮಕ್ಕಳೋ, ಧರ್ಮದೃಷ್ಟಿಯಿಂದ ನೋಡಿದರೆ ಹಾಗೆಯೇ ನನಗೂ ಮಕ್ಕಳೇ ಸರಿ. ಅದರಲ್ಲಿ ಸಂಶಯವಿಲ್ಲ. ಈ ರಾಜ್ಯವು ನನ್ನ ಮಕ್ಕಳಿಗೆ ಸೇರತಕ್ಕದ್ದು ಎಂಬುದೆಂತೋ ಅಂತೆಯೇ ಪಾಂಡುಪುತ್ರರಿಗೂ ಸೇರತಕ್ಕದ್ದು - ಎಂಬುದರಲ್ಲೂ ಸಂಶಯವೇ ಇಲ್ಲ.

ಸೂಚನೆ : 14/4/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.